ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಕಾಲದ ‘ರಂಗನಾಯಕಿ’

Last Updated 21 ನವೆಂಬರ್ 2015, 19:59 IST
ಅಕ್ಷರ ಗಾತ್ರ

ನಟ ನಟಿಯರಲ್ಲಿ ಎರಡು ವಿಧ. ಬಾಹ್ಯದ ರೂಪದ ಜತೆಗೆ ಉತ್ತಮ ನಟನೆಯೂ ಸೇರಿ ತಮ್ಮ ಚೆಲುವನ್ನು ವೃದ್ಧಿಸಿಕೊಂಡವರು ಒಂದು ಬಗೆ. ನಟನೆಯ ಸಾಮರ್ಥ್ಯದಿಂದಲೇ ಮೊದಲ ವರ್ಗದವರಿಗೆ ಸರಿಸಾಟಿಯಾಗಿ ನಿಲ್ಲುವವರದು ಮತ್ತೊಂದು ವರ್ಗ. ಹೆಸರಾಂತ ನಟಿ ಬಿ. ಜಯಮ್ಮ ಮೊದಲ ಗುಂಪಿಗೆ ಸೇರಿದವರು. ಅಪ್ರತಿಮ ಚೆಲುವು, ಅಸಾಧಾರಣ ನಟನೆ– ಎರಡೂ ಅವರಲ್ಲಿ ಮೇಳೈಸಿದ್ದವು.

ಜಯಮ್ಮನವರು ಗುಬ್ಬಿ ವೀರಣ್ಣ ಕಂಪನಿಯ ರಂಗನಾಯಕಿಯರಲ್ಲಿ ಪ್ರಮುಖರಾದಂತೆ; ಮೂಕಿ–ಟಾಕಿ ಚಿತ್ರಗಳ ಸಂಕ್ರಮಣ ಕಾಲದ ಬಹುದೊಡ್ಡ ಹೀರೋಯಿನ್ ಆಗಿಯೂ ಹೆಸರು ಮಾಡಿದರು. ಕನ್ನಡದ ಜೊತೆಗೆ ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿ ತ್ರಿಭಾಷಾ ತಾರೆ ಎನಿಸಿಕೊಂಡರು.

ನಟನೆ ದೈವದತ್ತ ಪ್ರತಿಭೆ ಎನ್ನುತ್ತಾರೆ; ಪರಿಶ್ರಮದಿಂದ ಒಲಿಸಿಕೊಳ್ಳಬಹುದು ಎಂದೂ ಹೇಳುತ್ತಾರೆ. ಜಯಮ್ಮನವರ ವಿಷಯದಲ್ಲಿ ಎರಡೂ ನಿಜ. ಅವರು ಹುಟ್ಟು ನಟಿ. ಅಜ್ಜಿ ರುದ್ರಮ್ಮ, ದೊಡ್ಡಮ್ಮ ಬಿ. ಸುಂದರಮ್ಮ, ತಾಯಿ ಕಮಲಮ್ಮ ಎಲ್ಲರೂ ನಟಿಯರೇ. ಆ ಕಾಲದ ನಾಟಕ ಕಂಪನಿಗಳಲ್ಲಿ ನಟಿಸಿ ಅವರೆಲ್ಲ ಹೆಸರು ಮಾಡಿದ್ದರು. ಬೆಂಗಳೂರಿನ ಬಳೆಪೇಟೆಯ ಟಿ.ಎನ್. ಮಲ್ಲಪ್ಪ – ಕಮಲಮ್ಮ ದಂಪತಿಗೆ 1915ರ ನವೆಂಬರ್ 26ರಂದು ಜನಿಸಿದ ಜಯಮ್ಮ ತಂದೆಯನ್ನು ಬೇಗನೇ ಕಳೆದುಕೊಳ್ಳುತ್ತಾರೆ.

9ನೇ ವಯಸ್ಸಿಗೇ ಬಾಲಕಿ ಜಯಮ್ಮಳನ್ನು ಈ ಮಹಾತಾಯಿಯರು ‘ರಸಿಕ ಜನಾನಂದ ನಾಟಕ ಸಭಾ’ಕ್ಕೆ ಸೇರಿಸುತ್ತಾರೆ. ‘ಸೀತಾ ಕಲ್ಯಾಣ’ ನಾಟಕದಲ್ಲಿ ಐದಾರು ನಿಮಿಷದ ಮಾತಿಲ್ಲದ ಸೀತೆಯ ಪಾತ್ರ ಲಭಿಸುತ್ತದೆ. ನಾಟಕದ ಮೇಷ್ಟ್ರು ಶಾಮಣ್ಣ ಪಾತ್ರದ ಬಗ್ಗೆ ತಿಳಿಸಿ, ಬಣ್ಣ ಹಚ್ಚಿ ರಂಗಪ್ರವೇಶ ಮಾಡಿಸುತ್ತಾರೆ. ಬಾಲಕಿ ಸೈ ಎನಿಸಿಕೊಳ್ಳುತ್ತಾಳೆ. ಮುಂದೆ ‘ಬಾಲ ಕಬೀರ’, ‘ಬಾಲ ಅಂಗದ’ ಪಾತ್ರಗಳು ದೊರೆಯುತ್ತವೆ. ನಂತರ ‘ದಸ್ತಗೀರ ನಾಟಕ ಕಂಪೆನಿ’, ‘ಅಗಳಿ ತಿಮ್ಮಪ್ಪಯ್ಯ ನಾಟಕ ಮಂಡಳಿ’ಯಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಬಾಲಕಿ ಜಯಾ ನಟಿಸುತ್ತಾರೆ. 13ನೇ ವಯಸ್ಸಿನಲ್ಲಿ ದೊಡ್ಡಮ್ಮ ಸುಂದರಮ್ಮ ಅವರ ಜತೆಗೆ ಬಾಳ ಬಸವೇಗೌಡರ ನಾಟಕ ಕಂಪೆನಿ ಸೇರುತ್ತಾಳೆ. ಅಲ್ಲಿ ನಾನಾ ಬಗೆಯ ಪಾತ್ರಗಳು ಬಾಲಕಿಗೆ ಲಭಿಸುತ್ತವೆ.

ಅದೇ ವರ್ಷ, ಅಂದರೆ 1928 ಬಾಲಕಿ ಜಯ (ಜಯಮ್ಮ) ಜೀವನದ ಮಹತ್ತರ ತಿರುವು. ಅಂದರೆ ‘ಗುಬ್ಬಿ ಶ್ರೀ ಚನ್ನಬಸವೇಶ್ವರ ಸ್ವಾಮಿ ನಾಟಕ ಸಭಾ’ವನ್ನು ತಂಗಿ ರಾಜಮ್ಮ ಅವರೊಂದಿಗೆ ಜಯಮ್ಮ ಪ್ರವೇಶಿಸುತ್ತಾರೆ. ಅಲ್ಲಿಂದ ಹಿಂತಿರುಗಿ ನೋಡಿದ್ದೇ ಇಲ್ಲ. ಶಿಖರದ ಒಂದೊಂದೇ ಮೆಟ್ಟಿಲನ್ನು ಏರಿ ರಂಗನಾಯಕಿ ಪಟ್ಟ ಕಟ್ಟಿಕೊಂಡಿದ್ದು, ಮೆರೆದದ್ದು ಅದೇ ಕಂಪೆನಿಯಲ್ಲಿ. ಅದು ಅರ್ಧ ಶತಮಾನದ ರಂಗಚರಿತ್ರೆ.

ಗುಬ್ಬಿ ವೀರಣ್ಣನವರ ಮಹಾಮನೆಯಲ್ಲಿ ಆರಂಭದಲ್ಲಿ ದೊರೆತ ಚಿಕ್ಕಪುಟ್ಟ ಪಾತ್ರಗಳೇ ದೊಡ್ಡ ಪಾಠ ಕಲಿಸಿದವು. ಬಾಲಕಿಯ ಚುರುಕುತನ ಗಮನಿಸಿದ ವೀರಣ್ಣನವರೇ ಸ್ವತಃ ಆಸಕ್ತಿ ವಹಿಸಿ ಹೇಳಿಕೊಟ್ಟರು. ‘ರಾಜಭಕ್ತಿ’ಯ ವೈಶಾಲಿನಿ, ‘ಕಬೀರದಾಸ್’ ನಾಟಕದ ಬೇಬಿ ಪಾತ್ರಗಳಿಂದ ಅಭಿನಯದ ನಾನಾ ವರಸೆ ಕಲಿತರು. ‘ಸದಾರಮೆ’ಯ ಚಂಚಲಕುಮಾರಿ, ‘ಗುಲೇಬ ಕಾವಲಿ’ಯ ಚಿತ್ರತಾರೆ, ‘ಮನ್ಮಥ ವಿಜಯ’ದ ರತಿ ಪಾತ್ರ ದೊರೆಯುವ ಹೊತ್ತಿಗೆ ನಟನೆಯಲ್ಲಿ ಹೆಸರು ಮಾಡಿದರು. ಕಂಪೆನಿಗೆ ಅನಿವಾರ್ಯ ನಟಿಯಾದರು. ಮೈಸೂರು ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಅರಮನೆಗೆ ಆಹ್ವಾನಿಸಿ ‘ಪ್ರಮೀಳಾರ್ಜುನ ಯುದ್ಧ’ ನಾಟಕ ನೋಡಿ, ಕಲಾವಿದರೆಲ್ಲರ ಅಭಿನಯವನ್ನು ಅದರಲ್ಲೂ ಜಯಮ್ಮನವರ ಅಭಿನಯವನ್ನು ಮುಕ್ತಕಂಠದಿಂದ ಪ್ರಶಂಸಿಸುತ್ತಾರೆ.

ಇದರಿಂದ ಪ್ರೇರಿತರಾದ ವೀರಣ್ಣನವರು ಮುಂದೆ ‘ರಾಜಭಕ್ತಿ’ ನಾಟಕದ ಮೃಣಾಲಿನಿ ಎಂಬ ಸಂಕೀರ್ಣ ಪಾತ್ರವನ್ನು ಜಯಮ್ಮ ಅವರಿಗೆ ನೀಡುತ್ತಾರೆ. ಯಾವುದೇ ಪಾತ್ರಕ್ಕೂ ಜಯಮ್ಮ ಸಿದ್ಧ ಎನ್ನುವಂತಾಗಿದ್ದು ಈ ಹಂತದಲ್ಲೇ ಇರಬೇಕು. (ಜಯಮ್ಮ ಅವರ ಬಗೆಗಿನ ಕೆಲವು ಪ್ರಾಥಮಿಕ ಮಾಹಿತಿಗಳು ಹ.ವೆಂ. ಸೀತಾರಾಮಯ್ಯ ರಚಿಸಿದ ‘ಕನ್ನಡ ರಂಗಭೂಮಿ ಕಲಾವಿದರು’ ಹಾಗೂ ವಿಜಯಪುರ ಮಹಿಳಾ ವಿಶ್ವವಿದ್ಯಾಲಯ ಪ್ರಕಟಿಸಿದ ‘ರಂಗ ಕಲಾವಿದೆಯರು’ ಪುಸ್ತಕಗಳಲ್ಲಿ ಲಭ್ಯ). ಜಯಮ್ಮನವರಿಗೆ ಮೊದ ಮೊದಲು ದೊರೆತ ಮುಖ್ಯಪಾತ್ರಗಳೆಂದರೆ ಸದಾರಮೆ ಮತ್ತು ಸುಭದ್ರ. ಹಾಡುಗಾರಿಕೆ, ಚೆಲುವು, ಹಾವಭಾವದಲ್ಲಿ ಅದುವರೆಗೆ ಪಡೆದ ಪರಿಣತಿಯನ್ನೆಲ್ಲ ಅವರು ಆ ಪಾತ್ರಗಳಿಗೆ ಧಾರೆ ಎರೆದರು.

ಕನ್ನಡ ರಂಗಭೂಮಿಯ ‘ಸದಾರಮೆ’
‘‘ಹೊನ್ನಪ್ಪ ಭಾಗವತರ್ ಅರ್ಜುನನಾಗಿ, ಜಯಮ್ಮ ಸುಭದ್ರೆಯಾಗಿ ‘ಸುಭದ್ರಾ ಪರಿಣಯ’ ನಾಟಕದಲ್ಲಿ ನಟಿಸುವಾಗ ಇಬ್ಬರೂ ಸ್ಪರ್ಧೆಯ ಮೇಲೆ ಕಂದ – ಸೀಸ ಪದ್ಯಗಳನ್ನು ಹಾಡುತ್ತಿದ್ದರು. ನಟನೆ ಅದಕ್ಕೂ ಮೀರಿದ್ದು. ಆ ಸೊಗಸೇ ಬೇರೆ. ಅದು ನೀಡುತ್ತಿದ್ದ ರಸಾನುಭವ ಸ್ವರ್ಗಸಮಾನ’’ ಎಂದು ಹಿರಿಯ ಪೌರಾಣಿಕ ನಟ ಡಾ. ಲಕ್ಷ್ಮಣದಾಸ್ ನೆನಪಿಸಿಕೊಳ್ಳುತ್ತಾರೆ. ‘‘ಮಳವಳ್ಳಿ ಸುಂದರಮ್ಮ ಎಂಬ ಮಹಾನ್ ನಟಿಗಾಗಿ ಸುಭದ್ರೆ ಪಾತ್ರವನ್ನು ತೋರಣಗಲ್ ರಾಜಾರಾವ್ ಸೃಷ್ಟಿಸಿದ್ದರೇನೋ... ಸುಂದರಮ್ಮನ ನಂತರ ಸುಭದ್ರೆ ಎಂದರೆ ಅದು ಜಯಮ್ಮನೇ. ಇನ್ನು ‘ಸದಾರಮೆ’ ಪಾತ್ರದ ಬಗ್ಗೆ ಹೇಳುವುದೇ ಬೇಡ. ನಿಜವಾದ ಕನ್ನಡ ರಂಗಭೂಮಿಯ ಸದಾರಮೆ ಎಂದರೆ ಅದು ಜಯಮ್ಮ ಅವರೇ...’’ ಎಂದೂ ಅವರು ಹೇಳುತ್ತಾರೆ.

‘‘ಹದಿನಾರನೆಯ ವಯಸ್ಸಿನಲ್ಲಿ ‘ಸದಾರಮೆ’ ಪಾತ್ರವನ್ನು ಹೇಗೆ ಅಭಿನಯಿಸಿದೆನೋ, ನನ್ನ ನಲವತ್ತೈದನೇ ವಯಸ್ಸಿನಲ್ಲೂ ಹಾಗೇ ಅಭಿನಯಿಸಿದೆ. ಉಡುಗೆ ತೊಡುಗೆ ಹಾಗೂ ಆ ಶೃಂಗಾರದ ಭಾವ ನನ್ನನ್ನು ಹದಿನಾರು ವರ್ಷದ ಹುಡುಗಿಯಂತೆ ಮಾಡುತ್ತಿತ್ತು. ಯಜಮಾನರು (ವೀರಣ್ಣ) ಕಳ್ಳನಾಗಿ, ನಾನು ಸದಾರಮೆಯಾಗಿ ಅಭಿನಯಿಸಿದ ಸಮಯಗಳು ನನಗೆ ಅತಿ ಸಂತೋಷ ತಂದುಕೊಟ್ಟಿವೆ’’ ಎಂದು ಸಿಂಧುವಳ್ಳಿ ಅನಂತಮೂರ್ತಿ ಅವರಿಗೆ 1970 ರ ದಶಕದಲ್ಲಿ ನೀಡಿದ ಸಂದರ್ಶನದಲ್ಲಿ ಜಯಮ್ಮ ತಿಳಿಸಿದ್ದಾರೆ.

ಸದಾರಮೆ ಪಾತ್ರ ಇಷ್ಟು ಜನಪ್ರಿಯವಾದರೂ, ಜಯಮ್ಮನವರಿಗೆ ಹೆಚ್ಚು ಸಮಾಧಾನ ನೀಡಿದ ಪಾತ್ರವೆಂದರೆ ‘ದಶಾವತಾರ’ ನಾಟಕದ ಕಯಾದು ಪಾತ್ರ. ‘‘ಅದರಲ್ಲಿ ನರಸಿಂಹಾವತಾರದ ಒಂದು ದೃಶ್ಯದಲ್ಲಿ ಮಾತ್ರ ಜಯಮ್ಮ ಅಭಿನಯಿಸುತ್ತಿದ್ದರಾದರೂ– ಅವರ ಭಾವಪೂರ್ಣ ಗಂಭೀರ ಅಭಿನಯ ಸಮಗ್ರ ನಾಟಕಕ್ಕೆ ಕಳೆಕೊಡುವ ಪ್ರಧಾನ ಪಾತ್ರವಾಗಿ ಪರಿಣಮಿಸಿತು’’ ಎಂದು ಬಿ.ಪುಟ್ಟಸ್ವಾಮಯ್ಯ ತಮ್ಮ ’‘ಕನ್ನಡ ರಂಗಭೂಮಿಯ ಕಾಲು ಶತಮಾನ’’ ಪುಸ್ತಕದಲ್ಲಿ ಬರೆಯುತ್ತಾರೆ.

ಚಿತ್ರರಂಗದ ಕರೆ
ಗುಬ್ಬಿ ಕಂಪೆನಿಯ ‘ಕುರುಕ್ಷೇತ್ರ’ ತೆಲುಗು ಭಾಷೆಯಲ್ಲಿ ಪ್ರದರ್ಶನಗೊಂಡಾಗ ಅದರಲ್ಲೂ ಜಯಮ್ಮನದು ದ್ರೌಪದಿಯ ಪಾತ್ರ. ಜಯಮ್ಮನವರ ಪಾತ್ರಕ್ಕೆ ಮರುಳಾದ ಮದ್ರಾಸಿನ ವಾಹಿನಿ – ವಿಜಯ ಸಂಸ್ಥೆಯವರು ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸುವಂತೆ ಆಹ್ವಾನಿಸುತ್ತಾರೆ. ಅಷ್ಟೊತ್ತಿಗಾಗಲೇ ಕನ್ನಡದ ಮೂಕಿ – ಟಾಕಿ ಚಿತ್ರಗಳಲ್ಲಿ ಜಯಮ್ಮ ಹೆಸರು ಮಾಡಿದ್ದರು. ಗುಬ್ಬಿ ವೀರಣ್ಣನವರು ನಿರ್ಮಿಸಿದ ‘ಹರಿಮಾಯ’ ಮತ್ತು ‘ಹಿಸ್ ಲವ್ ಅಫೇರ್’ ಮೂಕಿ ಚಿತ್ರಗಳ ಮೂಲಕ ಜಯಮ್ಮ ಸಿನಿಮಾ ನಟಿಯಾಗಿ ಗುರ್ತಿಸಿಕೊಂಡಿದ್ದರು.

ಗುಬ್ಬಿ ಕರ್ನಾಟಕ ಪ್ರೊಡಕ್ಷನ್ಸ್ ನಿರ್ಮಿಸಿದ ‘ಹೇಮರೆಡ್ಡಿ ಮಲ್ಲಮ್ಮ’ ಜಯಮ್ಮರನ್ನು ಟಾಕಿ (ವಾಕ್ಚಿತ್ರ) ಸಿನಿಮಾ ಆರಂಭ ಕಾಲದ ದೊಡ್ಡ ನಾಯಕಿಯನ್ನಾಗಿಸಿತು. ‘ಗುಣಸಾಗರಿ’, ‘ಪುಲಕೇಶಿ’, ‘ರಾಜಾ ವಿಕ್ರಮ’, ‘ಪ್ರೇಮಮಯಿ’, ‘ಮಾವನ ಮಗಳು’, ‘ಅಣ್ಣತಂಗಿ’, ‘ಮುಕ್ತಿ’, ‘ಸಾಕ್ಷಾತ್ಕಾರ’ ಸೇರಿದಂತೆ 40ಕ್ಕೂ ಅಧಿಕ ಕನ್ನಡ ಚಿತ್ರಗಳ ಬಹುಮುಖ್ಯ ಪಾತ್ರಗಳಲ್ಲಿ ನಟಿಸಿದ ಕೀರ್ತಿ ಅವರದು.

ಮಧ್ಯ ವಯಸ್ಸಿನಲ್ಲಿ ನೃತ್ಯ ಕಲಿಕೆ
ರಂಗನಾಯಕಿಯಾಗಿ, ಚಿತ್ರರಂಗದ ಹಿರೋಯಿನ್ ಆಗಿ ಸದಾ ಜಯದ ಹಾದಿಯಲ್ಲೇ ನಡೆದರೇನೋ ನಿಜ. ಈ ಗೆಲುವಿನ ಹಾದಿಗೆ ಅವರ ಪರಿಶ್ರಮವೇ ಕಾರಣ. ನಟನೆಯ ಅರ್ಧ ಹಾದಿ ಸವೆಸಿದಾಗ ಮಳವಳ್ಳಿ ಸುಬ್ಬಣ್ಣ, ಮುನಿಯಪ್ಪ, ಸೇಲಂನ ದೊರೆಸ್ವಾಮಿ ಅಯ್ಯಂಗಾರ್ ಅವರಿಂದ ಶಾಸ್ತ್ರಿಯ ಸಂಗೀತ ಕಲಿತು, ತಮ್ಮ ರಂಗಸಂಗೀತವನ್ನು ಹೊಳಪುಗೊಳ್ಳಿಸಿಕೊಂಡ ಜಯಮ್ಮ ಅವರದು ಅಸಾಧಾರಣ ಕಲಾಪ್ರೇಮ, ಬದ್ಧತೆ. ಅವರು ಸೋಹನ್‌ಲಾಲ್ ಬಳಿ ಕಥಕ್ ಕಲಿತರು. ಕಲಿಕೆ ಅವರಿಗೆ ನಿರಂತರ ಪ್ರಕ್ರಿಯೆಯಾಗಿತ್ತು. ನಿಜದ ನಟಿ ಇರಬೇಕಾದುದೇ ಹೀಗಲ್ಲವೇ? ಶೃಂಗಾರ, ಶೋಕರಸದಲ್ಲಿ ಕೀರ್ತಿಪತಾಕೆ ಹಾರಿಸಿದ್ದ ಅವರು, ‘ಹಾಸ್ಯ ಪಾತ್ರ ನನಗೆ ಒಗ್ಗಲಿಲ್ಲ’ ಎಂದು ಒಪ್ಪಿಕೊಳ್ಳುವ ವಿನಮ್ರತೆಯನ್ನು ಪ್ರದರ್ಶಿಸಿದ್ದಾರೆ.

ಬದುಕಿನ ಜಂಜಾಟದಲ್ಲೂ ಜಯಮ್ಮ ಅಂತಹದೇ ಸವಾಲುಗಳನ್ನು ಸ್ವೀಕರಿಸುತ್ತ ಬೆಳೆದವರು. ವೀರಣ್ಣನವರ ಆಪ್ತ ವಲಯದಲ್ಲಿ ಅತೃಪ್ತಿ ಎದ್ದಾಗ, ಕೊಪ್ಪಳದಲ್ಲಿ ಬೀಡುಬಿಟ್ಟಿದ್ದ ನಾಟಕ ಕಂಪೆನಿಯ ಮತ್ತೊಂದು ಶಾಖೆಗೆ ಅವರನ್ನು ವರ್ಗಾಯಿಸಲಾಯಿತು! ಆ ಶಾಖೆಯಲ್ಲಿ ನಟಿಯರೇ ಇರುವುದಿಲ್ಲ. ಪುರುಷ ಸಾಮ್ರಾಜ್ಯದ ಮಧ್ಯೆ ಅವರು ಏಗುತ್ತಾರೆ. ಮಕ್ಕಳಿಗಾಗಿ ಗುಬ್ಬಿ ವೀರಣ್ಣ ತೆರೆದಿದ್ದ ‘ಬಾಲ ಕಲಾವಿವರ್ಧಿನಿ’ (ಮಕ್ಕಳ ರಂಗಭೂಮಿಯ ಮೊದಲ ರಂಗತಂಡ ಇದು) ಶಾಖೆಗೆ ಹೋಗಿ, ಅದನ್ನೂ ಜಯದ ಹಾದಿಗೆ ಎಳೆದು ನಿಲ್ಲಿಸಿದವರು ಈ ಅಮ್ಮ. ನಾಟಕ ಕಂಪನಿ ಮುಖ್ಯ ಶಾಖೆಯ ಆಂತರಿಕ ನಿರ್ವಹಣೆಯೂ ಕೆಲವೊಮ್ಮೆ ಅವರ ಪಾಲಿಗಿರುತ್ತದೆ.

‘‘ರಂಗಸ್ಥಳದ ಮೇಲೆ ಅತೀವ ಆಸಕ್ತಿ ಹೇಗಿರಬೇಕು ಎಂಬುದಕ್ಕೆ ಜಯಮ್ಮ ನಮಗೆ ಮಾರ್ಗದರ್ಶಕಿಯಾಗಿದ್ದರು’’ ಎಂದು ಹಿರಿಯ ನಟಿ ರಂಗನಾಯಕಮ್ಮ ನೆನಪಿಸಿಕೊಳ್ಳುತ್ತಾರೆ. ‘‘ಇತರರ ನಟನೆ ಗಮನಿಸಬೇಕು. ಎಲ್ಲದನ್ನು ನೋಡ್ಕೋಬೇಕು. ಮುಂದಿನ ದಿನಗಳಲ್ಲಿ ನೀವು ಇದನ್ನೆಲ್ಲ ಮಾಡಬೇಕಾಗುತ್ತೆ ಅನ್ನೋರು. ಸ್ವರ್ಣಮ್ಮ, ಮಾಲತಮ್ಮ ಸ್ವಲ್ಪ ಬಿಗಿ. ಆದರೆ ಜಯಮ್ಮನವರು ನಮ್ಮನ್ನ ಚೆನ್ನಾಗಿ ನೋಡಿಕೊಳ್ಳೋರು...’’ ಎನ್ನುವ ರಂಗನಾಯಕಮ್ಮನವರ ಮಾತುಗಳಲ್ಲಿ ಜಯಮ್ಮನವರ ವ್ಯಕ್ತಿತ್ವ ಬೆಳಗುತ್ತದೆ.

ನಟನೆಯಿಂದ ವಿಶ್ರಾಂತಿ ಪಡೆದ ಮೇಲೆ ‘ಅಶಕ್ತ ಕಲಾವಿದರ ಸಂಘ’ದ ಅಧ್ಯಕ್ಷರಾಗಿ ಅದರ ಏಳಿಗೆಗೆ ಜಯಮ್ಮ ಶ್ರಮಿಸುತ್ತಾರೆ. ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಾರೆ. ರಂಗದ ಮೇಲೆ ಮಾತ್ರವಲ್ಲ, ಸಂಘಟನೆಯ ಈ ಎಲ್ಲ ಹೊಣೆಗಾರಿಕೆ ನಿಜ ಜೀವನದಲ್ಲೂ ಅವರನ್ನು ನಾಯಕಿಯಾಗಿಸುತ್ತದೆ. ‘ನಮ್ಮ ಸಂಘವು ಅವಿಚ್ಛಿನ್ನವಾಗಿ ನಡೆದುಕೊಂಡು ಬರಲು ಸುಂದರಮ್ಮ, ಜಯಮ್ಮನವರುಗಳು ದುಡಿದುದೇ ಅಲ್ಲದೆ ಅವರ ಪುತ್ರಿಯರೂ ತಮ್ಮ ಕಿಶೋರಾವಸ್ಥೆಯಿಂದಲೂ ಸಂಸ್ಥೆಯ ಆಧಾರ ಸ್ತಂಭಗಳಂತೆ ನಿಂತುಕೊಂಡು ಬಂದಿರುವುದು ಮುಖ್ಯ ಕಾರಣ’ ಎಂದು ‘ಕಲೆಯೇ ಕಾಯಕ’ ಎಂಬ ತಮ್ಮ ಆತ್ಮಕತೆಯಲ್ಲಿ ವೀರಣ್ಣನವರು ಗೌರವದಿಂದ ಸ್ಮರಿಸಿಕೊಂಡಿದ್ದಾರೆ.

ಗುಬ್ಬಿ ವೀರಣ್ಣ ಒಬ್ಬ ನಟನಿಗಿಂತ ದೊಡ್ಡ ಸಂಘಟಕ. ವೃತ್ತಿ ರಂಗಭೂಮಿಯ ಹಿರಿಯಣ್ಣ. ಅವರದೊಂದು ವಸುದೈವಕ ಕುಟುಂಬ. ವೀರಣ್ಣನೆಂಬ ವೃಕ್ಷ ಆಲದಮರ ಅಲ್ಲ. (ಆಲದಮರದ ಕೆಳಗೆ ಏನೂ ಬೆಳೆಯುವುದಿಲ್ಲ). ವೀರಣ್ಣ ಎಲ್ಲರನ್ನು ದುಡಿಯ ಹಚ್ಚಿದರು. ಎಲ್ಲರ ಪ್ರತಿಭೆಗೆ ಮನ್ನಣೆ ನೀಡಿದರು. ಒಟ್ಟು ಬೆಳವಣಿಗೆಯಲ್ಲಿ ಕಂಪೆನಿಯ ಏಳಿಗೆ ಕಂಡುಕೊಂಡರು. ಹೀರೊ ತಾವು ಮಾತ್ರ ವಿಜೃಂಭಿಸುತ್ತಾರೆ. ನಾಯಕ ಇತರರನ್ನು ಬೆಳೆಸುತ್ತಾರೆ. ವೀರಣ್ಣ ಹೀರೊ ಅಲ್ಲ, ನಾಯಕ.

ಗುಬ್ಬಿ ವೀರಣ್ಣ ಕಂಪೆನಿಯ ಹತ್ತಾರು ನಟ ನಟಿಯರು ನಾಡಿನಲ್ಲಿ ದೊಡ್ಡ ಹೆಸರು ಮಾಡಿದರು. ತಮ್ಮ ಕುಟುಂಬದಲ್ಲಿ ಮೊದಲ ಪತ್ನಿ ಸುಂದರಮ್ಮನಿಂದ ಹಿಡಿದು ಬಿ. ಜಯಶ್ರೀವರೆಗೆ ಎಲ್ಲರೂ ಮಹಾನ್ ಪ್ರತಿಭಾವಂತರೇ. ಜಯಮ್ಮನವರೂ ಹಾಗೆಯೇ. ಹೀರೊಯಿನ್ ಮಾತ್ರವಲ್ಲ; ಅವರು ನಾಯಕಿ, ರಂಗ ನಾಯಕಿ. ಹತ್ತಾರು ಕಲಾವಿದರಿಗೆ ಮಾರ್ಗದರ್ಶಕಿಯಾದರು. ಅವರ ಅಜ್ಜಿ ರುದ್ರಮ್ಮನಿಂದ ಹಿಡಿದು ಮಕ್ಕಳಾದ ಜಿ.ವಿ. ಗುರುಸ್ವಾಮಿ, ಜಿ.ವಿ. ಲತಾ, ಜಿ.ವಿ. ಲಕ್ಷ್ಮಿಪ್ರಭಾ, ಮೊಮ್ಮಗಳು ಸಂಗೀತಾವರೆಗೆ ಎಲ್ಲರೂ ಕಲಾಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದವರೇ.

ಸುಭದ್ರೆ, ಸದಾರಮೆ ಮುಂತಾದ ಪಾತ್ರಗಳಲ್ಲಿ ಮಳವಳ್ಳಿ ಸುಂದರಮ್ಮ ಹಾಡುಗಾರಿಕೆಗೆ ಆದ್ಯತೆ ನೀಡುತ್ತಾರೆ. ಅಷ್ಟೇ ಸಾಮರ್ಥ್ಯದ ಬಿ. ಜಯಮ್ಮನವರು ಅವರಿಗಿಂತ ಹೇಗೆ ಭಿನ್ನ? ‘ರಾಜಭಕ್ತಿ’ ನಾಟಕದ ಮೃಣಾಲಿನಿಯ ಸಂಕೀರ್ಣ ಪಾತ್ರವನ್ನು ಜಯಮ್ಮ ನಿಭಾಯಿಸಿದ್ದು ಹೇಗೆ? ಒಬ್ಬ ನಟಿ ವೇಷಭೂಷಣ ಧರಿಸಿದ ಕೂಡಲೆ ಆ ಪಾತ್ರದ ವಯಸ್ಸಿಗೆ ಜಾರುವ ಪ್ರತಿಭೆಯ ವಿಸ್ಮಯ ಎಂತಹದು– ಇವೇ ಮುಂತಾದ ವಿಷಯಗಳ ಕುರಿತು ಒಬ್ಬೊಬ್ಬ ನಟ ನಟಿಯರ ಬಗ್ಗೆ ಚರ್ಚಿಸುವ ಗ್ರಂಥಗಳು ರಂಗಭೂಮಿ ಪರಂಪರೆ ಕಟ್ಟುವ ನಿಟ್ಟಿನಲ್ಲಿ ರಚನೆಯಾಗಲೇ ಇಲ್ಲ. ಜಯಮ್ಮನವರ ಅಪಾರ ಸಾಧನೆ–ಸಾಧ್ಯತೆಯನ್ನು ಒರೆಗೆ ಹಚ್ಚುವ ನಿಜದ ಕೃತಿಯೊಂದು ಇನ್ನೂ ಪ್ರಕಟಗೊಳ್ಳಬೇಕಿದೆ. ಒಂದಂತೂ ನಿಜ, ‘ರಂಗನಾಯಕಿ’ ಎಂದರೆ ಹೀಗಿರಬೇಕು ಎನ್ನುವದಕ್ಕೆ ಅನ್ವರ್ಥವಾಗಿದ್ದರು ಜಯಮ್ಮ.
*
ವೀರಣ್ಣಾಸ್ ಲವ್ ಅಫೇರ್
1931. ‘ಹಿಸ್ ಲವ್ ಅಫೇರ್’ ಮೂಕಿ ಸಿನಿಮಾದ ಚಿತ್ರೀಕರಣ ನಡೆದಿತ್ತು. ಬೆಲ್ಜಿಯಂ ದೇಶದ ಆಲ್‌ಗುಡ್ ಚಿತ್ರದ ನಿರ್ದೇಶಕರು. ಗುಬ್ಬಿ ವೀರಣ್ಣ ನಾಟಕ ಕಂಪೆನಿಯಲ್ಲಿ ನಾಯಕಿ ಪಾತ್ರದಲ್ಲಿ ಅಭಿನಯಿಸಿ ತಕ್ಕಮಟ್ಟಿನ ಹೆಸರು ಮಾಡಿದ್ದ 16 ವರ್ಷದ ಜಯಮ್ಮ ಚಿತ್ರದ ಹೀರೊಯಿನ್. ಜಯಮ್ಮಳ ಪ್ರತಿಭೆ, ಪರಿಶ್ರಮಕ್ಕೆ ಮನಸೋತ ವೀರಣ್ಣ ಆಕೆಯನ್ನು ವಿವಾಹವಾಗಲು ನಿರ್ಧರಿಸಿದರು. ಜಯಮ್ಮಗೆ ಆಗ 16. ವೀರಣ್ಣಗೆ 40 ವರ್ಷ ವಯಸ್ಸು. ‘ಹಿಸ್ ಲವ್ ಅಫೇರ್’ ವೀರಣ್ಣನವರ ಲವ್ ಅಫೇರ್ ಆಯಿತು.
*
ಇಟ್ಟುಕೊಂಡವರು... ಕಟ್ಟಿಕೊಂಡವರು...
ಗುಬ್ಬಿ ವೀರಣ್ಣನವರ ಕುಟುಂಬದ ಸದಸ್ಯರಲ್ಲಿ ಎಲ್ಲರಿಗೂ ಪ್ರತಿಭೆಗನುಗುಣವಾಗಿ ಬೆಳೆಯಲು ಅವಕಾಶ ಇತ್ತು. ಅದೊಂದು ಕೂಡು ಕುಟುಂಬ. ಅವರವರ ಸಾಮರ್ಥ್ಯಕ್ಕನುಗುಣವಾಗಿ ಬಹುತೇಕ ಎಲ್ಲರೂ ಬಹಳ ಎತ್ತರಕ್ಕೆ ಬೆಳೆದರು. ರಂಗದ ಮೇಲಿನ ಸುಂದರಿಯನ್ನು ಮೋಹಿಸಿ ಮದುವೆಯಾಗಿ ಮುಂದಿನ ದಿನಗಳಲ್ಲಿ ಮತ್ತೊಬ್ಬರು ಅವಳ ಕೈ ಮುಟ್ಟದಂತೆ ಇಟ್ಟುಕೊಳ್ಳುವ ಊಳಿಗಮಾನ್ಯ ವ್ಯವಸ್ಥೆ ಬೇರೆ. ಪ್ರತಿಭಾವಂತರು ಹೀಗೆ ಒಬ್ಬರನ್ನೊಬ್ಬರು ಕಟ್ಟಿಕೊಳ್ಳುವುದು ಬೇರೆ (ಅಪ್ಪಿಕೊಂಡರೆ ಸಾಲದು, ಒಪ್ಪಿಕೊಳ್ಳಬೇಕು!). ವೀರಣ್ಣ ಮೂರು ಮದುವೆಯಾದರು ಎಂದು ಆಡಿಕೊಳ್ಳುವವರು ಈ ಅಂಶವನ್ನೂ ಗಮನಿಸಬಹುದು. ಆದರೆ ಈ ನೀತಿ ಗಂಡಿಗೆ ಮಾತ್ರವೆ? ಎಂಬುದು ಸಮಾನತೆಯನ್ನು ನೆಚ್ಚಿದ ಗಂಡು–ಹೆಣ್ಣಿನ ಮೂಲಭೂತ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT