ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಎ ನಾಯಕನಾಗಿ ಇಂದು ಮೋದಿ ಆಯ್ಕೆ

ಬಿಜೆಪಿ ಸಂಸದೀಯ ಪಕ್ಷದ ಸಭೆ
Last Updated 19 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬಿಜೆಪಿ ಸಂಸದೀಯ ಪಕ್ಷದ ಸಭೆ ಹಾಗೂ ಎನ್‌ಡಿಎ ಸಭೆ ಮಂಗಳವಾರ ನಡೆಯಲಿರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಸೋಮವಾರ ಮೋದಿ ಹಾಗೂ ರಾಜನಾಥ್‌ ಸಿಂಗ್‌ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

ಸಂಸದೀಯ ಪಕ್ಷದ ಸಭೆಯಲ್ಲಿ ತಮ್ಮನ್ನು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಕೂಡಲೇ ಮೋದಿ ಅವರು ಔಪಚಾರಿಕ ವಿಧಿಯಂತೆ  ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರನ್ನು ಭೇಟಿ ಮಾಡಲಿದ್ದಾರೆ.

ಹೊಸ ಸಂಪುಟಕ್ಕೆ  ರಾಜನಾಥ್‌ ಸಿಂಗ್‌, ಸುಷ್ಮಾ ಸ್ವರಾಜ್‌, ಅರುಣ್‌ ಜೇಟ್ಲಿ, ನಿತಿನ್‌ ಗಡ್ಕರಿ, ಮುರುಳಿ ಮನೋಹರ್‌ ಜೋಷಿ  ಹಾಗೂ ವೆಂಕಯ್ಯ ನಾಯ್ಡು ಸೇರಿದಂತೆ ಹಲವು ಪ್ರಮುಖ ನಾಯಕರ ಹೆಸರುಗಳು  ಕೇಳಿಬರುತ್ತಿವೆ.

ಶಿವಸೇನೆ, ಟಿಡಿಪಿ, ಅಕಾಲಿದಳ ಮತ್ತು ಎಲ್‌ಜೆಡಿ ಸದಸ್ಯರು ಸಂಪುಟಕ್ಕೆ ಸೇರ್ಪಡೆಯಾಗುವ ಸೂಚನೆ ಇದೆ. ಹೊಸದಾಗಿ ಆಯ್ಕೆಯಾದ 282 ಬಿಜೆಪಿ ಸಂಸದರು, ರಾಜ್ಯಸಭೆಯ ಸದಸ್ಯರೊಂದಿಗೆ ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ಮಧ್ಯಾಹ್ನದ ಹೊತ್ತಿಗೆ ಸಭೆ ಸೇರಿ 63 ವರ್ಷದ ಮೋದಿ ಅವರನ್ನು ತಮ್ಮ ನಾಯಕನನ್ನಾಗಿ ಆರಿಸಲಿದ್ದಾರೆ.
ಆನಂತರ ಇತರ ಮಿತ್ರಪಕ್ಷಗಳ ಸದಸ್ಯರು, ಬಿಜೆಪಿ ಸದಸ್ಯರ ಜತೆಗೂಡಿ ಮೋದಿ ಅವರನ್ನು ಎನ್‌ಡಿಎ ಮೈತ್ರಿಕೂಟದ ನಾಯಕನಾಗಿಯೂ ಆಯ್ಕೆ ಮಾಡಲಿದ್ದಾರೆ.  

ಎನ್‌ಡಿಎ ನಿಯೋಗವು ನಂತರ ರಾಷ್ಟ್ರಪತಿ­ಯವರನ್ನು ಭೇಟಿ ಮಾಡಿ ಉಭಯ ಗುಂಪುಗಳ ನಿರ್ಧಾರ ತಿಳಿಸಲಿದೆ. ಆ ಬಳಿಕವೇ ರಾಷ್ಟ್ರಪತಿ ಅವರು ಮೋದಿ ಅವರಿಗೆ ಸರ್ಕಾರ ರಚಿಸಲು ಆಹ್ವಾನ ನೀಡಲಿದ್ದಾರೆ.

ಮಂಗಳವಾರ ಸಂಜೆ ಮೋದಿ ಅಹಮದಾಬಾದ್‌ಗೆ ತೆರಳಲಿದ್ದು, ಬುಧವಾರ ಗುಜರಾತ್‌ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ. ಹಾಗೆಯೇ ಗುಜರಾತ್‌ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಹೊಸ ನಾಯಕನ ಆಯ್ಕೆಯೂ ಆಗಲಿದೆ.

ಸರಣಿ ಸಭೆ: ಸೋಮ­ವಾರ ರಾಜಧಾನಿ ದೆಹಲಿಯಲ್ಲಿ ಸರಣಿ ಸಭೆಗಳು ನಡೆದವು. ನರೇಂದ್ರ ಮೋದಿ,  ತಮ್ಮ ಆಪ್ತ  ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್‌್ ಷಾ ಹಾಗೂ ಪಕ್ಷದ ಹಿರಿಯ ಮುಖಂಡ ಅರುಣ್‌ ಜೇಟ್ಲಿ ಅವರೊಂದಿಗೆ ಸಮಾ­ಲೋಚನೆ ನಡೆಸಿದರು. ಈ ನಡುವೆ, ಬಿಜೆಪಿ ನೂತನ ಸಂಸದರು ಕೂಡ ಆರೆಸ್ಸೆಸ್‌ ಹಿರಿಯ ಮುಖಂಡರನ್ನು ಭೇಟಿಯಾದರು.

ಚಾಣಕ್ಯಪುರಿಯಲ್ಲಿರುವ ಗುಜರಾತ್‌ ಭವನದಲ್ಲಿ ಷಾ ಹಾಗೂ ಜೇಟ್ಲಿ ಜತೆ ಮೋದಿ ಮಾತುಕತೆ ನಡೆಸಿದರು. ಉತ್ತರ­ಪ್ರದೇಶದ ಹಿರಿಯ ಮುಖಂಡ ಕಲ್ಯಾಣ್‌್ ಸಿಂಗ್‌್ ಕೂಡ ಮೋದಿ ಜತೆ ಮಾತುಕತೆ ನಡೆಸಿದರು.

ಇನ್ನೊಂದೆಡೆ, ಪಕ್ಷದ ಅಧ್ಯಕ್ಷ ರಾಜ­ನಾಥ್‌ ಸಿಂಗ್‌ ಅವರ ಅಶೋಕ ರಸ್ತೆ­ಯಲ್ಲಿ­ರುವ ನಿವಾಸದಲ್ಲಿ ಸರಣಿ ಸಭೆಗಳು ನಡೆದವು. ಸುಷ್ಮಾ ಸ್ವರಾಜ್‌, ಉಮಾಭಾರತಿ, ಗೋಪಿನಾಥ್‌ ಮುಂಡೆ, ಯೋಗಿ ಆದಿತ್ಯನಾಥ್‌, ವರುಣ್‌ ಗಾಂಧಿ ಹಾಗೂ ನೂತನ ಸಂಸದರು ರಾಜನಾಥ್‌ ಮನೆಗೆ ಭೇಟಿ ನೀಡಿದ್ದರು.

ಉತ್ತರಪ್ರದೇಶದಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಅಪ್ನಾ ದಳದ ಸಂಸದೆ ಅನುಪ್ರಿಯಾ ಪಟೇಲ್‌ ಕೂಡ ಸಿಂಗ್‌ ಅವರನ್ನು ಭೇಟಿಯಾದರು.  ‘ನಮ್ಮ ಮೈತ್ರಿ ಉತ್ತರಪ್ರದೇಶದಲ್ಲಿ ಹೆಚ್ಚಿನ ಸ್ಥಾನಗಳನ್ನು ಬಾಚಿಕೊಂಡಿದೆ. ರಾಜ್ಯದ ಮಹತ್ವವನ್ನು ಯಾರೂ ಕಡೆಗಣಿಸಲಾಗದು. ಮಿತ್ರ ಪಕ್ಷಗಳ ಹಿತವನ್ನು ಕಾಪಾಡಲಾಗುತ್ತದೆ ಎಂದು ಬಿಜೆಪಿ ಮುಖ್ಯಸ್ಥರು ಈಗಾಗಲೇ ಹೇಳಿದ್ದಾರೆ. ಹೀಗಾಗಿ ನಾವು ಈಗ ಏನನ್ನೂ ಹೇಳುವ ಅಗತ್ಯ ಕಾಣುತ್ತಿಲ್ಲ’ ಎಂದು ಅನುಪ್ರಿಯಾ ಹೇಳಿದರು.

ಮಾಜಿ ಗೃಹ ಸಚಿವ ಆರ್.ಕೆ.ಸಿಂಗ್‌, ಗಜೇಂದ್ರ ಸಿಂಗ್‌ ಶೇಖಾವತ್‌, ದೆಹಲಿ ಸಂಸದರಾದ ಉದಿತ್‌ ರಾಜ್‌, ಮನೋಜ್‌ ತಿವಾರಿ ಹಾಗೂ ಉತ್ತರ­ಪ್ರದೇಶದ ಹಿರಿಯ ಮುಖಂಡ ವಿನಯ್‌ ಕಟಿಯಾರ್‌ ಮತ್ತಿತರರು ಕೇಶವಪುರಂ­ನಲ್ಲಿರುವ ಆರೆಸ್ಸೆಸ್‌ ಪ್ರಧಾನ ಕಚೇರಿ­ಯಲ್ಲಿ ಮುಖಂಡರ ಜತೆ ಸಮಾ­ಲೋಚನೆ ನಡೆಸಿದರು.

‘ಮಂಗಳವಾರ ಸಂಸದೀಯ ಪಕ್ಷದ ಸಭೆ ನಡೆಯಲಿದೆ. ನಮ್ಮ ಎಲ್ಲ ಸಂಸ­ದರು ಭಾಗವಹಿಸುತ್ತಾರೆ’ ಎಂದು ಬಿಜೆಪಿ ವಕ್ತಾರ ಪ್ರಕಾಶ್‌ ಜಾವಡೇಕರ್‌ ತಿಳಿಸಿದರು.
ಬಿಹಾರದಲ್ಲಿ ಎನ್‌ಡಿಎ ಮಿತ್ರಪಕ್ಷ­ವಾದ ಲೋಕಜನಶಕ್ತಿ ಪಕ್ಷದ ಮುಖಂಡ  ರಾಮ್‌ವಿಲಾಸ್‌ ಪಾಸ್ವಾನ್‌್ ಅವರು ತಮ್ಮ ಪತ್ನಿ ಹಾಗೂ ಪುತ್ರ ಚಿರಾಗ್‌ ಜತೆ ರಾಜನಾಥ್‌ರನ್ನು ಅವರ ಮನೆಯಲ್ಲಿ ಭೇಟಿಯಾದರು.

‘ನಾನಾಗಲೀ, ನನ್ನ ಪುತ್ರ ಚಿರಾಗ್‌ ಆಗಲೀ, ಸರ್ಕಾರ ರಚನೆ ಬಗ್ಗೆ ಅಥವಾ ಸಂಪುಟದಲ್ಲಿನ ಖಾತೆಗಳ ಬಗ್ಗೆ  ಮೋದಿ ಅಥವಾ ರಾಜನಾಥ್‌ ಸಿಂಗ್‌ ಜತೆ ಮಾತನಾಡಿಲ್ಲ. ಹೊಸ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ ಕೊಡಬೇಕು ಎನ್ನುವುದನ್ನು ನಿರ್ಧರಿಸುವುದು ಬಿಜೆಪಿ  ಹಕ್ಕು’ ಎಂದು ಪಾಸ್ವಾನ್‌ ತಿಳಿಸಿದರು.

ತಮಿಳುನಾಡಿನಲ್ಲಿ ಎನ್‌ಡಿಎ ಮಿತ್ರಪಕ್ಷ ಎಂಡಿಎಂಕೆ ಮುಖ್ಯಸ್ಥ ವೈಕೊ ಕೂಡ ರಾಜನಾಥ್‌ ಸಿಂಗ್‌ ಅವರನ್ನು ಭೇಟಿಯಾದರು. ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್‌್ ಗೋಸ್ವಾಮಿ ಅವರು ಕೂಡ ಮೋದಿ ಅವರನ್ನು ಭೇಟಿಯಾಗಿ ಭದ್ರತೆ ಕುರಿತು ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT