ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಕತೆಗಳು ಒಂದು ನಾಟಕ

Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಸಣ್ಣಕತೆ ಮತ್ತು ರಂಗಭೂಮಿ ಇವೆರಡೂ ಕಲೆಯ ಬೇರೆ ಬೇರೆ ಪ್ರಕಾರಗಳು. ಈ ಎರಡೂ ಪ್ರಕಾರಗಳಿಗೂ ತಮ್ಮದೇ ಆದ ಶಕ್ತ ಸಾಧ್ಯತೆಗಳು ಇರುವಂತೆ ಮಿತಿಗಳೂ ಇವೆ. ಈ ಎರಡೂ ಕಲಾ ಪ್ರಕಾರಗಳನ್ನು ಬೆಸೆಯುವ ಮೂಲಕ ಹೊಸತೊಂದನ್ನು ಹುಟ್ಟುಹಾಕುವ ಪ್ರಯತ್ನ ರಂಗಭೂಮಿಯಲ್ಲಿ ವಿರಳವಾಗಿಯಾದರೂ ನಡೆಯುತ್ತಿರುತ್ತದೆ.

ಪುಸ್ತಕದ ಓದು ಮನಸಲ್ಲಿ ಮೂಡಿಸುವ ಕಾಲ್ಪನಿಕ ಅಮೂರ್ತ ಭಾವಚಿತ್ರಣಕ್ಕೆ ರಂಗದ ಮೇಲೆ ಮೂರ್ತರೂಪ ನೀಡುವುದು ನಿಜಕ್ಕೂ ಸವಾಲಿನ ಕೆಲಸ. ಈ ಸವಾಲನ್ನು ಎದುರಿಸಿ ಕೆಲವೊಮ್ಮೆ ಯಶಸ್ವಿಯಾಗಿ, ಕೆಲವೊಮ್ಮೆ ವಿಫಲವಾದರೂ ಈ ಪ್ರಯತ್ನವು ಹೊಸ ರಂಗಸಾಧ್ಯತೆಯ ನಿಟ್ಟಿನಲ್ಲಿ ಮಹತ್ವದ್ದಾಗಿದೆ.

ನಗರದ ರಂಗಶಂಕರದಲ್ಲಿ ಇತ್ತೀಚೆಗೆ ಸಂಚಾರಿ ದಶಮಾನೋತ್ಸವ ನಾಟಕೋತ್ಸವದಲ್ಲಿ ಪ್ರದರ್ಶಿತವಾದ ‘ಹೀಗೆರಡು ಕತೆಗಳು’ ನಾಟಕವನ್ನೂ ಇದೇ ನಿಟ್ಟಿನಲ್ಲಿ ನೋಡಬೇಕು. ‘ಹೀಗೆರಡು ಕತೆಗಳು’ ವಸುಧೇಂದ್ರ ಅವರ ಶ್ರೀದೇವಿ ಮಹಾತ್ಮೆ ಮತ್ತು ಜಯಂತ ಕಾಯ್ಕಿಣಿ ಅವರ ‘ನೋ ಪ್ರೆಸೆಂಟ್ಸ್ ಪ್ಲೀಸ್...’ ಎಂಬ ಎರಡು ಸಣ್ಣಕತೆಗಳ ರಂಗರೂಪ. ಸಂಚಾರಿ ರಂಗತಂಡದ ಮಂಗಳಾ ಎನ್. ಅವರು ಈ ಕತೆಗಳನ್ನು ರಂಗಕ್ಕೆ ಅಣಿಗೊಳಿಸಿ ನಿರ್ದೇಶಿಸಿದ್ದಾರೆ.

ಎರಡು ವಿಭಿನ್ನ ಲೇಖಕರ ವಸ್ತು, ವಾತಾವರಣ, ಉದ್ದೇಶ ಎಲ್ಲದರಲ್ಲಿಯೂ ಒಂದರಿಂದ ಒಂದು ಭಿನ್ನವೇ ಆಗಿರುವ ಎರಡು ಕತೆಗಳನ್ನು ಈ ನಾಟಕ ಪ್ರಸ್ತುತಪಡಿಸುತ್ತದೆ. ಮೊದಲನೇ ಕತೆ ‘ಶ್ರೀದೇವಿ ಮಹಾತ್ಮೆ’. ಬಯಲು ಸೀಮೆಯಿಂದ ವೃತ್ತಿನಿಮಿತ್ತ ಬೆಂಗಳೂರಿಗೆ ಬಂದು ಐಷಾರಾಮಿ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸಿಸುತ್ತಿರುವ ಸಾಫ್ಟ್‌ವೇರ್‌ ಉದ್ಯೋಗಿಯ ನಿರೂಪಣೆಯಲ್ಲಿ ಅವನ ಮನೆ ಕೆಲಸಕ್ಕೆ ಬರುವ ಶ್ರೀದೇವಿ ಎಂಬ ಹುಡುಗಿಯ ಬಗ್ಗೆ ಹೇಳುತ್ತಾ ಹೋಗುತ್ತದೆ.

ಶ್ರೀದೇವಿ ದೈಹಿಕವಾಗಿ ಬೆಳೆದಿದ್ದರೂ ಮಾನಸಿಕವಾಗಿ ಇನ್ನೂ ಪ್ರಬುದ್ಧತೆ ಇರದ ಹುಡುಗಿ. ಇಂಗ್ಲಿಷ್‌, ಕನ್ನಡ, ತೆಲಗು ಹೀಗೆ ಹಲವು ಭಾಷೆಗಳನ್ನು ಸೇರಿಸಿ ಮಾತನಾಡುವ ಅವಳ ಮುಗ್ಧತನದಿಂದ ಎದುರಾಗುವ ಪೇಚಿನ ಪ್ರಸಂಗಗಳನ್ನು ನಾಟಕ ವಿನೋದದ ಶೈಲಿಯಲ್ಲಿ ಹೇಳುತ್ತಾ ಹೋಗುತ್ತದೆ. ಹೀಗೆ ತನ್ನ ಮನೆಗೆ ಕೆಲಸಕ್ಕೆ ಬರುವ ಹುಡುಗಿಯಿಂದ ತನ್ನದಲ್ಲದ ಇನ್ನೊಂದು ಜಗತ್ತನ್ನೂ ನಿರೂಪಕ ಕಾಣುತ್ತಾನೆ.

ಬೆಂಗಳೂರಿಗೆ ಬಂದಾಗಿನಿಂದಲೇ ನೀರಿನ ಕೊರತೆಯನ್ನು ಅನುಭವಿಸದೇ ಇರದ ನಿರೂಪಕ ತನ್ನ ಅಪಾರ್ಟ್‌ಮೆಂಟ್‌ನಿಂದ ಸ್ವಲ್ಪವೇ ಆಚೆಗಿರುವ ಕೆಲಸದವರ ಗುಡಿಸಲಿನಲ್ಲಿ ಐದು ದಿನಗಳಿಗೆ ಒಮ್ಮೆ ನೀರು ಬರುತ್ತದೆ ಎಂಬ ಮತ್ತೊಂದು ಜಗತ್ತಿನ ವಾಸ್ತವ ಅರಿವಾಗುತ್ತಲೇ ಅಧೀರನಾಗುತ್ತಾನೆ. ಹೀಗೆ ಶ್ರೀದೇವಿಯ ಬದುಕಿನ ವಿವಿಧ ಪ್ರಸಂಗಗಳ ಮೊತ್ತವೇ ಈ ನಾಟಕ.

ಶ್ರೀದೇವಿ ಪಾತ್ರದಲ್ಲಿ ಸತ್ಯಶ್ರೀ ಅವರು ಸಹಜ ಅಭಿನಯ, ಮುಗ್ಧ ಹಾವ ಭಾವದಿಂದ ನಗು ಉಕ್ಕಿಸುತ್ತಾರೆ. ನಿರೂಪಕ (ಸಂಚಾರಿ ವಿಜಯ್‌) ಮತ್ತು ಸೆಕ್ಯುರಿಟಿ (ನಾಗರಾಜ್‌) ಅವರ ಅಭಿನಯವೂ ಪಾತ್ರಕ್ಕೆ ತಕ್ಕುದಾಗಿ ಇದೆ.ನಾಟಕದಲ್ಲಿನ ಮೂರೇ ಪಾತ್ರಗಳು ಮತ್ತು ನಾಟಕ ಬಹುತೇಕ ಒಂದೇ ಮನೆ, ಮತ್ತು ಅಪಾರ್ಟ್‌ಮೆಂಟ್‌ ಪ್ರವೇಶದ್ವಾರ ಈ ಎರಡೇ ಸ್ಥಳಗಳಲ್ಲಿ ನಡೆಯುವುದರಿಂದ ಕೊಂಚ ಏಕತಾನತೆ ಕಾಡುತ್ತದೆ.

ದ್ವಿತೀಯಾರ್ಧದಲ್ಲಿ ಜಯಂತ ಕಾಯ್ಕಿಣಿ ಅವರ ನೋ ಪ್ರೆಸೆಂಟ್ಸ್‌ ಪ್ಲೀಸ್‌ ಕತೆಯ ರಂಗರೂಪವನ್ನು ಮಾಡಲಾಗಿದೆ. ಇದು ಅಪ್ಪ –ಅಮ್ಮ, ಸಂಬಂಧಿಗಳ ಪರಿವೇ ಇಲ್ಲದೆ ಮುಂಬೈ ಎಂಬ ಮಹಾನಗರದಲ್ಲಿ ಅನಾಥರಾಗಿಯೇ ಬೆಳೆದ ಪೋಪಟ್‌ ಮತ್ತು ಅಸಾವರಿ ಲೋಖಂಡೆ ಎಂಬ ಇಬ್ಬರು ಪ್ರೇಮಿಗಳ ಕತೆ.

ಮದುವೆಯಾಗಬೇಕು ಎಂದು ನಿರ್ಧರಿಸಿದ ಅಸಾವರಿ ಲೋಖಂಡೆ ಮತ್ತು ಪೋಪಟ್‌ ರಸ್ತೆ ಬದಿಯಲ್ಲಿ ಕುಳಿತು ಆಮಂತ್ರಣ ಪತ್ರಿಕೆಯನ್ನು ಆಯ್ಕೆ ಮಾಡಲು ಆರಂಭಿಸುವುದರೊಂದಿಗೆ ಕತೆ ತೆರೆದುಕೊಳ್ಳುತ್ತದೆ. ನಾಲ್ವರು ಸೂತ್ರಧಾರರ ಮೂಲಕ ನಿರೂಪಿತವಾಗುತ್ತಾ ಹೋಗುವ ಪೋಪಟ್‌ ಅಸಾವರಿ ಕಥನವು ಮಹಾನಗರದ ಕಥನವಾಗಿಯೂ ರೂಪುಗೊಳ್ಳುತ್ತಾ ಹೋಗುತ್ತದೆ.

ಪೋಪಟ್‌ ಪ್ರೆಸ್‌ನಲ್ಲಿರುವ ತನ್ನ ಸ್ನೇಹಿತನ ಬಳಿ ಮದುವೆ ಆಮಂತ್ರಣ ಪತ್ರಿಕೆಯ ಮಾದರಿ ಪುಸ್ತಕವನ್ನು ಕಡ ತಂದಿದ್ದಾನೆ. ಅವರಿಬ್ಬರೂ ಕೂತು ಒಂದು ಆಮಂತ್ರಣ ಪತ್ರಿಕೆಯನ್ನು ಆಯ್ಕೆ ಮಾಡಿ ಸಂಜೆಯೊಳಗೆ ಅಚ್ಚಿಗೆ ಕೊಡಬೇಕಾಗಿದೆ. ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಬರೆಯುವಾಗ ಅಸಾವರಿ ಲೋಖಂಡೆ ಎಂಬ ಹೆಸರಿನ ಮುಂದೆ ಪೋಪಟ್‌ಗೆ ತನ್ನ ಹೆಸರು ತೀರಾ ಸಪ್ಪೆ ಎನ್ನಿಸಿಬಿಡುತ್ತದೆ. ಅಸಾವರಿಯ ಹೆಸರಿನ ಜತೆಗಿರುವ ಲೋಖಂಡೆ ಎಂಬ ಅಡ್ಡ ಹೆಸರನ್ನು ನೋಡಿ ‘ಲೋಖಂಡೆ ಎಂದರೆ ಯಾವ ಜಾತಿ?’ ಎಂದು ಕೇಳಿಬಿಡುತ್ತಾನೆ. ತನಗೆ ಜನ್ಮಕೊಟ್ಟವರು ಯಾರು ಎಂದೇ ಗೊತ್ತಿರದ ಅವರ ನಡುವೆ ಜಾತಿಯ ಪ್ರಶ್ನೆ ಬಂದದ್ದೇ ಅಸಾವರಿ ಅದುವರೆಗೆ ಕೇಳಿರದ ಭಾಷೆಯೊಂದನ್ನು ಕೇಳಿದಂತೆ, ತನ್ನ ಪ್ರೀತಿಯ ಪೋಪಟ್‌ ಅಪರಿಚಿತನಾಗಿಬಿಟ್ಟಂತೆ ಅಧೀರಳಾಗಿಬಿಡುತ್ತಾಳೆ.

ನಾಲ್ವರು ಸೂತ್ರಧಾರಿಗಳ ಮೂಲಕ ನಿರೂಪಿತವಾಗುತ್ತ ಹೋಗುವುದರಿಂದ ಏಕತಾನತೆ ತಪ್ಪಿದೆ. ಅಲ್ಲದೇ ಅಸಾವರಿ ಮತ್ತು ಪೋಪಟ್‌ ಅವರ ಕನಸುಗಳನ್ನು, ನೆನಪುಗಳನ್ನು ದೃಶ್ಯವಾಗಿಸಿರುವುದರಿಂದ ನಾಟಕಕ್ಕೆ ವೇಗ ಸಿಕ್ಕಿದೆ. ಜಯಂತ್‌ ಅವರದೇ ಒಂದು ಹಾಡನ್ನು ಬಳಸಿಕೊಂಡಿರುವ ರೀತಿಯೂ ಸಂದರ್ಭೋಚಿತವಾಗಿದೆ.

ಸೂತ್ರಧಾರಿಗಳು ವೇದಿಕೆಯ ಪರಿಕರಗಳನ್ನು ಬದಲಾಯಿಸುತ್ತಲೇ ಮಾತನಾಡುವುದರಿಂದ ಕೆಲವು ಕಡೆ ಅವರ ಮಾತುಗಳು ಸ್ಪಷ್ಟವಾಗಿ ತಲುಪುವುದಿಲ್ಲ. ಇಡೀ ಮೈ ನಡುಗುವಷ್ಟು ಹಣ್ಣು ಮುದುಕನಾಗಿದ್ದರೂ ತ್ರಿಪಾಠಿ ಪಾತ್ರಧಾರಿಯ ಮೀಸೆ ಮಾತ್ರ ಕಡುಗಪ್ಪಾಗಿ ಇರುವುದು ಅಸಂಗತವೆನಿಸುತ್ತದೆ. ಪೋಪಟ್‌(ಗಣಪತಿ ಗೌಡ) ಮತ್ತು ಅಸಾವರಿ (ನಿಶಾ) ಅಭಿನಯ ಇಷ್ಟವಾಗುತ್ತದೆ.

ನಾಟಕದ ಅನೂಕೂಲಕ್ಕೆ ಅಲ್ಲಲ್ಲಿ ಕತೆಯ ನಿರೂಪಣೆಯಲ್ಲಿ ಮಾರ್ಪಾಡು ಮಾಡಿಕೊಳ್ಳಲಾಗಿದೆ. ಜಯಂತ್‌ ಅವರ ಈಗಷ್ಟೇ ಗಿಡದಿಂದ ಕಿತ್ತ ಹೂವಿನಂತಹ ತಾಜಾ ಬರವಣಿಗೆಯಲ್ಲಿ ಈ ಕತೆಯನ್ನು ಓದಿದವರಿಗೆ ನಾಟಕವನ್ನು ನೋಡಿ ಕೊಂಚ ನಿರಾಸೆಯಾಗಬಹುದು. ಆದರೆ ರಂಗರೂಪಕ್ಕೆ ತಂದಮೇಲೂ ಬರಹದಲ್ಲಿನ ಅದೇ ಕತೆಗಾರ ಸಿಗಬೇಕು ಎಂದು ನಿರೀಕ್ಷಿಸುವುದು ಅಷ್ಟು ಸರಿಯಲ್ಲವೇನೋ. ಮೂಲ ಕತೆಯನ್ನು ಮರೆತು ಇದೊಂದು ನಾಟಕ ಎಂಬುದನ್ನಷ್ಟೇ ಗಮನದಲ್ಲಿಟ್ಟುಕೊಂಡು ನೋಡಿದರೆ ಇಷ್ಟವಾಗುತ್ತದೆ.

ಇಡೀ ನಾಟಕದಲ್ಲಿ ಶಶಿಧರ ಅಡಪ ಅವರ ರಂಗವಿನ್ಯಾಸ ಗಮನ ಸೆಳೆಯುತ್ತದೆ. ಸಂಗೀತಕ್ಕೆ (ಗಜಾನನ ಟಿ ನಾಯ್ಕ) ಹೆಚ್ಚಿನ ಅವಕಾಶವಿಲ್ಲ. ಬೆಳಕಿನ ವಿನ್ಯಾಸವೂ (ಅರವಿಂದ ಕುಪ್ಳಿಕರ್‌) ಉತ್ತಮವಾಗಿದೆ.ರಂಗರೂಪದಲ್ಲಿ ‘ಶ್ರೀದೇವಿ ಮಹಾತ್ಮೆ’ಗಿಂತ ಜಯಂತ ಕಾಯ್ಕಿಣಿಯವರ ‘ನೋ ಪ್ರೆಸೆಂಟ್ಸ್‌ ಪ್ಲೀಸ್‌’ ಕತೆಯೇ ಹೆಚ್ಚು ಇಷ್ಟವಾಗುತ್ತದೆ. ಆ ಕತೆಯಲ್ಲಿಯೇ ಇರುವ ಉತ್ತಮ ನಾಟಕೀಯ ಸಾಧ್ಯತೆಗಳು ಮತ್ತು ಅದನ್ನು ಬಳಸಿಕೊಂಡ ರೀತಿಯೇ ಇದಕ್ಕೆ ಕಾರಣವಾಗಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT