ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನ ಬದಲು ಬೈಕ್‌!

Last Updated 24 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಆಧುನಿಕ ತಂತ್ರಜ್ಞಾನದ ಬೆಳವಣಿಗೆಯಿಂದ ಇಂದು ಗ್ರಾಮೀಣ ಪ್ರದೇಶದ ಜನ ಕೃಷಿಯಿಂದ ದೂರ ಸರಿದು ನಗರಗಳ ಕಡೆ ಪ್ರಯಾಣ ಬೆಳೆಸಿದ ಪರಿಣಾಮ ಇಂದು ಕೃಷಿ ಕಾಯಕ ಮಾಡಲು ಕೂಲಿ ಕಾರ್ಮಿಕರು ಇಲ್ಲದಂತಾಗಿದೆ. ಇರುವ ಸ್ವಲ್ಪ ಕೂಲಿ ಕಾರ್ಮಿಕರ ಕೂಲಿ ಅಧಿಕವಾಗಿರುವುದರಿಂದ ರೈತ ಫಸಲಿಗೆ ವ್ಯಯಿಸಿದ ಹಣವು ಬರುತ್ತಿಲ್ಲ. ಇದರಿಂದ ಮುಕ್ತಿ ಪಡೆಯಲು ಕೃಷಿಯಲ್ಲಿ ಹೊಸ ತಂತ್ರಜ್ಞಾನ ಬಳಸಿ ಹಣ, ಸಮಯ ಉಳಿತಾಯ ಮಾಡುವ ಕಾರ್ಯವನ್ನು ಬಾಗಲಕೋಟ ಜಿಲ್ಲೆ ಹುನಗುಂದ ತಾಲ್ಲೂಕಿನ ಬೆಳಗಲ್ಲ ಸಮೀಪದ ಸಂಗನಗೌಡ ರಾಮನಗೌಡ ಬೆಳ್ಳಿಹಾಳ ಎನ್ನುವ ರೈತ ಮಾಡಿ ತೊರಿಸಿದ್ದಾರೆ.

ಒಂದು, ಎರಡು ತಿಂಗಳ ಬೆಳೆಯಲ್ಲಿಯ ಕಳೆಯನ್ನು ಕೀಳಲು ಎಡೆ ಹೊಡೆಯುವ ಪದ್ಧತಿ ರೈತರಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಎಡೆ ಹೊಡೆಯುವುದರಿಂದ ಫಸಲು ಉತ್ತಮವಾಗಿ ಬರುವುದು. ಆದರೆ ಇಂದು ರೈತರು ಎತ್ತುಗಳ ಮೂಲಕ ಫಸಲಿನಲ್ಲಿ ಎಡೆ ಹೊಡೆಯಲು ಒಂದು ದಿನಕ್ಕೆ ಕನಿಷ್ಠ ರೂ 2 ಸಾವಿರ ವ್ಯಯ ಮಾಡಬೇಕು. ಇದರಿಂದ ಒಂದು ದಿನಕ್ಕೆ 4 ಎಕರೆ ಭೂಮಿಯ ಎಡೆ ಹೊಡೆಯಬಹುದು. ಆದರೆ ಬೆಳಗಲ್ಲ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರ ಬಳಿಯ ರೈತ ಸಂಗನಗೌಡ ದ್ವಿಚಕ್ರ ವಾಹನದ ಮೂಲಕ ಎಡೆ ಹೊಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

‘ದ್ವಿಚಕ್ರವಾಹನದ ಮೂಲಕ ಎಡೆ ಹೊಡೆಯುವುದರಿಂದ ಸಮಯ, ಹಣ ಉಳಿತಾಯವಾಗುವುದರ ಜೊತೆಗೆ ಬೆಳೆ ನಾಶವಾಗುವುದಿಲ್ಲ. ಒಂದು ದಿನಕ್ಕೆ 8 ಎಕರೆ ಭೂಮಿಯ ಎಡೆ ಹೊಡೆಯುತ್ತೇನೆ. ಇದಕ್ಕೆ ರೂ 200 ಪೆಟ್ರೋಲ್, ಇಬ್ಬರು ಕೂಲಿ ಕಾರ್ಮಿಕರಿಗೆ ರೂ400 ಕೂಲಿಯಂತೆ ಒಟ್ಟಾರೆ ಒಂದು ದಿನಕ್ಕೆ 600 ರೂಪಾಯಿ ಖರ್ಚಾಗುತ್ತದೆ. ಎತ್ತುಗಳ ಮೂಲಕ ಎಡೆ ಹೊಡೆಯುವಾಗ ಎತ್ತುಗಳು ಬೆಳೆಯನ್ನು ತುಳಿದು ಹಾಳು ಮಾಡುತ್ತವೆ. ಆದರೆ ದ್ವಿಚಕ್ರವಾಹನದ ಮೂಲಕ ಎಡೆ ಹೊಡೆಯುವಾಗ ಯಾವುದೇ ರೀತಿಯ ಬೆಳೆ ಹಾನಿಯಾಗುವುದಿಲ್ಲ. ಹಳೆಯ ಸಂಪ್ರದಾಯ ಬಿಟ್ಟು ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನ ಬಳಸುವ ಮೂಲಕ ಸಮಯ, ಹಣ ಉಳಿತಾಯ ಮಾಡಬಹುದು’ ಎನ್ನುತ್ತಾರೆ ಸಂಗನಗೌಡ.

‘ನಾಲ್ಕು ವರ್ಷಗಳಿಂದ ನಾನು ಎಡೆ ಹೊಡೆಯಲು ದ್ವಿಚಕ್ರ ವಾಹನ ಬಳಸುತ್ತಿದ್ದೇನೆ. ಕಳೆ ಚೆನ್ನಾಗಿ ಕೀಳಲು ಬರುತ್ತದೆ. ಇದರಿಂದ ಸಮಯ, ಹಣ ಉಳಿತಾಯವಾಗಿದೆ. ಅಷ್ಟೇ ಅಲ್ಲದೇ, ಬೆಳೆಗೆ ಯಾವುದೇ ರೀತಿಯ ತೊಂದರೆ ಇಲ್ಲ’ ಎನ್ನುತ್ತಾರೆ ಅವರು. 2000 ರೂಪಾಯಿ ಖರ್ಚು ಮಾಡಿ ಎಡೆ ಹೊಡೆಯುವ ಯಂತ್ರ ತಯಾರಿಸಿದ್ದಾರೆ. ಒಂದು ಬಾರಿ ತಯಾರಿಸಿದ ಯಂತ್ರ ಸುಮಾರು 50 ವರ್ಷಗಳ ಕಾಲ ಬರುವ ವಿಶ್ವಾಸ ಅವರದ್ದು.

‘ಈ ರೀತಿಯ ಪ್ರಯೋಗ ಆರಂಭಿಸಿದಾಗ ಅಕ್ಕಪಕ್ಕದ ರೈತರು ಹಾಗೂ ಸ್ನೇಹಿತರೆಲ್ಲ ಅಪಹಾಸ್ಯ ಮಾಡಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಎಲ್ಲ ರೈತರು ನನ್ನಲ್ಲಿಗೆ ಬಂದು ಮಾಹಿತಿ ಪಡೆದು ಇದನ್ನು ತಮ್ಮ ತಮ್ಮ ಹೊಲಗಳಲ್ಲಿ ಬಳಸುತ್ತಿದ್ದಾರೆ. ಕಡಲೆ, ಸೂರ್ಯಕಾಂತಿ, ಜೋಳ, ಈರುಳ್ಳಿ ಮುಂತಾದ ಬೆಳೆಗಳಲ್ಲಿ ಈ ತಂತ್ರಜ್ಞಾನ ಬಳಸಬಹುದು’ ಎಂದು ಮಾಹಿತಿ ನೀಡುತ್ತಾರೆ ಸಂಗನಗೌಡ.
ಸಂಪರ್ಕಕ್ಕೆ  9591016614.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT