ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎದುರಾಳಿಗಳಿಂದ 18 ಐ.ಎಸ್‌ ಉಗ್ರರ ಹತ್ಯೆ

ಕಳೆದ ವಾರ ನಡೆದಿದ್ದ 12 ಜನರ ಶಿರಚ್ಛೇದಕ್ಕೆ ಜೈಶ್‌ ಅಲ್‌ ಇಸ್ಲಾಂ ಉಗ್ರರ ಪ್ರತೀಕಾರ
Last Updated 1 ಜುಲೈ 2015, 19:30 IST
ಅಕ್ಷರ ಗಾತ್ರ

ಬೈರೂತ್‌ (ಎಎಫ್‌ಪಿ): ಡಮಾಸ್ಕಸ್‌ನಲ್ಲಿ ಕಾರ್ಯನಿರ್ವಹಿಸುವ ಸಿರಿಯಾದ ಬಂಡಾಯ ಗುಂಪೊಂದು ಇಸ್ಲಾಮಿಕ್‌ ಸ್ಟೇಟ್‌ (ಐ.ಎಸ್‌) ಸದಸ್ಯರು ಎಂದು ಹೇಳಲಾದ 18 ಜನರನ್ನು ಹತ್ಯೆ ಮಾಡಿದೆ.

ಹತ್ಯೆಯ ವಿಡಿಯೊವನ್ನು ಬಿಡುಗಡೆ ಮಾಡಲಾಗಿದ್ದು, ಹತ್ಯೆಯ ದೃಶ್ಯಗಳನ್ನು ಐ.ಎಸ್‌ ನಡೆಸಿದ ಶಿರಚ್ಛೇದ ಕೃತ್ಯಗಳ ಹಾಗೆಯೇ ರೂಪಿಸಲಾಗಿದೆ. ಜೈಶ್‌ ಅಲ್‌ ಇಸ್ಲಾಂ (ಇಸ್ಲಾಂ ಸೇನೆ) ಎಂಬ ಹೆಸರಿನ ಈ ಸಂಘಟನೆ ಈ ಕೃತ್ಯ ಎಸಗಿದೆ.  ಹತ್ಯೆ ನಡೆಸಿದ ವ್ಯಕ್ತಿಗಳು ಕಿತ್ತಳೆ ಬಣ್ಣದ ದಿರಿಸು ಧರಿಸಿದ್ದಾರೆ. ಐ.ಎಸ್‌ ಬಿಡುಗಡೆ ಮಾಡುತ್ತಿದ್ದ ವಿಡಿಯೊಗಳಲ್ಲಿ ಶಿರಚ್ಛೇದಕ್ಕೆ ಒಳಗಾದವರು ಇದೇ ಬಣ್ಣದ ಮತ್ತು ಇದೇ ರೀತಿಯ ದಿರಿಸು ಧರಿಸಿರುತ್ತಿದ್ದರು.

ಐ.ಎಸ್‌ ಕೈದಿಗಳಿಗೆ ಕಪ್ಪು ಬಣ್ಣದ ಬಟ್ಟೆ ತೊಡಿಸಲಾಗಿದ್ದು ಅವರ ಕಾಲು ಮತ್ತು ಕೈಗೆ ಸರಪಣಿ ಬಿಗಿಯಲಾಗಿತ್ತು. ಸುಮಾರು 20 ನಿಮಿಷದ ಈ ವಿಡಿಯೊದ ದೃಶ್ಯಗಳು ಮತ್ತು ಹಿನ್ನೆಲೆ ಧ್ವನಿ ಐ.ಎಸ್‌ ವಿಡಿಯೊಗಳ ಮಾದರಿಯಲ್ಲಿಯೇ ಇದೆ. ತಮ್ಮ ಸಂಘಟನೆಗೆ ಸೇರಿದ ಮೂವರು ಸದಸ್ಯರನ್ನು ಐ.ಎಸ್‌ ಶಿರಚ್ಛೇದ ಮಾಡಿದೆ. ಅದಕ್ಕೆ ಪ್ರತೀಕಾರವಾಗಿ 18 ಜನರನ್ನು ಹತ್ಯೆ ಮಾಡಲಾಗಿದೆ ಎಂದು ಜೈಶ್‌ ಹೋರಾಟಗಾರರು ವಿಡಿಯೊದಲ್ಲಿ ವಿವರಿಸಿದ್ದಾರೆ.

ಫೆಬ್ರುವರಿಯಲ್ಲಿ ಐ.ಎಸ್‌ ಉಗ್ರರೊಂದಿಗೆ ನಡೆದ ಕದನವೊಂದರ ಬಗ್ಗೆಯೂ ಉಲ್ಲೇಖಿಸಲಾಗಿದೆ. ಅಧ್ಯಕ್ಷ ಬಷರ್‌ ಅಲ್‌ ಅಸದ್‌ ಜೊತೆ ಸೇರಿಕೊಂಡು ಜೈಶ್‌ ಮತ್ತು ಇತರ ಬಂಡಾಯ ಗುಂಪುಗಳಿಗೆ ಐ.ಎಸ್‌ ದ್ರೋಹ ಎಸಗಿದೆ ಎಂದು ವಿಡಿಯೊದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಅಸದ್‌ ಅವರ ಅಲಾವೈಟ್‌ ಜನಾಂಗದ ಪರವಾಗಿರುವ ಐ.ಎಸ್‌, ಸುನ್ನಿ ಮುಸ್ಲಿಮರಿಗೆ ದ್ರೋಹ ಮಾಡಿದೆ ಎಂದು ಆರೋಪಿಸಲಾಗಿದೆ.

ಹತ್ಯೆಗೊಳಗಾದ 18 ಐ.ಎಸ್‌ ಸದಸ್ಯರ ಸುದೀರ್ಘ ತಪ್ಪೊಪ್ಪಿಗೆಯೂ ವಿಡಿಯೊದಲ್ಲಿ ಇದೆ. ಐ.ಎಸ್‌ ಜೊತೆಗಿದ್ದಾಗ ತಾವು ಎಂದೂ ಸಿರಿಯಾ ಸೇನೆಯ ವಿರುದ್ಧ ಹೋರಾಡಿಲ್ಲ ಎಂದು ಅವರು ಹೇಳಿದ್ದಾರೆ. ಐ.ಎಸ್‌ ಉಗ್ರರು ಸಿರಿಯಾ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿಲ್ಲ, ಬದಲಿಗೆ ಇತರ ಗುಂಪುಗಳನ್ನು ಗುರಿಯಾಗಿಸಿ ಹೋರಾಡುತ್ತಿದ್ದಾರೆ ಎಂಬುದನ್ನು ಸ್ಥಾಪಿಸುವುದು ಈ ಗುಂಪಿನ ಉದ್ದೇಶವಾಗಿದೆ.

ಕೊನೆಯ ದೃಶ್ಯದಲ್ಲಿ ಐ.ಎಸ್‌ನ 18 ಸದಸ್ಯರು ಜೈಶ್‌ ಸಂಘಟನೆಯ ಸದಸ್ಯರ ಮುಂದೆ ಮಂಡಿಯೂರಿ ಕುಳಿತಿದ್ದಾರೆ. ಜೈಶ್‌ ಸದಸ್ಯರು ಅವರ ಹಣೆಗೆ ಗುಂಡಿಟ್ಟು ಹತ್ಯೆ ಮಾಡುತ್ತಾರೆ. ಈ ದೃಶ್ಯಗಳನ್ನು ಹಲವು ಕೋನಗಳಿಂದ ಚಿತ್ರಿಸಲಾಗಿದೆ. ಸಿರಿಯಾದಲ್ಲಿದ್ದ ಅಲ್‌ ಕೈದಾ ಸದಸ್ಯರನ್ನು ಸ್ಥಳೀಯವಾಗಿ ಬೆಂಬಲಿಗ ಸಂಘಟನೆಯಾಗಿದ್ದ ಅಲ್‌ ನುಸ್ರಾ ಜೊತೆ ವಿಲೀನಗೊಳ್ಳುವಂತೆ ಸೂಚನೆ ನೀಡಲಾಗಿತ್ತು.

ಆದರೆ ಇದನ್ನು ಪ್ರತಿಭಟಿಸಿ ಅಲ್‌ ಕೈದಾ ಸದಸ್ಯರು 2013ರಲ್ಲಿ ಸಿರಿಯಾದ ಇಸ್ಲಾಮಿಕ್ ಸ್ಟೇಟ್‌ ಸಂಘಟನೆ ಸ್ಥಾಪಿಸಿದ್ದರು.  ಈ ವಿಲೀನವನ್ನು ಅಲ್‌ ನುಸ್ರಾ ಕೂಡ ವಿರೋಧಿಸಿತ್ತು. ಆಗಿನಿಂದಲೂ ಸಿರಿಯಾದಲ್ಲಿರುವ ಸ್ಥಳೀಯ ಉಗ್ರಗಾಮಿ ಸಂಘಟನೆಗಳೊಂದಿಗೆ ಐ.ಎಸ್‌ ಕಾದಾಡುತ್ತಿದೆ. ಪ್ರತಿಸ್ಪರ್ಧಿ ಗುಂಪುಗಳ 12 ಸದಸ್ಯರ ಶಿರಚ್ಛೇದದ ವಿಡಿಯೊವನ್ನು ಐ.ಎಸ್‌ ಕಳೆದ ವಾರ ಪ್ರಕಟಿಸಿತ್ತು. ಅವರಲ್ಲಿ ಮೂವರು  ಜೈಶ್‌ ಸಂಘಟನೆ ಸದಸ್ಯರಾಗಿದ್ದರು.
*
ಮುಖ್ಯಾಂಶಗಳು
* ಐ.ಎಸ್‌ ಶಿರಚ್ಛೇದದ ದೃಶ್ಯಗಳನ್ನು ಅನುಕರಿಸಿ ಹತ್ಯೆ
* 20 ನಿಮಿಷದ ವಿಡಿಯೊ ಬಿಡುಗಡೆ
* ಅಧ್ಯಕ್ಷ ಅಸದ್ ಜೊತೆಗೆ ಐ.ಎಸ್‌ ಷಾಮೀಲು ಎಂಬ ಆರೋಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT