ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಸ್‌ಜಿ ಸದಸ್ಯತ್ವ: ಭಾರತಕ್ಕೆ ಹಿನ್ನಡೆ

ಸೋಲ್‌ ಅಧಿವೇಶನದಲ್ಲಿ ಚರ್ಚೆ ಇಲ್ಲ–ಚೀನಾ ಸ್ಪಷ್ಟನೆ
Last Updated 20 ಜೂನ್ 2016, 19:59 IST
ಅಕ್ಷರ ಗಾತ್ರ

ಬೀಜಿಂಗ್‌ (ಪಿಟಿಐ):  ಪರಮಾಣು ಪೂರೈಕೆದಾರರ ಗುಂಪಿಗೆ (ಎನ್‌ಎಸ್‌ಜಿ) ಸೇರುವ ಭಾರತದ ಪ್ರಯತ್ನಕ್ಕೆ ಚೀನಾ ಮತ್ತೆ ಅಡ್ಡಗಾಲು ಹಾಕಿದ್ದು, ‘ಭಾರತಕ್ಕೆ ಸದಸ್ಯತ್ವ ನೀಡುವ ವಿಚಾರವು ಸೋಲ್‌ನಲ್ಲಿ ನಡೆಯುತ್ತಿರುವ ವಾರ್ಷಿಕ ಅಧಿವೇಶನದ ಕಾರ್ಯಸೂಚಿಯಲ್ಲಿ ಇಲ್ಲ’ ಎಂದಿದೆ. 

‘ಎನ್‌ಎಸ್‌ಜಿ ಸದಸ್ಯತ್ವ ಪಡೆಯುವ ಭಾರತದ ಪ್ರಯತ್ನವನ್ನು ಚೀನಾ ವಿರೋಧಿಸುತ್ತಿಲ್ಲ’ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಭಾನುವಾರ ತಿಳಿಸಿದ್ದರು. ಅದರ ಬೆನ್ನಲ್ಲೇ ಚೀನಾದ ಹೇಳಿಕೆ ಹೊರಬಿದ್ದಿದೆ.

ಎನ್‌ಎಸ್‌ಜಿ ವಾರ್ಷಿಕ ಅಧಿವೇಶನ ದಕ್ಷಿಣ ಕೊರಿಯಾದ ರಾಜಧಾನಿ ಸೋಲ್‌ನಲ್ಲಿ ಸೋಮವಾರ ಆರಂಭವಾಗಿದ್ದು, ಜೂನ್‌ 24 ರ ವರೆಗೆ ನಡೆಯಲಿದೆ. 48 ಸದಸ್ಯ ರಾಷ್ಟ್ರಗಳು ಅಧಿವೇಶನದಲ್ಲಿ ಪಾಲ್ಗೊಂಡಿವೆ.

‘ಪರಮಾಣು ಪ್ರಸರಣ ತಡೆ  ಒಪ್ಪಂದಕ್ಕೆ (ಎನ್‌ಪಿಟಿ) ಸಹಿ ಹಾಕದ ರಾಷ್ಟ್ರಗಳಿಗೆ ಎನ್‌ಎಸ್‌ಜಿ ಸದಸ್ಯತ್ವ ನೀಡುವ ಬಗ್ಗೆ ಸದಸ್ಯ ರಾಷ್ಟ್ರಗಳಲ್ಲಿ ಒಮ್ಮತ ಮೂಡಿಬಂದಿಲ್ಲ.ಪರಸ್ಪರ ಸಮಾಲೋಚನೆ ಮತ್ತು ಚರ್ಚೆಯ ಮೂಲಕ ಈ ಬಗ್ಗೆ ಒಂದು ನಿರ್ಧಾರಕ್ಕೆ ಬರಲಾಗುವುದು’ ಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರೆ ಹುವಾ ಚುನ್‌ಯಿಂಗ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್‌. ಜೈಶಂಕರ್‌ ಅವರ ಇತ್ತೀಚಿನ ಚೀನಾ ಭೇಟಿ ಮತ್ತು ಸುಷ್ಮಾ ಸ್ವರಾಜ್‌ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಚುನ್‌ಯಿಂಗ್‌, ‘ಭಾರತದ ಸದಸ್ಯತ್ವದ ವಿಷಯವು ವಾರ್ಷಿಕ ಅಧಿವೇಶನದ ಕಾರ್ಯಸೂಚಿಯಲ್ಲಿ ಇಲ್ಲ’ ಎಂದಿದ್ದಾರೆ.

‘ಎನ್‌ಪಿಟಿಗೆ ಸಹಿ ಹಾಕದ ರಾಷ್ಟ್ರಗಳು ಎನ್‌ಎಸ್‌ಜಿ ಸದಸ್ಯತ್ವ ದೊರೆಯುವ ಬಗ್ಗೆ ಆತಂಕದಲ್ಲಿವೆ. ಆದರೆ ಈ ವಿಷಯದಲ್ಲಿ ಎನ್‌ಎಸ್‌ಜಿ ಸದಸ್ಯರಲ್ಲಿ ಇನ್ನೂ ಭಿನ್ನಾಭಿಪ್ರಾಯವಿದೆ. ವಾರ್ಷಿಕ ಸಭೆಯಲ್ಲಿ ಇದರ ಬಗ್ಗೆ ಯಾವುದೇ ಚರ್ಚೆ ನಡೆಯದು’ ಎಂದು ಸ್ಪಷ್ಟಪಡಿಸಿದ್ದಾರೆ.

ಜೈಶಂಕರ್‌ ಇದೇ 16 ಮತ್ತು 17 ರಂದು ಚೀನಾದಲ್ಲಿದ್ದರು. ಚೀನಾದ ಮನವೊಲಿಸುವುದು ಈ ಭೇಟಿಯ ಹಿಂದಿನ ಉದ್ದೇಶ ಎಂದು ವರದಿಯಾಗಿತ್ತು. ಜೈಶಂಕರ್‌ ಭೇಟಿ ಬಗ್ಗೆ ಸ್ಪಷ್ಟನೆ ನೀಡುವಂತೆ ಕೋರಿದಾಗ, ‘ಚೀನಾ ವಿದೇಶಾಂಗ ಇಲಾಖೆ ಅಧಿಕಾರಿಗಳು ಅವರ ಜತೆ ಮಾತುಕತೆ ನಡೆಸಿದ್ದಾರೆ. ದ್ವಿಪಕ್ಷೀಯ ಸಂಬಂಧ ಹಾಗೂ ಸಮಾನ ಹಿತಾಸಕ್ತಿಯ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ. ವಿದೇಶಾಂಗ ಸಚಿವ ವಾಂಗ್‌ ಯಿ ಕೂಡಾ ಅವರನ್ನು ಭೇಟಿಯಾಗಿದ್ದಾರೆ’ ಎಂದು ಉತ್ತರಿಸಿದ್ದಾರೆ.

ಭಾರತಕ್ಕೆ ಇದೇ ವರ್ಷ ಎನ್‌ಎಸ್‌ಜಿ ಸದಸ್ಯತ್ವ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದ ಸುಷ್ಮಾ, ‘ಭಾರತದ ಪ್ರಯತ್ನವನ್ನು ಚೀನಾ ವಿರೋಧಿಸುತ್ತಿಲ್ಲ. ಆದರೆ ಸದಸ್ಯತ್ವ ನೀಡಲು ಅನುಸರಿಸುತ್ತಿರುವ ಮಾನದಂಡದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ’ ಎಂದಿದ್ದರು.

ಅಮೆರಿಕ ಸೇರಿದಂತೆ ಎನ್‌ಎಸ್‌ಜಿಯ ಬಹುತೇಕ ಸದಸ್ಯ ರಾಷ್ಟ್ರಗಳು ಭಾರತಕ್ಕೆ ಸದಸ್ಯತ್ವ ನೀಡಲು ಸಿದ್ಧವಿದೆ. ಆದರೆ ಚೀನಾ ನೇತೃತ್ವದಲ್ಲಿ ಟರ್ಕಿ, ದಕ್ಷಿಣ ಆಫ್ರಿಕಾ, ಐರ್ಲೆಂಡ್‌ ಮತ್ತು ನ್ಯೂಜಿಲೆಂಡ್‌   ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ. ಭಾರತ ಎನ್‌ಪಿಟಿಗೆ ಸಹಿ ಹಾಕಿಲ್ಲ ಎಂಬ ಕಾರಣ ಮುಂದಿಟ್ಟುಕೊಂಡು ಚೀನಾ ಅಡ್ಡಗಾಲು ಹಾಕುತ್ತಿದೆ.

ಭಾರತ ‘ಆಶಾವಾದಿ’
ನವದೆಹಲಿ:
ಎನ್‌ಎಸ್‌ಜಿ ಸದಸ್ಯತ್ವಕ್ಕೆ ಚೀನಾ ಮತ್ತೆ ವಿರೋಧ ವ್ಯಕ್ತಪಡಿಸಿದೆಯಾದರೂ ಭಾರತ ಭರವಸೆ ಕೈಬಿಟ್ಟಿಲ್ಲ. ‘ಎನ್‌ಎಸ್‌ಜಿ ಸದಸ್ಯತ್ವದ ವಿಚಾರದಲ್ಲಿ ಭಾರತ ಆಶಾವಾದಿಯಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ನವದೆಹಲಿಯಲ್ಲಿ ಸೋಮವಾರ ತಿಳಿಸಿದ್ದಾರೆ.

ಎನ್‌ಎಸ್‌ಜಿ ಸದಸ್ಯರ ಪ್ರಧಾನ ಸಭೆ ಸೋಲ್‌ನಲ್ಲಿ ಜೂನ್‌ 24 ರಂದು ನಡೆಯಲಿದೆ. ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ವಿದೇಶಾಂಗ  ಕಾರ್ಯದರ್ಶಿ ಜೈಶಂಕರ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸುವ ಸಾಧ್ಯತೆಯಿದೆ.

ಜೂನ್‌ 23 ರಂದು ಮೋದಿ ಅವರು ತಾಷ್ಕೆಂಟ್‌ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ. ಇಬ್ಬರು ನಾಯಕರು ತಾಷ್ಕೆಂಟ್‌ನಲ್ಲಿ ನಡೆಯುವ ಎಸ್‌ಸಿಒ (ಶಾಂಘೈ ಸಹಕಾರ ಸಂಘಟನೆ) ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೋದಿ ಈ ವೇಳೆ ಚೀನಾ ಅಧ್ಯಕ್ಷರ ಜತೆ ಎನ್‌ಎಸ್‌ಜಿ ಸದಸ್ಯತ್ವದ ವಿಷಯ ಪ್ರಸ್ತಾಪಿಸಬಹುದು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT