ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನಹೊಳೆ ಬೇಕು, ಡ್ಯಾಂ ಬೇಡ

12 ಗ್ರಾಮಸ್ಥರಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ
Last Updated 16 ಸೆಪ್ಟೆಂಬರ್ 2014, 9:13 IST
ಅಕ್ಷರ ಗಾತ್ರ

ತುಮಕೂರು:  ಎತ್ತಿನಹೊಳೆ ಯೋಜನೆ ಜಾರಿಯಿಂದ ಕೊರಟಗೆರೆ, ದೊಡ್ಡಬಳ್ಳಾ­ಪುರ ತಾಲ್ಲೂಕಿನ ಹತ್ತಕ್ಕೂ ಹೆಚ್ಚು ಗ್ರಾಮಗಳು ಮುಳುಗಡೆಯಾಗಲಿದ್ದು, ಯಾವುದೇ ಕಾರಣಕ್ಕೂ ಈಗಿನ ಯೋಜ­ನೆಯಂತೆ ‘ಬಫರ್‌ ಡ್ಯಾಂ’ ನಿರ್ಮಾಣ ಮಾಡಬಾರದು ಎಂದು ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ಜಿಲ್ಲಾ­ಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಬೈರಗೊಂಡ್ಲು, ಬೆಲ್ಲದಹಳ್ಳಿ, ಸುಂಕದ­ಹಳ್ಳಿ, ಚಿನ್ನಹಳ್ಳಿ, ಗೆದಮೇನಹಳ್ಳಿ, ಲಕ್ಕಮುತ್ತನಹಳ್ಳಿ, ವೀರಸಾಗರ, ಗೊಲ್ಲರ­ಹಟ್ಟಿ, ಮಚ್ಚೇನಹಳ್ಳಿ, ಗರುಡಗಲ್ಲು, ಲೆಕ್ಕೇನಹಳ್ಳಿ, ವಡೇರಹಳ್ಳಿ, ಬೂಚನಹಳ್ಳಿ ಗ್ರಾಮಸ್ಥರು ನಗರದ ಟೌನ್‌ಹಾಲ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯರೆಗೆ ಮೆರವಣಿಗೆ ನಡೆಸಿದರು. ಜಿಲ್ಲಾ ರೈತ ಸಂಘ ರೈತರ ಪ್ರತಿಭಟನೆ ಬೆಂಬಲ ನೀಡಿತು.
ಎತ್ತಿನಹೊಳೆ ಯೋಜನೆ ರೈತರ ಹೋರಾಟ ಸಮಿತಿ (ಬೈರಗೊಂಡ್ಲು) ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ರೈತರ ಮೆರವಣಿಗೆಯಿಂದಾಗಿ ಅರ್ಧ­-ಗಂಟೆ ಕಾಲ ಸಂಚಾರ ಅಸ್ತವ್ಯಸ್ತ­ವಾಯಿತು.

ಜೀವಕೊಟ್ಟರೂ, ದುಡ್ಡು ಕೊಟ್ಟರೂ ಭೂಮಿ ಬಿಡೆವು, ನಮ್ಮ ಭೂಮಿ ನಮಗೆ ಬೇಕು, ರಕ್ತ ಕೊಟ್ಟರೂ ಗ್ರಾಮ ಬಿಡೆವು, ನಮ್ಮ ಊರು, ನಮ್ಮ ಸರ್ವಸ್ವ ಎಂಬ ಫಲಕಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಸುಧಾಕರ್‌­ಲಾಲ್‌, ಎತ್ತಿನಹೊಳೆ ಯೋಜನೆಯನ್ನು ವಿರೋಧ ಮಾಡುತ್ತಿಲ್ಲ. ನಮಗೂ ನೀರು ಬೇಕು. ಆದರೆ ಗ್ರಾಮಗಳು ಮುಳುಗ­ಡೆಯಾಗದಂತೆ ಯೋಜನೆ ಜಾರಿ-ಗೊಳಿಸಬೇಕು ಎಂದು ಒತ್ತಾ­ಯಿಸಿದರು.

ಯಾವುದೇ ಕಾರಣಕ್ಕೂ ಗ್ರಾಮ ಮುಳುಗಡೆ ಆಗಬಾರದು. ಪರ್ಯಾಯ ಕಾಲುವೆ ರೂಪಿಸುವಂತೆ ಮುಖ್ಯಮಂತ್ರಿ, ಸಚಿವರನ್ನು ಭೇಟಿ ಮಾಡಿ ಕೋರು­ವುದಾಗಿ ತಿಳಿಸಿದರು.

ಭೂಮಿಯ ಜೊತೆ ರೈತರು ಭಾವ­ನಾತ್ಮಕ ಸಂಬಂಧ ಹೊಂದಿದ್ದಾರೆ. ಗ್ರಾಮಸ್ಥರನ್ನು ಒಕ್ಕಲೆಬ್ಬಿಸಬಾರದು. ಮಾವತ್ತೂರು ಕೆರೆ, ತೀತಾ ಜಲಾ­ಶಯವನ್ನು ಆಳಪಡಿಸಿ ನೀರು ಬಳಸಬ­ಹುದು. ಒಂದೇ ಅಣೆಕಟ್ಟೆ ಕಟ್ಟುವ ಬದಲಿಗೆ ಸಣ್ಣ ಸಣ್ಣದಾಗಿ ನಾಲ್ಕೈದು ಡ್ಯಾಂ ಕಟ್ಟುವಂತೆ ಆಗ್ರಹಿಸಿದರು.

ಮುಖಂಡ ಮಹಾಲಿಂಗಪ್ಪ ಮಾತ­ನಾಡಿ, ಯಾವುದೇ ಕಾರಣಕ್ಕೂ ಒಕ್ಕಲೆ­ಬ್ಬಿಸಲು ಬಿಡುವುದಿಲ್ಲ. ಭೂಮಿ­ಯನ್ನು ಕೊಡಲು ಸಾಧ್ಯವಿಲ್ಲ ಎಂದರು.

ಚಿಕ್ಕತಿಮ್ಮಯ್ಯ ಮಾತನಾಡಿ, ಎತ್ತಿನಹೊಳೆ, ಭದ್ರಾ ಮೇಲ್ದಂಡೆ, ಲಿಂಗನಮಕ್ಕಿ ಯಾವ ಯೋಜನೆನಿಂದ ನೀರು ಕೊಟ್ಟರೂ ಸ್ವಾಗತಿಸುತ್ತೇವೆ. ಆದರೆ ದೊಡ್ಡದೊಡ್ಡ ಯೋಜನೆಗಳ ನಿರಾಶ್ರಿತರು ಸಮಸ್ಯೆ ನಮಗೆ ಹರಿವಿದೆ. ಗ್ರಾಮಗಳನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಹೇಳಿದರು.

ಪರಮಶಿವಯ್ಯ ವರದಿಯಲ್ಲಿ ಗ್ರಾಮ­ಗಳ ಮುಳುಗಡೆ ಸೇರಿರಲಿಲ್ಲ. 20 ಹಳ್ಳಿಗಳ ಮೇಲೆ ಪರಿಣಾಮ ಬೀರಲಿದೆ. ಏಕಾಏಕಿ ಗ್ರಾಮಗಳನ್ನು ಮುಳುಗಿಸಿ ಅಣೆಕಟ್ಟೆ ಕಟ್ಟುವ ಪ್ರಸ್ತಾವ ಸರಿ ಅಲ್ಲ ಎಂದರು.

ದೊಡ್ಡಬಳ್ಳಾಪುರ ತಾಲ್ಲೂಕಿನ ಲೆಕ್ಕೇನಹಳ್ಳಿಯ ಮುಖಂಡ ನಾಗಹನು­ಮಯ್ಯ ಮಾತನಾಡಿ, ಊರಿನಿಂದ 100 ಜನರು ಪ್ರತಿಭಟನೆಗೆ ಬಂದಿದ್ದೇವೆ. ಯೋಜ­ನೆಯಿಂದ ಮನೆ ಮಠ ಹೋಗ­ಲಿದೆ. ಯೋಜನೆಯೇ ಬೇಡ ಎಂದು ಆಗ್ರಹಿಸಿದರು. ಉಜ್ಜನಿ, ಹೊಸಳ್ಳಿಯಲ್ಲಿ 400 ಎಕರೆ ಅರಣ್ಯವಿದೆ. ಅಲ್ಲಿಯೇ ಡ್ಯಾಂ ಕಟ್ಟಬಹುದಲ್ಲ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT