ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಷ್ಟು ದಿನ ಉಳಿಯಲಿದೆ ಈ ಸ್ಕೈವಾಕ್‌?

ಇನ್ನೂ ನಿರ್ಮಾಣ ಶುರುವಾಗಿಲ್ಲ; ಆಗಲೇ ನೆಲಸಮಕ್ಕೆ ಚಿಂತನೆ!
Last Updated 23 ಮೇ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಚೇರಿ ಮುಂಭಾಗದಲ್ಲಿ ಸ್ಕೈವಾಕ್‌ ನಿರ್ಮಾಣಕ್ಕೆ ಸೋಮವಾರ ಚಾಲನೆ ನೀಡಿದ ಬೆನ್ನಹಿಂದೆಯೇ ಅದು ಎಷ್ಟು ದಿನ ಉಳಿಯಲಿದೆ ಎಂಬ ಪ್ರಶ್ನೆಯೂ ಎದ್ದಿದೆ.

ಮಿನರ್ವ ವೃತ್ತದಿಂದ ಹಡ್ಸನ್‌ ವೃತ್ತದವರೆಗೆ ಇದೇ ಮಾರ್ಗವಾಗಿ ಮೇಲ್ಸೇತುವೆ ನಿರ್ಮಾಣ ಆಗಲಿರುವುದೇ ಅದಕ್ಕೆ ಕಾರಣ. ಮೇಲ್ಸೇತುವೆ ನಿರ್ಮಾಣಕ್ಕೆ ಸ್ಕೈವಾಕ್‌ ಅಡೆತಡೆ ಉಂಟುಮಾಡುವ ಸಾಧ್ಯತೆ ಇದ್ದು, ಹಾಗೇನಾದರೂ ತೊಂದರೆಯಾದರೆ ಅದನ್ನು ತೆರವುಗೊಳಿಸಬೇಕಾಗುತ್ತದೆ ಎಂದು ಬಿಬಿಎಂಪಿ ಎಂಜಿನಿಯರ್‌ರೊಬ್ಬರು ತಿಳಿಸಿದರು.

ಪಾಲಿಕೆಯ ಕೇಂದ್ರ ಕಚೇರಿ ಮುಂಭಾಗದ ಮಿಷನ್ ರಸ್ತೆ ಹಾಗೂ ಒಟಿಸಿ ರಸ್ತೆ ಮಧ್ಯೆ (ಎಲ್‌ಐಸಿ ಕಟ್ಟಡದ ಕಡೆಯಿಂದ ಬಾದಾಮಿ ಹೌಸ್‌ ಕಡೆಗೆ) ಸ್ಕೈವಾಕ್‌ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಅವರು ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು.

ವಿನ್ಯಾಸ, ನಿರ್ಮಾಣ, ಹೂಡಿಕೆ, ನಿರ್ವಹಣೆ, ಹಸ್ತಾಂತರ (ಡಿಬಿಎಫ್‌ಒಟಿ) ಆಧಾರದ ಮೇಲೆ ಪಯೋನಿಯರ್‌ ಪಬ್ಲಿಸಿಟಿ ಕಾರ್ಪೋರೇಷನ್‌ ಲಿಮಿಟೆಡ್‌ ಸಂಸ್ಥೆಗೆ ಸ್ಕೈವಾಕ್‌ ನಿರ್ಮಾಣದ ಗುತ್ತಿಗೆ ವಹಿಸಿಕೊಡಲಾಗಿದೆ.

‘ಉದ್ದೇಶಿತ ಮೇಲ್ಸೇತುವೆ ಹಾಗೂ ಸ್ಕೈವಾಕ್‌ ಮಧ್ಯೆ ಕನಿಷ್ಠ ಮೂರು ಮೀಟರ್‌ ಅಂತರ ಉಳಿಯದಿದ್ದರೆ ಸ್ಕೈವಾಕ್‌ ತೆರವುಗೊಳಿಸುವುದು ಅನಿವಾರ್ಯ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

‘ಇಸ್ಕಾನ್‌ ಮುಂದೆಯೂ ಇಂತಹದ್ದೇ ಸನ್ನಿವೇಶ ಸೃಷ್ಟಿಯಾಗಿತ್ತು. ಅಲ್ಲಿ ಮೆಟ್ರೊ ಮಾರ್ಗ ನಿರ್ಮಾಣ ಮಾಡುವಾಗ ಸ್ಕೈವಾಕ್‌ನ ಸ್ಥಳಾಂತರ ಮಾಡಲಾಗಿತ್ತು’ ಎಂದು ಅವರು ಹೇಳಿದರು. ‘ಗುತ್ತಿಗೆ ಸಂಸ್ಥೆಯೇ ನಿರ್ಮಾಣ ವೆಚ್ಚ ಭರಿಸುವುದರಿಂದ ಬಿಬಿಎಂಪಿ ಮೇಲೆ ಯಾವುದೇ ಆರ್ಥಿಕ ಹೊರೆ ಬೀಳುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ದುರಸ್ತಿಗೆ ಗಡುವು: ಮೈಸೂರು ರಸ್ತೆಯ ನಾಯಂಡಹಳ್ಳಿಯಿಂದ ರಾಜರಾಜೇಶ್ವರಿ ಮಹಾದ್ವಾರದ ವರೆಗಿನ ರಸ್ತೆ ದುರಸ್ತಿ ಕಾಮಗಾರಿಯನ್ನು ಇದೇ ತಿಂಗಳು 31ರ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಸಚಿವ ಜಾರ್ಜ್, ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಧಿಕಾರಿಗಳ ಸಭೆ: ರಸ್ತೆ ಪರಿಶೀಲನೆ ಬಳಿಕ ಸಚಿವರು, ಬಿಬಿಎಂಪಿ, ಬಿಡಿಎ ಹಾಗೂ ಜಲಮಂಡಳಿ ಅಧಿಕಾರಿಗಳ ಸಭೆ ನಡೆಸಿದರು. ನ್ಯಾಯಾಲಯದಲ್ಲಿರುವ ಎಲ್ಲ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಎತ್ತರಿಸಿದ ವರ್ತುಲ ರಸ್ತೆ ನಿರ್ಮಾಣ ಸಂಬಂಧ ಬ್ರಿಡ್ಜ್ ಆಂಡ್ ರೂಫ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ  ನೀಡಿದ ಯೋಜನಾ ವರದಿ ಕುರಿತು ಪರಿಶೀಲನೆ ನಡೆಸಿ ಮಾಹಿತಿ ಒದಗಿಸಬೇಕು ಎಂದು ಎಂಜಿನಿಯರ್‌ಗಳಿಗೆ ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT