ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್ಇಇಟಿ: ‘ಸುಪ್ರೀಂ’ಗೆ ಇಂದು ರಾಜ್ಯದ ಅರ್ಜಿ

ಈ ವರ್ಷಕ್ಕೆ ವಿನಾಯಿತಿ ಕೇಳಲು ನಿರ್ಧಾರ
Last Updated 1 ಮೇ 2016, 19:44 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಿಂದ (ಎನ್‌ಇಇಟಿ) ಕರ್ನಾಟಕದ ವಿದ್ಯಾರ್ಥಿಗಳಿಗೆ ಈ ವರ್ಷದ ಮಟ್ಟಿಗೆ  ವಿನಾಯಿತಿ ನೀಡುವಂತೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಸೋಮವಾರ ಅರ್ಜಿ ಸಲ್ಲಿಸಲಿದೆ.

‘ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ರಾಜ್ಯದ ವಿದ್ಯಾರ್ಥಿಗಳು ಸಿದ್ಧತೆ ನಡೆಸಿದ್ದಾರೆ. 2016–17ನೇ ಸಾಲಿನಿಂದಲೇ ದಿಢೀರ್‌ ಎನ್‌ಇಇಟಿ  ಜಾರಿ ಮಾಡಿರುವುದರಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ನಾವು ಎನ್‌ಇಇಟಿಯನ್ನು ವಿರೋಧಿಸುವುದಿಲ್ಲ. ಆದರೆ, ಈ ವರ್ಷದ ಮಟ್ಟಿಗೆ ಮಾತ್ರ ವಿನಾಯಿತಿ ನೀಡುವಂತೆ ಕೋರುತ್ತೇವೆ. ಅರ್ಜಿಯನ್ನು ಮಂಗಳವಾರವೇ ವಿಚಾರಣೆಗೆ ತೆಗೆದುಕೊಳ್ಳುವಂತೆ ಮನವಿ ಮಾಡುತ್ತೇವೆ’ ಎಂದು ಅಡ್ವೊಕೇಟ್‌ ಜನರಲ್‌ ಎಂ.ಆರ್‌. ನಾಯಕ್‌  ತಿಳಿಸಿದರು.

ಮೊದಲ ಪರೀಕ್ಷೆಗೆ 6.5 ಲಕ್ಷ ಮಂದಿ: ರಾಷ್ಟ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ಆಯೋಜಿಸಿದ್ದ ಎನ್‌ಇಇಟಿ ಮೊದಲ ಪರೀಕ್ಷೆಗೆ ದೇಶದಾದ್ಯಂತ 6.5 ಲಕ್ಷ ವಿದ್ಯಾರ್ಥಿಗಳು ಹಾಜರಾದರು. ರಾಜ್ಯದಲ್ಲಿ ಬೆಂಗಳೂರಿನಲ್ಲಿ ಮಾತ್ರ ಪರೀಕ್ಷಾ ಕೇಂದ್ರಗಳು ಇದ್ದುದರಿಂದ ಇತರೆ ಜಿಲ್ಲೆಗಳ ವಿದ್ಯಾರ್ಥಿಗಳೂ ಇಲ್ಲಿಗೆ ಬಂದು ಪರೀಕ್ಷೆ ಬರೆದರು.  

ಈ ಪರೀಕ್ಷೆಗೆ ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ನಡೆಸಲು ಸಾಧ್ಯವಾಗದ ಕಾರಣ ಎನ್‌ಇಇಟಿ–2ಕ್ಕೂ  ಅವಕಾಶ ನೀಡಬೇಕು ಎಂದು ಭಾನುವಾರ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

2ನೇ ಪರೀಕ್ಷೆಗೆ ಅವಕಾಶ ನೀಡಿ: ‘ಜೀವವಿಜ್ಞಾನ ಮತ್ತು ರಸಾಯನ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು  ಸರಳವಾಗಿದ್ದವು. ಆದರೆ, ಭೌತ ವಿಜ್ಞಾನ ಅತ್ಯಂತ ಕಠಿಣವಾಗಿತ್ತು. ಎಂಬಿಬಿಎಸ್‌ಗೆ ಎನ್‌ಇಇಟಿಯೇ ಅಂತಿಮ ಎಂದು ಹೇಳಿದ್ದರಿಂದ ಆತಂಕವಾಯಿತು. ನಮಗೆ ಎನ್‌ಇಇಟಿ–2 ಬರೆಯುವುದಕ್ಕೂ ಅವಕಾಶ ಕೊಡಬೇಕು’ ಎಂದು ಎಂಇಎಸ್‌ ಕಾಲೇಜಿನ ವಿದ್ಯಾರ್ಥಿ ವಿ.ಸುಷ್ಮಿತಾ ಹೇಳಿದರು.

ಎರಡನೇ ಎನ್‌ಇಇಟಿ ಜುಲೈ 24ರಂದು ನಡೆಯಲಿದೆ.

ಸಿ.ಎಂ.ಗೆ ಪತ್ರ: ಎನ್‌ಇಇಟಿ–1 ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಎನ್‌ಇಇಟಿ–2ಕ್ಕೂ ಅವಕಾಶ ನೀಡುವಂತೆ ರಾಜ್ಯ ಸರ್ಕಾರದಿಂದ ಒತ್ತಡ ತರಬೇಕು ಎಂದು ಆಗ್ರಹಿಸಿ  70ಕ್ಕೂ ಅಧಿಕ ಪೋಷಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಜಾಮರ್‌ ಅಳವಡಿಕೆ: ನಕಲು ಮಾಡುವುದನ್ನು ತಪ್ಪಿಸುವುದಕ್ಕಾಗಿ ಇದೇ ಮೊದಲ ಬಾರಿಗೆ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್‌ಗಳನ್ನು ಅಳವಡಿಸಿತ್ತು. ವಿದ್ಯಾರ್ಥಿಗಳು ವಾಚ್‌ ಧರಿಸುವುದನ್ನೂ ನಿರ್ಬಂಧಿಸಿದ್ದು, ಕೇಂದ್ರಗಳಲ್ಲಿ ಗೋಡೆ ಗಡಿಯಾರ ಹಾಕಲಾಗಿತ್ತು. ಇದಕ್ಕಾಗಿ ₹30 ಕೋಟಿ ವೆಚ್ಚಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT