ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಆರ್‌ಐಗಳಿಗೆ ಇ–ಮತಪತ್ರ

ಸುಪ್ರೀಂ ಕೋರ್ಟ್‌ಗೆ ಚುನಾವಣಾ ಆಯೋಗ ವರದಿ
Last Updated 26 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅನಿವಾಸಿ ಭಾರತೀಯ (ಎನ್‌ಆರ್‌ಐ) ಮತದಾರರಿಗೆ ಬದಲಿ ಮತದಾನ ಮತ್ತು ಇ–ಮತಪತ್ರ ಮೂಲಕ ಮತ ಚಲಾವಣೆಗೆ ಅವಕಾಶ ಕಲ್ಪಿಸುವ ಕುರಿತು ಸುಪ್ರೀಂ ಕೋರ್ಟ್‌ಗೆ ಚುನಾವಣಾ ಆಯೋಗ ವರದಿ ಸಲ್ಲಿಸಿದೆ. ಆದರೆ, ವಿದೇಶದಲ್ಲಿರುವ ಭಾರತದ ದೂತಾವಾಸಗಳನ್ನು ಮತ­ಗಟ್ಟೆಗಳನ್ನಾಗಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

‘ನಾವು ಯಾವುದನ್ನೂ ವಿರೋಧಿಸುತ್ತಿಲ್ಲ. ಆದರೆ, ಯಾವುದು ಕಾರ್ಯಸಾಧುವೋ ಅದನ್ನು ಅನುಷ್ಠಾನಕ್ಕೆ ತರಲು ಬಯಸುತ್ತೇವೆ’ ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್‌.ಸಂಪತ್‌ ತಿಳಿಸಿದರು.

ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವರದಿ ಕುರಿತಂತೆ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಅವರು, ‘ಸೇನಾ ಸಿಬ್ಬಂದಿ ವರ್ಗಕ್ಕೆ ಕಲ್ಪಿಸಿರುವ ಅಂಚೆ ಮತದಾನ ಮಾದರಿಯಲ್ಲಿ ಎನ್ಆರ್‌ಐಗಳಿಗೆ ಬದಲಿ ಮತದಾನ ಮತ್ತು ಇ–ಮತಪತ್ರ ಸೌಕರ್ಯ ಕಲ್ಪಿಸಬೇಕಿದ್ದರೆ ಕಾನೂನು ತಿದ್ದುಪಡಿ ಅಗತ್ಯ. ಈ ಬಗ್ಗೆ ಶಾಸಕಾಂಗ ಚಿಂತನೆ ನಡೆಸಬೇಕು’ ಎಂದರು.

‘ಶಾಸನಬದ್ಧ ಒಪ್ಪಿಗೆ ದೊರೆತರೆ ಎನ್‌ಆರ್‌ಐಗಳಿಗೆ ಇ–ಮತಪತ್ರ ರವಾನೆ ಮಾಡಲಾಗುವುದು. ಆದರೆ, ಮತ ಚಲಾ­ವಣೆ ಬಳಿಕ ಅದನ್ನು ಅವರು ಭೌತಿಕ ರೂಪದಲ್ಲಿ ಅಂಚೆ ಮೂಲಕ ಆಯೋಗಕ್ಕೆ ತಲುಪಿಸಬೇಕಾಗುತ್ತದೆ’ ಎಂದರು.

‘ಎನ್‌ಆರ್‌ಐಗಳಿಗೆ ಭಾರತದ ದೂತಾವಾಸಗಳಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸುವುದು ಕಷ್ಟಸಾಧ್ಯವೆಂದು ವಿದೇಶಾಂಗ ಸಚಿವಾಲಯ ಹೇಳಿದೆ. ಕೆಲವು ದೇಶಗಳಲ್ಲಿ ಸ್ಥಳೀಯ ಜನಸಂಖ್ಯೆಯಷ್ಟೇ ಎನ್‌ಆರ್‌ಐ ಮತದಾರರೂ ಇದ್ದಾರೆ. ಆದ್ದರಿಂದ ರಾಯಭಾರ ಕಚೇರಿಗಳನ್ನು ಮತಗಟ್ಟೆ-­ಯನ್ನಾಗಿ ಮಾಡಲು ಆಗುವುದಿಲ್ಲ. ಇನ್ನೂ ಕೆಲವು ದೇಶಗಳಲ್ಲಿ ಪ್ರಜಾತಂತ್ರ ವ್ಯವಸ್ಥೆ ಇಲ್ಲ. ಹಾಗಾಗಿ ಆ ರಾಷ್ಟ್ರಗಳು ಭಾರತದ ದೂತಾವಾಸಗಳಲ್ಲಿ ಮತದಾನಕ್ಕೆ ಅವಕಾಶ ನಿರಾಕರಿ­ಸುವ ಸಂಭವವೂ ಇದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

‘ಸಾಗರೋತ್ತರ ಮತದಾರರಿಗೆ  ಮತದಾನದ ಪರ್ಯಾಯ  ಮಾರ್ಗೋಪಾಯ’ ಕುರಿತಂತೆ ಉಪಚುನಾವಣಾ ಆಯುಕ್ತ ವಿನೋದ್‌ ಜುಟ್‌ಜಿ ಅವರ ಅಧ್ಯಕ್ಷತೆಯಲ್ಲಿ ನಡೆದ 12 ಸದಸ್ಯರ ಸಮಿತಿ 50 ಪುಟಗಳ ವರದಿ ಸಿದ್ಧಪಡಿಸಿದೆ. ಇದನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ. ಅನಿವಾಸಿ ಭಾರತೀಯ ಮತದಾರರಿಗೆ ಅವರು ನೆಲೆಸಿರುವ ರಾಷ್ಟ್ರದಿಂದಲೇ ಮತ­ದಾನಕ್ಕೆ ಅವಕಾಶ ಕಲ್ಪಿಸಲು  ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಈ   ಬಗ್ಗೆ ವರದಿ ನೀಡುವಂತೆ ಸುಪ್ರೀಂ ಕೋರ್ಟ್‌ ಆಯೋಗಕ್ಕೆ ಸೂಚಿಸಿತ್ತು.

ಪ್ರಜಾಪ್ರತಿನಿಧಿ ಕಾಯ್ದೆ ಅನುಸಾರ ಅನಿವಾಸಿ ಭಾರತೀಯ ಮತದಾರ ಬೇರೆ ರಾಷ್ಟ್ರದ ನಾಗರಿಕತ್ವ ಹೊಂದಿರದಿದ್ದರೆ ಅಂತಹ­ವರು ದೇಶದ ಯಾವ ಮತಕ್ಷೇತ್ರದ ನಿವಾಸಿಗಳಾಗಿ­ರು­ತ್ತಾರೋ  (ಪಾಸ್‌ಪೋರ್ಟ್‌ನಲ್ಲಿರುವ ವಿಳಾಸ) ಅಲ್ಲಿನ ಮತ­ದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ­ಕೊಳ್ಳ­ಬಹುದು. ಚುನಾವಣೆ ಸಂದರ್ಭದಲ್ಲಿ ನಿಗದಿತ ಮತಗಟ್ಟೆಗೆ ಖುದ್ದು ಹಾಜರಾಗಿ ಮತಚಲಾವಣೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT