ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಷ್ಟು ಹೋಳಾಗಲಿದೆ ಬಿಬಿಎಂಪಿ?

ಆಡಳಿತ ಪುನರ್‌ರಚನೆ ಸಮಿತಿಯಿಂದ 11ರಂದು ಅಂತಿಮ ವರದಿ
Last Updated 6 ಜುಲೈ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಡಳಿತದ ಪುನರ್‌ರಚನೆ ಕುರಿತಂತೆ ಅಧ್ಯಯನ ನಡೆಸಲು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ್ ನೇತೃತ್ವದಲ್ಲಿ ರಚಿಸಲಾಗಿದ್ದ ತಜ್ಞರ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜುಲೈ 11ರಂದು ತನ್ನ ಅಂತಿಮ ವರದಿಯನ್ನು ಸಲ್ಲಿಸಲಿದೆ.

ಬಿಬಿಎಂಪಿಯನ್ನು ವಿಭಜಿಸಿ ಐದು ಪಾಲಿಕೆಗಳ ರಚನೆ ಮಾಡಬೇಕು ಮತ್ತು ಮೂರು ಹಂತದ ಆಡಳಿತ ವ್ಯವಸ್ಥೆ ಜಾರಿಗೆ ತರಬೇಕು ಎಂಬುದು ವರದಿಯಲ್ಲಿರುವ ಮುಖ್ಯ ತಿರುಳಾಗಿದೆ. ಸಮಿತಿ ಶಿಫಾರಸಿನಂತೆ ಐದು ಪಾಲಿಕೆಗಳನ್ನು ರಚಿಸಬೇಕೋ ಇಲ್ಲವೆ ಸಂಪುಟದ ತೀರ್ಮಾನದಂತೆ ಮೂರು ಪಾಲಿಕೆಗಳಷ್ಟೇ ಸಾಕೋ ಎಂಬ ಗೊಂದಲ ರಾಜ್ಯ ಸರ್ಕಾರವನ್ನು ಕಾಡುತ್ತಿದೆ ಎಂದು ಹೇಳಲಾಗಿದೆ. ಹೀಗಾಗಿ ಮಸೂದೆಯಲ್ಲಿ ‘ಬಿಬಿಎಂಪಿಯನ್ನು ರದ್ದುಗೊಳಿಸಿ ಆ ಸ್ಥಾನದಲ್ಲಿ ರಾಜ್ಯ  ಸರ್ಕಾರ ಶಿಫಾರಸು ಮಾಡಿದಷ್ಟು ಸಂಖ್ಯೆಗಳಲ್ಲಿ ಪಾಲಿಕೆಗಳನ್ನು ರಚಿಸಬೇಕು’ ಎಂಬ ಪ್ರಕರಣ ಸೇರಿಸುವ ಮೂಲಕ ಮುಕ್ತ ಅವಕಾಶ ಕಲ್ಪಿಸಿಕೊಳ್ಳಲಾಗಿದೆ.

ಕೆಳಹಂತದಲ್ಲಿ ವಾರ್ಡ್‌ ಮಟ್ಟದ ಆಡಳಿತ, ಮಧ್ಯದಲ್ಲಿ ಬಹುಪಾಲಿಕೆ ಆಡಳಿತ (ಐದು), ಹಾಗೂ ಮೇಲಿನ ಹಂತದಲ್ಲಿ ಗ್ರೇಟರ್‌ ಬೆಂಗಳೂರು ಆಡಳಿತ ವ್ಯವಸ್ಥೆ ನಗರಕ್ಕೆ ಅಗತ್ಯವಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ‘ವಾರ್ಡ್‌ ಸಮಸ್ಯೆಗಳನ್ನು ಬಗೆಹರಿಸಲು ವಾರ್ಡ್‌ ಮಟ್ಟದಲ್ಲೇ ಕೆಳಹಂತದ ಆಡಳಿತ ಇರಬೇಕು. ಅದಕ್ಕಾಗಿ ವಾರ್ಡ್‌ ಸಮಿತಿಗಳನ್ನು ರಚಿಸಬೇಕು. ವಾರ್ಷಿಕ ಯೋಜನೆ ಸಿದ್ಧಪಡಿಸುವುದು, ಕಾಮಗಾರಿಗಳ ಗುಣಮಟ್ಟ ಪರಿಶೀಲಿಸುವುದು, ಜನರ ಸಮಸ್ಯೆಗಳಿಗೆ ಪರಿಹಾರ ರೂಪಿಸುವುದು ಈ ಸಮಿತಿಗಳ ಹೊಣೆಯಾಗಬೇಕು’ ಎಂದು ಶಿಫಾರಸು ಮಾಡಲಾಗಿದೆ.

‘ಮಧ್ಯದ ಹಂತದಲ್ಲಿ ಬಹುಪಾಲಿಕೆ ವ್ಯವಸ್ಥೆ ಇರಬೇಕು. ಒಂದೇ ಪಾಲಿಕೆಯಿಂದ ನಗರದ ಎಲ್ಲ ಭಾಗಗಳ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. 2040ರ ವೇಳೆಗೆ ನಗರದ ಜನಸಂಖ್ಯೆ 2 ಕೋಟಿಗೆ ತಲುಪುವ ನಿರೀಕ್ಷೆ ಇದೆ. ಜಗತ್ತಿನಲ್ಲಿ ಕೋಟಿ ಜನಸಂಖ್ಯೆಯನ್ನು ಹೊಂದಿರುವ ಯಾವ ನಗರವೂ ಒಂದೇ ಪಾಲಿಕೆಯನ್ನು ಹೊಂದಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

‘ಪ್ರತಿ 20 ಲಕ್ಷ ಜನಸಂಖ್ಯೆಗೆ  (120 ಚದರ ಕಿ.ಮೀ. ವಿಸ್ತೀರ್ಣ) ಒಂದರಂತೆ ಪ್ರತ್ಯೇಕ ಪಾಲಿಕೆ ಇರಬೇಕು. ಅಂದರೆ ನಗರದಲ್ಲಿ ಐದು ಪಾಲಿಕೆಗಳನ್ನಾದರೂ ರಚಿಸಬೇಕು. ಪ್ರತಿ ಪಾಲಿಕೆಗೆ ಎರಡು ವಲಯ ಇರಬೇಕು. ಒಂದೊಂದು ಪಾಲಿಕೆಯನ್ನು ಜನಸಂಖ್ಯೆ ಹಾಗೂ ಪ್ರದೇಶದ ದೃಷ್ಟಿಯಿಂದ ಸಮಾನವಾಗಿ ಇರುವಂತೆ ರಚಿಸಬೇಕು. ಬಿಬಿಎಂಪಿ ಹಾಗೂ ಇತರ ಸರ್ಕಾರಿ ಸಂಸ್ಥೆಗಳ ಸೇವಾ ಸರಹದ್ದು ಒಂದೇ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು’ ಎಂದು ಪ್ರತಿಪಾದಿಸಲಾಗಿದೆ.

ಶಿಫಾರಸುಗಳನ್ನು ಅಂತಿಮಗೊಳಿಸುವ ಮುನ್ನ ಎಲ್ಲ ಎಂಟೂ ವಲಯಗಳಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ್ದ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಬೆಂಗಳೂರು ರಾಜಕೀಯ ಕಾರ್ಯಪಡೆ (ಬಿಪ್ಯಾಕ್‌), ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಜನಾಗ್ರಹ ಮತ್ತು ಸಿವಿಕ್‌ ಸಂಸ್ಥೆಗಳು ಸಲ್ಲಿಸಿದ್ದ ಸಲಹೆಗಳನ್ನು ಸಹ ಪರಿಗಣಿಸಲಾಗಿದೆ.

ಬಿಬಿಎಂಪಿ, ಬಿಡಿಎ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಜಲಮಂಡಳಿ, ಬೆಂಗಳೂರು ಮೆಟ್ರೊ ರೈಲು ನಿಗಮ, ಬೆಸ್ಕಾಂ, ಪೊಲೀಸ್‌ ಇಲಾಖೆ ಸೇರಿದಂತೆ ಹಲವು ಸಂಸ್ಥೆಗಳ 102 ವಿಧದ ಮಾಹಿತಿಯನ್ನು ಸಮಿತಿ ಒಂದೇ ಭೌಗೋಳಿಕ ಮಾಹಿತಿ ವ್ಯವಸ್ಥೆಯಿಂದ (ಜಿಐಎಸ್‌) ವೇದಿಕೆಗೆ ತಂದಿದೆ. ಕಲೆಹಾಕಿದ ಅಗಾಧ ಮಾಹಿತಿ ಮೂಲಕ ಪ್ರತಿ ವಾರ್ಡ್‌ನ ಸ್ಥಿತಿ ಹೇಗಿದೆ ಎಂಬುದನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದೆ.

ಜಗತ್ತಿನ ಅತ್ಯುತ್ತಮ ಪರಿಹಾರದ ಮಾದರಿಗಳ ಅಧ್ಯಯನ ಮಾಡಿ ಬೆಂಗಳೂರಿನ ಸಮಸ್ಯೆಗಳಿಗೆ ಪರಿಹಾರ ಸೂತ್ರಗಳನ್ನು ಮುಂದಿಡಲಾಗಿದೆ. ನಗರದ ಮುಂದಿನ ನೂರು ವರ್ಷಗಳ ಅಗತ್ಯವನ್ನು ಗಮನದಲ್ಲಿ ಇರಿಸಿಕೊಂಡು ಶಿಫಾರಸುಗಳನ್ನು ಮಾಡಲಾಗಿದೆ. ವಿನಾಕಾರಣ ವೆಚ್ಚಕ್ಕೆ ಕಾರಣವಾಗಿರುವ ಹಲವು ಸ್ಥಾಯಿ ಸಮಿತಿಗಳನ್ನು ರದ್ದುಗೊಳಿಸಬೇಕು ಎಂಬ ಸಲಹೆಯನ್ನೂ ನೀಡಲಾಗಿದೆ ಎಂದು ತಿಳಿದುಬಂದಿದೆ.

ಬಿಬಿಎಂಪಿ ಆಡಳಿತ ವ್ಯವಸ್ಥೆ ಬಗೆಗೆ ಮೊದಲಿನಿಂದಲೂ ಒಳ್ಳೆಯ ಅಭಿಪ್ರಾಯದ ಕೊರತೆ ಇದೆ. ವಿಸ್ತೀರ್ಣದಲ್ಲಿ ವಿಶಾಲವಾಗಿರುವ ಕಾರಣ ಆಡಳಿತದ ಹತೋಟಿ ಕಷ್ಟವಾಗಿದೆ. ಆರ್ಥಿಕ ಸಂಪನ್ಮೂಲದ ಕೊರತೆಯಿಂದಲೂ ಬಿಬಿಎಂಪಿ ಬಳಲಿದೆ. ಕೇಂದ್ರೀಕೃತ ವ್ಯವಸ್ಥೆಯಿಂದ ಜನರಿಗೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗಿದೆ. ಕೇಂದ್ರ ಸ್ಥಾನದಿಂದ ದೂರವಿರುವ ಪ್ರದೇಶಗಳು ಉಪೇಕ್ಷೆಗೆ ಒಳಗಾಗಿವೆ ಎಂದು ವಿವರಿಸಲಾಗಿದೆ.

ಜೂನ್‌ 30ರಂದೇ ಅಂತಿಮ ವರದಿ ನೀಡಬೇಕಿತ್ತು. ವರದಿಯನ್ನು ಅಂತಿಮಗೊಳಿಸುವ ಕೆಲಸ ನಡೆದಿದ್ದು, ಇಂಗ್ಲಿಷ್‌ ಕರಡು ಸಿದ್ಧವಾಗಿದೆ. ಕನ್ನಡದ ಅನುವಾದ ಕಾರ್ಯ ಹಗಲುರಾತ್ರಿ ಎನ್ನದೆ ಸಾಗಿದೆ. ಶುಕ್ರವಾರದೊಳಗೆ ಮುದ್ರಣ ಕಾರ್ಯ ಮುಗಿಯಲಿದ್ದು, ಶನಿವಾರ ಮುಖ್ಯಮಂತ್ರಿ ಅವರಿಗೆ ವರದಿ ಸಲ್ಲಿಸಲಾಗುತ್ತದೆ ಎಂದು ಸಮಿತಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT