ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಸ್‌ಜಿ ಆಸೆಗೆ ಜೀವ

ಈ ವರ್ಷವೇ ಮತ್ತೊಂದು ಸಭೆ * ಮೆಕ್ಸಿಕೊ ಸಲಹೆಯಂತೆ ಕ್ರಮ
Last Updated 26 ಜೂನ್ 2016, 22:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಣ್ವಸ್ತ್ರ ಪ್ರಸರಣ ತಡೆ (ಎನ್‌ಪಿಟಿ) ಒಪ್ಪಂದಕ್ಕೆ ಸಹಿ ಹಾಕದ ದೇಶಗಳಿಗೆ ಸದಸ್ಯತ್ವ ನೀಡುವ ವಿಚಾರವನ್ನು ಚರ್ಚಿಸುವುದಕ್ಕಾಗಿ ಪರಮಾಣು ಪೂರೈಕೆದಾರರ ಗುಂಪಿನ (ಎನ್‌ಎಸ್‌ಜಿ) ಇನ್ನೊಂದು ಸಭೆ ನಡೆಯುವ ಸಾಧ್ಯತೆ ಇದ್ದು, ಈ ಗುಂಪಿನ ಸದಸ್ಯತ್ವ ಪಡೆಯಲು ಭಾರತಕ್ಕೆ ಮತ್ತೊಂದು ಅವಕಾಶ ದೊರೆಯಲಿದೆ.

ಶುಕ್ರವಾರ ನಡೆದ ಎನ್‌ಎಸ್‌ಜಿ ಸಭೆಯಲ್ಲಿ ಭಾರತಕ್ಕೆ ಸದಸ್ಯತ್ವ ನೀಡುವ ಬಗ್ಗೆ ಯಾವುದೇ ನಿರ್ಧಾರ ಆಗಿರಲಿಲ್ಲ. ಆ ಪ್ರಸ್ತಾಪವನ್ನು ಚೀನಾ ಮತ್ತು ಇತರ ಕೆಲವು ದೇಶಗಳು ಬಲವಾಗಿ ವಿರೋಧಿಸಿದ್ದವು. ಎನ್‌ಪಿಟಿಗೆ ಭಾರತ ಸಹಿ ಹಾಕಿಲ್ಲ ಎಂಬುದನ್ನು ಮುಖ್ಯವಾಗಿ ಇರಿಸಿಕೊಂಡು ಈ ದೇಶಗಳು ಸದಸ್ಯತ್ವ ಪಡೆಯುವ ಭಾರತದ ಪ್ರಯತ್ನಕ್ಕೆ ಅಡ್ಡಿಯಾದವು.

ಮೆಕ್ಸಿಕೊ ನೀಡಿದ ಸಲಹೆಯ ಪ್ರಕಾರ ಈ ವರ್ಷ ಎನ್‌ಎಸ್‌ಜಿಯ ಮತ್ತೊಂದು ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಸಭೆ ಈ ವರ್ಷದ ಕೊನೆಯೊಳಗೆ ನಡೆಯುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಎನ್‌ಎಸ್‌ಜಿ ಸಭೆ ವರ್ಷಕ್ಕೆ ಒಂದು ಬಾರಿ ನಡೆಯುತ್ತದೆ.

‘ಈ ವರ್ಷದ ಕೊನೆಯೊಳಗೆ ಯಾವುದಾದರೂ ದಾರಿ ಕಾಣಿಸಬಹುದು. ಈ ವರ್ಷದಲ್ಲಿಯೇ ಭಾರತಕ್ಕೆ ಎನ್‌ಎಸ್‌ಜಿಯ ಪೂರ್ಣ ಪ್ರಮಾಣದ ಸದಸ್ಯತ್ವ ದೊರೆಯಲಿದೆ ಎಂಬ ವಿಶ್ವಾಸ ನಮಗಿದೆ’ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ತಾಷ್ಕೆಂಟ್‌ನಲ್ಲಿ ಭೇಟಿಯಾಗಿ ಎನ್‌ಎಸ್‌ಜಿ ಸದಸ್ಯತ್ವಕ್ಕೆ ಬೆಂಬಲ ಕೋರಿದ್ದರು. ಭಾರತಕ್ಕೆ ಇರುವ ಅರ್ಹತೆಯ ಆಧಾರದಲ್ಲಿ ಈ ವಿಚಾರವನ್ನು ಪರಿಶೀಲಿಸಬೇಕು ಎಂದು ಕೇಳಿಕೊಂಡಿದ್ದರು.

ಹಾಗಿದ್ದರೂ ಚೀನಾ ತನ್ನ ನಿಲುವನ್ನು ಬದಲಾಯಿಸಲೇ ಇಲ್ಲ. ಇದರಿಂದ ಹತಾಶೆಗೊಂಡ ಭಾರತ,  ತನ್ನ ಸದಸ್ಯತ್ವಕ್ಕೆ ಎನ್‌ಎಸ್‌ಜಿ ಸಭೆಯಲ್ಲಿ ‘ಒಂದು ದೇಶ’ ನಿರಂತರವಾಗಿ ಅಡ್ಡಿ ಉಂಟು ಮಾಡುತ್ತಲೇ ಬಂತು ಎಂದು ಪರೋಕ್ಷವಾಗಿ ಚೀನಾವನ್ನು ಟೀಕಿಸಿತ್ತು.

ಸಮಾಲೋಚನಾ ಸಮಿತಿ: ಭಾರತದ ಸದಸ್ಯತ್ವದ ಕೋರಿಕೆ ಬಗ್ಗೆ ಅನೌಪಚಾರಿಕ ಸಮಾಲೋಚನೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಗೆ ಅರ್ಜೆಂಟೀನಾ ಪ್ರತಿನಿಧಿ ರಾಫೇಲ್‌ ಗ್ರಾಸಿ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಸಿನ್ಹಾ ಆರೋಪ: ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವದ ಅಗತ್ಯವೇ ಇಲ್ಲ. ಸದಸ್ಯತ್ವ ಸಿಕ್ಕರೆ ಅದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಕೇಂದ್ರ ಸರ್ಕಾರದಲ್ಲಿರುವವರು ಈ ಬಗ್ಗೆ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿಯ ಹಿರಿಯ ಮುಖಂಡ ಬಿಜೆಪಿ ಮುಖಂಡ ಯಶವಂತ್‌ ಸಿನ್ಹಾ ಆರೋಪಿಸಿದ್ದಾರೆ.

ಈ ಸಭೆಗೂ ಚೀನಾ ವಿರೋಧ
ಎನ್‌ಪಿಟಿಗೆ ಸಹಿ ಹಾಕದ ದೇಶಗಳಿಗೆ ಎನ್‌ಎಸ್‌ಜಿ ಸದಸ್ಯತ್ವ ನೀಡುವ ಮಾನದಂಡಗಳ ಬಗ್ಗೆ ಈ ವರ್ಷವೇ ಮತ್ತೊಂದು ಸಭೆ ನಡೆಸಬೇಕು ಎಂಬ ಮೆಕ್ಸಿಕೊ ಸಲಹೆಗೂ ಚೀನಾ ವಿರೋಧ ವ್ಯಕ್ತಪಡಿಸಿದೆ. ಆದರೆ ಅಮೆರಿಕ ಸೇರಿದಂತೆ ಹೆಚ್ಚಿನ ದೇಶಗಳು ಮೆಕ್ಸಿಕೊ ದೇಶಕ್ಕೆ ಬೆಂಬಲ ನೀಡಿದ್ದರಿಂದಾಗಿ ಸಭೆ ನಡೆಸಲು ನಿರ್ಧರಿಸಲಾಗಿದೆ.

ವಿರಸ ಇಲ್ಲ
ದ್ವಿಪಕ್ಷೀಯ ಸಂಬಂಧ ಮುಂದುವರಿಯಬೇಕಾದರೆ ಪರಸ್ಪರರ ಹಿತಾಸಕ್ತಿ, ಕಾಳಜಿ ಮತ್ತು ಆದ್ಯತೆಗಳಿಗೆ ಪೂರಕವಾಗಿ ವರ್ತಿಸುವುದು ಅಗತ್ಯ ಎಂಬುದನ್ನು ಚೀನಾಕ್ಕೆ ಮನವರಿಕೆ ಮಾಡುವ ಪ್ರಯತ್ನ ಮುಂದುವರಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್‌ ಸ್ವರೂಪ್‌ ಹೇಳಿದ್ದಾರೆ.

ಭಾರತದ ಎನ್‌ಎಸ್‌ಜಿ ಆಕಾಂಕ್ಷೆಗೆ ಚೀನಾ ಅಡ್ಡಿಯಾದರೂ ಎರಡೂ ದೇಶಗಳ ನಡುವಣ ಸಂಬಂಧದ ಮೇಲೆ ಅದು ಪ್ರತಿಕೂಲ ಪರಿಣಾಮ ಬೀರದು ಎಂಬ ಅಭಿಪ್ರಾಯವನ್ನು ಈ ಮೂಲಕ ಸ್ವರೂಪ್‌ ವ್ಯಕ್ತಪಡಿಸಿದ್ದಾರೆ.

** *** **
ಭಾರತದ ರಾಜತಾಂತ್ರಿಕತೆಗೆ ಈಗ ವೈಫಲ್ಯದ ಭಯವಿಲ್ಲ. ನಮಗೆ ಬೇಕಾದ ಫಲಿತಾಂಶ ದೊರೆಯದಿದ್ದರೆ ಪ್ರಯತ್ನವನ್ನು ಇಮ್ಮಡಿಗೊಳಿಸಲಾಗುವುದು.
-ವಿಕಾಸ್‌ ಸ್ವರೂಪ್‌,
ವಿದೇಶಾಂಗ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT