ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎ.ವಿ ರಸ್ತೆಯೋ, ಟಿ.ಎಸ್‌. ರಸ್ತೆಯೋ?

ಮರುನಾಮಕರಣದ ಬಿಬಿಎಂಪಿ ನಿರ್ಣಯ ಹುಟ್ಟುಹಾಕಿದ ಗೊಂದಲ
Last Updated 3 ಜೂನ್ 2015, 20:17 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಚಾಮರಾಜಪೇಟೆ 1ನೇ ಮುಖ್ಯರಸ್ತೆಗೆ ಮರುನಾಮಕರಣ ಮಾಡುವ ಪ್ರಸ್ತಾವ ಈಗ ವಿವಾದಕ್ಕೆ ಕಾರಣವಾಗಿದೆ. ಪ್ರಸ್ತಾವದ ವಿರುದ್ಧ ಬಿಬಿಎಂಪಿಗೆ ಆಕ್ಷೇಪಣೆಗಳು ಸಹ ಸಲ್ಲಿಕೆಯಾಗಿವೆ.

ಸದ್ಯ ಈ ಮುಖ್ಯರಸ್ತೆಗೆ ಆಲೂರು ವೆಂಕಟರಾವ್ (ಎ.ವಿ) ರಸ್ತೆ ಎಂದು ಕರೆಯಲಾಗುತ್ತಿದೆ. ಆದರೆ, ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಅದಕ್ಕೆ ‘ಟಿಪ್ಪು ಸುಲ್ತಾನ್ (ಟಿ.ಎಸ್‌) ಅರಮನೆ ರಸ್ತೆ’ ಎಂದು ಮರುನಾಮಕರಣ ಮಾಡಲು ನಿರ್ಣಯ ಕೈಗೊಳ್ಳಲಾಗಿತ್ತು.

ಮರುನಾಮಕರಣದ ಪ್ರಸ್ತಾವವು ತಿಂಗಳುಗಳ ಹಿಂದೆಯೇ ಕೌನ್ಸಿಲ್‌ ಸಭೆಯಲ್ಲಿ ಅನುಮೋದನೆ ಆಗಿದ್ದರೂ ಸಾರ್ವಜನಿಕರಿಗೆ ಅದರ ಮಾಹಿತಿ ಇರಲಿಲ್ಲ. ಬಿಬಿಎಂಪಿ ಇತ್ತೀಚೆಗೆ ಪತ್ರಿಕೆಗಳಲ್ಲಿ ಈ ಸಂಬಂಧ ಜಾಹೀರಾತು ನೀಡಿ, ಸಾರ್ವಜನಿಕರು ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಕೋರಿತ್ತು. ಜಾಹೀರಾತು ಪ್ರಕಟವಾದ ಬಳಿಕ ಮರುನಾಮಕರಣದ ಪರ–ವಿರೋಧದ ಚರ್ಚೆ ಕಾವು ಪಡೆದಿದೆ.

ಕಲಾಸಿಪಾಳ್ಯ ಬಸ್ ನಿಲ್ದಾಣದಿಂದ ಮೈಸೂರು ರಸ್ತೆವರೆಗಿನ ಚಾಮರಾಜಪೇಟೆ 1ನೇ ಮುಖ್ಯರಸ್ತೆಯೇ ಈಗ ವಿವಾದದ ಕೇಂದ್ರವಾಗಿದೆ.
ಹಳೆಯ ದಾಖಲೆಗಳಲ್ಲಿ ಇದಕ್ಕೆ ಆಲ್ಬರ್ಟ್ ವಿಕ್ಟರ್ ರಸ್ತೆ ಎಂಬ ಹೆಸರಿದೆ. ಸದ್ಯ ಆಲೂರು ವೆಂಕಟರಾವ್ ರಸ್ತೆ ಎಂಬ ನಾಮಫಲಕವೇ ಎಲ್ಲೆಡೆ ಗೋಚರಿಸುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಆಲ್ಬರ್ಟ್‌ ವಿಕ್ಟರ್‌ ಎಂದಿದ್ದ ರಸ್ತೆಯ ಹೆಸರನ್ನು ಬಳಿಕ ಆಲೂರು ವೆಂಕಟರಾವ್‌ ರಸ್ತೆ ಎಂದು ಮರುನಾಮಕರಣ ಮಾಡಲಾಗಿತ್ತು.

ಟಿಪ್ಪು ಸುಲ್ತಾನ್ ಅರಮನೆ ರಸ್ತೆ ಎಂಬ ನಾಮಕರಣಕ್ಕೆ ಮುಸ್ಲಿಂ ಸಂಘಟನೆಗಳು ಮನವಿ ಸಲ್ಲಿಸಿದ್ದವು. ಅದಕ್ಕೆ ಸಚಿವರು ಸೇರಿದಂತೆ ಹಲವು ಪ್ರಮುಖರು ಶಿಫಾರಸು ಮಾಡಿದ್ದರು ಎಂದು ತಿಳಿದುಬಂದಿದೆ. ಈ ಮಧ್ಯೆ ತನ್ನ ಆಡಳಿತದ ಅವಧಿಯಲ್ಲೇ ಆಗಿರುವ ನಿರ್ಣಯಕ್ಕೆ ಸ್ವತಃ ಬಿಜೆಪಿಯಿಂದ ವಿರೋಧ ವ್ಯಕ್ತವಾಗಿದೆ.

ಮರುನಾಮಕರಣ ಪ್ರಸ್ತಾವ ಕೈಬಿಡುವಂತೆ ಮಾಜಿ ಸಚಿವ ಎಸ್.ಸುರೇಶ್‌ಕುಮಾರ್ ನೇತೃತ್ವದ ಬಿಜೆಪಿ ನಿಯೋಗ ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಜಯ ಕರ್ನಾಟಕ ಸಂಘಟನೆ ಕೂಡ ರಸ್ತೆಗೆ ಆಲೂರು ವೆಂಕಟರಾವ್‌ ಅವರ ಹೆಸರೇ ಇರಬೇಕು ಎನ್ನುವ ವಾದ ಮಂಡಿಸಿದೆ.

‘ಯಾರು ಏನೇ ಶಿಫಾರಸು ಪತ್ರ ಕೊಟ್ಟರೂ ಸ್ಥಳೀಯರ ಅಭಿಪ್ರಾಯವೇ ಮುಖ್ಯವಾಗುತ್ತದೆ. ಟಿಪ್ಪು ಸುಲ್ತಾನ್‌ ಮತ್ತು ಆಲೂರು ವೆಂಕಟರಾವ್‌ ಇಬ್ಬರೂ ದೊಡ್ಡವರೇ. ಕಂದಾಯ ಅಧಿಕಾರಿಗಳು ವಾರ್ಡ್‌ನಲ್ಲಿ ಸಭೆ ನಡೆಸಿ ಜನಾಭಿಪ್ರಾಯ ಸಂಗ್ರಹಿಸಿ ನಿರ್ಣಯಕ್ಕೆ ಬರುವುದು ಒಳ್ಳೆಯದು’ ಎಂದು ಚಾಮರಾಜಪೇಟೆ ವಾರ್ಡ್‌ ಪ್ರತಿನಿಧಿಸುತ್ತಿದ್ದ ಬಿಜೆಪಿ ಸದಸ್ಯ ಬಿ.ವಿ. ಗಣೇಶ್‌ ಹೇಳುತ್ತಾರೆ.

ಮುಖ್ಯಾಂಶಗಳು
* ವಿವಾದಿತ ಚಾಮರಾಜಪೇಟೆ 1ನೇ ಮುಖ್ಯರಸ್ತೆ ಹೆಸರು ಬದಲಾವಣೆ
* ಆಕ್ಷೇಪಣೆಗಾಗಿ ಬಿಬಿಎಂಪಿ ಜಾಹೀರಾತು ಪ್ರಕಟವಾದ ನಂತರ ಏರಿದ ವಿವಾದ
* ಮರುನಾಮಕರಣಕ್ಕೆ ಬಿಜೆಪಿಯಿಂದ ವಿರೋಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT