ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಿ ‘ಐ.ಟಿ ಭವಿಷ್ಯ’ದ ಹೂಬಳ್ಳಿ?

Last Updated 2 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಉದ್ಯಾನ ನಗರಿ ಬೆಂಗಳೂರಿನ ನಂತರ ವಾಣಿಜ್ಯ ನಗರಿ ಹುಬ್ಬಳ್ಳಿ–ಧಾರವಾಡ ಮಾಹಿತಿ ತಂತ್ರಜ್ಞಾನ (ಐ.ಟಿ) ಉದ್ಯಮದ ಪ್ರಮುಖ ತಾಣವಾಗಿ ರೂಪುಗೊಳ್ಳಬೇಕು ಎನ್ನುವುದು ದಶಕಗಳ ಹಿಂದಿನ ನಿರೀಕ್ಷೆ–ಕನಸು.

ಉತ್ತರ ಕರ್ನಾಟಕ ಭಾಗದ ಹೆಬ್ಬಾಗಿಲು ಎಂದೇ ಗುರುತಿಸಿಕೊಂಡ ಹುಬ್ಬಳ್ಳಿಯಲ್ಲಿ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆದಿವೆ– ನಡೆಯುತ್ತಲೇ ಇದೆ. ಆದರೆ ‘ಸಿಲಿಕಾನ್‌ ಸಿಟಿ’ಯಲ್ಲಿ ಕೇಂದ್ರೀಕೃತ ಗೊಂಡಿರುವ ಐ.ಟಿ ಕ್ಷೇತ್ರದ ದಿಗ್ಗಜ ಸಂಸ್ಥೆಗಳು ಮಾತ್ರ ಅದೇಕೋ ಈ ‘ಛೋಟಾ ಮುಂಬೈ’ ಕಡೆಗೆ ಮುಖ ಮಾಡುವ ಮನಸ್ಸು ಮಾಡುತ್ತಿಲ್ಲ!

‘ಐ.ಟಿ ಭವಿಷ್ಯ’ ಸಣ್ಣ ನಗರಗಳಲ್ಲಿದೆ ಎಂಬ ಅಧ್ಯಯನ ವರದಿಗಳಿಗೆ ಪೂರಕವಾಗಿ ಹುಬ್ಬಳ್ಳಿಯಲ್ಲಿ ಐ.ಟಿ ಅಭಿವೃದ್ಧಿಯ ಬಾಗಿಲು ತೆರೆದಿದ್ದರೂ ಒಳಪ್ರವೇ ಶಿಸಲು ಕಂಪೆನಿಗಳು ಬರುತ್ತಿಲ್ಲ. ಹೀಗಾಗಿ ‘ಐ.ಟಿ ಹಬ್‌’ ಎಂಬ ಮಹದಾಸೆ ಇಲ್ಲಿ ಇನ್ನೂ ಸಾಕಾರಗೊಂಡಿಲ್ಲ.
ಎರಡನೇ ಮತ್ತು ಮೂರನೇ ಹಂತದ ನಗರಗಳಿಗೆ ಐ.ಟಿ, ಮಾಹಿತಿ ತಂತ್ರಜ್ಞಾನ ಆಧರಿಸಿದ ಸೇವೆಗಳ ಉದ್ಯಮ ವಿಸ್ತರಿಸಬೇಕು ಎನ್ನುವುದು ಖಾಸಗಿ ವಲಯದ್ದಷ್ಟೇ ಅಲ್ಲ, ಸರ್ಕಾರದ ದೂರದೃಷ್ಟಿಯ ಉದ್ದೇಶವೂ ಹೌದು. ಬೆಂಗಳೂರು ಜನ–ವಾಹನ ದಟ್ಟಣೆಯಿಂದ ಕಿರಿದಾಗುತ್ತಿದೆ, ಸಂಕೀರ್ಣವಾಗುತ್ತಿದೆ. ಹೀಗಾಗಿ ಈ ಪರಿವರ್ತನೆ ಅತ್ಯಗತ್ಯ ಹಾಗೂ ಅನಿವಾರ್ಯ ಕೂಡಾ.

ಆದರೆ ಐ.ಟಿ ಕಂಪೆನಿಗಳಲ್ಲಿ ಮಾತ್ರ ಈ ಉತ್ಸಾಹ ಕಾಣುತ್ತಿಲ್ಲ. ಅದಕ್ಕೆ ಹಲವು ಕಾರಣಗಳೂ ಇವೆ.
ಮಾಹಿತಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಮೈಸೂರು, ಮಂಗಳೂರಿನಲ್ಲಿ 2013ರಲ್ಲಿ ‘ಐ.ಟಿ ಕಾರ್ಯಕ್ರಮ’ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರ, ಮೊನ್ನೆಯಷ್ಟೇ ಹುಬ್ಬಳ್ಳಿ– ಧಾರವಾಡದಲ್ಲೂ ಅಂತಹದ್ದೊಂದು ಕಾರ್ಯಕ್ರಮ ಹಮ್ಮಿಕೊಂಡು ಐ.ಟಿ ಕಂಪೆನಿಗಳನ್ನು ಸೆಳೆಯಲು ನಾಂದಿ ಹಾಡಿದೆ.

ಐ.ಟಿ ವಲಯವನ್ನು ಬೆಂಗಳೂರಿನಿಂದಾಚೆಗೂ ಎರಡನೇ ಮತ್ತು ಮೂರನೇ ಹಂತದ ನಗರಗಳಿಗೆ ಒಯ್ಯಬೇಕು ಎಂದುಕೊಂಡಾಗ ಮೊದಲು ಕಂಡಿದ್ದು ಹುಬ್ಬಳ್ಳಿ. ಈ ಕಾರಣಕ್ಕೆ  2.77 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಹುಬ್ಬಳ್ಳಿಯ ಹೃದಯಭಾಗದಲ್ಲಿ (ಗ್ಲಾಸ್‌ಹೌಸ್‌ ಬಳಿ) ‘ಹುಬ್ಬಳ್ಳಿ ಐ.ಟಿ ಪಾರ್ಕ್‌’ ಸಂಕೀರ್ಣವನ್ನು 2002ರಲ್ಲಿ ರಾಜ್ಯ ಸರ್ಕಾರ ನಿರ್ಮಿಸಿತ್ತು.

ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳಿಗೆ ಇಲ್ಲಿ ಕಂಪೆನಿ ತೆರೆಯಲು ಅವಕಾಶವನ್ನೂ ಒದಗಿಸಲಾಗಿತ್ತು. ಆದರೆ ಈ ‘ಮಾಹಿತಿ ತಂತ್ರಜ್ಞಾನ ಉದ್ಯಮ ಉದ್ಯಾನ’ದೊಳಗೆ ಕಂಪೆನಿ ಕಚೇರಿ ಆರಂಭಿಸಲು  ಹೇಳಿಕೊಳ್ಳುವಂತಹ ಯಾವುದೇ ಐ.ಟಿ ಕಂಪೆನಿ ಈವರೆಗೂ ಮುಂದೆ ಬಂದಿಲ್ಲ. ಜನಪ್ರತಿನಿಧಿಗಳು ಮಾತ್ರ ‘ಐ.ಟಿ ಬೂಮ್‌’ ಹೆಸರಿನಲ್ಲಿ ಬಣ್ಣ ಬಣ್ಣದ ಭರವಸೆಗಳನ್ನು ನೀಡುತ್ತಲೇ ಇದ್ದಾರೆ. ಆದರೆ ರಾಜಕೀಯ ಇಚ್ಛಾಶಕ್ತಿ ಮಾತ್ರ ಯಾರಲ್ಲೂ ಇಲ್ಲ ಎನ್ನುವುದು ವಾಸ್ತವ.

ಹುಬ್ಬಳ್ಳಿ– ಬೆಂಗಳೂರು ಮಧ್ಯೆ ನಿತ್ಯ ವಿಮಾನ ಹಾರಾಟ ಆರಂಭಗೊಂಡ ಬಳಿಕವೂ ಐ.ಟಿ ಬೆಳವಣಿಗೆಗೆ ಸಂಬಂಧಿಸಿದಂತೆ ಈ ಭಾಗದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 2006ರಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ಇಲ್ಲಿ ನಡೆದಿತ್ತು. ಅದರ ಪರಿಣಾಮ ಹುಬ್ಬಳ್ಳಿ–ಧಾರವಾಡ ಮಧ್ಯೆ ನವನಗರದಲ್ಲಿ 26 ಎಕರೆ ಜಾಗದಲ್ಲಿ ‘ಆರ್ಯಭಟ ಟೆಕ್‌ ಪಾರ್ಕ್‌’ ಮಾಡಲಾಗಿತ್ತು. ಈ ಪಾರ್ಕ್‌ಗೆ ಮೂಲಸೌಲಭ್ಯ ಅಭಿವೃದ್ಧಿಪಡಿಸಲು ಹುಬ್ಬಳ್ಳಿ–ಧಾರವಾಡ ಮಹಾನಗರಪಾಲಿಕೆ ರೂ. 2 ಕೋಟಿಯಷ್ಟು ವೆಚ್ಚವನ್ನೂ ಮಾಡಿದೆ.

ಆರ್ಯಭಟ ಟೆಕ್‌ ಪಾರ್ಕ್‌ನಲ್ಲಿರುವ ಜಾಗವನ್ನು ಐ.ಟಿ ಕಂಪೆನಿ ಆರಂಭಿಸುವವರಿಗೆ ಹಂಚಲು ಉದ್ಯಮಿ ಮದನ್‌ ದೇಸಾಯಿ ನೇತೃತ್ವದ ಸಮಿತಿಯೊಂದನ್ನು ಮಹಾ ನಗರಪಾಲಿಕೆ 2006ರ ಆ. 29ರಂದು ನೇಮಿಸಿತ್ತು. ಕಂಪೆನಿಗಳ ಬೇಡಿಕೆಗೆ ಅನುಗುಣವಾಗಿ ಜಾಗ ಹಂಚಿಕೆ ಮಾಡಲು ಈ ಸಮಿತಿಗೆ ಅಧಿಕಾರ ನೀಡಲಾಗಿತ್ತು. ಅಂದು ಪಾಲಿಕೆ ಆಯುಕ್ತರಾಗಿದ್ದ  ಪಿ.ಮಣಿವಣ್ಣನ್‌, ಈ ನಿಟ್ಟಿನಲ್ಲಿ ಉತ್ಸುಕರಾಗಿ ತೊಡಗಿಸಿಕೊಂಡಿದ್ದರು. ಪ್ರತಿ ಎಕರೆಗೆ ರೂ. 10 ಲಕ್ಷದಂತೆ ದರ ನಿಗದಿಪಡಿಸಿ ಮೊದಲ ಹಂತದಲ್ಲಿ 11 ಕಂಪೆನಿಗಳಿಗೆ ಜಾಗ ಹಂಚಿಕೆ ಮಾಡಲಾಗಿತ್ತು.

ಈ ಪ್ರಸ್ತಾವಕ್ಕೆ 2007 ಜ. 24ರಂದು ಸರ್ಕಾರ ಮಂಜೂರಾತಿ ಕೂಡಾ ನೀಡಿತ್ತು. ನೋಂದಣಿ ಮಾಡಿಕೊಳ್ಳುವಂತೆ ಎಲ್ಲ 11 ಕಂಪೆನಿಗಳಿಗೆ ನೋಟಿಸ್‌ ಕಳುಹಿಸಿದರೂ ಏಳು ಕಂಪೆನಿಗಳು ಮಾತ್ರ ನೋಂದಣಿ ಮಾಡಿಕೊಂಡಿದ್ದವು. ಈ ಪೈಕಿ ಎನ್‌.ಎಸ್‌. ಇನ್ಫೊಟೆಕ್‌ ಕಂಪೆನಿಗೆ ಐದು ಎಕರೆ, ದೀಕ್ಷಾ ಪ್ರೈ.ಲಿ., ಮತ್ತು  ಸಂಕಲ್ಪ ಸೆಮಿ ಕಂಡಕ್ಟರ್‌ ಕಂಪೆನಿಗೆ ತಲಾ ಮೂರು ಎಕರೆ, ಏಬಲ್‌ ಕಂಪೆನಿಗೆ ಒಂದೂವರೆಗೆ ಎಕರೆ, ಉಳಿದ ಕಂಪೆನಿಗಳಿಗೆ ತಲಾ ಒಂದು ಎಕರೆಯಂತೆ  ಒಟ್ಟು 15.50 ಎಕರೆ ಜಾಗವನ್ನು ಹಂಚಿಕೆ ಮಾಡಲಾಗಿತ್ತು.  ಉಳಿದ ನಾಲ್ಕು ಕಂಪೆನಿಗಳು ನೋಂದಣಿ ಮಾಡಿಕೊಳ್ಳದೇ ಇದ್ದುದರಿಂದ 10.50 ಎಕರೆ ಜಾಗ ಹಂಚಿಕೆಯಾಗದೆ ಹಾಗೇ ಉಳಿದಿತ್ತು.

2010ರ ಫೆ. 23ರಂದು ಮತ್ತೆ ಆರು ಕಂಪೆನಿಗಳು ಅರ್ಜಿ ಸಲ್ಲಿಸಿದ್ದವು. ಈ ಪೈಕಿ ಎರಡು ಕಂಪೆನಿಗಳು ಹಿಂದೆ ಸರಿದ ಕಾರಣ, ಕ್ಲಿಕ್‌ ಹುಬ್ಬಳ್ಳಿ.ಕಾಂ ಮತ್ತು ಇನ್ಫೊಟೆಕ್‌ ಕಂಪೆನಿಯ ಹೆಸರು ಸೇರಿಸಿ ಮತ್ತೊಮ್ಮೆ ಆರು ಕಂಪೆನಿಗಳಿಗೆ ಜಾಗ ಹಂಚಿಕೆ ಮಾಡುವಂತೆ ಸರ್ಕಾರಕ್ಕೆ  ಪತ್ರ ಬರೆಯಲಾಗಿತ್ತು. ಜಾಗ ಮರು ಹಂಚಿಕೆ ಮಾಡುವಂತೆ 2011ರ ಏ. 26ರಂದು ಪತ್ರ ಬರೆದ ಬಳಿಕ ದೇಶಪಾಂಡೆ ಫೌಂಡೇಷನ್‌ ‘ಮೆಗಾ ವಿಜ್ಞಾನ ಕೇಂದ್ರ’ ಆರಂಭಿಸಲು ಮೂರು ಎಕರೆ ಜಾಗ ನೀಡುವಂತೆ ಮನವಿ ಸಲ್ಲಿಸಿತು. ಆರು ಕಂಪೆನಿಗಳಿಗೆ ಹಂಚಿಕೆ ಮಾಡಿ ಎರಡು ಎಕರೆ ಜಾಗ ಮಾತ್ರ ಉಳಿದಿತ್ತು.

ದೇಶಪಾಂಡೆ ಫೌಂಡೇಷನ್‌ನ ಕೋರಿಕೆಯಂತೆ ಮೂರು ಎಕರೆ ಹೇಗೆ ಕೊಡಲು ಸಾಧ್ಯ? ಅಲ್ಲದೆ, ವಿಜ್ಞಾನ ಕೇಂದ್ರ ಸ್ಥಾಪನೆ ಐ.ಟಿ ಸಂಬಂಧಿಸಿದ ಕಂಪೆನಿ ಅಲ್ಲದೇ ಇರುವುದರಿಂದ ಜಮೀನು ಹಂಚಿಕೆ ಸಾಧ್ಯವಿಲ್ಲ ಎಂದು ಸರ್ಕಾರ ಈ ಪ್ರಸ್ತಾವವನ್ನು ಪಾಲಿಕೆಗೆ ಮರಳಿಸಿತ್ತು.

‘ಉತ್ತರ ಕರ್ನಾಟಕದಲ್ಲಿ ಐ.ಟಿ ಆಧರಿಸಿದ  ವಿಜ್ಞಾನ ಕೇಂದ್ರ ಮಾಡುತ್ತಿದ್ದೇವೆ’ ಎಂದು ಮತ್ತೆ ದೇಶಪಾಂಡೆ ಫೌಂಡೇಷನ್‌ ವಿನಂತಿಸಿತ್ತು. ಆಗ ‘ನಿಮ್ಮ ಹಂತದಲ್ಲೇ ಮರುಪರಿಶೀಲನೆ ಮಾಡಿ ಜಾಗ ಹಂಚಿಕೆ ಮಾಡಿ’ ಎಂದು ಸರ್ಕಾರ 2012ರ ಆ. 23ರಂದು ಪಾಲಿಕೆಗೆ ಪತ್ರ ಬರೆದಿತ್ತು.

ಈ ಮಧ್ಯೆ, ಹುಬ್ಬಳ್ಳಿ ವಿಮಾನ ನಿಲ್ದಾಣದ ಬಳಿ ಕೆಐಎಡಿಬಿಯಿಂದ ದೇಶಪಾಂಡೆ ಫೌಂಡೇಶನ್‌ 50 ಎಕರೆ ಜಾಗ ಖರೀದಿಸಿತು. ಇದೀಗ ಉಳಿದ ಆರು ಕಂಪೆನಿಗಳು ಸಲ್ಲಿಸಿದ ಅರ್ಜಿ ವಿಲೇವಾರಿ ಆಗಬೇಕಿದೆ. ಓಕ್ಸ್‌ ಸಿಸ್ಮಾ ಬೆಂಗಳೂರು, ಗುಂಬಿ ಸಾಫ್ಟ್‌ವೇರ್‌ ಹುಬ್ಬಳ್ಳಿ (ತಲಾ ಎರಡು ಎಕರೆ), ಇನ್‌ಟೆಂಟ್‌ ಇನ್ಫೊಟೆಕ್‌  (ಒಂದೂವರೆ ಎಕರೆ) ಸಿಸ್ಮಾಟಿಕ್‌ ಬೆಂಗಳೂರು, ನವ್ಯಾ ಬಯೊಲಾಜಿಕಲ್‌ ಬೆಂಗಳೂರು, ಕ್ಲಿಕ್‌. ಹುಬ್ಬಳ್ಳಿ. ಕಾಂ (ತಲಾ ಒಂದು ಎಕರೆ) ಕಂಪೆನಿಗಳು ಎರಡು ವರ್ಷದಿಂದ ಜಾಗ ಹಂಚಿಕೆಗಾಗಿ ಕಾಯುತ್ತಿವೆ. ಆದರೆ, ನಗರಾಭಿವೃದ್ಧಿ ಸಚಿವಾಲಯ ಮತ್ತು ಪೌರಾಡಳಿತ ನಿರ್ದೇಶನಾ ಲಯದಿಂದ ಇನ್ನೂ ಅಂತಿಮ ಮಂಜೂರಾತಿ ಸಿಕ್ಕಿಲ್ಲ!

ಐ.ಟಿ ಉದ್ಯಮಕ್ಕೆ ಮೀಸಲಾದ ನಿವೇಶನ ಹಂಚಿಕೆಗೆ ವರ್ಷಗಟ್ಟಲೆ ಕಾಯುವ ಸ್ಥಿತಿ ಬಂದರೆ ಕಂಪೆನಿ ಆರಂಭಿಸುವ ಉತ್ಸಾಹವಾದರೂ ಹೇಗೆ ಉಳಿಯಲು ಸಾಧ್ಯ? ಎನ್ನುವುದು ನವ ಉದ್ಯಮಿಗಳ ಪ್ರಶ್ನೆ.

ಗಂಭೀರ ಚರ್ಚೆ
ಹುಬ್ಬಳ್ಳಿಯನ್ನು ಐ.ಟಿ ಉದ್ಯಮದ ಪ್ರಮಖ ತಾಣ ಮಾಡಬೇಕೆಂಬ ಗುರಿಯಿಂದ ಇತ್ತೀಚೆಗೆ ನಡೆದ ‘ಮಾಹಿತಿ ತಂತ್ರಜ್ಞಾನ ಭವಿಷ್ಯದ ಸಮ್ಮೇಳನ’ದಲ್ಲಿ ಈ ವಿಷಯ ಗಂಭೀರ ಚರ್ಚೆಗೆ ವಸ್ತುವಾಯಿತು. ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ಹುಬ್ಬಳ್ಳಿ ಐ.ಟಿ ಕಂಪೆನಿಗಳ ಕೇಂದ್ರ ಆಗದಿರಲು ಅಧಿಕಾರಿಗಳ ಅಸಹಕಾರ ಧೋರಣೆ ಮುಖ್ಯ ಕಾರಣ ಎಂದು ನೇರವಾಗಿ  ಮಾಡಿರುವ ಆರೋಪ ಅಧಿಕಾರ ಮತ್ತು ಆಡಳಿತಶಾಹಿ ವ್ಯವಸ್ಥೆಗೆ ಕನ್ನಡಿ ಹಿಡಿದಂತಾಯಿತು.

ಸರ್ಕಾರದ ಮಟ್ಟದಲ್ಲಿ ಕಡತ ವಿಲೇವಾರಿಯಲ್ಲಿ ವಿಳಂಬ ಆಗುತ್ತಿರು ವುದನ್ನು ಕಂಡು ಬೇಸತ್ತ ಐ.ಟಿ ಕಂಪೆನಿಗಳು, ಇತ್ತ ಬರಲು ಹಿಂದೇಟು ಹಾಕುತ್ತವೆ ಎನ್ನುವುದು ಅವರ ಮಾತಿನ ತಾತ್ಪರ್ಯವಾಗಿತ್ತು.
ಆಡಳಿತಾತ್ಮಕ ಮಂಜೂರಾತಿ, ಜಾಗ ಹಂಚಿಕೆಗೆ ಸಂಬಂಧಿಸಿದಂತೆ ಪತ್ರ ವ್ಯವಹಾರ ಮತ್ತಿತರ ಕಾರಣಗಳಿಗೆ ನಿವೇಶನ ಹಂಚಿಕೆ ವಿಳಂಬವಾಗಿದೆ. ಅಲ್ಲದೆ, ವಿಧಾನ ಸಭೆ, ಲೋಕಸಭೆ, ವಿಧಾನ ಪರಿಷತ್‌ ಚುನಾವಣೆ ಯಿಂದಾಗಿ  ನೀತಿಸಂಹಿತೆ ಅಡ್ಡ ಬಂದುದರಿಂದ ಜಾಗ ಹಂಚಿಕೆ ಪ್ರಕ್ರಿಯೆ ವಿಳಂಬ ಆಗಿದೆ ಎನ್ನುವುದು ಅಧಿಕಾರಿಗಳ ಸಮರ್ಥನೆ.

ಇನ್ನು ಹುಬ್ಬಳ್ಳಿಯ ಹೃದಯಭಾಗದಲ್ಲಿರುವ ಐ.ಟಿ ಪಾರ್ಕ್‌ ಕಟ್ಟಡದಲ್ಲಿ ಹೇಳಿಕೊಳ್ಳುವಂತಹ ಯಾವುದೇ ಐ.ಟಿ ಕಂಪೆನಿ ಬೀಡುಬಿಟ್ಟಿಲ್ಲ ಎಂಬುದು ವಾಸ್ತವ. ಇಲ್ಲಿ  ಚದರ ಅಡಿಗೆ ರೂ. 5ರ ದರದಲ್ಲಿ ಪ್ರತಿ ತಿಂಗಳ ಬಾಡಿಗೆಗೆ ಜಾಗ ನೀಡಲಾಗುತ್ತಿದೆ. ಈ ಕಟ್ಟಡದಲ್ಲಿ ನೀರು, ಶೌಚಾಲಯ ಮತ್ತಿತರ ಮೂಲಸೌಲಭ್ಯ ಸಮರ್ಪಕವಾಗಿ ಇಲ್ಲದೇ ಇರುವುದರಿಂದ ಉದ್ಯಮಿಗಳು ಅತ್ತ ತಿರುಗಿ ನೋಡಲೂ ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಅಲ್ಲಿ ಕಂಪೆನಿ ಆರಂಭಿಸಿ ಕೈಸುಟ್ಟುಕೊಂಡು ಹಿಂದೆ ಸರಿದ ನಿದರ್ಶನಗಳೂ ಇವೆ.

ಹುಬ್ಬಳ್ಳಿ–ಧಾರವಾಡಕ್ಕೆ ಕೇಂದ್ರ ಸರ್ಕಾರ ಐ.ಟಿ ವಿಶೇಷ ಆರ್ಥಿಕ ವಲಯ (ಎಸ್‌ಇಜೆಡ್‌) ಮಂಜೂರು ಮಾಡಿದೆ. ಗಾಮನಗಟ್ಟಿ ಬಳಿ 30 ಎಕರೆ ಜಮೀನು ನಿಗದಿಪಡಿಸಿದ್ದರೂ ಅದರ ಅನುಷ್ಠಾನದ ದಿಸೆಯಲ್ಲಿ ಮುಂದಿನ ಕ್ರಮಕ್ಕೆ ಕೇಂದ್ರ ಸರ್ಕಾರಕ್ಕೆ ಸೂಕ್ತ ಪ್ರಸ್ತಾವ ಮತ್ತಿತರ ಯಾವುದೇ ಪ್ರಯತ್ನಗಳು ಆಗಿಲ್ಲ. ಆ ಕುರಿತು ಜನಪ್ರತಿನಿಧಿಗಳು ಮೌನವಾಗಿದ್ದಾರೆ!

ಎಸ್‌.ಎಂ.ಕೃಷ್ಣ ಅವರ ನೇತೃತ್ವದ ಸರ್ಕಾರ ಐ.ಟಿ ಬಿಟಿಗೆ ಹೆಚ್ಚು ಆದ್ಯತೆ ನೀಡಿದ್ದರಿಂದ ಬೆಂಗಳೂರು ದೇಶಕ್ಕೇ ಐ.ಟಿ ರಾಜಧಾನಿಯಾಯಿತು. ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಐ.ಟಿ–ಬಿಟಿ ಉದ್ಯಮ ಬೆಳೆಸುವ ಉದ್ದೇಶವನ್ನೂ ಆ ಸರ್ಕಾರ ಹೊಂದಿತ್ತು. ಹೀಗಾಗಿ 2004–05ರಲ್ಲಿ ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ ಕೇಂದ್ರೀಕರಿಸಿ ಐ.ಟಿ ಬೆಳವಣಿಗೆಗೆ ಪೂರಕ ಹೆಜ್ಜೆಗಳನ್ನು ಸರ್ಕಾರ ಇಟ್ಟಿತ್ತು.

ಕಾಗದದಲ್ಲಿ ‘ಐ.ಟಿ ಬೂಮ್‌’
ಉತ್ತರ ಕರ್ನಾಟಕ ಭಾಗದಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಭಾವಂತ ಕಂಪ್ಯೂಟರ್‌ ಎಂಜಿನಿಯರ್‌ಗಳು ಹೊರಬರುತ್ತಿದ್ದಾರೆ. ಇಲ್ಲಿ ಐ.ಟಿ ಬೆಳವಣಿಗೆಗೆ ವಿಪುಲ ಅವಕಾಶ ಇದೆ.  ಆದರೆ ‘ಐ.ಟಿ ಬೂಮ್‌’ ಎನ್ನುವಂಥದ್ದು ಕಾಗದದಲ್ಲಷ್ಟೆ ಉಳಿದಿದೆ. ಐ.ಟಿ ಉದ್ಯಮದಲ್ಲಿ ಹೇಳಿಕೊಳ್ಳು ವಂತಹ ಯಾವುದೇ ಬೆಳವಣಿಗೆಗಳು ಆಗಿಲ್ಲ. ಇದರ ಜೊತೆಯಲ್ಲೇ ಐ.ಟಿ ಅಭಿವೃದ್ಧಿಗೆ ಮುಂದಡಿ ಇಟ್ಟಿದ್ದ ಮೈಸೂರು, ಮಂಗಳೂರು ನಗರಗಳ ಇಂದಿನ ಸಾಧನೆಯನ್ನು ನೋಡಿದರೆ, ಹುಬ್ಬಳ್ಳಿ– ಧಾರವಾಡ ಸ್ಥಿತಿ ತೀರಾ ಶೋಚನೀಯ.

ಎರಡೂವರೆ ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಕಂಪೆನಿ ಆರಂಭಿಸಲು 50 ಎಕರೆ ಜಾಗವನ್ನು ಇನ್ಫೊಸಿಸ್‌ ಕಂಪೆನಿಗೆ ಮಂಜೂರು ಮಾಡಲಾ ಗಿತ್ತು. ಆದರೆ ಭೂ ಸ್ವಾಧೀನ ಸಂದರ್ಭದ ಸಮಸ್ಯೆಗಳಿಂದ ಬೇಸತ್ತು ಹುಬ್ಬಳ್ಳಿಯ ಉಸಾಬ ರಿಯೇ ಬೇಡ ಎಂದು ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿತ್ತು. ಆದರೂ ಇದೀಗ ಭೂಮಿ ಯನ್ನು ಕಂಪೆನಿಯ ಸ್ವಾಧೀನಕ್ಕೆ ನೀಡಲಾಗಿದೆ. ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಈ ಕಾರ್ಯ ಎರಡೂವರೆ ವರ್ಷಗಳ ಹಿಂದೆಯೇ ಆಗಿರುತ್ತಿದ್ದರೆ ಈ ವೇಳೆಗಾಗಲೇ ಕಂಪೆನಿಯಲ್ಲಿ ಉತ್ಪಾದನೆ ಆರಂಭವಾಗಿ ಅಂದಾಜು ಐದು ಸಾವಿರ ಮಂದಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿದ್ದರು.

ಕೆಲವು ವರ್ಷಗಳ ಹಿಂದೆ ರೂ. 120 ಕೋಟಿ ಬಂಡವಾಳ ಹೂಡಿಕೆ ಮಾಡಿ ಹುಬ್ಬಳ್ಳಿಯಲ್ಲಿ ಘಟಕ ಸ್ಥಾಪಿಸಲು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್) ಉದ್ದೇಶಿಸಿತ್ತು. ಅದಕ್ಕೆ 50 ಎಕರೆ ಜಮೀನು ನೀಡುವಂತೆ ಬೇಡಿಕೆ ಮುಂದಿಟ್ಟಿತ್ತು. ಕ್ವೆಸ್ಟ್‌ ಕಂಪೆನಿ ಕೂಡಾ ಘಟಕದ ಸ್ಥಾಪಿಸುವ ಉದ್ದೇಶದಿಂದ 25 ಎಕರೆ ಜಮೀನು ಬಯಸಿತ್ತು. ಆದರೆ ಆ ಎರಡೂ ಕಂಪೆನಿಗಳು ನಂತರ ಹಿಂದೆ ಸರಿದವು. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಕೊರತೆಯೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಉದ್ಯಮಿಗಳು. ಪ್ರಮುಖ ಐ.ಟಿ ಕಂಪೆನಿಗಳು ನಗರಕ್ಕೆ ಬಾರದಿರಲು ಆಡಳಿತ ವ್ಯವಸ್ಥೆಯಲ್ಲಿನ ಲೋಪವೂ ಕಾರಣ ಎನ್ನುವುದು ಉದ್ಯಮಿಗಳ ಟೀಕೆ.

ಹುಬ್ಬಳ್ಳಿ ಸ್ವಲ್ಪವೇ ಐ.ಟಿ ರಫ್ತು
ಬೆಂಗಳೂರು ಒಂದರಲ್ಲೇ 2,500ಕ್ಕೂ ಅಧಿಕ ಐ.ಟಿ ಕಂಪೆನಿಗಳಿದ್ದು, 10 ಲಕ್ಷ ಮಂದಿಗೆ ಉದ್ಯೋಗ ನೀಡಿವೆ. ಜೊತೆಗೆ ಪೂರಕ ವಲಯದಲ್ಲಿ 30 ಲಕ್ಷ ಉದ್ಯೋಗಗಳನ್ನು ಒದಗಿಸಿದಂತಾಗಿದೆ. 2013–14ರಲ್ಲಿ ರಾಜ್ಯದ ಐ.ಟಿ ಉತ್ಪನ್ನಗಳ ಒಟ್ಟು ರಫ್ತು ಮೊತ್ತವೇ ರೂ. 1.65 ಲಕ್ಷ ಕೋಟಿಯಷ್ಟಿತ್ತು. ಈ ಪೈಕಿ ಮಂಗಳೂರು, ಮೈಸೂರು, ಮತ್ತು ಹುಬ್ಬಳ್ಳಿ– ಧಾರವಾಡಗಳಲ್ಲಿನ 70 ಐ.ಟಿ ಕಂಪೆನಿಗಳ ಕೊಡುಗೆಯೂ ರೂ. 3,000 ಕೋಟಿ ಇತ್ತು.

ಮೈಸೂರಿನಲ್ಲಿ 30 ಐ.ಟಿ ಕಂಪೆನಿಗಳಿದ್ದು, 2013–14ನೇ ಸಾಲಿನಲ್ಲಿ ಅಲ್ಲಿಂದ  ರೂ. 2,475 ಕೋಟಿ ಮೊತ್ತದ ಐ.ಟಿ ಉತ್ಪನ್ನ ಮತ್ತು ಸೇವೆಗಳ ರಫ್ತು ವಹಿವಾಟು ನಡೆದಿದೆ. ಮಂಗಳೂರಿನಲ್ಲಿರುವ 17 ಕಂಪೆನಿಗಳಿಂದ ರೂ. 1,100 ಕೋಟಿಯ ಐ.ಟಿ ಉತ್ಪನ್ನ ರಫ್ತಾಗಿವೆ. ಹುಬ್ಬಳ್ಳಿಯಲ್ಲಿ ಲೆಕ್ಕಕ್ಕೆ 22 ಕಂಪೆನಿಗಳಿದ್ದು, 400 ಮಂದಿ ಉದ್ಯೋಗದಲ್ಲಿದ್ದಾರೆ. ಐ.ಟಿ ಉತ್ಪನ್ನ  ರಫ್ತು ವಹಿವಾಟು ಮಾತ್ರ ಕೇವಲ ರೂ. 20 ಕೋಟಿ. ಮೈಸೂರು ಮತ್ತು ಮಂಗಳೂರಿನಲ್ಲಿ ಐ.ಟಿ ದಿಗ್ಗಜ ಸಂಸ್ಥೆ ಇನ್ಫೊಸಿಸ್‌ ನೆಲೆಯೂರಿದೆ ಎನ್ನುವುದು ಗಮನಿಸಬೇಕಾದ ಸಂಗತಿ


ಐಟಿ ಬೆಳವಣಿಗೆಗೆ ಅನುಕೂಲ
*ಒಂದನೇ ಹಂತದ ನಗರಗಳಿಗೆ ಹೋಲಿಸಿದರೆ ಹುಬ್ಬಳ್ಳಿಯಲ್ಲಿ ಜೀವನ ವೆಚ್ಚ ಶೇ 10ರಿಂದ 25ರಷ್ಟು ಕಡಿಮೆ

*ರಿಯಲ್‌ ಎಸ್ಟೇಟ್‌ ದರ ಶೇ 15ರಿಂದ 45ರಷ್ಟು ಕಡಿಮೆ
*ಪ್ರಯೋಗಗಳಿಗೆ ಸಾಕಷ್ಟು ಅವಕಾಶ
*ಉತ್ತಮ ವಾತಾವರಣ, ಸುತ್ತಮುತ್ತ ಉತ್ತಮ ಎಂಜಿನಿಯರಿಂಗ್‌ ಕಾಲೇಜುಗಳು
*ಹೆಚ್ಚು ಬದ್ಧತೆಯಿಂದ ಕೆಲಸ ಮಾಡುವ ಉದ್ಯೋಗಿಗಳ ಲಭ್ಯತೆ
*ಶೇ 50ರಷ್ಟು ಮಾನವ ಸಾಮರ್ಥ್ಯ ಸಾಕು
*ನಿವೇಶನ, ವಿದ್ಯುಚ್ಛಕ್ತಿ ಲಭ್ಯತೆ
*ಬಾಡಿಗೆ ಹೊರೆ ಪ್ರಮಾಣವೂ ಕಡಿಮೆ
ಅನನುಕೂಲ
*ಮೂಲಸೌಲಭ್ಯ ಕೊರತೆ
*ರಸ್ತೆ, ಸಂಪರ್ಕ ವ್ಯವಸ್ಥೆ ಸಮಸ್ಯೆ
*ಅನುಷ್ಠಾನ ಬದ್ಧತೆ ಇಲ್ಲದಿರುವುದು
*ಕಡತ ವಿಲೇವಾರಿ ವಿಳಂಬ

‘ಕರ್ನಾಟಕ i4 ನೀತಿ’

ಬೆಂಗಳೂರಿನಿಂದ ಆಚೆಗೆ ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ (ಐ.ಟಿ) ಕೊಂಡೊಯ್ಯಬೇಕೆಂದು ಪಣತೊಟ್ಟಿರುವ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಐ.ಟಿ, ಐ.ಟಿಇಎಸ್‌, ಸ್ಟಾರ್ಟ್‌ ಅಪ್ಸ್‌, ಅನಿಮೇಷನ್‌, ಗೇಮಿಂಗ್‌, ಕಂಪ್ಯೂಟರ್‌ ಗ್ರಾಫಿಕ್ಸ್‌, ಟೆಲಿಕಾಂ, ಬಿಪಿಒ ಮೊದಲಾದ ಜ್ಞಾನಾಧರಿತ ಉದ್ಯಮಗಳಿಗಾಗಿ ಹೊಸ ಬಂಡವಾಳ ಉತ್ತೇಜನ ನೀತಿ ‘ಕರ್ನಾಟಕ ii4 ನೀತಿ’ ಪ್ರಕಟಿಸಿದೆ. ಆ ಮೂಲಕ ವಿಶೇಷ ಪ್ಯಾಕೇಜ್‌ ನೀಡಲು ಸರ್ಕಾರ ಮುಂದಾಗಿದೆ. ಅದರ ಪ್ರಕಾರ ಐ.ಟಿ ಸಂಬಂಧಿಸಿದಂತೆ ರೂ. 100 ಕೋಟಿಗೂ ಮೀರಿದ ಹೂಡಿಕೆ ಯೋಜನಾ ಪ್ರಸ್ತಾವಗಳಿಗೆ ಮುಖ್ಯಮಂತ್ರಿ ಅಧ್ಯಕ್ಷತೆಯ ಉನ್ನತಮಟ್ಟದ ವಿಲೇವಾರಿ ಸಮಿತಿ ಹಾಗೂ ರೂ. 100 ಕೋಟಿವರೆಗಿನ  ಹೂಡಿಕೆ ಪ್ರಸ್ತಾವಗಳಿಗೆ ಐ.ಟಿಬಿಟಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವರ ಅಧ್ಯಕ್ಷತೆಯ ಏಕಗವಾಕ್ಷಿ ವಿಲೇವಾರಿ ಸಮಿತಿ ರಚಿಸಲಾಗಿದೆ. ಪ್ರತಿಭಟನೆ, ಬಂದ್‌ಗಳಿಂದ ವಿನಾಯಿತಿ ನೀಡಲು ಐ.ಟಿ ಸಂಬಂಧಿಸಿದ ಸೇವೆಗಳನ್ನು ‘ಸಾರ್ವಜನಿಕ ಉಪಯುಕ್ತ ಸೇವೆ’ಗಳು ಎಂದು ಪರಿಗಣಿಸಲಾಗಿದೆ. ಉದ್ಯಮಿಗಳಿಗೆ ಐದು ವರ್ಷಗಳವರೆಗೆ ‘ಇಂಡಸ್ಟ್ರಿಯಲ್‌ ಎಂಪ್ಲಾಯ್‌ಮೆಂಟ್‌ ಸ್ಟ್ಯಾಡಿಂಗ್‌ ಆರ್ಡರ್ಸ್‌’ನಿಂದ ವಿನಾಯಿತಿ ನೀಡಲಾಗಿದೆ. ಐ.ಟಿ ಉದ್ಯಮಕ್ಕೆ ವಾಣಿಜ್ಯ ವಿದ್ಯುತ್‌ ಬದಲು ಕೈಗಾರಿಕೆ ವಿದ್ಯುತ್‌ ಸುಂಕ ನೀಡಲು ಕೆಇಆರ್‌ಸಿ ಅನುಮೋದನೆ ನೀಡಿದೆ (ಪ್ರತಿ ಯೂನಿಟ್‌ಗೆ ರೂ. 1.60ರಂತೆ ವಿನಾಯಿತಿ).

ಎನ್‌.ಎಸ್‌. ಇನ್ಫೊಟೆಕ್‌
ಹುಬ್ಬಳ್ಳಿಯ ಹೊಸ ಪೀಳಿಗೆಯ ಉದ್ಯಮಿಗಳ ಪೈಕಿ ಸಂತೋಷ್‌ ಹುರಳಿಕೊಪ್ಪಿ ಅವರದ್ದು ಪ್ರಮುಖ ಹೆಸರು. ಜಾಗತಿಕವಾಗಿ ಮಾಹಿತಿ ತಂತ್ರಜ್ಞಾನ ಸೇವೆ ನೀಡುವ, ಹುಬ್ಬಳ್ಳಿನ ಆರ್ಯಭಟ ಟೆಕ್‌ ಪಾರ್ಕ್‌ನಲ್ಲಿ ನೆಲೆಗೊಂಡಿರುವ ‘ಎನ್‌.ಎಸ್‌. ಇನ್ಫೊಟೆಕ್‌’ ಕಂಪೆನಿಯ ನಿರ್ದೇಶಕ ಮತ್ತು ಸಿಇಒ ಆಗಿರುವ ಅವರು, ಕಳೆದ 16 ವರ್ಷಗಳಿಂದ ಸಾಮಾಜಿಕ ಉದ್ಯಮಶೀಲ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.

ರಾಜ್ಯ ಸರ್ಕಾರದ ‘ಸುವರ್ಣ ಕಾಯಕ ಕೌಶಲ್ಯಾಭಿವೃದ್ಧಿ ಯೋಜನೆ’ಯ ಭಾಗವಾಗಿ ಅವರು ತಮ್ಮ ಸಂಸ್ಥೆಯ ಮೂಲಕ ಕೌಶಲ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದ್ದು, ಈಗಾಗಲೇ 1,200 ಮಂದಿಗೆ ತರಬೇತಿ ನೀಡಿದ್ದಾರೆ. ಸುರತ್ಕಲ್‌ ಎನ್‌ಐಐಟಿಯಿಂದ ಮೆಕ್ಯಾನಿಕಲ್‌ ಎಂಜಿನಿ ಯರಿಂಗ್‌ ಪದವಿ ಪಡೆದಿರುವ ಅವರು, ಕೆನಡಾದ ಮಕ್‌ಗಿಲ್‌ ವಿವಿ ಯಿಂದ ಮ್ಯಾನೇಜ್‌ಮೆಂಟ್‌ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.


ಸಾಮಾಜಿಕ ಉದ್ಯಮಶೀಲ ಮಾರ್ಗದರ್ಶಿ
‘ಅಭಿವೃದ್ಧಿ ಸಂವಾದ’ದ ಮೂಲಕ ಸಾಮಾಜಿಕ ಉದ್ಯಮಶೀಲತೆಗೆ ಉತ್ತೇಜನ ನೀಡುತ್ತಿರುವ ಗುರುರಾಜ ದೇಶಪಾಂಡೆ, ಉದ್ಯಮ ವಲಯದಲ್ಲಿ ಪರಿಚಿತ ಹೆಸರು. ಉದ್ಯಮಿಗಳ ಮಧ್ಯೆ ‘ಮೆಂಟರ್‌’ ಎಂದೇ ಜನಪ್ರಿಯತೆ ಪಡೆದವರು. ಹುಟ್ಟೂರು ಹುಬ್ಬಳ್ಳಿಯಲ್ಲಿ  ‘ದೇಶಪಾಂಡೆ ಫೌಂಡೇಷನ್‌’ ಮೂಲಕ  ಪ್ರತಿವರ್ಷ ಉದ್ಯಮ ಸಂಬಂಧಿ ನೂರಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ದೇಶಪಾಂಡೆ, ಅಮೆರಿಕ ಸಹಿತ ವಿವಿಧ ದೇಶಗಳಲ್ಲಿನ 10ಕ್ಕೂ ಹೆಚ್ಚು ಕಂಪೆನಿಗಳಲ್ಲಿ ಬಂಡವಾಳ ಹೂಡಿದ್ದಾರೆ.

‘ಹುಬ್ಬಳ್ಳಿಯ ಸಾಮರ್ಥ್ಯ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಬೆಳೆದಿದೆ. ಪದವಿ ಪಡೆದ ವಿದ್ಯಾರ್ಥಿಗಳು ಉದ್ಯೋಗ ಅರಸಿಕೊಂಡು ಹೋಗಬೇಕಾದ ಸ್ಥಿತಿ 40 ವರ್ಷಗಳ ಹಿಂದೆ ಇತ್ತು. ಈಗ ಪದವೀಧರನ್ನು ಹುಡುಕಿಕೊಂಡು ಕಂಪೆನಿಗಳು ಇಲ್ಲಿಗೇ ಬರುತ್ತಿವೆ’ ಎನ್ನುವ ಅವರು ಹುಬ್ಬಳ್ಳಿಯಲ್ಲಿ ಉದ್ಯಮಶೀಲ ವಾತಾವರಣ ಬೆಳೆಸಲು ಉತ್ತೇಜನ ನೀಡುತ್ತಿದ್ದಾರೆ. ಆವಿಷ್ಕಾರ (ಇನ್ನೊವೇಷನ್‌) ಮತ್ತು ಉದ್ಯಮಶೀಲತೆ ಸಂಸ್ಕೃತಿಯ ಭಾಗ. ಹೀಗಾಗಿ ಈ ನಿಟ್ಟಿನಲ್ಲಿ ಹೊಸ ಪೀಳಿಗೆ ಚಿಂತಿಸಬೇಕು ಎನ್ನುವುದು ಅವರ ಕಿವಿಮಾತು.

1973ರಲ್ಲಿ ಭಾರತ ಬಿಟ್ಟು ಅಮೆರಿಕ ತೆರಳಿದ ಗುರುರಾಜ ದೇಶಪಾಂಡೆ, Sycamore Networks, Cascade Communications, Coral Network Corporation ಮತ್ತಿತರ 10 ಕಂಪೆನಿಗಳಲ್ಲಿ ಬಂಡವಾಳ ಹೂಡಿದ್ದಾರೆ. ಭಾರತದಲ್ಲಿ ಬೆಂಗಳೂರಿನಲ್ಲಿ ಆಪ್ಟಿಕಲ್‌ ನೆಟ್‌ವರ್ಕಿಂಗ್‌ ಟೆಕ್ನಾಲಜಿ ಕಂಪೆನಿ ‘ತೇಜಸ್‌ ನೆಟ್‌್ ವರ್ಕ್‌’ನಲ್ಲಿ ಅವರು ಅತೀ ಹೆಚ್ಚು ಬಂಡವಾಳ ಹೂಡಿದ್ದಾರೆ. ‘10 ಸಾವಿರ ಮಂದಿಗೆ  ಉದ್ಯೋಗ ನೀಡುವ ಒಂದು ದೊಡ್ಡ ಕಂಪೆನಿ ಆರಂಭಿಸುವುದಕ್ಕಿಂತ, ತಲಾ ನೂರು ಮಂದಿಗೆ ಉದ್ಯೋಗ ಕೊಡುವ 10 ಸಣ್ಣ ಕಂಪೆನಿಗಳನ್ನು ಸ್ಥಾಪಿಸುವುದು ಒಳ್ಳೆಯದು’ ಎನ್ನುವುದು ಅವರ ವಾದ. ಸಣ್ಣ ಉದ್ಯಮಗಳನ್ನು ಬೆಳೆಸಲು ಗುರುರಾಜ ದೇಶಪಾಂಡೆ ನೆರವಾಗುತ್ತಿದ್ದಾರೆ. ಉದ್ಯಮ ಕ್ಷೇತ್ರ ದಿಗ್ಗಜರನ್ನು ಪ್ರತಿ ವರ್ಷ ಹುಬ್ಬಳ್ಳಿಗೆ ಕರೆಸಿ ಅವರಿಂದ ನವೋದ್ಯಮಿಗಳಿಗೆ ‘ಪಾಠ’ ಮಾಡಿಸುತ್ತಾರೆ!

‘ಸಂಕಲ್ಪ ಸೆಮಿ ಕಂಡಕ್ಟರ್‘ ಸಾಧನೆ
ಕಂಪ್ಯೂಟರ್, ಮೊಬೈಲ್, ಟಿವಿ, ಟೆಲಿಫೋನ್, ರೇಡಿಯೊ, ಸೆಟ್‌ಟಾಪ್ ಬಾಕ್ಸ್ ಮೊದಲಾದ ಎಲೆಕ್ಟ್ರಾನಿಕ್ ಸಾಧನಗಳ ಆಂತರ್ಯದಲ್ಲಿ ಅಡಗಿರುವ ಪುಟ್ಟ ಅಂಗ ಸೆಮಿಕಂಡಕ್ಟರ್. ಅದರ ತಯಾರಿಕೆ ಮತ್ತು ಮಾರುಕಟ್ಟೆ ಮೂಲಕವೇ ಯಶಸ್ವಿ ಉದ್ಯಮಿಯಾಗಿ ಗುರುತಿಸಿ ಕೊಂಡವರು ಹುಬ್ಬಳ್ಳಿ ಆರ್ಯಭಟ ಟೆಕ್‌ ಪಾರ್ಕ್‌ನಲ್ಲಿರುವ ‘ಸಂಕಲ್ಪ ಸೆಮಿ ಕಂಡಕ್ಟರ್‌‘ ಕಂಪೆನಿಯ ಸಂಸ್ಥಾಪಕ ಮತ್ತು ಸಿಇಒ ವಿವೇಕ ಪವಾರ.

ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಹೆಚ್ಚಿದಷ್ಟೂ ಸೆಮಿಕಂಡಕ್ಟರ್ ಬಳಕೆ ಅಪಾರ. 2005ರಲ್ಲಿ ಆರು ಮಂದಿಯಿಂದ ಆರಂಭಗೊಂಡ ಈ ಕಂಪೆನಿ ಕೇವಲ ಏಳು ವರ್ಷದ ಅವಧಿಯಲ್ಲಿ 450 ಮಂದಿಗೆ ಉದ್ಯೋಗ ನೀಡುವುದರ ಜೊತೆಗೆ 1 ಕೋಟಿ ಅಮೆರಿಕನ್‌ ಡಾಲರ್‌ (ಈಗಿನ ವಿನಿಮಯ ಲೆಕ್ಕದಲ್ಲಿ ರೂ. 60.50 ಕೋಟಿ) ಆದಾಯ ಗಳಿಸುತ್ತಿದೆ. ಕೈಗಾರಿಕಾ ಕ್ಷೇತ್ರದಲ್ಲಿ 25 ವರ್ಷಗಳ ಅನುಭವದೊಂದಿಗೆ ‘ಸಂಕಲ್ಪ’ ಆರಂಭಿಸಿದ್ದ ವಿವೇಕ ಪವಾರ, ಮೊಬೈಲ್‌ಫೋನ್‌, ಟಿವಿ ಮತ್ತು ಮೋಡೆಮ್‌ಗಳಲ್ಲಿನ  ‘ಅನಲಾಗ್‌ ಮತ್ತು ಮಿಕ್ಸೆಡ್‌ ಸಿಂಗಲ್‌ ಐಸಿ ವಿನ್ಯಾಸ’ದ ಸೆಮಿಕಂಡಕ್ಟರ್‌ಗಳ ತಯಾರಿಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ. ಒಂದನೇ ಹಂತದ ನಗರದಿಂದ 2ನೇ ಹಂತದ ನಗರಕ್ಕೆ ಕಂಪೆನಿಯನ್ನು ಸ್ಥಳಾಂತರಿಸಿದ್ದರೂ, ಇಲ್ಲಿಂದಲೇ ಜಾಗತಿಕ ಮಟ್ಟಕ್ಕೆ ಕಂಪೆನಿಯ ಮಾರುಕಟ್ಟೆ ವಿಸ್ತರಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಖರಗಪುರ ಐಐಟಿಯಿಂದ ಎಂ.ಟೆಕ್‌ ಪಡೆದ ಪವಾರ, ಟೆಕ್ಸಾಸ್‌ ಇನ್‌ಸ್ಟ್ರುಮೆಂಟ್ಸ್‌ ಕಂಪೆನಿ ಸೇರಿದ್ದರು. ಆ ಕಂಪೆನಿಯನ್ನು ‘ಅನಲಾಗ್‌ ಮತ್ತು ಮಿಕ್ಸೆಡ್‌ ಸಿಂಗಲ್‌ ಐಸಿ ವಿನ್ಯಾಸ’ ತಯಾರಿಕೆಯಲ್ಲಿ ಮುಂಚೂಣಿಗೆ ತಂದ ಅವರು, ಕಂಪೆನಿಯಲ್ಲಿ ಪ್ರಧಾನ ಜನರಲ್‌ ಮ್ಯಾನೇಜರ್‌ ಹುದ್ದೆಗೇರಿದ್ದರು. ಮೂರು ಪೇಟೆಂಟ್‌ಗಳನ್ನು ತಮ್ಮ ಹೆಸರಿನಲ್ಲಿ ಪವಾರ ಹೊಂದಿದ್ದಾರೆ. ಸಿಂಗಲ್‌ ಚಿಪ್‌ನಲ್ಲಿ ಡಿಎಸ್‌ಎಲ್‌ ರೂಟರ್‌ ಅಭಿವೃದ್ಧಿಪಡಿಸುವಲ್ಲಿ ಮಹತ್ವದ ಕೊಡುಗೆ ನೀಡಿರುವ ಅವರು, ಸಿಪಿಇ ಡಿಎಸ್‌ಎಲ್‌ ಮಾರ್ಕೆಟ್‌ನಲ್ಲಿ ಟೆಕ್ಸಾಸ್ ನಂ.1 ಆಗಲು ಕಾರಣರಾಗಿದ್ದರು. ನಂತರ ಅವರು ಟೆಕ್ಸಾಸ್‌ನ ಅಮೆರಿಕಾದ ಹೂಸ್ಟನ್‌ನಲ್ಲಿರುವ ಅಟೊಮೋಟಿವ್‌ ಚಿಪ್‌ ಇಂಟಿಗ್ರೇಷನ್‌ ಪಾಜೆಕ್ಟ್‌ನ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಸಂಕಲ್ಪ ಸೆಮಿ ಕಂಡಕ್ಟರ್‌ ಕಂಪೆನಿಯಲ್ಲಿ ‘20– ನ್ಯಾನೊ ಪ್ರಾಜೆಕ್ಟ್’ ಎಂಬ ಅತ್ಯಾಧುನಿಕ ಉತ್ಪಾದನಾ ಪ್ರಕ್ರಿಯೆಯಲ್ಲಿ ಸೆಮಿಕಂಡಕ್ಟರ್‌ಗಳು ರೂಪು ಪಡೆಯುತ್ತವೆ. ಅತ್ಯಂತ ಸೂಕ್ಷ್ಮ ಚಿಪ್‌ಗಳು ಪವಾರ್‌ ಅವರ ಕಂಪೆನಿಯ ವಿಶೇಷ. ಹೀಗಾಗಿ ವಿಶ್ವದ ಪ್ರಮುಖ ಚಿಪ್‌ ಮೇಕರ್‌ಗಳು ಇವರ ಕಂಪೆನಿಯ ಗ್ರಾಹಕರಾಗಿದ್ದಾರೆ.

ಉದ್ಯಮದ ಜೊತೆಗೆ ಸಾಮಾಜಿಕ ಚಟುವಟಿಕೆಯ ಭಾಗವಾಗಿ ಉತ್ತಮ ಪರಿಸರ ಕಾಪಾಡುವ ನಿಟ್ಟಿನಲ್ಲೂ ಇವರು ತೊಡಗಿಸಿಕೊಂಡಿದ್ದಾರೆ. ಸ್ಥಳೀಯ ಉದ್ಯಮಿಗಳನ್ನು ಒಂದೇ ವೇದಿಕೆಯಲ್ಲಿ ತರುವ ‘ದಿ ಇಂಡಸ್‌ ಎಂಟರ್‌ಪ್ರೈನರ್‌’ (ಟಿಐಇ) ಹುಬ್ಬಳ್ಳಿ ಘಟಕದ ಉಪಾಧ್ಯಕ್ಷ ಹಾಗೂ ಉತ್ತರ ಕರ್ನಾಟಕ ಐಟಿ ಅಸೋಸಿಯೇಷನ್‌ನ ಅಧ್ಯಕ್ಷರೂ ಆಗಿದ್ದಾರೆ.

ಅಪಾರ್ಟ್‌ಮೆಂಟಿನಿಂದ ಅಮೆರಿಕಕ್ಕೆ!
ಹುಬ್ಬಳ್ಳಿಯ ವಿದ್ಯಾನಗರದ ಅಪಾರ್ಟ್‌ಮೆಂಟ್‌ ಒಂದರಲ್ಲಿ ಇಬ್ಬರೇ ಒಂದು ಕಂಪ್ಯೂಟರ್‌ ಸಹಾಯದಿಂದ ಆರಂಭಿಸಿದ ಟ್ರಿನಿಟಿ ಟೆಕ್ನಾಲಜಿಸ್‌ ಆ್ಯಂಡ್‌ ಸಾಫ್ಟ್‌ವೇರ್‌ ಸಲ್ಯೂಷನ್ಸ್‌ ಕಂಪೆನಿ, ಈಗ ಆರ್ಯಭಟ ಟೆಕ್‌ ಪಾರ್ಕ್‌ನಲ್ಲಿ ಒಂದು ಎಕರೆ ಜಾಗದಲ್ಲಿ ಸ್ವಂತ ಕಟ್ಟಡ ಹೊಂದಿದೆ. 12 ವರ್ಷದ ಅವಧಿಯಲ್ಲಿ ಹುಬ್ಬಳ್ಳಿಯಲ್ಲಷ್ಟೇ ಅಲ್ಲ, ಅಮೆರಿಕ, ಸೌದಿ ಅರೇಬಿಯಾ ಮತ್ತು ಈಜಿಪ್ಟ್‌ವರೆಗೂ ಚಟುವಟಿಕೆ ವಿಸ್ತರಿಸಿಕೊಂಡಿದೆ.

ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿ ಪೂರೈಸುವ ಮೂಲಕ ನಮ್ಮ ಸಂಸ್ಥೆ ಗ್ರಾಹಕರನ್ನು ಗಳಿಸಿದೆ. ಇಂಟೆಲ್‌, ಮೈಕ್ರೊಸಾಫ್ಟ್‌ ಮತ್ತು ವಿಸನ್‌ ಟೆಕ್‌ ಸಹಕಾರದಲ್ಲಿ ವಿಷಯಾಧರಿತ ಸಾಫ್ಟ್‌ವೇರ್‌ ವಿನ್ಯಾಸ ಮತ್ತು ತಂತ್ರಜ್ಞಾನ ಅಭಿವೃದ್ಧಿಪಡಿಸುವುದು ನಮ್ಮ ಸಂಸ್ಥೆಯ ಕಾರ್ಯ ಚಟುವಟಿಕೆ. ಆ ಮೂಲಕ ಶೇ 100ರಷ್ಟು ಬೆಳವಣಿಗೆ ಪಡೆದಿದ್ದೇವೆ’ ಎನ್ನುತ್ತಾರೆ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ರಜನೀಶ್‌ ಗಂಜ್ಯಾಳ.

‘ವ್ಯವಹಾರಕ್ಕೆ ಸಂಬಂಧಿಸಿದಂತೆ ಇನ್ನೊವೆಟಿವ್‌  ಸಲ್ಯೂಷನ್ಸ್‌ ನೀಡುವ ಮೂಲಕ ದೇಶದಾಚೆಗೂ ವಿಸ್ತರಿಸುವ ಗುರಿ ನಮ್ಮ ತಂಡದ್ದು. ಟ್ರಿನಿಟಿ ಅಂದರೆ ವೆಬ್‌ ಟೆಕ್ನಾಲಜಿ, ಮೊಬೈಲ್‌ ಅಪ್ಲಿಕೇಷನ್‌, ಸಿಸಿಟಿವಿ ಮತ್ತು ಸೆಕ್ಯೂರಿಟಿ ಸಲ್ಯೂಷನ್ಸ್‌’ ಎನ್ನುತ್ತಾರೆ ಅವರು. ‘ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌, ಇ– ಕಾಮರ್ಸ್‌ ಸಲ್ಯೂಷನ್ಸ್‌, ವೆಬ್‌ಸೈಟ್‌ ಡಿಸೈನ್‌, ಬಿಲ್ಲಿಂಗ್‌ ಸಲ್ಯೂಷನ್ಸ್‌, ವಾಹನ ನಿರ್ವಹಣೆ ಸಿಸ್ಟಂ, ಜಿಪಿಎಸ್‌ –ವೆಹಿಕಲ್‌ ಟ್ರ್ಯಾಕಿಂಗ್‌ ಸಿಸ್ಟಂ, ದಾಖಲೆ ನಿರ್ವಹಣೆ ಸಿಸ್ಟಂ, ಆಸ್ಪತ್ರೆ ನಿರ್ವಹಣೆ ಸಿಸ್ಟಂ, ಟೆಲಿಕಾಂ ಅಪ್ಲಿಕೇಷನ್ಸ್‌, ಸಿಸಿಟಿವಿ ಮತ್ತು ಭದ್ರತಾ ವ್ಯವಸ್ಥೆ ಒದಗಿಸುವ ಸಾಫ್ಟವೇರ್‌ಗಳನ್ನು ನಮ್ಮ ಸಂಸ್ಥೆ ಬಳಕೆದಾರರ ಬೇಡಿಕೆಗಳಿಗೆ ಅನುಗುಣವಾಗಿ ಅಭಿವೃದ್ಧಿ ಪಡಿಸುತ್ತದೆ’ ಎನ್ನುತ್ತಾರೆ ರಜನೀಶ.

‘ಈಗಾಗಲೇ ವಿಆರ್‌ಎಲ್‌ ಲಾಜಿಸ್ಟಿಕ್ಸ್‌ ಸಂಸ್ಥೆಗೆ ಗ್ರಾಹಕ ಸ್ನೇಹಿ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿ ನೀಡಿದ್ದೇವೆ. ರಾಜ್ಯ ಪೊಲೀಸ್‌ ಇಲಾಖೆಗೆ ಇ–ಚಲನ್‌ ಸಿಸ್ಟಂ ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸಿದ್ದೇವೆ. ಆಟೊಮೊಬೈಲ್‌ ಡೀಲರ್‌ಗಳಿಗೆ ಡೀಲರ್‌ಷಿಪ್‌ ನಿರ್ವಹಣೆ, ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ವೆಬ್‌ಸೈಟ್‌ಗಳ ವಿನ್ಯಾಸ ಮತ್ತು ಅಭಿವೃದ್ಧಿ, ಹಲವು ಸಂಸ್ಥೆಗಳಿಗೆ ವೇತನ ಪಾವತಿ ವ್ಯವಸ್ಥೆಗೆ ಸರಳವಾಗಿ ಬಳಸಬಹುದಾದ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದ್ದೇವೆ’. ಇದು ರಜನೀಶ ಅವರು ತಮ್ಮ ಕಂಪೆನಿ ಕುರಿತು ನೀಡುವ ಮಾಹಿತಿ.

ಇನ್ಫೊಸಿಸ್‌, ಐಐಐಟಿ ಬರುತ್ತಿವೆ
ಹುಬ್ಬಳ್ಳಿಯ ವಿಮಾನ ನಿಲ್ದಾಣದ ಬಳಿ ಖರೀದಿಸಿರುವ 50 ಎಕರೆ ಜಮೀನಿನಲ್ಲಿ  ಮೊದಲ ಹಂತದಲ್ಲಿ ಸದದಲ್ಲೇ ಇನ್ಫೊಸಿಸ್‌ ರೂ. 242 ಕೋಟಿ ಬಂಡವಾಳ ಹೂಡಲಿದೆ. ಆ ಮೂಲಕ 5 ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಜಗದೀಶ ಶೆಟ್ಟರ್‌ ಮುಖ್ಯಮಂತ್ರಿ ಆಗಿದ್ದಾಗ ಇನ್ಫೊಸಿಸ್‌ಗೆ ಭೂಮಿ ನೀಡಲಾಗಿತ್ತು.

ಆದರೆ ವಿಮಾನ ನಿಲ್ದಾಣ ಮೇಲ್ದರ್ಜೆ ಕಾರಣಕ್ಕೆ ಭೂ ಸ್ವಾಧೀನ ಮಾಡಿ ಖಾಸಗಿಯವರಿಗೆ ಮಾರಾಟ ಮಾಡಲಾಗಿದೆ ಎಂಬ ವಿವಾದ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಇನ್ಫೊಸಿಸ್‌ ಇತ್ತ ಬರುವ ಬಗೆಗೇ ಅನುಮಾನ ವ್ಯಕ್ತವಾಗಿತ್ತು. ಆದರೆ ಇದೀಗ ವಿವಾದ ಸುಖಾಂತ್ಯಗೊಂಡಿದೆ. ಹಾಗಾಗಿ, ನಿರೀಕ್ಷೆ ಮತ್ತೆ ಗರಿಗೆದರಿದೆ. ಈಗಾಗಲೇ ಭೂಮಿ ಸಮತಟ್ಟು ಕಾಮಗಾರಿ ಆರಂಭಗೊಂಡಿರುವುದರಿಂದ ಇನ್ಫೊಸಿಸ್‌ ಕಂಪೆನಿ ಹುಬ್ಬಳ್ಳಿಗೆ ಬರುವುದು ಖಚಿತ ಎನ್ನುವ ವಿಶ್ವಾಸ ಸ್ಥಳೀಯರದ್ದು.

ಈ ಮಧ್ಯೆ, ಧಾರವಾಡದ ತಡಸಿನಕೊಪ್ಪದಲ್ಲಿ  61 ಎಕರೆ ಜಾಗದಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಸ್ಥಾಪಿಸುವ ಪ್ರಸ್ತಾವಕ್ಕೆ ಈಗಾಗಲೇ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಕಡತ ಸರ್ಕಾರದ ಮುಂದಿದೆ. ರೂ. 128 ಕೋಟಿ ವೆಚ್ಚದಲ್ಲಿ ಐಐಐ.ಟಿ ಸ್ಥಾಪನೆಯಾಗಲಿದ್ದು, ಅದರಲ್ಲಿ ಶೇ 50ರಷ್ಟು ಪಾಲಿನ ವೆಚ್ಚವನ್ನು ಕೇಂದ್ರ ಸರ್ಕಾರ, ಶೇ 35ರಷ್ಟನ್ನು ರಾಜ್ಯ ಸರ್ಕಾರ, ಶೇ 15ರಷ್ಟು  ಕೈಗಾರಿ ಕೋದ್ಯಮಿಗಳು ಭರಿಸಲಿದ್ದಾರೆ.  ಆ ಮೂಲಕವೂ ಉತ್ತರ ಕರ್ನಾಟಕ ಭಾಗದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಕ್ಕೆ (ಐಸಿಟಿ) ಉತ್ತೇಜನ ನೀಡುವುದು ಸರ್ಕಾರದ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT