ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಗೋವಾದಿಂದ ಉಳಗಾಕ್ಕೆ!

Last Updated 28 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಕಾರವಾರ: ಗೋವಾದ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿ­ಯು­ತ್ತಿರುವ ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ನೂರಾರು ಕಿ.ಮೀ. ದೂರವಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಉಳಗಾಕ್ಕೆ ಬರಬೇಕು. ಇಲ್ಲಿಗೆ ಬರುವ ಮಕ್ಕಳು ತಮ್ಮ ಸ್ವಂತ ಖರ್ಚಿನಲ್ಲೇ ವಸತಿ ವ್ಯವಸ್ಥೆ ಮಾಡಿಕೊಂಡು ಪರೀಕ್ಷೆಯನ್ನು ಎದುರಿಸಬೇಕಾದ ದುಃಸ್ಥಿತಿ ಇದೆ.

ಹಲವು ವರ್ಷಗಳಿಂದ ಅಲ್ಲಿನ ವಿದ್ಯಾರ್ಥಿಗಳು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಶುಕ್ರವಾರದಿಂದ ಆರಂಭಗೊಂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಗೋವಾದ ಕನ್ನಡ ಶಾಲೆಯ ಒಟ್ಟು 70 ವಿದ್ಯಾರ್ಥಿಗಳು ಉಳಗಾ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದಾರೆ. ಅವರಲ್ಲಿ 35 ಬಾಲಕರು, 35 ಬಾಲಕಿ­ಯರು ಇದ್ದಾರೆ.

ಬಾಲಕಿಯರು ಉಳ­ಗಾದ ಹಾಸ್ಟೆಲ್‌ನಲ್ಲಿ ತಂಗಿದ್ದು, ಬಾಲ­ಕರು ಬಾಡಿಗೆ ಕೊಠಡಿಯಲ್ಲಿ ಉಳಿದು­ಕೊಂಡಿ­ದ್ದಾರೆ. ಪರೀಕ್ಷೆಗಳು ಏಪ್ರಿಲ್‌ 9ವರೆಗೆ ನಡೆಯಲಿದ್ದು, ಅಲ್ಲಿವರೆಗೆ ಆ ಮಕ್ಕಳು ಇಲ್ಲಿಯೇ ತಂಗುತ್ತಾರೆ. ಈ ಮಕ್ಕಳ ಜೊತೆಗೆ ಅಲ್ಲಿನ ಶಿಕ್ಷಣ ಸಂಸ್ಥೆಯ ಇಬ್ಬರು ಶಿಕ್ಷಕರು ಹಾಗೂ ಒಬ್ಬರು ಶಿಕ್ಷಕಿಯರು ಬಂದಿದ್ದಾರೆ. 
ಕಾಳಿದಾಸ ಶಿಕ್ಷಣ ಸಂಸ್ಥೆಯು ಗೋವಾದ ಬೈನಾ ಹಾಗೂ ವಾಸ್ಕೊ ಎಂಬಲ್ಲಿ ಕನ್ನಡ ಮಾಧ್ಯಮ ಪ್ರೌಢಶಾಲೆಗಳನ್ನು ನಡೆಸುತ್ತಿದೆ.

ಉತ್ತರ ಕರ್ನಾಟಕದಿಂದ ವಲಸೆ ಹೋದವರ 300ಕ್ಕೂ ಅಧಿಕ ಮಕ್ಕಳು ಅಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಗೋವಾ ಸರ್ಕಾರ ಆ ಪ್ರೌಢ­ಶಾಲೆ­ಗ­ಳಿಗೆ ಅನುದಾನ ನೀಡು­ತ್ತದೆ. ಆದರೆ, ಪಠ್ಯ ಮಾತ್ರ ಕರ್ನಾ­ಟಕದ್ದು. ಎಸ್‌­ಎಸ್‌­ಎಲ್‌ಸಿ ಪರೀಕ್ಷೆ ಬರೆ­ಯಲು ಗೋವಾ­ದಲ್ಲಿ ಯಾವುದೇ ಪರೀಕ್ಷಾ ಕೇಂದ್ರ­ಗಳಿಲ್ಲ. ಹಾಗಾಗಿ ಅಲ್ಲಿನ ವಿದ್ಯಾರ್ಥಿ­ಗಳು ಕಾರವಾರ ಸಮೀಪದ ಉಳಗಾಕ್ಕೆ ಬಂದು ಪರೀಕ್ಷೆ ಬರೆ­ಯುತ್ತಿದ್ದಾರೆ.

ಸಚಿವರ, ಅಧಿಕಾರಿಗಳ ನಿರ್ಲಕ್ಷ್ಯ: ಗೋವಾ­­ದಲ್ಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕೇಂದ್ರ ತೆರೆಯಬೇಕು ಎಂಬು­ದು ಶಾಲೆಯ ಆಡಳಿತ ಮಂಡಳಿ, ಪಾಲ­ಕರ ಹಾಗೂ ಗೋವಾ ಕನ್ನಡಿಗರ ಕೂಗು. ಆದರೆ, ಇಲ್ಲಿನ ಸಚಿವರು, ಅಧಿ­ಕಾರಗಳ ನಿರ್ಲಕ್ಷ್ಯದಿಂದ ವಿದ್ಯಾ­ರ್ಥಿ­ಗಳು ಸಂಕಷ್ಟ ಅನು­ಭವಿ­ಸುವಂತಾಗಿದೆ.
ಎಲ್ಲರೂ ಕೂಲಿ ಕಾರ್ಮಿಕರ ಮಕ್ಕಳು: ಉತ್ತರ ಕರ್ನಾಟಕದ ಬಾಗಲಕೋಟೆ, ಬೀದರ್‌, ಧಾರವಾಡ, ಬೆಳಗಾವಿ, ವಿಜಾಪುರ ಮತ್ತಿತರ ಜಿಲ್ಲೆಗಳಿಂದ ಸಾವಿರಾರು ಮಂದಿ ಗೋವಾಕ್ಕೆ ವಲಸೆ ಹೋಗಿ ಕೂಲಿ ಕಾರ್ಮಿಕರಾಗಿ ಬದುಕು ಸಾಗಿಸುತ್ತಿದ್ದಾರೆ.

ತಮಗೆ ಸಿಗುವ ಅಲ್ಪ ಸ್ವಲ್ಪ ಹಣವನ್ನು ಉಳಿಸಿ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಕಾಳಿ­ದಾಸ ಶಿಕ್ಷಣ ಸಂಸ್ಥೆಯಲ್ಲಿ ಕಲಿ­ಯು­ತ್ತಿರುವ ಮಕ್ಕಳು ಪರೀಕ್ಷೆ ಬರೆಯಲು ಸಾವಿ­ರಾರು ರೂ. ಖರ್ಚು ಮಾಡಿ­­ಕೊಂಡು ಉಳಗಾದ ಸಮೀಪ ಉಳಿ­ದು­ಕೊಳ್ಳ­­­ಬೇಕಾಗಿದೆ. ಈ ವೆಚ್ಚ­ವನ್ನು ಭರಿ­ಸಲು ಪಾಲಕರು ಪರ­ದಾಡು­ವಂತಾ­ಗಿದೆ.  ‘ಗೋವಾದಲ್ಲೇ ಪರೀಕ್ಷಾ ಕೇಂದ್ರ­­ ತೆರೆ­ಯಬೇಕು. ಇಲ್ಲ­ವೇ ಪರೀಕ್ಷೆ ಬರೆ­ಯಲು ತಗಲುವ ವೆಚ್ಚ­ವನ್ನು ಕರ್ನಾ­ಟಕ ಸರ್ಕಾರ ಭರಿ­ಸಲಿ’ ಎನ್ನು­ತ್ತಾರೆ ಸ್ಥಳೀಯ ಕರುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಎನ್‌. ದತ್ತ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT