ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಷ್ಟೊಂದು ಸಮಿತಿಗಳು; ಏನೆಲ್ಲ ಯೋಜನೆಗಳು!

ಬಿಎಟಿಎಫ್‌ನಿಂದ ಬಿಬಿಪಿಎಜಿವರೆಗಿನ ಸಮಿತಿಗಳು ನಗರದ ಅಭಿವೃದ್ಧಿಗೆ ಏನು ಮಾಡಿದವು?
Last Updated 19 ಜೂನ್ 2016, 20:10 IST
ಅಕ್ಷರ ಗಾತ್ರ

ಅಕ್ಷತಾ ಎಂ. / ಪ್ರವೀಣ ಕುಲಕರ್ಣಿ
ಬೆಂಗಳೂರು: ನಗರದ ಅಭಿವೃದ್ಧಿಗಾಗಿ ಯೋಜನೆ ರೂಪಿಸಲು ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗಷ್ಟೇ ಬೆಂಗಳೂರು ನೀಲನಕ್ಷೆ ಕ್ರಿಯಾ ತಂಡವನ್ನು (ಬಿಬಿಪಿಎಜಿ) ರಚಿಸಲಾಗಿದ್ದು, ತಂಡದ ಮೊದಲ ಸಭೆಯೂ ನಡೆದಿದೆ. 

ನಗರದ ಅಭಿವೃದ್ಧಿಗಾಗಿ ಚಿಂತಿಸಲು ರಚಿತವಾದ ತಂಡಗಳಲ್ಲಿ ಬಿಬಿಪಿಎಜಿ ಏನೂ ಮೊದಲನೆಯದಲ್ಲ. ಈ ಹಿಂದೆಯೂ ತಜ್ಞರು, ಅಧಿಕಾರಿಗಳು ಹಾಗೂ ಗಣ್ಯರನ್ನು ಒಳಗೊಂಡ ತಂಡಗಳ ರಚನೆಯಾಗಿತ್ತು. ಬೆಂಗಳೂರು ಅಜೆಂಡಾ ಕಾರ್ಯಪಡೆ (ಬಿಎಟಿಎಫ್‌), ಕಸ್ತೂರಿರಂಗನ್‌ ಸಮಿತಿ, ಅಬೈಡ್‌, ಬೆಂಗಳೂರು ವಿಷನ್‌ ಗ್ರೂಪ್‌, ಬಿಬಿಎಂಪಿ ಆಡಳಿತ ಪುನರ್‌ರಚನಾ ಅಧ್ಯಯನ ಸಮಿತಿ ಹಾಗೂ ಬೆಂಗಳೂರು ಮಹಾನಗರ ಯೋಜನಾ ಸಮಿತಿ (ಬಿಎಂಪಿಸಿ) – ಇದುವರೆಗೆ ಹಾಗೆ ರಚಿಸಲಾಗಿದ್ದ ತಂಡಗಳು. ಆ ಸಮಿತಿಗಳೆಲ್ಲ ಏನು ಮಾಡಿವೆ ಎಂಬ ವಿಶ್ಲೇಷಣೆ ಇಲ್ಲಿದೆ.

ಬಿಎಟಿಎಫ್‌
ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ (1999) ಈ ಕಾರ್ಯಪಡೆಯನ್ನು ರಚಿಸಲಾಗಿತ್ತು. ನಂದನ್‌ ನಿಲೇಕಣಿ ಅದರ ಮುಖ್ಯಸ್ಥರಾಗಿದ್ದರು. ಡಾ.ರಾಜಾರಾಮಣ್ಣ, ಡಾ. ಸ್ಯಾಮ್ಯುವೆಲ್‌ ಪಾಲ್‌, ನರೇಶ್‌ ನರಸಿಂಹನ್‌, ಕಲ್ಪನಾ ಕರ್‌, ರಮೇಶ್‌ ರಾಮನಾಥನ್‌, ವಿ.ರವಿಚಂದರ್‌, ಸುರೇಶ್‌ ಹೆಬ್ಳಿಕರ್‌, ಅನುರಾಧಾ ಹೆಗಡೆ, ಕೆ.ಜೈರಾಜ್‌ ಹಾಗೂ ದಿವಂಗತ ಎಚ್‌.ನರಸಿಂಹಯ್ಯ ಅವರು ಸದಸ್ಯರಾಗಿದ್ದರು.

ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದ ಪ್ರಯತ್ನವಾಗಿ ಬಿಎಟಿಎಫ್‌ ಅಸ್ತಿತ್ವಕ್ಕೆ ಬಂದಿತ್ತು. ‘ಸರ್ಕಾರೇತರ ಜನರ ತಂಡದಿಂದ ಆಡಳಿತದಲ್ಲಿ ಮೌಲ್ಯಯುತ ಬದಲಾವಣೆ ತರುವ ಉದ್ದೇಶ ಆ ಪ್ರಯತ್ನದಲ್ಲಿತ್ತು’ ಎನ್ನುತ್ತಾರೆ ನಂದನ್‌ ನಿಲೇಕಣಿ. ‘ನಗರಕ್ಕೆ ಸೌಕರ್ಯ ಕಲ್ಪಿಸುವಲ್ಲಿ ಸಮುದಾಯ, ಉದ್ಯಮ ಹಾಗೂ ಆಡಳಿತದ ಸಹಭಾಗಿತ್ವಕ್ಕೆ ಅದೊಂದು ಮಾದರಿ ವ್ಯವಸ್ಥೆಯಾಗಿತ್ತು’ ಎಂದು ಅವರು ಹೇಳುತ್ತಾರೆ.

ಬಿಎಟಿಎಫ್‌ ರಚನೆಯಾದ ಮೊದಲ ವರ್ಷದಲ್ಲೇ ಸದಸ್ಯರು ಯೋಜನೆಗಳನ್ನು ರೂಪಿಸುವ ಕಾರ್ಯದಲ್ಲಿ ತೊಡಗಿದರು. ಜನರ ಸಮೀಕ್ಷೆ ನಡೆಸುವ ಮೂಲಕ ಯಾವ ಯೋಜನೆಗಳಿಗೆ ಆದ್ಯತೆ ನೀಡಬೇಕು ಎಂಬ ಮಾಹಿತಿಯನ್ನು ಪಡೆದುಕೊಂಡರು. ಐದು  ಬಾರಿ ಸಾರ್ವಜನಿಕ ಸಭೆಗಳನ್ನೂ ನಡೆಸಿದರು. ಐದು ವರ್ಷಗಳಲ್ಲಿ ಈ ತಂಡದ ಸದಸ್ಯರು ಹಲವು ಯೋಜನೆಗಳನ್ನು ರೂಪಿಸಿದರು.

ಹೊಸ ವಿನ್ಯಾಸದ ಬಸ್‌ ಶೆಲ್ಟರ್‌ಗಳು, ‘ನಿರ್ಮಲ ಬೆಂಗಳೂರು’ ಹೆಸರಿನ ಸ್ವಚ್ಛ ಸಾರ್ವಜನಿಕ ಶೌಚಾಲಯಗಳು, ‘ಸ್ವಚ್ಛ ಬೆಂಗಳೂರು’ ಹೆಸರಿನ ಮನೆ–ಮನೆ ಕಸ ಸಂಗ್ರಹ ವ್ಯವಸ್ಥೆ,  ಸ್ವಯಂಘೋಷಿತ ಆಸ್ತಿ ತೆರಿಗೆ, ಅನುದಾನ ಆಧರಿತ ಲೆಕ್ಕ ವ್ಯವಸ್ಥೆ (ಎಫ್‌ಬಿಎಎಸ್‌) ಮತ್ತಿತರ ಯೋಜನೆಗಳು ಬಿಎಟಿಎಫ್‌ ನೀಡಿದ ಕೊಡುಗೆಗಳು. ಅವುಗಳಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಯೋಜನೆ ಬಲು ಜನಪ್ರಿಯವಾಯಿತು.

ಬಯೊಕಾನ್‌, ಆದಿತಿ ಟೆಕ್ನಾಲಜೀಸ್‌, ಇನ್ಫೊಸಿಸ್‌ ಪ್ರತಿಷ್ಠಾನ, ಪ್ರೆಸ್ಟೀಜ್‌ ಡೆವಲೆಪರ್ಸ್‌ ಮೊದಲಾದ ಸರ್ಕಾರೇತರ ಸಂಸ್ಥೆಗಳು ನಗರಕ್ಕೆ ಸೌಲಭ್ಯ ಕಲ್ಪಿಸಲು ಸರ್ಕಾರದ ಜತೆ ಸಹಭಾಗಿತ್ವಕ್ಕೆ ಮುಂದಾದವು. ಕೃಷ್ಣ ಅವರ ಅಧಿಕಾರಾವಧಿ 2004ರಲ್ಲಿ ಮುಗಿದ ಕೂಡಲೇ ಬಿಎಟಿಎಫ್‌ ಸಹ ನೇಪಥ್ಯಕ್ಕೆ ಸರಿಯಿತು.

ಕಸ್ತೂರಿರಂಗನ್‌ ಸಮಿತಿ
ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರು ಆಡಳಿತಕ್ಕೆ ಹೊಸ ದೃಷ್ಟಿಕೋನ ಒದಗಿಸುವ ಉದ್ದೇಶದಿಂದ ತಜ್ಞರ ಸಮಿತಿಯೊಂದನ್ನು (2008) ರಚಿಸಿದರು. ಡಾ.ಕೆ.ಕಸ್ತೂರಿರಂಗನ್‌ ಅವರು ಸಮಿತಿ ಅಧ್ಯಕ್ಷರಾಗಿದ್ದರು. ಡಾ.ಎ.ರವೀಂದ್ರ, ಡಾ. ಸ್ಯಾಮ್ಯುವೆಲ್‌ ಪಾಲ್‌, ಡಾ.ಸಡಗೋಪನ್‌ ಸಮಿತಿಯಲ್ಲಿ ಇದ್ದರು. ‘ಬೆಂಗಳೂರು ಮಹಾನಗರ ಪ್ರದೇಶ ಹಾಗೂ ಬಿಬಿಎಂಪಿಯಲ್ಲಿ ಆಡಳಿತ’ ಎಂಬ ಹೆಸರಿನ 176 ಪುಟಗಳ ವರದಿಯನ್ನು ಆ ಸಮಿತಿ ನೀಡಿತು. ಮಹಾನಗರ ಯೋಜನಾ ಸಮಿತಿಯನ್ನು (ಎಂಪಿಸಿ) ಆದ್ಯತೆ ಮೇಲೆ ರಚನೆ ಮಾಡುವಂತೆ ಅದು ಶಿಫಾರಸು ಮಾಡಿತು. ಕಸ್ತೂರಿರಂಗನ್‌ ಅವರ ಸಮಿತಿ ವರದಿ ನೀಡಿದ ಆರು ವರ್ಷಗಳ ನಂತರವಷ್ಟೇ ರಾಜ್ಯ ಸರ್ಕಾರ ಎಂಪಿಸಿಯನ್ನು ಅಸ್ತಿತ್ವಕ್ಕೆ ತಂದಿತು.

ಎಂಪಿಸಿ ಹೇಗಿರಬೇಕು ಎಂಬುದನ್ನೂ ವರದಿಯಲ್ಲಿ ವಿವರಿಸಲಾಗಿತ್ತು. ಒಟ್ಟು 63 ಸದಸ್ಯರು ಎಂಪಿಸಿಯಲ್ಲಿ ಇರಬೇಕು. ಅದರಲ್ಲಿ 42 ಜನ ಚುನಾಯಿತ ಸದಸ್ಯರಾದರೆ, 21 ಜನ ನಾಮನಿರ್ದೇಶಿತ ಸದಸ್ಯರು ಇರಬೇಕು ಎಂದು ತಿಳಿಸಲಾಗಿತ್ತು. ಸಮಾಜದ ವಿವಿಧ ರಂಗಗಳಿಂದ ಬಂದವರು ಹಾಗೂ ವಿಷಯತಜ್ಞರನ್ನೇ ನಾಮನಿರ್ದೇಶಿತ ಸದಸ್ಯರನ್ನಾಗಿ ಮಾಡಬೇಕು ಎಂದು ಸಮಿತಿ ಹೇಳಿತ್ತು. ಆದರೆ, 2014ರಲ್ಲಿ ಎಂಪಿಸಿ ರಚಿಸಲು ತೀರ್ಮಾನಿಸಿದಾಗ ಅದರಲ್ಲಿ 30 ಸದಸ್ಯರಿಗೆ ಮಾತ್ರ ಸ್ಥಾನ ಕಲ್ಪಿಸಲಾಯಿತು. ಅಲ್ಲದೆ, ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗಷ್ಟೇ ಅವಕಾಶ ನೀಡಲಾಯಿತು. ಬಿಬಿಎಂಪಿಗೆ ಸಿಂಹಪಾಲು ಸಿಕ್ಕರೆ, ಬಿಡಿಎಗೂ ಆ ಸಮಿತಿಯಲ್ಲಿ ಸ್ಥಾನ ಕಲ್ಪಿಸಲಾಯಿತು.

ಅಬೈಡ್‌
ಬಿ.ಎಸ್‌. ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರು ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾರ್ಯಪಡೆಯನ್ನು (ಅಬೈಡ್‌) ರಚನೆ ಮಾಡಿದರು. ಬಿಎಟಿಎಫ್‌ ಕಾರ್ಯಗಳಿಗೆ ಇನ್ಫೊಸಿಸ್‌ ಧನಸಹಾಯ ಮಾಡಿದರೆ, ಅಬೈಡ್‌ ನೆರವಿಗೆ ಧಾವಿಸಿದ್ದು ನಮ್ಮ ಬೆಂಗಳೂರು ಪ್ರತಿಷ್ಠಾನ. ಮುಖ್ಯಮಂತ್ರಿ ಅವರೇ ಈ ತಂಡಕ್ಕೆ ಅಧ್ಯಕ್ಷರಾಗಿದ್ದರೂ ತಂಡದ ಕಾರ್ಯಚಟುವಟಿಕೆಗಳ ಕುರಿತು ನಿರ್ಧರಿಸುತ್ತಿದ್ದವರು ಸಂಸದ ರಾಜೀವ್‌ ಚಂದ್ರಶೇಖರ್‌. ಅವರ ಪ್ರತಿಷ್ಠಾನವೇ ಕಾರ್ಯಪಡೆಗೆ ಆರ್ಥಿಕ ನೆರವು ನೀಡುತ್ತಿದ್ದುದು ಇದಕ್ಕೆ ಕಾರಣ.

ಬೆಂಗಳೂರನ್ನು ಕಾಡುತ್ತಿರುವ ಸಮಸ್ಯೆಗಳು ಹಾಗೂ ಅದಕ್ಕೆ ಪರಿಹಾರದ ಮಾರ್ಗಗಳನ್ನು ಗುರುತಿಸುವ ಹೊಣೆ ಈ ಕಾರ್ಯಪಡೆ ಮೇಲಿತ್ತು. ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು, ನಗರಯೋಜನಾ ತಜ್ಞರು ಈ ತಂಡದಲ್ಲಿದ್ದರು. ಕಿರಣ್‌ ಮಜುಮ್‌ದಾರ್‌ ಷಾ, ಟಿ.ವಿ. ಮೋಹನದಾಸ್‌ ಪೈ, ಆರ್‌.ಕೆ. ಮಿಶ್ರಾ, ಅಶ್ವಿನ್‌ ಮಹೇಶ್, ಡಾ. ದೇವಿ ಶೆಟ್ಟಿ ತಂಡದ ಸದಸ್ಯರಾಗಿದ್ದರು. ‘ಬೆಂಗಳೂರು–2020’ ಎಂಬ ಯೋಜನಾ ವರದಿಯನ್ನು ಈ ಕಾರ್ಯಪಡೆ ನೀಡಿತು. ಆಡಳಿತ, ಕೆರೆ–ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣ, ರಸ್ತೆ, ವಾಣಿಜ್ಯ, ಪ್ರವಾಸೋದ್ಯಮ, ವಸತಿ ಮತ್ತಿತರ ಕ್ಷೇತ್ರಗಳಲ್ಲಿ ಆಗಬೇಕಾದ ಬದಲಾವಣೆ ಕುರಿತು ಅದರಲ್ಲಿ ಪ್ರಸ್ತಾಪಿಸಲಾಗಿತ್ತು.

ಬೆಂಗಳೂರು ಮಹಾನಗರಕ್ಕೆ ಪ್ರತ್ಯೇಕ ಕಾಯ್ದೆಯನ್ನು ಜಾರಿಗೆ ತರಬೇಕು, ಸಾರಿಗೆ ವ್ಯವಸ್ಥೆಯಲ್ಲಿ ಆಗುತ್ತಿರುವ ಬೆಳವಣಿಗೆ ಕುರಿತು ಅಧ್ಯಯನ ನಡೆಸಬೇಕು, ಪಾದಚಾರಿಗಳ ಓಡಾಟಕ್ಕೆ ಸಮರ್ಪಕ ಸೌಲಭ್ಯ ಕಲ್ಪಿಸಬೇಕು, ಹೊರವರ್ತುಲ ರಸ್ತೆಯನ್ನು ಸಿಗ್ನಲ್‌ಮುಕ್ತ ಮಾಡಬೇಕು, ಬೆಂಗಳೂರು ಪರಂಪರೆ ಆಯೋಗ ರಚನೆ ಮಾಡಬೇಕು ಹಾಗೂ ಕೆರೆಗಳಿಗೆ ಪುನರುಜ್ಜೀವನ ನೀಡಬೇಕು ಎಂಬ ಪ್ರಮುಖ ಶಿಫಾರಸುಗಳನ್ನು ಈ ಕಾರ್ಯಪಡೆ ಮಾಡಿತ್ತು.

ಕೆಐಜಿ
ಜಗದೀಶ ಶೆಟ್ಟರ್‌ ಅವರು ಮುಖ್ಯಮಂತ್ರಿ ಆಗಿದ್ದಾಗ ಕರ್ನಾಟಕ ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನ ತಂಡ (ಕೆಐಜಿ) ರಚಿಸಲಾಯಿತು. ಈ ತಂಡದ ವ್ಯಾಪ್ತಿ ರಾಜಧಾನಿಗೆ ಏನೂ ಸೀಮಿತವಾಗಿರಲಿಲ್ಲ. ಆದರೆ, ಅದರ ಚಟುವಟಿಕೆ ಬಹುಪಾಲು ನಗರ ಕೇಂದ್ರಿತವಾಗಿತ್ತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಿಂದ ಹೇಗೆ ₹ 3.18 ಲಕ್ಷ ಕೋಟಿ ವರಮಾನ ತರಬಹುದು ಎಂಬ ವಿಷಯವಾಗಿ ಆ ತಂಡ ವಿವರಿಸಿತ್ತು.

ಬೆಂಗಳೂರು ವಿಷನ್‌ ಗ್ರೂಪ್‌
ಸಿದ್ದರಾಮಯ್ಯ ಅವರ ಸರ್ಕಾರ ಬಂದಮೇಲೆ 2014ರಲ್ಲಿ ರಚಿಸಿದ್ದು ಬೆಂಗಳೂರು ವಿಷನ್‌ ಗ್ರೂಪ್‌ (ಬಿವಿಜಿ). ಸಚಿವ ರಾಮಲಿಂಗಾರೆಡ್ಡಿ ಅದರ ಅಧ್ಯಕ್ಷರಾದರೆ, ಸಚಿವರಾದ ರೋಷನ್‌ ಬೇಗ್‌, ಕೃಷ್ಣ ಬೈರೇಗೌಡ ಹಾಗೂ ದಿನೇಶ್‌ ಗುಂಡೂರಾವ್‌ ಉಪಾಧ್ಯಕ್ಷರಾಗಿದ್ದರು. ಜನಾಗ್ರಹ ಸಂಸ್ಥೆಯ ಸ್ಥಾಪಕ ರಮೇಶ್‌ ರಾಮನಾಥನ್‌ ಅದರ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದರು. ಕಲ್ಪನಾ ಕರ್‌, ನರೇಂದ್ರ ಪಾಣಿ, ರುತ್‌ ಮನೋರಮ ಹಾಗೂ ಬಾಷ್‌ ಕಂಪೆನಿಯ ಲಕ್ಷ್ಮೀನಾರಾಯಣ ಸದಸ್ಯರಾಗಿದ್ದರು.

ಈ ತಂಡದ ನಿರ್ಣಯಗಳನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ತಂಡ ಅನುಷ್ಠಾನಕ್ಕೆ ತರಬೇಕಿತ್ತು. ಸಮಿತಿಯ ರಚನೆಯೇ ಸಂವಿಧಾನಬಾಹಿರ ಎಂದು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು. ಎಂಪಿಸಿ ಅಧಿಕಾರವನ್ನು ವಿಷನ್‌ ಗ್ರೂಪ್‌ ಕಿತ್ತುಕೊಳ್ಳುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು. ವಿಷನ್‌ ಗ್ರೂಪ್‌ಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್‌ ಎಂಪಿಸಿಯನ್ನು ರಚಿಸುವಂತೆ ನಿರ್ದೇಶನ ನೀಡಿತು.

ಬೆಂಗಳೂರು ಮಹಾನಗರ ಯೋಜನಾ ಸಮಿತಿ (ಬಿಎಂಪಿಸಿ) 2014ರಲ್ಲಿ ಕೊನೆಗೂ ರಚನೆಯಾಯಿತು. ಸ್ವತಂತ್ರ ಸಮಿತಿಗಳು ಹಾಗೂ ವಿಷನ್‌ ಗ್ರೂಪ್‌ಗಳನ್ನು ರಚಿಸಲು ಆಸಕ್ತಿ ತೋರುತ್ತಾ ಬಂದಿದ್ದ ಸರ್ಕಾರ, ಸಂವಿಧಾನಬದ್ಧವಾದ ಬಿಎಂಪಿಸಿಯನ್ನು ಅಸ್ತಿತ್ವಕ್ಕೆ ತರಲು ಅಷ್ಟಾಗಿ ಆಸಕ್ತಿಯನ್ನೇ ತೋರಿರಲಿಲ್ಲ. ಸಂವಿಧಾನದ 74ನೇ ತಿದ್ದುಪಡಿ ಪ್ರಕಾರ, ಪ್ರತಿಯೊಂದು ಮಹಾನಗರದ ಯೋಜನೆಗಳನ್ನು ರೂಪಿಸಲು ಎಂಪಿಸಿ ರಚಿಸುವುದು ಕಡ್ಡಾಯ. 2014ರ ಜನವರಿಯಲ್ಲೇ ಬಿಎಂಪಿಸಿ ನಿಯಮಾವಳಿ ರೂಪಿಸಿದ ರಾಜ್ಯ ಸರ್ಕಾರ, ಸಮಿತಿಯನ್ನು ರಚನೆ ಮಾಡಿದ್ದು ಮಾತ್ರ ಆ ವರ್ಷದ ಸೆಪ್ಟೆಂಬರ್‌ನಲ್ಲಿ. ಅದೂ ಹೈಕೋರ್ಟ್‌ ಮಧ್ಯಪ್ರವೇಶದ ಬಳಿಕ!

ಸಮಿತಿಯ 30 ಸದಸ್ಯರಲ್ಲಿ 18 ಜನ ಬಿಬಿಎಂಪಿ ಸದಸ್ಯರಾದರೆ ಇನ್ನಿಬ್ಬರು ಪಂಚಾಯಿತಿ ಪ್ರತಿನಿಧಿಗಳು. ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವ, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೇಂದ್ರ ಸರ್ಕಾರದ ಒಬ್ಬ ಪ್ರತಿನಿಧಿ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ), ಬಿಬಿಎಂಪಿ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮೂರೂ ಸಂಸ್ಥೆಗಳ ಆಯುಕ್ತರು, ಜಲಮಂಡಳಿ ಅಧ್ಯಕ್ಷ, ಟಿಸಿಪಿಡಿ ನಿರ್ದೇಶಕ ಹಾಗೂ ಹಣಕಾಸು ಇಲಾಖೆ ಕಾರ್ಯದರ್ಶಿ ಅವರು ಈ ಸಮಿತಿಗೆ ಸದಸ್ಯರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ತುಂಬಿಹೋದ ಈ ಸಮಿತಿಯಲ್ಲಿ ಜನಸಾಮಾನ್ಯರಿಗೆ ಸ್ಥಾನ ಇಲ್ಲ. 2014ರ ಸೆಪ್ಟೆಂಬರ್‌ನಲ್ಲಿ ರಚನೆಯಾದ ಸಮಿತಿಯ ಮೊದಲ ಸಭೆ 2016ರ ಜೂನ್‌ನಲ್ಲಿ ನಡೆದಿದೆ! ಈ ಮಧ್ಯೆ ಬಿಬಿಎಂಪಿಗೆ ಹೊಸ ಕೌನ್ಸಿಲ್‌ ಬಂದಿದ್ದರಿಂದ ಬಿಎಂಪಿಸಿಗೆ 18 ಸದಸ್ಯರನ್ನು ಹೊಸದಾಗಿ ಆಯ್ಕೆ ಮಾಡಲಾಗಿದೆ.

ಪುನರ್‌ರಚನಾ ಸಮಿತಿ
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತ ವಿಕೇಂದ್ರೀಕರಣದ ಕುರಿತು ಅಧ್ಯಯನಕ್ಕಾಗಿ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್‌. ಪಾಟೀಲ ಅವರ ನೇತೃತ್ವದಲ್ಲಿ ಬಿಬಿಎಂಪಿ ಆಡಳಿತ ಪುನರ್‌ರಚನಾ ಸಮಿತಿಯನ್ನೂ ಸರ್ಕಾರ ರಚಿಸಿತ್ತು. ಬಿಬಿಎಂಪಿ ಆಯುಕ್ತರಾಗಿದ್ದ ಸಿದ್ದಯ್ಯ, ಐಎಎಸ್‌ ಅಧಿಕಾರಿ ಪಿ.ಮಣಿವಣ್ಣನ್‌ ಹಾಗೂ ವಿ.ರವಿಚಂದರ್‌ ಅದರ ಸದಸ್ಯರಾಗಿದ್ದರು. ಬಿಬಿಎಂಪಿಯನ್ನು ಐದು ಪಾಲಿಕೆಗಳನ್ನಾಗಿ ವಿಭಜನೆ ಮಾಡಬೇಕು ಹಾಗೂ 400 ವಾರ್ಡ್‌ಗಳನ್ನು ರಚಿಸಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು.

ಹಲವು ಸಾರ್ವಜನಿಕ ಸಭೆಗಳನ್ನು ನಡೆಸಿದ ಆ ಸಮಿತಿ ಜನಾಭಿಪ್ರಾಯ ಕ್ರೋಡೀಕರಿಸಿತ್ತು. ಬಿಬಿಎಂಪಿ ವಿಭಜನೆ ಮಾಡಲು ರಾಜ್ಯ ಸರ್ಕಾರದಿಂದ ಮಂಡನೆಯಾಗಿದ್ದ ಮಸೂದೆಗೆ ವಿಧಾನಮಂಡಲದ ಒಪ್ಪಿಗೆ ದೊರೆತರೂ ರಾಷ್ಟ್ರಪತಿ ಅಂಕಿತಕ್ಕಾಗಿ ಕಾದಿದೆ. ರಾಷ್ಟ್ರಪತಿ ಅಂಕಿತ ಬೀಳಲು ಕೇಂದ್ರ ಕಾನೂನು ಹಾಗೂ ನಗರಾಭಿವೃದ್ಧಿ ಸಚಿವಾಲಯದ ಧನಾತ್ಮಕ ಅಭಿಪ್ರಾಯ ಅಗತ್ಯವಾಗಿದೆ. ಪುನರ್‌ರಚನಾ ಸಮಿತಿ ಅಧ್ಯಯನ ನಡೆಸುತ್ತಿದ್ದ ವೇಳೆಯೇ ಜನಾಗ್ರಹ ಸಂಸ್ಥೆಯು ನಗರ ಯೋಜನೆ ಹಾಗೂ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಿತ್ತು. ಕ್ರೋಡೀಕರಿಸಿದ ಮಾಹಿತಿಯಿಂದ ನಗರದ ನೀಲನಕ್ಷೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ನೀಡಿತ್ತು. ಆ ನೀಲನಕ್ಷೆ ಕುರಿತು ಅಧ್ಯಯನ ನಡೆಸಿ ಬೆಂಗಳೂರು ಅಭಿವೃದ್ಧಿಗೆ ಯೋಜನೆ ರೂಪಿಸಲು ರಾಜ್ಯ ಸರ್ಕಾರ ಬೆಂಗಳೂರು ನೀಲನಕ್ಷೆ ಕಾರ್ಯಪಡೆ ರಚನೆ ಮಾಡಿದೆ.
*
ಕ್ರಿಯಾ ತಂಡಕ್ಕೆ ವಿರೋಧ ಏಕೆ?
ರಾಜ್ಯ ಸರ್ಕಾರದಿಂದ ನೀಲನಕ್ಷೆ ಕ್ರಿಯಾ ತಂಡ ರಚನೆಯಾಗಿದ್ದೇ ತಡ ಸಾರ್ವಜನಿಕ ವಲಯದಿಂದ ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಂವಿಧಾನಬದ್ಧ ಮಹಾನಗರ ಯೋಜನಾ ಸಮಿತಿ (ಎಂಪಿಸಿ) ಮೇಲೆ ಈ ಕ್ರಿಯಾತಂಡದ ಕರಿನೆರಳು ಬೀಳಲಿದೆ ಎಂಬ ಆತಂಕವೇ ಇದಕ್ಕೆ ಕಾರಣ. ‘ಕ್ರಿಯಾ ತಂಡದಲ್ಲಿರುವ ಸದಸ್ಯರ ಕುರಿತಾಗಿ ನನ್ನಲ್ಲಿ ಯಾವುದೇ ಆಕ್ಷೇಪವಿಲ್ಲ. ಸಮಸ್ಯೆ ಇರುವುದು ತಾತ್ಕಾಲಿಕ ಸಮಿತಿಯ ಕುರಿತು. ಇಂತಹ ಸಮಿತಿಗಳಿಂದ ನಗರಕ್ಕೆ ಯಾವುದೇ ಪ್ರಯೋಜನವಿಲ್ಲ’ ಎನ್ನುತ್ತಾರೆ ರಂಗಕರ್ಮಿ ಪ್ರಕಾಶ ಬೆಳವಾಡಿ. ಬಲಿಷ್ಠವಾದ ಎಂಪಿಸಿ ಕಟ್ಟುವ ಕೆಲಸಕ್ಕೆ ಆದ್ಯತೆ ನೀಡಬೇಕು ಎಂದು ಅವರು ಆಗ್ರಹಿಸುತ್ತಾರೆ.

ಮೂರು ಸ್ತರದ ಆಡಳಿತ ವ್ಯವಸ್ಥೆ ಮೇಲೆ ಸರ್ಕಾರಕ್ಕೆ ವಿಶ್ವಾಸವಿಲ್ಲ ಎನ್ನುವುದು ಈ ಕ್ರಿಯಾತಂಡದ ರಚನೆಯಿಂದ ಸಾಬೀತಾಗಿದೆ ಎಂದು ಸಿವಿಕ್‌ ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್‌ ಅಭಿಪ್ರಾಯ. ‘ಸಂವಿಧಾನದ ಚೌಕಟ್ಟನ್ನು ಮೀರಿ ಈ ತಂಡ ಕಟ್ಟಲಾಗಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಎಂಪಿಸಿಯನ್ನು ಸಶಕ್ತಗೊಳಿಸದೆ, ಚುನಾಯಿತ ಪ್ರತಿನಿಧಿಗಳ ಅಧಿಕಾರವನ್ನು ಮೊಟಕುಗೊಳಿಸುವ ಸರ್ಕಾರದ ಇಂತಹ ಯತ್ನಗಳು ನೋವುಂಟು ಮಾಡಿವೆ’ ಎಂದು ಹೇಳುತ್ತಾರೆ. ‘ಎಂಪಿಸಿ ಮಾಡಬೇಕಾದ ಕೆಲಸವನ್ನು ಸಂವಿಧಾನ ಚೌಕಟ್ಟಿನ ಹೊರಗೆ ರಚಿಸಲಾದ ಸಂಸ್ಥೆಯೊಂದು ನಿಭಾಯಿಸುವುದು ಸರಿಯಲ್ಲ’ ಎಂದು ನಗರಯೋಜನೆ ತಜ್ಞ ಅಶ್ವಿನ್‌ ಮಹೇಶ್‌ ಅಭಿಪ್ರಾಯಪಡುತ್ತಾರೆ.

‘ಎಂಪಿಸಿ ಸ್ವತಂತ್ರ ಸಂಸ್ಥೆಯಾಗಿದ್ದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರವಲ್ಲದೆ ತಜ್ಞರ ಪಾಲ್ಗೊಳ್ಳುವಿಕೆಗೂ ಅಲ್ಲಿ ಅವಕಾಶವಿದೆ. ಹೀಗಾಗಿ ಮತ್ತೊಂದು ತಂಡ ಏಕೆ’ ಎಂದು ಸಂಸದ ರಾಜೀವ್‌ ಚಂದ್ರಶೇಖರ್‌ ಪ್ರಶ್ನಿಸುತ್ತಾರೆ.

‘ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಬಡವರು, ಮಹಿಳೆಯರು ಹಾಗೂ ಮಕ್ಕಳ ಪ್ರತಿನಿಧಿಗಳಿಗೆ ಈ ತಂಡದಲ್ಲಿ ಸ್ಥಾನ ಏಕಿಲ್ಲ’ ಎಂದು ಕಾತ್ಯಾಯಿನಿ ಕೇಳುತ್ತಾರೆ. ಕ್ರಿಯಾತಂಡದ ರಚನೆಗೆ ‘ಚೇಂಜ್‌ ಡಾಟ್‌ ಆರ್ಗ್‌’ ಆನ್‌ಲೈನ್‌ ವೇದಿಕೆಯಲ್ಲೂ ವಿರೋಧ ವ್ಯಕ್ತವಾಗಿದೆ.
*
ಸದಸ್ಯರು ಏನಂತಾರೆ?
‘ಈ ಹಿಂದೆ ಕಾರ್ಯನಿರ್ವಹಿಸಿದ ಪ್ರತಿಯೊಂದು ಕಾರ್ಯಪಡೆಯೂ ನಗರದಲ್ಲಿ ಒಂದಿಷ್ಟು ಧನಾತ್ಮಕ ಬದಲಾವಣೆ ತರಲು ಕೆಲಸ ಮಾಡಿದೆ. ಸರ್ಕಾರದ ನೀತಿ ನಿರೂಪಣೆಯಲ್ಲಿ ಬಿಎಟಿಎಫ್‌ ತುಂಬಾ ಪ್ರಭಾವ ಬೀರಿತ್ತು. ಅಬೈಡ್‌ ಜಲಮೂಲಗಳ ರಕ್ಷಣೆಗೆ ಒತ್ತು ನೀಡಿತ್ತು. ರಾಜಕಾಲುವೆಗಳ ಮರು ವಿನ್ಯಾಸಕ್ಕೂ ಸಲಹೆ ನೀಡಿತ್ತು. ಮಳೆನೀರು ಹಾಗೂ ಮಲಿನ ನೀರಿಗೆ ಪ್ರತ್ಯೇಕ ಕಾಲುವೆ ಇರಬೇಕು ಎಂದು ಪ್ರತಿಪಾದಿಸಿತ್ತು. ಬೆಂಗಳೂರು ಸಿಟಿ ಕನೆಕ್ಟ್‌ನಂತಹ ಸಂಸ್ಥೆಯಿಂದ ಟೆಂಡರ್‌ ಶ್ಯೂರ್‌ ಯೋಜನೆ ಅರಳಿತು. ನಗರದ ಅಭಿವೃದ್ಧಿ ಚಟುವಟಿಕೆಗಳಲ್ಲಿ ನಾಗರಿಕ ಸಂಘಟನೆಗಳು ಹಾಗೂ ಕಾರ್ಪೊರೇಟ್‌ ಸಂಸ್ಥೆಗಳು ಪಾಲ್ಗೊಳ್ಳುತ್ತಲೇ ಬಂದಿವೆ. ನೀಲನಕ್ಷೆ ಕಾರ್ಯಪಡೆ ರಚನೆ ಸಂಬಂಧ ಅನಗತ್ಯವಾಗಿ ವಿವಾದ ಎಬ್ಬಿಸಲಾಗಿದೆ. ನಗರದ ಅಭಿವೃದ್ಧಿ ಕುರಿತು ಯೋಚಿಸುವಂತಹ ಜನಾಗ್ರಹ, ಬಿ–ಪ್ಯಾಕ್‌, ಬೆಂಗಳೂರು ಸಿಟಿ ಕನೆಕ್ಟ್‌ನಂತಹ ಸಂಸ್ಥೆಗಳನ್ನು ಈ ಕಾರ್ಯಪಡೆ ಒಂದೆಡೆ ತಂದಿದೆ.

ಕಾರ್ಯಪಡೆಯಲ್ಲಿ ಸದಸ್ಯರಾಗಿರುವ ಉದ್ಯಮಿಗಳು ತಮ್ಮ ಉದ್ಯಮದ ಹಿತಾಸಕ್ತಿಗಾಗಿ ಅಧಿಕಾರ ಬಳಸಿಕೊಳ್ಳುತ್ತಾರೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಗರದ ರಸ್ತೆಗಳು ಚೆನ್ನಾಗಿರಬೇಕು, ಸುಗಮ ಸಂಚಾರ ವ್ಯವಸ್ಥೆಯನ್ನು ರೂಪಿಸಬೇಕು, ನಗರ ಸ್ವಚ್ಛವಾಗಿರಬೇಕು ಎಂಬಂತಹ ಉದ್ಯಮಿಯೊಬ್ಬನ ಬೇಡಿಕೆಗಳು ನಗರದ ನಾಗರಿಕರ ಬೇಡಿಕೆಗಳೂ ಆಗಿವೆ. ಹೌದು, ಕಚೇರಿಗೆ ಬರುವಾಗ ಇಲ್ಲವೆ ಮನೆಗೆ ಹೋಗುವಾಗ ನಮ್ಮ ನೌಕರರು ರಸ್ತೆಯಲ್ಲೇ ಮೂರು ಗಂಟೆಗಳಷ್ಟು ದೀರ್ಘ ಸಮಯ ಕಳೆಯುವುದನ್ನು ನಾವು ಬಯಸುವುದಿಲ್ಲ. ತ್ಯಾಜ್ಯದಿಂದ ತುಂಬಿದ ರಸ್ತೆಗಳನ್ನೂ ನೋಡಲು ಇಷ್ಟಪಡುವುದಿಲ್ಲ. ನಮ್ಮ ಈ ಬಯಕೆಯಲ್ಲಿ ಉದ್ಯಮದ ಆಸಕ್ತಿ ಇದೆಯೋ ಅಥವಾ ನಾಗರಿಕರ ಕಾಳಜಿ ಇದೆಯೋ ಎಂಬುದನ್ನು ಜನರೇ ತೀರ್ಮಾನಿಸಬೇಕು’
– ಕಿರಣ್‌ ಮಜುಮ್‌ದಾರ್‌ ಷಾ,
ಬಯೊಕಾನ್‌ ಮುಖ್ಯಸ್ಥೆ
*

‘ರಾಜ್ಯ ವಿಧಾನಸಭೆಗೆ ಇನ್ನೆರಡು ವರ್ಷಗಳಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಹೊಸ ಸಮಿತಿಗೆ ಕಡಿಮೆ ಸಮಯ ಇದೆ. ಅನುಷ್ಠಾನಕ್ಕೆ ಹೆಚ್ಚಿನ ಒತ್ತು ಸಿಗಬೇಕಿರುವುದು ಇಂದಿನ ಅಗತ್ಯವಾಗಿದೆ. ಈ ಹಿಂದಿನ ಸಮಿತಿಗಳಲ್ಲೂ ನಾನು ಸದಸ್ಯನಾಗಿದ್ದೆ. ಉದ್ದೇಶಗಳು ಒಳ್ಳೆಯದಿದ್ದರೂ ನಿರೀಕ್ಷಿತ ಫಲಿತಾಂಶ ಸಿಗದಿದ್ದಾಗ ಭ್ರಮನಿರಸನ ಆಗುವುದು ಸಹಜ. ಸ್ವಯಂಘೋಷಿತ ಆಸ್ತಿ ತೆರಿಗೆ, ಟೆಂಡರ್‌ ಶ್ಯೂರ್‌, ಲಾಲ್‌ಬಾಗ್‌ ಪುನರುಜ್ಜೀವನದಂತಹ ಯೋಜನೆಗಳು ಅನುಷ್ಠಾನಗೊಂಡಾಗ ಅಷ್ಟೇ ಹರ್ಷವೂ ಆಗಿದೆ. ಬೆಂಗಳೂರಿನಂತಹ ನಗರದ ಪ್ರಗತಿಗೆ ನಾವು ನಿರಂತರವಾಗಿ ಪ್ರಯತ್ನ ಹಾಕುತ್ತಲೇ ಇರಬೇಕು. ಈಗಿನ ಕಾರ್ಯಪಡೆ ಭಿನ್ನವಾಗಿದೆ. ಗಣ್ಯರು, ವಿಷಯತಜ್ಞರಲ್ಲದೆ ಸರ್ಕಾರದ ಮುಖ್ಯಸ್ಥರಾದ ಮುಖ್ಯಮಂತ್ರಿ ಅವರೂ ಈ ತಂಡದಲ್ಲಿದ್ದಾರೆ. ಇದೇನು ಬರಿ ಸಲಹಾ ಮಂಡಳಿ ಅಲ್ಲ; ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರ ಹುಡುಕುವ ಸಮಿತಿ ಇದು.

ಸರಿಸುಮಾರು 8 ಸಾವಿರ ಚದರ ಕಿ.ಮೀ. ವಿಸ್ತೀರ್ಣ ಹೊಂದಿದ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಮಟ್ಟದಲ್ಲಿ ಎಂಪಿಸಿ ಅಗತ್ಯವಿದೆಯೇ ಹೊರತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವ್ಯಾಪ್ತಿಗಲ್ಲ. ಬಿಬಿಎಂಪಿ ಆಡಳಿತ ಪುನರ್‌ರಚನಾ ಅಧ್ಯಯನ ಸಮಿತಿಯಿಂದಲೂ ನಾವು ಇದೇ ಅಭಿಪ್ರಾಯ ನೀಡಿದ್ದೇವೆ.
ಸಂಶಯವೇ ಇಲ್ಲ; ಕಾನೂನಿನ ಅನ್ವಯ ಎಲ್ಲ ಯೋಜನಾ ಚಟುವಟಿಕೆಗಳು ಎಂಪಿಸಿ ಮೂಲಕವೇ ನಡೆಯಬೇಕು. ಆದರೆ, ಸದ್ಯ ಎಂಪಿಸಿ ಕಾರ್ಯಪ್ರವೃತ್ತವಾಗಿಲ್ಲ. ಈಗಿನ ಕಾರ್ಯತಂಡ ಎಂಪಿಸಿಗೆ ಪೂರಕವಾಗಿ ಕೆಲಸ ಮಾಡಬಹುದು. ಕಾರ್ಯತಂಡದ ಶಿಫಾರಸುಗಳನ್ನು ಎಂಪಿಸಿ ಮುಂದಿಟ್ಟು ಚರ್ಚಿಸಬಹುದು. ಈ ತಂಡದಿಂದ ಬಿಬಿಎಂಪಿ ಅಧಿಕಾರ ಮೊಟಕುಗೊಂಡಿದೆ ಎಂಬುದು ಸರಿಯಲ್ಲ. ಸೂಕ್ತ ಯೋಜನೆಗಳು ಮುಂದಿದ್ದಾಗ ಬಿಬಿಎಂಪಿಯಿಂದ ಅವುಗಳಿಗೆ ಹಣ ಒದಗಿಸಿ ಅನುಷ್ಠಾನಕ್ಕೆ ತರುವುದು ಸುಲಭ. ನಗರಕ್ಕೆ ಒಳ್ಳೆಯದನ್ನು ಮಾಡದಂತೆ ಯಾರೂ ಕಾರ್ಪೋರೇಟರ್‌ಗಳನ್ನು ತಡೆಯಲು ಸಾಧ್ಯವಿಲ್ಲ’
– ವಿ.ರವಿಚಂದರ್‌,
ನಗರ ಯೋಜನೆ ತಜ್ಞ
*
ಹಿತಾಸಕ್ತಿ ಸಂಘರ್ಷ
ಕ್ರಿಯಾತಂಡದ ಸದಸ್ಯರ ಕುರಿತು ಅಪಸ್ವರಗಳೂ ಕೇಳಿಬಂದಿವೆ. ಸದಸ್ಯರೊಬ್ಬರ ಕೈಗಾರಿಕಾ ಘಟಕ ಕೆರೆ ನೀರನ್ನು ಮಲಿನಗೊಳಿಸಿದ ಆರೋಪವಿದೆ. ಮತ್ತೊಬ್ಬ ಸದಸ್ಯರ ಪುತ್ರ ಬಿಡಿಎ ವಲಯ ನಿರ್ಬಂಧ ಉಲ್ಲಂಘಿಸಿ ಹೋಟೆಲ್‌ ತೆರೆದ ಆರೋಪ ಎದುರಿಸುತ್ತಿದ್ದಾರೆ. ಇನ್ನೊಬ್ಬ ಸದಸ್ಯರು ಕ್ರೆಡಾಯ್‌, ಮಂತ್ರಿ, ಶೋಭಾ ಡೆವಲೆಪರ್ಸ್‌ನಂತಹ ಸಂಸ್ಥೆಗಳಿಗೆ ಸಲಹೆಗಾರರಾಗಿದ್ದಾರೆ. ಈ ತಂಡ ಜನರಿಗಾಗಿ ಕೆಲಸ ಮಾಡಲಿದೆಯೋ ಅಥವಾ ಉದ್ಯಮದ ಹಿತಾಸಕ್ತಿಗೋ ಎನ್ನುವ ಸಂಶಯ ಕಾಡುತ್ತಿದೆ. ಸಮಾಜದ ವಿವಿಧ ವರ್ಗಗಳ ಪ್ರತಿನಿಧಿಗಳಿಗೆ ಕ್ರಿಯಾತಂಡದಲ್ಲಿ ಏಕೆ ಅವಕಾಶವಿಲ್ಲ ಎನ್ನುವ ಪ್ರಶ್ನೆಗೆ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌, ‘ಕ್ರಿಯಾತಂಡದ ಬಾಗಿಲನ್ನು ಮುಚ್ಚಲಾಗಿಲ್ಲ. ಸದಸ್ಯರ ಸೇರ್ಪಡೆಗೆ ಅವಕಾಶ ಇದ್ದೇ ಇದೆ’ ಎಂದು ಉತ್ತರಿಸುತ್ತಾರೆ.

(ಸಾರ್ವಜನಿಕ ಧನಸಹಾಯದಿಂದ ನಡೆಯುವ ಆನ್‌ಲೈನ್‌ ಸುದ್ದಿ ಮಾಧ್ಯಮ ಊರ್ವಾಣಿ ಪ್ರತಿಷ್ಠಾನದ ‘ಸಿಟಿಜನ್‌ ಮ್ಯಾಟರ್ಸ್‌’ ವೆಬ್‌ಸೈಟ್ ಹಾಗೂ ‘ಪ್ರಜಾವಾಣಿ’ ಜತೆಯಾಗಿ ಈ ಸಮೀಕ್ಷೆ ನಡೆಸಿದೆ. ಇಂಗ್ಲಿಷ್‌ ವರದಿಗೆ: ​http://bangalore.citizenmatters.in)

ಇಂಗ್ಲಿಷ್‌ ವರದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ:
​http://bangalore.citizenmatters.in/articles/bbpag-problems-conflict-of-interest

http://bangalore.citizenmatters.in/articles/background-on-bangalore-vision-groups-bbpag

http://bangalore.citizenmatters.in/articles/bbpag-bvg-members-opinion-bangalore

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT