ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಿ ಹೋದರು ಅಭಿಮಾನಿಗಳು?

Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು ಸದಾ ಕ್ರೀಡಾ ಚಟುವಟಿಕೆಗಳ ತವರಿದ್ದಂತೆ. ಇಲ್ಲಿ ಒಂದಲ್ಲಾ ಒಂದು ಕ್ರೀಡೆ ನಡೆಯುತ್ತಲೇ ಇರುತ್ತದೆ. ಕೆಲ ತಿಂಗಳುಗಳ ಹಿಂದೆ ಸಾಕಷ್ಟು ಪ್ರಚಾರ ಪಡೆದುಕೊಂಡಿದ್ದ ಕಬಡ್ಡಿ ಲೀಗ್‌ ಹೊಸ ಅಲೆ ಹುಟ್ಟು ಹಾಕಿತ್ತು.

ಕಬಡ್ಡಿ ಲೀಗ್‌ ನಂತರ ಮತ್ತೊಂದು ದೊಡ್ಡ ಕ್ರೀಡಾಕೂಟ ಈಗ ಬೆಂಗಳೂರಿನಲ್ಲಿ ನಡೆಯುತ್ತಿದೆ. ಮೂರು ದಿನಗಳ ಹಿಂದೆ ಐಬಿಎಸ್‌ಎಫ್‌ ವಿಶ್ವ ಸ್ನೂಕರ್ ಚಾಂಪಿಯನ್‌ಷಿಪ್‌ ಆರಂಭವಾಗಿದೆ. ಕಬಡ್ಡಿ ಲೀಗ್‌ನ ಪಂದ್ಯಗಳು ನಡೆದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿಯೇ ‘ಸ್ನೂಕರ್‌ ಹಬ್ಬ’ದ ಸಂಭ್ರಮ ಅನಾವರಣಗೊಂಡಿದೆ. ಉಚಿತ ಪ್ರವೇಶವಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾಂಗಣದತ್ತ ಮಾತ್ರ ಸುಳಿಯುತ್ತಿಲ್ಲ.

ಸ್ನೂಕರ್‌ ಅಥವಾ ಬೇರೆ ಯಾವುದೇ ಕ್ರೀಡೆಯ ಬದಲು ಐಪಿಎಲ್ ಹಾಗೂ ಚಾಂಪಿಯನ್ಸ್‌ ಲೀಗ್‌ ಪಂದ್ಯಗಳು ನಗರದಲ್ಲಿ ನಡೆದರೆ ಅದಕ್ಕೆ ಲಭಿಸುವ ಬೇಡಿಕೆ ಎಂಥದ್ದು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಟಿಕೆಟ್‌ನ ಬೆಲೆ ಎಷ್ಟೇ ಇರಲಿ, ಇಡೀ ರಾತ್ರಿ ಸರತಿ ಸಾಲಿನಲ್ಲಿ ನಿಂತು ಕೆಲವು ಸಲ ಪೊಲೀಸರ ಲಾಠಿ ಏಟು ತಿಂದು ಕ್ರಿಕೆಟ್ ಪಂದ್ಯಗಳ ಟಿಕೆಟ್ ಗಿಟ್ಟಿಸುತ್ತಾರೆ. ಕೆಲವೊಮ್ಮೆ ನಿಗದಿತ ಬೆಲೆಗಿಂತ ಹೆಚ್ಚಿನ ದರ ಕೊಟ್ಟು ಟಿಕೆಟ್‌ ಖರೀದಿಸಿ, ನೋಡುವುದೂ ಉಂಟು. ಆದರೆ, ಉಚಿತ ಪ್ರವೇಶ ಇರುವ ಸ್ನೂಕರ್ ಚಾಂಪಿಯನ್‌ಷಿಪ್‌ ಎಂದರೆ ಅದೇಕೆ ನಿರ್ಲಕ್ಷ್ಯ?

ಹೆಚ್ಚಿನ ಸಂಖ್ಯೆಯಲ್ಲಿ ಜನ ಪಂದ್ಯಗಳನ್ನು ನೋಡಲಿ ಎನ್ನುವ ಕಾರಣಕ್ಕಾಗಿ ಕರ್ನಾಟಕ ರಾಜ್ಯ ಬಿಲಿಯರ್ಡ್ಸ್‌ ಮತ್ತು ಸ್ನೂಕರ್ ಸಂಸ್ಥೆ ಚಾಂಪಿಯನ್‌ಷಿಪ್‌ ಅನ್ನು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದೆ. 2011ರಲ್ಲಿ ಕೊನೆಯ ಸಲ ಇಲ್ಲಿ ಟೂರ್ನಿ ನಡೆದಾಗ ಬಿಲಿಯರ್ಡ್ಸ್‌ ಸಂಸ್ಥೆಯಲ್ಲಿ ಪಂದ್ಯಗಳು ನಡೆದಿದ್ದವು. ಆದರೂ ಅಭಿಮಾನಿಗಳೂ ಮಾತ್ರ ಇತ್ತ ಸುಳಿಯುತ್ತಿಲ್ಲ.

ಈ ಬಗ್ಗೆ ಶ್ರೀನಿವಾಸ್ ಎನ್ನುವ ಅಭಿಮಾನಿಯನ್ನು ಪ್ರಶ್ನಿಸಿದಾಗ, ‘ಸ್ನೂಕರ್ ನೋಡಲು ಬರುವವರ ಸಂಖ್ಯೆ ಕಡಿಮೆ ಎನ್ನುವುದು ಹೊಸ ವಿಷಯವೇನಲ್ಲ. ಏಕೆಂದರೆ ಪಂದ್ಯಗಳನ್ನು ಆಡುವ ಸ್ಪರ್ಧಿಗಳಿಗೆ ಏಕಾಗ್ರತೆ ಎಷ್ಟೊಂದು ಮುಖ್ಯವೋ ನೋಡುಗರಿಗೂ ಅಷ್ಟೇ ಏಕಾಗ್ರತೆ ಅಗತ್ಯ. ತುಂಬಾ ತಾಳ್ಮೆ ಬೇಕಾಗುತ್ತದೆ. ಒಂದು ಪಂದ್ಯ ಮುಗಿಯಲು ಹೆಚ್ಚು ಸಮಯ ಹಿಡಿಯುತ್ತದೆ. ಆದ್ದರಿಂದ ನೋಡುಗರ ಸಂಖ್ಯೆಯೂ ಕಡಿಮೆ’ ಎನ್ನುವ ಉತ್ತರ ನೀಡಿದರು.

ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿರುವ ಸ್ಪರ್ಧಿ ವಿದ್ಯಾ ಪಿಳ್ಳೈ ಅವರನ್ನು ಮಾತಿಗೆಳೆದಾಗ, ‘ಸ್ನೂಕರ್ ಪ್ರೇಮಿಗಳಿಗೆ ಇದೊಂದು ದೊಡ್ಡ ಅವಕಾಶ. ಆಸಕ್ತಿ ತೋರಿಸದೇ ಇರುವುದನ್ನು ನೋಡಿ ಅಚ್ಚರಿಯಾಗುತ್ತಿದೆ’ ಎನ್ನುತ್ತಾರೆ. ಭಾರತ ಮಹಿಳಾ ತಂಡದ ಸ್ಪರ್ಧಿ ಉಮಾದೇವಿ ನಾಗರಾಜ್‌ ಅವರು ಇದಕ್ಕೆ ನೀಡುವ ಕಾರಣವೇ ಬೇರೆ: ‘ನಗರದ ಜನರಿಗೆ ಪಂದ್ಯಗಳನ್ನು ನೋಡಲು ತುಂಬಾ ಆಸಕ್ತಿಯಿದೆ. ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ಪ್ರವೇಶ ಇದೆಯೋ ಇಲ್ಲವೋ ಎನ್ನುವ ಬಗ್ಗೆ ಅನುಮಾನಗಳಿವೆ. ಈಗತಾನೆ ಲೀಗ್‌ ಹಂತದ ಪಂದ್ಯಗಳು ನಡೆಯುತ್ತಿವೆ. ನಾಕೌಟ್‌ ಹಂತದ ಪಂದ್ಯಗಳು ಆರಂಭವಾದಾಗ ಹೆಚ್ಚಿನ ಸಂಖ್ಯೆಯ ಜನ ಸೇರುತ್ತಾರೆ ಎನ್ನುವ ವಿಶ್ವಾಸವಿದೆ’.

ವಿಶ್ವ ಚಾಂಪಿಯನ್‌ ಪಂಕಜ್‌ ಅಡ್ವಾಣಿ, ಚಿತ್ರಾ ಮಗಿಮೈರಾಜ್‌, ಚಂದ್ರಾ ಮನನ್‌, ಕಮಲ್‌ ಚಾವ್ಲಾ ಸೇರಿದಂತೆ ಸಾಕಷ್ಟು ತಾರೆಯರ ಸ್ಪರ್ಧೆಗಳನ್ನು ನೋಡುವ ಅವಕಾಶ ಉಚಿತವಾಗಿ ಸಿಗುತ್ತಿದೆ. ಅಷ್ಟೇ ಅಲ್ಲದೆ ಮಾಸ್ಟರ್ಸ್ ವಿಭಾಗದಲ್ಲಿ ಅಲೋಕ್‌ ಕುಮಾರ್, ನದೀಮ್ ಅಹ್ಮದ್, ಕೆ. ವೆಂಕಟೇಶಮ್‌, ಬಿ.ವಿ. ಶ್ರೀನಿವಾಸ ಮೂರ್ತಿ, ಕೆ.ಎಸ್‌. ನವೀನ್‌ ಕುಮಾರ್, ನದೀಮ್ ಅಜೀಜ್‌ ಸೇಠ್‌, ಎಸ್.ಎಂ. ಕಾಮರಾಜ್‌ ಹೀಗೆ ಸಾಕಷ್ಟು ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ. ಹಿರಿಯರ ವಿಭಾಗದಲ್ಲಿ ತಮ್ಮ ಶಕ್ತಿಯನ್ನೂ ಮೀರಿ ಈ ಸ್ಪರ್ಧಿಗಳು ಸಾಮರ್ಥ್ಯ ತೋರುತ್ತಿದ್ದಾರೆ. ಅವರ ಜೀವನ ಪ್ರೀತಿಯನ್ನು ಮೆಚ್ಚಲೇಬೇಕು. ಜೊತೆಗೆ, ಯುವ ಮತ್ತು ಅನುಭವಿ ಆಟಗಾರರ ಆಟದ ಸೊಬಗು ಕಣ್ತುಂಬಿಕೊಳ್ಳುವ ಅವಕಾಶವೂ ಇದೆ. ಇದು ಸ್ನೂಕರ್‌ ಚಾಂಪಿಯನ್‌ಷಿಪ್‌ಗೆ ಎದುರಾಗಿರುವ ಸಂಕಷ್ಟ ಮಾತ್ರವಲ್ಲ, ಬೇರೆ ಕ್ರೀಡೆಗಳಿಗೂ ಅಭಿಮಾನಿಗಳ ನೀರಸ ಪ್ರತಿಕ್ರಿಯೆ ತಪ್ಪಿಲ್ಲ.

ಟೆನಿಸ್‌ ಕ್ರೀಡೆಗೂ ಇದೇ ಸಂಕಷ್ಟ ಎದುರಾಗಿದೆ. ಐಪಿಎಲ್‌ನಿಂದ ಪ್ರೇರಣೆಗೊಂಡು ಮೊದಲ ಬಾರಿಗೆ ಚಾಂಪಿಯನ್ಸ್ ಟೆನಿಸ್‌ ಲೀಗ್‌ ಆಯೋಜನೆಯಾಗಿದೆ. ಇದರ ಬೆಂಗಳೂರು ಆವೃತ್ತಿಯ ಪಂದ್ಯಗಳು ಕರ್ನಾಟಕ ಲಾನ್‌ ಟೆನಿಸ್‌ ಸಂಸ್ಥೆಯ ಕೋರ್ಟ್‌ನಲ್ಲಿ ನಡೆದವು. ಅಮೆರಿಕದ ವೀನಸ್ ವಿಲಿಯಮ್ಸ್‌, ಸ್ಪೇನ್‌ನ ಫೆಲಿಸಿಯಾನೊ ಲೊಪೆಜ್‌, ಥಾಮಸ್‌ ಎನ್‌ಕ್ವಿಸ್ಟ್‌, ಭಾರತದ ಭರವಸೆಯ ಆಟಗಾರ ರಾಮಕುಮಾರ ರಾಮನಾಥನ್‌ ಹೀಗೆ ಅನೇಕ ಪ್ರಮುಖ ಆಟಗಾರರು ನಗರಕ್ಕೆ ಬಂದು ಆಡಿದರು. ಆದರೆ, ಅವರು ಬಂದು ಹೋಗಿದ್ದು ಹೆಚ್ಚಿನ ಜನಕ್ಕೆ ಗೊತ್ತೇ ಆಗಲಿಲ್ಲ ಎನ್ನುವುದು ವಿಪರ್ಯಾಸ. ಗುರುವಾರ ಮತ್ತು ಶುಕ್ರವಾರ ಎರಡು ದಿನ ಪಂದ್ಯಗಳನ್ನು ವೀಕ್ಷಿಸಿದವರ ಸಂಖ್ಯೆಯೂ ಕಡಿಮೆ.

ಕ್ರಿಕೆಟ್ ಅಂದಾಕ್ಷಣ ಎಲ್ಲಾ ಮಾದರಿಯ ಪಂದ್ಯಗಳನ್ನು ವೀಕ್ಷಿಸಲು ಜನ ಬರುವುದಿಲ್ಲ. ಭಾನುವಾರ (ನ. 23) ನಗರದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವೆ ಕ್ರಿಕೆಟ್ ಸರಣಿ ಆರಂಭವಾಗಲಿದೆ. ಆದರೆ ಈ ಪಂದ್ಯಗಳನ್ನು ಕ್ರೀಡಾಂಗಣಕ್ಕೆ  ಹೋಗಿ ನೋಡುವವರು ಎಷ್ಟು ಜನ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT