ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್ನ ಸೊಲ್ರಾಂಗೊ... ಅಮ್ಮಾ ಅಮ್ಮಾ...

Last Updated 30 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜಯಲಲಿತಾ ಹಾಗೂ ಇತರರ ಜಾಮೀನು ಅರ್ಜಿ ವಿಚಾರಣೆ ವೇಳೆ ಮಂಗಳವಾರ ಬೆಳಿಗ್ಗೆ ಹೈಕೋರ್ಟ್‌ನಲ್ಲಿ ತಮಿಳುನಾಡಿನ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.

ನ್ಯಾಯಮೂರ್ತಿಗಳು ಪ್ರಕರಣವನ್ನು ಕೈಗೆತ್ತಿಕೊಳ್ಳು­ತ್ತಿದ್ದಂತೆಯೇ ಸರ್ಕಾರಿ ವಿಶೇಷ ವಕೀಲ ಜಿ.ಭವಾನಿ ಸಿಂಗ್‌ ಅವರು,  ‘ಈ ಪ್ರಕರಣದಲ್ಲಿ ವಿಶೇಷ ವಕೀಲ­ನಾಗಿ ಮುಂದುವರಿಯಲು ನನಗೆ ಸರ್ಕಾರದ ಆದೇಶ ಕೈ ಸೇರಿಲ್ಲ’ ಎಂದು ಕನ್ನಡದಲ್ಲಿ ಹೇಳಿದರು.

ಆಗ ಜಯಲಲಿತಾ ಪರ ವಕೀಲರ ಸಮೂಹ ‘ಎನ್ನ ಸೊಲ್ರಾಂಗೊ, ಎನ್ನ ಸೊಲ್ರಾಂಗೊ (ಏನು ಹೇಳ್ತಿ­ದಾರೆ...)’ ಎಂದು ಆತಂಕದಿಂದ ತಮ್ಮೊಳಗೆ ಪ್ರಶ್ನಿಸಿ­ಕೊಂಡಿತು. ನ್ಯಾಯಮೂರ್ತಿ ರತ್ನಕಲಾ ಅವರೂ ಈ ಸಂದರ್ಭದಲ್ಲಿ ಬಹುತೇಕ ಕನ್ನಡದಲ್ಲೇ  ಸಂಭಾಷಣೆ ನಡೆಸಿದ್ದು ವಿಶೇಷವಾಗಿತ್ತು.

’ಕಾಸ್‌ಲಿಸ್ಟ್’ ಪ್ರಕಾರ ಕೋರ್ಟ್‌ ಸಭಾಂಗಣ 11ರಲ್ಲಿ ಈ ಪ್ರಕರಣದ ವಿಚಾರಣೆಯನ್ನು 29ನೇ ಸಂಖ್ಯೆ ಎಂದು ನಮೂದು ಮಾಡಲಾಗಿತ್ತು. ತಮಿಳು ವಕೀಲರ ದಂಡು ಸಭಾಂಗಣದ ಒಳಗೆ ಮತ್ತು ಹೊರಗೆ ಕಿಕ್ಕಿರಿದು ತುಂಬಿತ್ತು. ಇದರಿಂದಾಗಿ ಇತರ ಪ್ರಕರಣಗಳ ವಕೀಲರು ನ್ಯಾಯಪೀಠದ ಮುಂದೆ ಹಾಜರಾಗಲು ಸಾಧ್ಯವೇ ಆಗಲಿಲ್ಲ. ಕಾಸ್‌ಲಿಸ್ಟ್‌ಸಂಖ್ಯೆಯ 27, 28ರ ಪರ ವಕೀಲರಂತೂ ಬಾಗಿಲಿನಿಂದ ಹೊರಗೆ ನಿಂತು­ಕೊಂಡೇ ‘ಪಾಸ್‌ ಓವರ್, ಪಾಸ್‌ ಓವರ್‌’ ಎಂದು ಜೋರಾಗಿ ಕೂಗಿ ವಾಯಿದೆ‌ಪಡೆದುಕೊಂಡರು.

ಸುಮಾರು 10.45ರ ವೇಳೆಗೆ ಬಂದ ಹಿರಿಯ ವಕೀಲ ರಾಮ್‌ ಜೇಠ್ಮಲಾನಿ ಅವರಿಗೆ ಕೋರ್ಟ್‌ ಸಭಾಂಗಣ ಪ್ರವೇಶಿಸಲು ಸಾಕುಬೇಕಾಯಿತು. ಒಬ್ಬರ­ನ್ನೊಬ್ಬರು ಹಿಂದೆ ಮುಂದೆ ಒತ್ತುತ್ತಿದ್ದ ಪರಿಣಾಮ ಹಲವು ವಕೀಲರ ಬಾಯಲ್ಲಿ ‘ಅಮ್ಮಾ, ಅಮ್ಮಾ’ ಎಂಬ ಉದ್ಗಾರ ತಂತಾನೇ ಹೊರಬರುತ್ತಿತ್ತು..!

ಬಿಗಿ ಬಂದೋಬಸ್ತ್: ಹೈಕೋರ್ಟ್‌ ಸುತ್ತಮುತ್ತ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.  ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಇದರಿಂದಾಗಿ ತಮಿಳುನಾಡಿನಿಂದ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದ ಜಯಾ ಅಭಿಮಾನಿಗಳು, ಜನಪ್ರತಿನಿಧಿಗಳು ಕೋರ್ಟ್‌ ಹೊರಭಾಗದಲ್ಲೇ ಉಳಿಯಬೇಕಾಯಿತು.

ವಿಚಾರಣೆ ಮುಂದೂಡಿಕೆ ವಿಷಯ ತಿಳಿಯುತ್ತಿದ್ದಂತೆ  ತಮಿಳು ಟಿ.ವಿ ಚಾನೆಲ್‌ಗಳ ಮುಂದೆ ತಮಿಳುನಾಡಿನ ಸಂಸದರು, ಶಾಸಕರು, ಮಂತ್ರಿಗಳು ಹಾಗೂ ವಕೀಲರು ಪ್ರತಿಕ್ರಿಯೆ ನೀಡಲು ನಾಮುಂದು ತಾಮುಂದು ಎಂದು ಪೈಪೋಟಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT