ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿಗೂ ಇನ್ನು ಸಿ.ಸಿ.ಇ.

Last Updated 27 ಜುಲೈ 2014, 19:30 IST
ಅಕ್ಷರ ಗಾತ್ರ

ರಾಜ್ಯ ಪಠ್ಯಕ್ರಮದ ಹತ್ತನೇ ತರಗತಿಗೆ ಹೊಸ ಪಠ್ಯಪುಸ್ತಕಗಳನ್ನು ಪರಿಚಯಿಸಲಾಗಿದೆ. ಜೊತೆಗೆ, ಎಸ್ಸೆಸ್ಸೆಲ್ಸಿ ಪರೀಕ್ಷಾ ಪದ್ಧತಿಯಲ್ಲೂ ಬದಲಾವಣೆ ಮಾಡಲಾಗಿದೆ.

‘ಸಮಗ್ರ ಮತ್ತು ನಿರಂತರ ಮೌಲ್ಯಮಾಪನ’ ಎಂದು ಕರೆಯಲಾಗುವ ಹೊಸ ಪದ್ಧತಿ ವಿದ್ಯಾರ್ಥಿ ಸ್ನೇಹಿಯಾಗಿರುತ್ತದೆ ಎಂದು ನಿರೀಕ್ಷಿ ಸಲಾಗಿದೆ.

ಶಿಸ್ತು, ಕಾರ್ಯತತ್ಪರತೆ, ಸೃಜನಶೀಲತೆ, ಕಲಾತ್ಮಕತೆಗಳಿಗೆ ಒತ್ತುಕೊಡುವ ಗುಣಮಟ್ಟದ ಕಲಿಕೆಗೆ ಒತ್ತು ನೀಡುವಲ್ಲಿ ಹೊಸ ಪದ್ಧತಿ ಮಹತ್ವದ ಪಾತ್ರವಹಿಸಲಿದೆ. ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ ಸಾಧಿಸಲು ಹೊಸ ಪದ್ಧತಿ ಸಹಾಯಕವಾಗಲಿದೆ ಎಂದೂ ಆಶಿಸಲಾಗಿದೆ.

ಹೊಸ ಮೌಲ್ಯಮಾಪನ ಪದ್ಧತಿಯು ಕಲಿಕೆಯ ವಿಷಯಗಳನ್ನು ಪಠ್ಯ (scholastic) ಮತ್ತು ಸಹಪಠ್ಯ (non scholastic) ಎಂಬುದಾಗಿ ವಿಂಗಡಿಸುತ್ತದೆ. ಪಠ್ಯ ವಿಷಯದಲ್ಲಿ  ಆಂತರಿಕ ಮತ್ತು ಬಾಹ್ಯ ಮೌಲ್ಯಮಾಪನ ಇರುತ್ತದೆ. ಬಾಹ್ಯ ಮೌಲ್ಯಮಾಪನಕ್ಕೆ ಶೇಕಡ 80ರಷ್ಟು ಮತ್ತು ಆಂತರಿಕ ಮೌಲ್ಯಮಾಪನಕ್ಕೆ ಶೇಕಡ 20ರಷ್ಟು ಪ್ರಾಧಾನ್ಯ ಇರುತ್ತದೆ. ಪ್ರಥಮ ಭಾಷೆಯನ್ನು ಹೊರತು ಪಡಿಸಿ, 500 ಅಂಕಗಳ ಬಾಹ್ಯ ಪರೀಕ್ಷೆ ವರ್ಷಾಂತ್ಯದಲ್ಲಿ ನಡೆಸಲಾಗುತ್ತದೆ. ಉತ್ತೀರ್ಣರಾಗಲು ಪ್ರಥಮ ಭಾಷೆಯ ಗರಿಷ್ಠ 100 ಅಂಕಗಳ ಬಾಹ್ಯ ಪರೀಕ್ಷೆಯಲ್ಲಿ ಕನಿಷ್ಠ 30 ಅಂಕಗಳನ್ನೂ ಉಳಿದ ಪಠ್ಯವಿಷಯಗಳ 80 ಅಂಕಗಳ ಬಾಹ್ಯ ಪರೀಕ್ಷೆಯಲ್ಲಿ ಕನಿಷ್ಠ 24 ಅಂಕಗಳನ್ನೂ ಪಡೆಯಬೇಕಾಗುತ್ತದೆ. ಒಟ್ಟಾರೆ ಬಾಹ್ಯ ಪರೀಕ್ಷೆಯ ಒಟ್ಟು 500 ಅಂಕಗಳಿಗೆ 175 ಅಂಕಗಳನ್ನು ಪಡೆಯಬೇಕು.

ವಿದ್ಯಾರ್ಥಿಯ ಪಠ್ಯ ವಿಷಯಗಳಲ್ಲಿನ ಸಾಧನೆಯನ್ನು ಅಂಕ, ಶ್ರೇಣಿಗಳಲ್ಲಿ ಗುರುತಿಸುವುದರೊಂದಿಗೆ ಸಂಚಿತ ದರ್ಜೆ ಸರಾಸರಿಯಲ್ಲೂ ಸೂಚಿಸಲಾಗುವುದು. ಸಹಪಠ್ಯ ವಿಷಯಗಳಲ್ಲಿನ ವಿದ್ಯಾರ್ಥಿಯ ಸಾಧನೆ ಎ, ಬಿ  ಅಥವಾ ಸಿ ಶ್ರೇಣಿಗಳಲ್ಲಿ ಗುರುತಿಸಲಾಗುತ್ತದೆ. 
ಪ್ರತಿ ಪಠ್ಯ ವಿಷಯಕ್ಕೂ 200 ಅಂಕಗಳ ಆಂತರಿಕ ಮೌಲ್ಯಮಾಪನವನ್ನು ನಡೆಸಲಾಗುತ್ತದೆ. ಆಂತರಿಕ ಮೌಲ್ಯಮಾಪನವನ್ನು ನಾಲ್ಕು ರೂಪಣಾತ್ಮಕ ಮೌಲ್ಯ-ಮಾಪನಗಳಾಗಿ ವಿಭಜಿಲಾಗಿದ್ದು, ಪ್ರತಿ ರೂಪಣಾತ್ಮಕ ಮೌಲ್ಯಮಾಪನದಲ್ಲಿಯೂ 20 ಅಂಕಗಳ ಒಂದು ಕಿರು ಪರೀಕ್ಷೆ ಮತ್ತು 15 ಅಂಕಗಳ ಎರಡು ಚಟುವಟಿಕೆ ನಡೆಸಲಾಗುತ್ತದೆ. ಚಟುವಟಿಕೆಗಳ ಪಟ್ಟಿಯನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಒದಗಿಸುತ್ತದೆ.

ವಿದ್ಯಾರ್ಥಿಗಳಿಗೆ ಸೂಕ್ತವಾದ ಚಟುವಟಿಕೆಗಳನ್ನು ಶಿಕ್ಷಕರೇ ಆಯ್ಕೆ ಮಾಡಿಕೊಳ್ಳಬಹುದು. ಹೀಗೆ, ಪ್ರಥಮ ಭಾಷೆಯನ್ನು ಹೊರತುಪಡಿಸಿ ಪ್ರತಿ ವಿಷಯದ ಆಂತರಿಕ ಮೌಲ್ಯಮಾಪನದಲ್ಲಿ ಗಳಿಸಿದ ಅಂಕಗಳ 1/10 ಭಾಗವನ್ನು(ಗರಿಷ್ಠ 20 ಅಂಕಗಳು) ಮತ್ತು ಪ್ರಥಮ ಭಾಷೆಯ ಲ್ಲಾದರೆ, ಆಂತರಿಕ ಮೌಲ್ಯಮಾಪನದಲ್ಲಿ ಗಳಿಸಿದ ಅಂಕಗಳ 1/8 ಭಾಗವನ್ನು (ಗರಿಷ್ಠ 25ಅಂಕಗಳು) ಬಾಹ್ಯ ಮೌಲ್ಯಮಾಪನದ ಅಂಕಗ ಳೊಂದಿಗೆ ಸಂಯೋಜಿಸಲಾಗುತ್ತದೆ. ಅರ್ಧವಾರ್ಷಿಕ ಮತ್ತು ಸಿದ್ಧತಾ ಪರೀಕ್ಷೆಗಳು ಆಂತರಿಕ ಮೌಲ್ಯಮಾಪನದಲ್ಲಿ ಸೇರುವುದಿಲ್ಲ.

ಖಾಸಗಿ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದಿರುವುದರಿಂದ ಅವರಿಗೆ ಬಾಹ್ಯ ಮೌಲ್ಯಮಾಪನ ಮಾತ್ರ ಇರುತ್ತದೆ. ಅವರಿಗೆ ಗರಿಷ್ಠ 625 ಅಂಕಗಳಾಗಿರುತ್ತವೆ. ಬಿ ವಿಭಾಗದ ಸಹಪಠ್ಯ ವಿಷಯಗಳ ಮೌಲ್ಯಮಾಪನ ಇರುವುದಿಲ್ಲ. ವಿಶೇಷ ವಿದ್ಯಾರ್ಥಿಗಳಿಗೆ ಈ ಹಿಂದಿನಂತೆ ಭಾಷಾ ವಿನಾಯಿತಿ, ಹೆಚ್ಚುವರಿ ಸಮಯ, ಸಹಾಯಕರ ಸೌಲಭ್ಯ, ಪರ್ಯಾಯ ವಿಷಯಗಳನ್ನು ತೆಗೆದುಕೊಳ್ಳಲು ಅವಕಾಶವಿದೆ. ವಿಶೇಷ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನದಿಂದಲೂ ವಿನಾಯಿತಿ ನೀಡಲಾಗಿದೆ.

ಹೊಸ ಪದ್ಧತಿ ಎಷ್ಟು ನಿರಂತರ? ಎಷ್ಟು ಸಮಗ್ರ?
ಮಗುವಿನ ಕಲಿಕೆಯ ಕುರಿತಾದ ಸ್ಪಷ್ಟ ಚಿತ್ರಣವನ್ನು ಪಡೆಯಲು ಶಿಕ್ಷಕರು ನೀಡುವ ‘ತೀರ್ಪು’ಗಳೇ ಅಂತಿಮವಲ್ಲ. ಆದರೆ, ಅವು ಮುಖ್ಯವಾಗಿರುವುದು ಸುಳ್ಳಲ್ಲ. ಇವು ಹೆಚ್ಚು ಸ್ಷಷ್ಟವೂ, ವಿಶ್ವಾಸಾರ್ಹವೂ ಮತ್ತು ಮಗುವಿನ ಸರ್ವಾಂಗೀಣ ಬೆಳವಣಿಗೆ ಯನ್ನು ಆಧರಿ ಸಿಯೂ ಇರಬೇಕಾದದ್ದು ಅವಶ್ಯಕ. ಶಿಕ್ಷಕರು ಬಳಸುವ ಮೌಲ್ಯ ಮಾಪನ ತಂತ್ರಗಳು ಮಗುವಿನ ಬಲ ಮತ್ತು ದೌರ್ಬಲ್ಯಗಳಿಗೆ ಸಂವೇದನಾ ಶೀಲವಾಗಿರಬೇಕು. ಮೌಲ್ಯಮಾಪನವು ಮಾನವೀಯವಾಗಬೇಕಿದೆ. ಪ್ರತಿ ವಿದ್ಯಾರ್ಥಿಯೂ ಭಿನ್ನ ಸಾಮಾಜಿಕ ಮತ್ತು ಕೌಟುಂಬಿಕ ಹಿನ್ನೆಲೆಯನ್ನು ಹೊಂದಿರುತ್ತಾನೆ. ಆದ್ದರಿಂದ ಮೌಲ್ಯಮಾಪನವು ವಿದ್ಯಾರ್ಥಿಯ ಅನನ್ಯತೆಯನ್ನು ಗಣನೆಗೆ ತೆಗೆದು ಕೊಳ್ಳುವುದು ಅವಶ್ಯಕ. ಪಠ್ಯವಿಷಯವೊಂದರ ಕಲಿಕೆಗೆ ಸಂಬಂಧಿಸಿದ ಸಾಧನೆಗಳನ್ನು ಮಗುವಿನ ಸಹಜ ವರ್ತನೆಗಳಲ್ಲಿ ವಿವಿಧ ಸಾಧನ ಮತ್ತು ತಂತ್ರಗಳ ಸಹಾಯದಿಂದ ಹುಡುಕುವುದೇ ರೂಪಣಾತ್ಮಕ ಮೌಲ್ಯಮಾಪನ. ಇದು ತೀರಾ ಹೊಸದಾದ ಪರಿಕಲ್ಪನೆ. ಇದಕ್ಕೆ ಅಗತ್ಯವಾದ ಸಾಧನಗಳು, ತಂತ್ರಗಳು ಮತ್ತು ಅಳತೆಗೋಲುಗಳನ್ನು ಪ್ರತಿ ವಿದ್ಯಾರ್ಥಿಯ ವೈಶಿಷ್ಟ್ಯಗಳನ್ನು ಲಕ್ಷಿಸಿಕೊಂಡೇ ರೂಪಿಸ ಬೇಕಾಗುತ್ತದೆ. ಶೈಕ್ಷಣಿಕ ಸಾಧನಗಳ ಜೊತೆಗೆ, ಮಗುವಿನ ಸಾಮಾಜಿಕ, ಭಾವನಾತ್ಮಕ, ವೈಜ್ಞಾನಿಕ ಕೌಶಲಗಳು ಮತ್ತು ಮನೋ ಧೋರಣೆಗಳಲ್ಲಿರುವ ಧನಾತ್ಮಕ ಅಂಶಗಳನ್ನು ಗುರುತಿಸುವ ಮೂಲಕ ಸಮಗ್ರ ವ್ಯಕ್ತಿತ್ವದ ಮೌಲ್ಯಮಾಪನ ನಡೆಯಬೇಕು. ರೂಪಣಾತ್ಮಕ ಮೌಲ್ಯಮಾಪನವು ಪ್ರತಿಫಲನಾತ್ಮಕ ವಿದ್ಯಾರ್ಥಿಯನ್ನೂ, ಪ್ರತಿಫಲನಾತ್ಮಕ ಶಿಕ್ಷಕರನ್ನೂ ರೂಪಿಸಬಲ್ಲದು. ರೂಪಣಾತ್ಮಕ ಮೌಲ್ಯಮಾಪ ನವು ಕಲಿಕೆಯ ಅವಕಾಶ ಮತ್ತು ಪ್ರೇರಣೆಯನ್ನು ಒದಗಿಸುತ್ತದೆ.

ಆದರೆ, ಕಲಿಕೆ ಮತ್ತು ಮೌಲ್ಯಮಾಪನಗಳ ನಡುವಿನ ಅಂತರವನ್ನು ಹೋಗಲಾಡಿಸುವ ಪ್ರಯತ್ನವಾಗಿ ಹಿಂದಿನ ತರಗತಿಗಳಲ್ಲಿ ಜಾರಿಗೆ ತಂದಿರುವ ಸಿ.ಸಿ.ಇ.ಗೂ ಮತ್ತು  ಈ ಪದ್ಧತಿಗೂ ಸಾಕಷ್ಟು ತಾತ್ವಿಕ ವ್ಯತ್ಯಾಸಗಳಿವೆ. ಈಗ ಹತ್ತನೇ ತರಗತಿಗೆ ಅಳವಡಿ ಸಲಾದ ಮೌಲ್ಯಮಾಪನ ಪದ್ಧತಿಯು ವರ್ಷಾಂತ್ಯದಲ್ಲಿ ಬರುವ ಬಾಹ್ಯ ಪರೀಕ್ಷೆಗೇ ಹೆಚ್ಚು ಮಹತ್ವ ನೀಡುತ್ತದೆ. ರೂಪಣಾತ್ಮಕ ಮೌಲ್ಯಮಾಪನ ಇರುವುದಾದರೂ ಅವು ನಿಗದಿತ ಅಂತರದಲ್ಲಿ ನಡೆಯುವ ಕಿರುಪರೀಕ್ಷೆಗಳು ಮತ್ತು ಶಿಕ್ಷಕರೇ ನಿರ್ಧರಿಸುವ ಚಟುವಟಿಕೆ ಗಳನ್ನು ಒಳಗೊಂಡಿರುತ್ತವೆ. ಆಂತರಿಕ ಮೌಲ್ಯಮಾಪನದ ಕಿರುಪರೀಕ್ಷೆಗಳು ಸಂಕಲನಾತ್ಮಕ ಸ್ವರೂಪದಲ್ಲಿರುವುದರಿಂದ ಮತ್ತು ಚಟುವಟಿಕೆಗಳು ಮೌಲ್ಯಮಾಪನಕ್ಕಾಗಿಯೇ ಹಮ್ಮಿಕೊಳ್ಳುವುದರಿಂದ ಇವುಗಳು ವಿದ್ಯಾರ್ಥಿಗೂ ಶಿಕ್ಷಕರಿಗೂ ಮಾಹಿತಿಯನ್ನು ಒದಗಿಸುತ್ತಾ ಕಲಿಕೆಯ ಭಾಗವಾಗಿ ‘ನಿರಂತರ’ವಾಗುವ ಸಾಧ್ಯತೆ ಕಡಿಮೆ. ಹಿಂದಿನ ತರಗತಿಗಳಲ್ಲಿ ದೈಹಿಕ ಶಿಕ್ಷಣ, ಕಲಾ ಶಿಕ್ಷಣ ಮತ್ತು ಕಾರ್ಯ ಶಿಕ್ಷಣಗಳನ್ನು ಪಠ್ಯವಿಷಯಗಳಾಗಿ ಸ್ವೀಕರಿಸಿ ತರಗತಿ ಪ್ರಕ್ರಿಯೆಗಳಲ್ಲಿ ಅವುಗಳ ಮಹತ್ವವನ್ನು ಹೆಚ್ಚಿಸಲಾಗಿದೆ. ಹತ್ತನೇ ತರಗತಿಯಲ್ಲಿ ಮಾತ್ರ ಅವು ಬಿ- ಭಾಗದಲ್ಲಿ ಮುಂಚಿನಂತೆ ಕಡಿಮೆ ಮಹತ್ವದ ವಿಷಯಗಳಾಗಿ ಮುಂದುವರಿಯುತ್ತವೆ. ಅಂದರೆ, ಈ ಹಿಂದಿನಂತೆ ಪಠ್ಯವಿಷಯದ ಶಿಕ್ಷಕರು ತಮಗೆ ಅವಧಿ ಕಡಿಮೆಯಾದಲ್ಲಿ ದೈಹಿಕ ಶಿಕ್ಷಣದ ಅವಧಿಗಳನ್ನೋ, ಕಲಾಶಿಕ್ಷಣದ ಅವಧಿಗಳನ್ನೋ ತೆಗೆದುಕೊಳ್ಳುವ ಪರಿಪಾಠ ಮುಂದುವರಿಯಲಿದೆ. ಈ ಪದ್ಧತಿಯನ್ನು ಸಮಗ್ರ ಮತ್ತು ನಿರಂತರ ಮೌಲ್ಯಮಾಪನ ಎಂದು ಕರೆಯಲಾಗಿದ್ದರೂ, ಅಂತಿಮ ಪರೀಕ್ಷೆಯೇ ಮಗುವನ್ನು ಪಾಸೋ ಫೇಲೋ ಎಂದು ನಿರ್ಧರಿಸುವ ಸಾಂಪ್ರದಾಯಿಕ ಪರೀಕ್ಷಾ ಪದ್ಧತಿಯಿಂದ ಈ ಪದ್ಧತಿ ಭಿನ್ನವಾಗಿಲ್ಲ. ಈ ಮಿತಿಗಳಿಗೆ ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯೇ ಕಾರಣ ಎನ್ನಬಹುದು.  

ಕಲಿಕೆಯ ಪ್ರಕ್ರಿಯೆಯನ್ನೂ ಮೌಲ್ಯಮಾಪನ ಕ್ಕೊಳಪಡಿಸುವ, ವಿದ್ಯಾರ್ಥಿಯ ಶೈಕ್ಷಣಿಕ ಸಾಧನೆಗಳ ಜೊತೆಗೆ ಸಾಮಾಜಿಕ ಕೌಶಲಗಳು, ಜೀವನ ಕೌಶಲಗಳು ಮತ್ತು ವೈಜ್ಞಾನಿಕ ಕೌಶಲಗಳನ್ನೂ, ವಿದ್ಯಾರ್ಥಿಯ ಬಲ-ದೌರ್ಬಲ್ಯಗಳಿಗೆ ಸಂವೇದನಾ ಶೀಲವಾಗಿರುವ ಮಾನವೀಯ ಮೌಲ್ಯಮಾಪನ ಪದ್ಧತಿಗೆ ಇದು ಉತ್ತಮ ಸೇತುವೆ ಆಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT