ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಿದ್ದಾರೆ ಹೆಚ್ಚುವರಿ ಶಿಕ್ಷಕರು?

ನಮ್ಮ ಸರ್ಕಾರಗಳು ಶಿಕ್ಷಣ ಇಲಾಖೆಯನ್ನು ಲಾಭ, ನಷ್ಟದ ಉದ್ಯಮವನ್ನಾಗಿಯೇ ನೋಡುತ್ತಿವೆ
Last Updated 21 ಜುಲೈ 2016, 19:30 IST
ಅಕ್ಷರ ಗಾತ್ರ

90ರ ದಶಕದ ನಂತರ ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ತೆರೆದುಕೊಂಡು ಗೋಳೀಕರಣಗೊಂಡ ಭಾರತದ ಅರ್ಥವ್ಯವಸ್ಥೆ ನಂತರದ ದಶಕದಲ್ಲಿ ಸಂಪೂರ್ಣ ಜಾಗತೀಕರಣದ ಅವಶ್ಯಕತೆಗಳಿಗೆ, ಜಾಗತಿಕ ಮಾರುಕಟ್ಟೆಯ ಬೇಡಿಕೆಗಳಿಗೆ ಸ್ಪಂದಿಸುತ್ತ ಸ್ಥಳೀಯ ಅಗತ್ಯಗಳನ್ನು, ಇಲ್ಲಿನ ಮಾರುಕಟ್ಟೆಯನ್ನು ಹೆಚ್ಚೂಕಡಿಮೆ ನಿರ್ಲಕ್ಷಿಸಿತ್ತು.

ಆಗ ವಿದೇಶಿ ಕಂಪೆನಿಗಳು ಇಲ್ಲಿ ತಮ್ಮ ಉದ್ಯಮಗಳನ್ನು ಪ್ರಾರಂಭಿಸುವುದರ ಜೊತೆಗೆ ತಮ್ಮಲ್ಲಿನ ಕೆಲವು ತಂತ್ರಜ್ಞಾನಗಳನ್ನೂ ಇಲ್ಲಿಗೆ ರಫ್ತು ಮಾಡಿದವು (ತಮ್ಮ ಅನುಕೂಲಕ್ಕಾಗಿ). ಅಂಥ ಒಂದು ಥಿಯರಿ ‘ಲೀನ್ ಮ್ಯಾನುಫ್ಯಾಕ್ಚರಿಂಗ್’ ಅರ್ಥಾತ್ ‘ಲೀನ್ ಉತ್ಪಾದನೆ’.

ಇದರ ಅನುಸಾರ, ಅಗತ್ಯಕ್ಕಿಂತಲೂ ಹೆಚ್ಚಿನ ಉತ್ಪಾದನೆ, ಹೆಚ್ಚುವರಿ ಕಾರ್ಮಿಕರು ಎಲ್ಲವನ್ನೂ ಒಂದು ವೇಸ್ಟ್ ಅಥವಾ ತ್ಯಾಜ್ಯವೆಂದು ಕರೆಯಲಾಗುತ್ತಿತ್ತು.  ಅಂದರೆ ಬೇಕಿದ್ದಷ್ಟನ್ನು ಮಾತ್ರ ಉತ್ಪಾದಿಸಬೇಕು, ಮಿಕ್ಕಿದ್ದನ್ನು ತಿರಸ್ಕರಿಸಬೇಕು. ಆಗಲೇ ಈ ‘ಹೈರ್ ಅಂಡ್ ಫೈರ್’ ಎನ್ನುವ ಪದ್ಧತಿ ಚಾಲ್ತಿಗೆ ಬಂತು. ಅಂದರೆ ಅಗತ್ಯವಿದ್ದಾಗ ನೇಮಿಸಿಕೊಳ್ಳುವುದು ಬೇಡದಿದ್ದಾಗ ಕಿತ್ತೆಸೆಯುವುದು.

ಇದು ಕಳೆದ ದಶಕದಲ್ಲಿ ಕುಖ್ಯಾತಿ ಗಳಿಸಿತ್ತು. ಇದೇ ಮಾದರಿಯನ್ನು ಅನುಸರಿಸಿದ ದೇಸಿ ಉದ್ಯಮಗಳು ಇಂದು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿವೆ. ಉದಾಹರಣೆಯೆಂದರೆ ಹರಿಯಾಣದ ಮಾರುತಿ ಕಾರುಗಳ ಉತ್ಪಾದನಾ ಘಟಕ. ಅಲ್ಲಿ ಈ ‘ಹೈರ್ ಅಂಡ್ ಫೈರ್’ ಎನ್ನುವ ಅವೈಜ್ಞಾನಿಕ, ಅಮಾನವೀಯ ನೀತಿಯನ್ನು ಜಾರಿಗೊಳಿಸಲು ಹೋಗಿ ಅಲ್ಲಿನ ಆಡಳಿತ ಮಂಡಳಿ ತೀವ್ರ ಮುಖಭಂಗ ಅನುಭವಿಸಿತು ಮತ್ತು ಮೂರು ವರ್ಷಗಳ ಹಿಂದೆ ಕಾರ್ಮಿಕ ವರ್ಗದಿಂದ ದೊಡ್ಡ ಮಟ್ಟದ ಹರತಾಳ ಪ್ರಾರಂಭಗೊಂಡು ಸಾವು ನೋವು ಸಂಭವಿಸಿದವು.

ಅಂದು ಬಂಧಿಸಲಾದ ಅನೇಕ ಕಾರ್ಮಿಕರು ಇಂದಿಗೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ ಅಥವಾ ಕೆಲಸ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಇಂದು ಈ ಕರಾಳ ಪದ್ಧತಿ ಎಲ್ಲೆಡೆ ವ್ಯಾಪಿಸುತ್ತಿದೆ. ಕೇಂದ್ರ ಸರ್ಕಾರದ ‘ಹೊಸ ಕಾರ್ಮಿಕ ನೀತಿ’ ಸಹ ಇದೇ ಮಾದರಿಯ ಕರಾಳ ಶಾಸನಗಳನ್ನು ಒಳಗೊಂಡಿದೆ.

ಆದರೆ ಇಲ್ಲಿ ನಮ್ಮ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ಈ ಲೀನ್ ಮ್ಯಾನುಫ್ಯಾಕ್ಚರಿಂಗ್‌ನ ಅಸಂಬದ್ಧ ತತ್ವವಾದ ‘ಹೈರ್ ಅಂಡ್ ಫೈರ್’ ಅನ್ನು ತನ್ನ ಪ್ರಾಥಮಿಕ ಶಿಕ್ಷಣದಲ್ಲಿ ಬಳಸಿಕೊಳ್ಳುತ್ತಿದೆ. ಇಲಾಖೆ ಹೆಚ್ಚುವರಿ ಶಿಕ್ಷಕರನ್ನು ಖಾಲಿ ಇರುವ ಶಾಲೆಗಳಿಗೆ ವರ್ಗಾವಣೆ ಮಾಡುವ ಹೊಸ ನೀತಿ ಪ್ರಕಟಿಸಿ ಈಗಾಗಲೇ ಕಾರ್ಯಪ್ರವೃತ್ತವಾಗಿದೆ ಮತ್ತು ಇದು ಅಪಾರ ವಿರೋಧವನ್ನು, ಆಕ್ರೋಶವನ್ನು ಹುಟ್ಟು ಹಾಕಿದೆ.

ಇದು ಸಹಜವೆ. ಏಕೆಂದರೆ ನಮ್ಮ ಸರ್ಕಾರಗಳು ಶಿಕ್ಷಣವನ್ನು ಒಂದು ಸರಕಾಗಿಯೇ ಪರಿಗಣಿಸಿರುವುದರಿಂದ ಅವು ಶಿಕ್ಷಣ ಇಲಾಖೆಯನ್ನು ಲಾಭ, ನಷ್ಟದ ಉದ್ಯಮವನ್ನಾಗಿಯೇ ನೋಡುತ್ತವೆ. ಹೀಗಾಗಿ ವಿದ್ಯಾರ್ಥಿಗಳೆಂಬ ಗ್ರಾಹಕರಿಗೆ ಎಷ್ಟು ಬೇಕು ಅಷ್ಟು ಮಾತ್ರ ಶಿಕ್ಷಣವೆಂಬ ಸರಕನ್ನು ಒದಗಿಸುತ್ತವೆ. ಇದು ವಿವೇಚನೆ ಇಲ್ಲದ, ಸಾಮಾಜಿಕ ಕಳಕಳಿ ಇಲ್ಲದ ನೀತಿ.

ಲಭ್ಯವಿರುವ ಮಾಹಿತಿಯ ಅನುಸಾರ, ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 37,575 ಶಿಕ್ಷಕರ ನೇಮಕಾತಿ ಆಗಬೇಕಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗಿದೆ. ಆದರೆ 2015-16ರಲ್ಲಿ ಕಿರಿಯ/ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸುಮಾರು 7,500 ಕಾಯಂ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

15,380 ಗುತ್ತಿಗೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಅಧಿಸೂಚನೆ ತಿಳಿಸುತ್ತದೆ. ಉಳಿದ 14,695 ಹುದ್ದೆಗಳ ನೇಮಕಾತಿ ಕುರಿತಾಗಿ ಯಾವುದೇ ಭರವಸೆ ಇಲ್ಲ. ಆದರೆ ನೇಮಕಗೊಂಡ 15,380 ಗುತ್ತಿಗೆ ಶಿಕ್ಷಕರ ನೇಮಕಾತಿಯನ್ನು ಪರಿಗಣಿಸಲೇಬಾರದು. ಇಲ್ಲಿ ಯಾವುದೇ ಉದ್ಯೋಗ ಭದ್ರತೆ ಇಲ್ಲ. ಭರವಸೆ ಇಲ್ಲ. ಕನಿಷ್ಠ ವೇತನ ಸೌಲಭ್ಯವಿಲ್ಲ (₹ 5000  ಕೊಡುತ್ತಾರಂತೆ).

ರಾಷ್ಟ್ರ ನಿರ್ಮಾಣ ಮಾಡುವ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡಿರುವ ಶಿಕ್ಷಕರು ಉದ್ಯೋಗದ ಅಭದ್ರತೆಗೆ ಗುರಿಯಾಗಿ ಈ ವ್ಯವಸ್ಥೆಯಲ್ಲಿ ಕಳೆದು ಹೋಗುತ್ತಾರೆ. ತಮ್ಮ ಅತಂತ್ರ ಬದುಕಿನಲ್ಲಿ ಗುತ್ತಿಗೆ ಶಿಕ್ಷಕರು ಸಮಚಿತ್ತದಿಂದ ಕಾರ್ಯ ನಿರ್ವಹಿಸಲು ಸಾಧ್ಯವೇ ಇಲ್ಲ. ಇದು, ಸರ್ಕಾರ ಸಂವಿಧಾನಕ್ಕೆ ಮಾಡುತ್ತಿರುವ ಬಹಿರಂಗ ಅಪಚಾರ ಮತ್ತು ಅದು ಶಿಕ್ಷಣ ವ್ಯವಸ್ಥೆಯನ್ನೇ ನಾಶಗೊಳಿಸುತ್ತಿದೆ.

ಇಂತಹ ಹಿನ್ನೆಲೆಯಲ್ಲಿ ನಮ್ಮ ಶಿಕ್ಷಣ ಇಲಾಖೆಯು ಹೆಚ್ಚುವರಿ ಶಿಕ್ಷಕರು ಎನ್ನುವ ಅನುಪಾತವನ್ನು ಯಾವ ಮಾನದಂಡ ಬಳಸಿ ಈ ವರ್ಗಾವಣೆ ತೀರ್ಮಾನಕ್ಕೆ ಬಂದಿದೆ? 1ರಿಂದ 5ನೇ ತರಗತಿಯವರೆಗೆ ಪ್ರತಿ ತರಗತಿಗೆ ಒಬ್ಬ ಶಿಕ್ಷಕ ಮತ್ತು 6ರಿಂದ 8ನೇ  ತರಗತಿಯವರೆಗೆ ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕ ಇರಲೇಬೇಕೆಂಬುದು ಸಮಾನ ಶಿಕ್ಷಣದ ಒಂದು ವೈಜ್ಞಾನಿಕ ನಿಯಮ. ಆದರೆ ಇಂದು ಪ್ರತಿ ಶಾಲೆಯ (1ರಿಂದ 8ನೇ ತರಗತಿ) ಸರಾಸರಿ ಶಿಕ್ಷಕರ ಸಂಖ್ಯೆ ಕೇವಲ 3.

ನಲವತ್ತು ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ/ ಶಿಕ್ಷಕಿಯರಿದ್ದಾರೆ. ಏಕೋಪಾಧ್ಯಾಯ ಶಾಲೆಗಳು ಶೇಕಡ 30ರಷ್ಟಿವೆ. ಆದರೆ ನಮ್ಮ ಶಿಕ್ಷಣ ಇಲಾಖೆಗೆ ಈ ಹೆಚ್ಚುವರಿ ಶಿಕ್ಷಕರು ಎಲ್ಲಿಂದ ದೊರೆತರು? ಮತ್ತೊಂದೆಡೆ ಪೂರ್ವ ಪ್ರಾಥಮಿಕ ಶಿಕ್ಷಣವಾದ ಮಕ್ಕಳ ಮನೆ (ಎಲ್‌ಕೆಜಿ/ ಯುಕೆಜಿ) ಇಂದು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಆರಂಭವಾಗುತ್ತಿದೆ. ಅಲ್ಲಿಗೂ ಶಿಕ್ಷಕರು ಬೇಕು. ಇದರ ಕುರಿತಾಗಿ ಸರ್ಕಾರ ಯಾವ ಕ್ರಮ ಕೈಗೊಂಡಿದೆ?

ಈ ನವ ಉದಾರೀಕರಣದ ‘ಹೈರ್ ಅಂಡ್ ಫೈರ್’ ಎನ್ನುವ ಅನೀತಿಯಡಿ ಕನಿಷ್ಠ ನೇಮಕಾತಿ ಮಾಡಿಕೊಳ್ಳುತ್ತಿದ್ದರು ನಂತರ ವಜಾ ಮಾಡುತ್ತಿದ್ದರು. ಆದರೆ ನಮ್ಮ ಶಿಕ್ಷಣ ಇಲಾಖೆ ನೇಮಕಾತಿಯನ್ನೇ ಮಾಡಿಕೊಳ್ಳುತ್ತಿಲ್ಲ. ವರ್ಗಾವಣೆ ಮಾಡುತ್ತಿದೆ. ಇದು ವಜಾ ಕ್ರಮದಷ್ಟೇ ಅಮಾನವೀಯ.

ಮುಂದಿನ ನಾಲ್ಕು ವರ್ಷಗಳ ನಂತರ 2020ರಷ್ಟರಲ್ಲಿ ‘ಶಾಲೆ ಮುಚ್ಚುವ ಇಲಾಖೆ’ ಎನ್ನುವ ಹೊಸ ಇಲಾಖೆಯು ಸಾರ್ವಜನಿಕ ಶಿಕ್ಷಣ ಇಲಾಖೆಯ ಸ್ಥಾನವನ್ನು ಆಕ್ರಮಿಸಿಕೊಳ್ಳಬಹುದು.

ಇದು ಅತಿಶಯೋಕ್ತಿ ಅಲ್ಲ. ಆಗ ನಮ್ಮ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರು ಸರ್ಕಾರಿ ಶಾಲೆಗಳನ್ನು ಒಂದೊಂದಾಗಿ ಮುಚ್ಚುವ ಕಾರ್ಯಕ್ರಮವನ್ನು ಅಧಿಕೃತವಾಗಿಯೇ ಉದ್ಘಾಟಿಸಬಹುದು! ನಮ್ಮ ಸಾಹಿತಿಗಳು, ಬುದ್ಧಿಜೀವಿಗಳು ಇನ್ನಾದರೂ ತಮ್ಮ ಶೈಕ್ಷಣಿಕ  ದಂತಗೋಪುರಗಳಿಂದ, ಬೌದ್ಧಿಕ ಭ್ರಮೆಗಳಿಂದ ಹೊರಬಂದು ಈ ಲೋಕವನ್ನೂ ನೋಡಬಲ್ಲರೇ? ಏಕೆಂದರೆ ಸರ್ಕಾರಿ ಶಾಲೆಗಳು ಮುಚ್ಚಿ ಹೋದರೆ ಅವರ ಪುಸ್ತಕಗಳು, ಪ್ರವಚನಗಳನ್ನು ಓದಲು, ಕೇಳಲು ಸಹ ಓದುಗರಿರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT