ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಐ ರೂಪಾ ತಂಬದ ವಿರುದ್ಧ ಪ್ರಕರಣ ದಾಖಲು

Last Updated 25 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸಿದ್ದ  ಆರೋಪದಡಿ ವಿಜಯನಗರ ಎಸ್‌ಐ ರೂಪಾ ತಂಬದ ವಿರುದ್ಧ ರಾಜಾಜಿನಗರ  ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ರೂಪಾ ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡ ಬೆನ್ನಲ್ಲೆ, ಈ ಪ್ರಕರಣ ದಾಖಲಾಗಿದೆ.

‘ಭಾರತೀಯ ದಂಡ ಸಂಹಿತೆಯ ಸೆಕ್ಷನ್‍ 309 (ಆತ್ಮಹತ್ಯೆಗೆ ಯತ್ನ) ಅಡಿಯಲ್ಲಿ ಜುಲೈ 23ರಂದು ಪ್ರಕರಣ ದಾಖಲಾಗಿದೆ. ರಾಜಾಜಿ ನಗರ ಪೊಲೀಸ್‍ ಇನ್‌ಸ್ಪೆಕ್ಟರ್‌ ವಿದ್ಯಾಧರ್ ಅವರು ಪ್ರಕರಣದ ತನಿಖೆ ನಡೆಸಿ, ವರದಿ ನೀಡಲಿದ್ದಾರೆ’ ಎಂದು ನಗರ ಹೆಚ್ಚುವರಿ ಪೊಲೀಸ್ ಕಮಿಷನರ್ (ಪಶ್ಚಿಮ ವಿಭಾಗ) ಚರಣ್‍ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಕರಣ ಸಂಬಂಧ ಅವರನ್ನು ಅಮಾನತು ಮಾಡಿಯೇ ತನಿಖೆ ನಡೆಸಬೇಕೆಂದೇನೂ ಇಲ್ಲ. ಹಾಗೆಯೇ ತನಿಖೆ ಮಾಡಬಹುದು’ ಎಂದು ಸ್ಪಷ್ಟಪಡಿಸಿದರು.

ಅಲ್ಲದೇ, ‘ರೂಪಾ  ಮಾಡಿರುವ  ಆರೋಪದ ಹಿನ್ನೆಲೆಯಲ್ಲಿ, ವಿಜಯನಗರ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಂಜೀವ್‌ ಗೌಡ ವಿರುದ್ಧ ಇಲಾಖಾ ತನಿಖೆ ನಡೆಸಲಾಗುವುದು. ತನಿಖಾಧಿಕಾರಿ ನೀಡುವ ವರದಿ ಆಧರಿಸಿ, ಕ್ರಮ ಕೈಗೊಳ್ಳಲಾಗು ವುದು’ ಎಂದು ರೆಡ್ಡಿ ಅವರು ಹೇಳಿದರು.

ಭಾರತದಲ್ಲಿ ಆತ್ಮಹತ್ಯೆ ದಂಡನೀಯ ಅಪರಾಧ. ಆತ್ಮಹತ್ಯೆಗೆ ಯತ್ನಿಸುವವರ ವಿರುದ್ಧ ಐಪಿಸಿ ಸೆಕ್ಷನ್‍ 309ರ ಅಡಿ ಪ್ರಕರಣ ದಾಖಲಿಸಬಹುದು. ಗರಿಷ್ಠ ಒಂದು ವರ್ಷ ಶಿಕ್ಷೆ ಇಲ್ಲವೇ ದಂಡ  ಇಲ್ಲವೇ ಎರಡನ್ನೂ ನ್ಯಾಯಾಲಯ ವಿಧಿಸಬಹುದು.

ಹೇಳಿಕೆ ದಾಖಲು:  ‘ಆಸ್ಪತ್ರೆಯಿಂದ ಬಿಡುಗಡೆ ಆಗಿರುವ ರೂಪಾ ಅವರ ಹೇಳಿಕೆ ಪಡೆಯಲಾಗಿದೆ’ ಎಂದು ವಿದ್ಯಾನಗರ ಪೊಲೀಸರು ತಿಳಿಸಿದ್ದಾರೆ.

ಶನಿವಾರ ಬಿಡುಗಡೆ:  ‘ರೂಪಾ ತಂಬದ ಶನಿವಾರ ಸಂಜೆ ಆಸ್‍ಪತ್ರೆಯಿಂದ ಬಿಡುಗಡೆ ಆಗಿದ್ದು, ವೈದ್ಯರು 15 ದಿನಗಳ ವಿಶ್ರಾಂತಿಗೆ ಸೂಚಿಸಿದ್ದಾರೆ’ ಎಂದು ಕುಟುಂಬ ಸದಸ್ಯರು ‘ಪ್ರಜಾವಾಣಿ’ಗೆ ತಿಳಿಸಿದರು.

ವಿಜಯನಗರ ಠಾಣೆಯಲ್ಲಿ ಎಸ್‍ಐ ಆಗಿರುವ ರೂಪಾ, ರಾಜಾಜಿ ನಗರದಲ್ಲಿರುವ ಪೊಲೀಸ್‌ ವಸತಿ ಕಟ್ಟಡದಲ್ಲಿ  ಜುಲೈ 19ರಂದು ನಿದ್ರೆ ಮಾತ್ರೆಗಳನ್ನು  ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದರು. 

ಬಳಿಕ ಅವರನ್ನು ರಾಜಾಜಿನಗರದ ಸುಗುಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತ್ಮಹತ್ಯೆ ಯತ್ನಿಸಲು ಇನ್‌ಸ್ಪೆಕ್ಟರ್‌  ಸಂಜೀವ್‌ ಗೌಡ ಕಿರುಕುಳವೇ ಕಾರಣ ಎಂದು  ರೂಪಾ ಆರೋಪಿಸಿದ್ದರು.

ಸಂಜೀವ್ ಗೌಡ ಎತ್ತಂಗಡಿ
ರೂಪಾ ತಂಬದ ಅವರಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ವಿಜಯನಗರ ಠಾಣೆ ಇನ್‌ಸ್ಪೆಕ್ಟರ್‌ ಸಂಜೀವ್‌ ಗೌಡ ಸೇರಿದಂತೆ ನಗರ ವ್ಯಾಪ್ತಿಯಲ್ಲಿ 20ಕ್ಕೂ ಅಧಿಕ ಇನ್‌ಸ್ಪೆಕ್ಟರ್‌ಗಳನ್ನು ಸೋಮವಾರ ವರ್ಗಾವಣೆ ಮಾಡಲಾಗಿದೆ.

ನಗರ ವ್ಯಾಪ್ತಿಯಲ್ಲಿ ಒಬ್ಬ ಡಿವೈಎಸ್ಪಿ ದರ್ಜೆಯ ಅಧಿಕಾರಿಯನ್ನೂ ವರ್ಗ ಮಾಡಿ ಎಡಿಜಿಪಿ(ಆಡಳಿತ ವಿಭಾಗ) ಪ್ರವೀಣ್ ಸೂದ್ ಅವರು ಆದೇಶ ಹೊರಡಿಸಿದ್ದಾರೆ.

ಸಂಜೀವ್‌ ಗೌಡ ಅವರನ್ನು ವಿಕಾಸ್ ಸೌಧದ ಭದ್ರತಾ ವಿಭಾಗಕ್ಕೆ ನಿಯೋಜಿಸಲಾಗಿದೆ.

ಇನ್ನುಳಿದಂತೆ, ಎಚ್‍.ಜೆ.ಶಿವಶಂಕರ್‍ ಅವರನ್ನು ಗಿರಿನಗರ ಠಾಣೆಯಿಂದ ವಿಜಯ ನಗರ ಸಂಚಾರ ಠಾಣೆಗೆ, ಎಸ್‍.ಆರ್‍.ಚಂದ್ರಾದರ್ ಅವರನ್ನು ಏರ್‌ಪೋರ್ಟ್‌ ಠಾಣೆಯಿಂದ ಸಿಸಿಬಿಗೆ, ವೀರೇಂದ್ರ ಪ್ರಸಾದ್ ಅವರನ್ನು ಸಿಸಿಬಿಯಿಂದ ಚಂದ್ರಾಲೇಔಟ್‌ ಠಾಣೆಗೆ, ಕೆ.ಸಿ.ಗಿರಿ ಅವರನ್ನು ಸಿಸಿಬಿಯಿಂದ ಸುಬ್ರಹ್ಮಣ್ಯಪುರ ಠಾಣೆಗೆ ಹಾಗೂ ಗೋಪಾಲ ಕೃಷ್ಣೆಗೌಡ ಅವರನ್ನು ವೈಟ್‌ಫೀಲ್ಡ್‌ ಸಂಚಾರ ಠಾಣೆಯಿಂದ ಬೆಂಗಳೂರು ನಿಯಂತ್ರಣ ಕೊಠಡಿಗೆ ವರ್ಗ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT