ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌.ಪಿ. ರಸ್ತೆ ವ್ಯಾಪಾರಿಗಳಿಗೆ ತಟ್ಟಿದ ಆನ್‌ಲೈನ್‌ ಬಿಸಿ

Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಮೊಬೈಲ್, ಕಂಪ್ಯೂಟರ್‌ ಹಾರ್ಡ್‌ವೇರ್‌ ಹಾಗೂ ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಮೇಲೆ ಆನ್‌ಲೈನ್‌ ಶಾಪಿಂಗ್‌ ತಾಣಗಳು ಇಂದು ಶೇ 10ರಿಂದ 65ರವರೆಗೆ ರಿಯಾಯ್ತಿ ಘೋಷಿಸುತ್ತಿವೆ. ಆ ಮೂಲಕ ಗ್ರಾಹಕರನ್ನು ಸೆಳೆಯುವ ತಂತ್ರ ಹೂಡುತ್ತಿವೆ.

ಕಳೆದ ಒಂದು ವರ್ಷದಿಂದ ಆನ್‌ಲೈನ್‌ ವಹಿವಾಟು ಹೆಚ್ಚಾಗುತ್ತಲೇ ಇದೆ. ಮಾರುಕಟ್ಟೆ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿರುವ ಆನ್‌ಲೈನ್‌ ಕಂಪೆನಿಗಳ ಈ ತಂತ್ರದಿಂದ ನಗರದ ಎಸ್‌.ಪಿ. ರಸ್ತೆ (ಸಾದರ ಪತ್ರಪ್ಪ ರಸ್ತೆ) ಯಲ್ಲಿರುವ ನೂರಾರು ಕಂಪ್ಯೂಟರ್‌ ಹಾಗೂ ಎಲೆಕ್ಟ್ರಾನಿಕ್ಸ್‌ ಬಿಡಿಭಾಗಗಳ ಮಾರಾಟ ಹಾಗೂ ಸೇವಾ ಮಳಿಗೆಗಳ ವಹಿವಾಟಿನ ಮೇಲೆ ಭಾರಿ ಪರಿಣಾಮ ಬೀರಿದೆ. ಒಂದು ವರ್ಷದಿಂದ ಶೇ 50ರಷ್ಟು ವಹಿವಾಟು ಕಡಿಮೆ ಆಗಿದೆಯಂತೆ.

ದೇಶದಾದ್ಯಂತ ಕಳೆದೊಂದು ವರ್ಷದಿಂದ ಆನ್‌ಲೈನ್‌ ವಹಿವಾಟು ಹೆಚ್ಚಾಗಿದೆ. ಕುಳಿತಲ್ಲೇ ತಮಗಿಷ್ಟದ ವಸ್ತುಗಳನ್ನು ಆಯ್ಕೆ ಮಾಡಿ, ಮನೆ ಬಾಗಿಲಿಗೆ ತರಿಸಿಕೊಳ್ಳುವ ಜೊತೆಗೆ ಮಳಿಗೆಗಳಿಗಿಂತ ಶೇ 15ರಷ್ಟು ಕಡಿಮೆ ಬೆಲೆಗೆ ಆ ವಸ್ತು ದೊರೆಯುತ್ತದೆ ಎಂಬ ಕಾರಣಕ್ಕೆ ಗ್ರಾಹಕರು ಹೆಚ್ಚಾಗಿ ಆನ್‌ಲೈನ್‌ ವಹಿವಾಟಿನತ್ತ ಮುಖ ಮಾಡುತ್ತಿದ್ದಾರೆ. ಇತ್ತೀಚೆಗೆ ಕೆಲವು ಆನ್‌ಲೈನ್‌ ವಹಿವಾಟು ಕಂಪೆನಿಗಳು ‘ಬಿಗ್‌ ಬಿಲಿಯನ್‌ ಸೇಲ್‌ ಡೇ’ ಹೆಸರಿನಲ್ಲಿ ಭಾರಿ ರಿಯಾಯ್ತಿ ಘೋಷಿಸಿ ವಹಿವಾಟು ನಡೆಸಿದ್ದರಿಂದ ಚಿಲ್ಲರೆ ಹಾಗೂ ಸಗಟು ವ್ಯಾಪಾರಿಗಳಿಗೆ ನಡುಕ ಹುಟ್ಟಿತ್ತು. 

‘ಇ– ಕಾಮರ್ಸ್‌ ಕಂಪೆನಿ­ಗಳು ಆನ್‌ಲೈನ್‌­ನಲ್ಲಿ ಶೇ 20ರಿಂದ 70ರಷ್ಟು ರಿಯಾಯ್ತಿಗೆ ವಸ್ತು­ಗಳನ್ನು ಮಾರಾಟ ಮಾಡುತ್ತಿವೆ. ಉದಾಹರಣೆಗೆ ಚಿಲ್ಲರೆ ಅಂಗಡಿಯವರು ಒಂದು ಕಂಪ್ಯೂಟರ್ ಬಿಡಿಭಾಗವನ್ನು ನೂರು ರೂಪಾಯಿಗೆ ಮಾರಿದರೆ, ಇ–ಕಾಮರ್ಸ್‌ ಕಂಪೆನಿಗಳು 70ರಿಂದ 80 ರೂಪಾಯಿಗೆ ಮಾರುತ್ತವೆ. ಬೇರೆ ಬೇರೆ ರಾಜ್ಯಗಳಲ್ಲಿ ತೆರಿಗೆ ವಿಧಿಸುವ ಪ್ರಮಾಣದಲ್ಲಿ ವ್ಯತ್ಯಾಸವಿದೆ.

ಕಡಿಮೆ ತೆರಿಗೆ ವಿಧಿಸುವ ರಾಜ್ಯಗಳಲ್ಲಿ ಹಾರ್ಡ್‌ವೇರ್‌ ಉಪಕರಣಗಳನ್ನು ಖರೀದಿಸಿ, ನಮ್ಮ ರಾಜ್ಯದಲ್ಲಿ ಮಾರುತ್ತಾರೆ. ಚಿಲ್ಲರೆ ವ್ಯಾಪಾರಿಗಳು ಖರೀದಿಸುವ ಮೊತ್ತಕ್ಕೇ ಈ ಕಂಪೆನಿಗಳು ಖರೀದಿಸುತ್ತವೆ. ಆದರೆ ಮಾರಾಟ ಮಾಡುವುದು ಮಾತ್ರ ಕಡಿಮೆ ಬೆಲೆಗೆ. ಇದರಿಂದಾಗಿ ನಮಗೆ ಶೇ 25ರಷ್ಟು ಬೇಡಿಕೆ ಕಡಿಮೆ ಆಗಿದೆ’ ಎಂದು ವ್ಯಾಪಾರ ಕಡಿಮೆಯಾದ ಬಗ್ಗೆ ಮಾಹಿತಿ ನೀಡುತ್ತಾರೆ ಎಸ್‌.ಪಿ. ರಸ್ತೆಯ ಟ್ಯಾಗ್‌ ಟೆಕ್ನಾಲಜಿ ಮತ್ತು ಗ್ಯಾಜೆಟ್ಸ್‌ ಕಂಪೆನಿಯ ಕರ್ನಾಟಕ ಬ್ರಾಂಚ್‌ ವ್ಯವಸ್ಥಾಪಕ ಭೂಷಣ್‌ ಸಿಂಗ್ಲಾ.

‘ಆನ್‌ಲೈನ್‌ ವಹಿವಾಟು ಕಂಪೆನಿಗಳು ಸಾಂಪ್ರ­ದಾಯಿಕ ಮಾರುಕಟ್ಟೆಯನ್ನು ನಾಶಮಾಡಲು ನೋಡುತ್ತಿವೆ. ಉದ್ದೇಶಪೂರ್ವಕವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿವೆ. ವಿದೇಶಿ ಬಂಡವಾಳ ಬಳಸಿಕೊಂಡು ಹೀಗೆ ಮಾಡುತ್ತಿವೆ. ಮುಂದೊಂದು ದಿನ ಚಿಲ್ಲರೆ ವ್ಯಾಪಾರಿಗಳನ್ನು ಇಲ್ಲದಂತೆ ಮಾಡಿ, ತಮ್ಮ ಸಾಮ್ರಾಜ್ಯ ಸ್ಥಾಪಿಸಿಕೊಳ್ಳಲು ತೀರ್ಮಾನಿಸಿದಂತೆ ಕಾಣುತ್ತಿದೆ. ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಹಾರ್ಡ್‌ವೇರ್‌ಗೆ ಸಂಬಂಧಿಸಿದ 3ರಿಂದ 10ಲಕ್ಷ ಚಿಲ್ಲರೆ ವ್ಯಾಪಾರ ಮಳಿಗೆಗಳಿವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುತ್ತಿದ್ದ ವ್ಯಾಪಾರಿಗಳ ಸಂಖ್ಯೆ ಕಡಿಮೆಯಾಗಿದೆ. ಆನ್‌ಲೈನ್‌ನಲ್ಲೇ ಕಡಿಮೆ ಬೆಲೆಗೆ ಕಂಪ್ಯೂಟರ್‌, ಮೊಬೈಲ್‌ ಬಿಡಿಭಾಗಗಳು ಸಿಗುತ್ತಿರುವಾಗ ಅಂಗಡಿಗಳಿಗೆ ಹೋಗಿ ಖರೀದಿಸಲು ಹಿಂದೇಟು ಹಾಕುತ್ತಾರೆ.

ಬೆಂಗಳೂರು ಒಂದರಲ್ಲೇ ಕಂಪ್ಯೂಟರ್‌, ಹಾರ್ಡ್‌ವೇರ್‌ ಉಪಕರಣಗಳನ್ನು ಮಾರಾಟ ಮಾಡುವ, ಸೇವೆ ಒದಗಿಸುವ ಇಂಥ 3 ಸಾವಿರ ಚಿಲ್ಲರೆ ಮಾರಾಟ ಮಳಿಗೆಗಳಿವೆ.  ರಾಜ್ಯದಾದ್ಯಂತ ಇವು 5 ಸಾವಿರಕ್ಕೂ ಹೆಚ್ಚಿವೆ. ಗ್ರಾಹಕರನ್ನು ಸೆಳೆಯಲು ಇಂಥ ಮಾರುಕಟ್ಟೆ ತಂತ್ರ ಬಳಸುತ್ತಿರುವ ಆನ್‌ಲೈನ್‌ ವಹಿವಾಟು ಕಂಪೆನಿಗಳು ಚಿಲ್ಲರೆ ವ್ಯಾಪಾರಿಗಳನ್ನು ಬೀದಿಪಾಲು ಮಾಡುತ್ತಿವೆ. 25 ವರ್ಷಗಳಿಂದ ಬರುತ್ತಿದ್ದ ಗ್ರಾಹಕರು ಈಗ ಕಾಣದಾಗಿದ್ದಾರೆ. ನಮ್ಮ ಮಳಿಗೆಗಳಲ್ಲಿ ಒಂದು ಲ್ಯಾಪ್‌ಟಾಪನ್ನು ₨40 ಸಾವಿರಕ್ಕೆ ಮಾರಾಟ ಮಾಡಿದರೆ, ಆನ್‌ಲೈನ್‌ ಕಂಪೆನಿಗಳು 30ರಿಂದ 35 ಸಾವಿರಕ್ಕೆ ಮಾರುತ್ತಿವೆ. ಹೀಗೆ ದೊಡ್ಡ ವ್ಯತ್ಯಾಸ ಕಂಡು ಬಂದರೆ ದೂರದಿಂದ ಇಲ್ಲಿಗೆ ಬಂದು ಯಾರು ತಾನೆ ಖರೀದಿಸುತ್ತಾರೆ? ಈ ಅವೈಜ್ಞಾನಿಕ ವ್ಯಾಪಾರದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಾಹಿತಿ ತಂತ್ರಜ್ಞಾನ ಖಾತೆ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ’ ಎನ್ನುತ್ತಾರೆ ಅಸೋಸಿಯೇಷನ್‌ ಫಾರ್‌ ಇನ್‌ಫರ್ಮೇಷನ್‌ ಟೆಕ್ನಾಲಜಿ ಬೆಂಗಳೂರು ವಿಭಾಗದ ಅಧ್ಯಕ್ಷ ಸತ್ಯಪ್ರಸಾದ್.

ಸೋಮವಾರ ವಹಿವಾಟು ಸ್ಥಗಿತ
ಆನ್‌ಲೈನ್‌ ವಹಿವಾಟು ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವ ಉದ್ದೇಶದಿಂದ ಅಸೋಸಿಯೇಷನ್‌ ಫಾರ್‌ ಇನ್‌ಫರ್ಮೇಷನ್‌ ಟೆಕ್ನಾಲಜಿ ವತಿಯಿಂದ ಸೋಮವಾರ (ನ.24) ಮಾಹಿತಿ ತಂತ್ರಜ್ಞಾನ, ಹಾರ್ಡ್‌ವೇರ್‌ ಉಪಕರಣಗಳ ಮಾರಾಟ ಹಾಗೂ ಸೇವೆಗೆ ಸಂಬಂಧಿಸಿದ ಮಳಿಗೆಗಳನ್ನು ಮುಚ್ಚುವ ಮೂಲಕ ಪ್ರತಿಭಟಿಸಲು ವ್ಯಾಪಾರಿಗಳು ಮುಂದಾಗಿದ್ದಾರೆ. ಅಂದು ಎಸ್‌.ಪಿ.ರಸ್ತೆ ಹಾಗೂ ಟೌನ್‌ಹಾಲ್‌ ಎದುರು ಪ್ರತಿಭಟಿಸಲು ತೀರ್ಮಾನಿಸಿರುವುದಾಗಿ ಸತ್ಯಪ್ರಸಾದ್ ಹೇಳುತ್ತಾರೆ.

‘ಒಂದು ವರ್ಷದಿಂದ ಆನ್‌ಲೈನ್‌ ವಹಿವಾಟು ಹೆಚ್ಚಾಗಿರುವುರಿಂದ, ಅದರಲ್ಲೂ ಭಾರಿ ರಿಯಾಯ್ತಿ ಮಾರಾಟ ಮಾಡುತ್ತಿರುವುದರಿಂದ ವ್ಯಾಪಾರದಲ್ಲಿ ಸ್ಪರ್ಧೆ ಹೆಚ್ಚಾಗಿದೆ. ಅಂಗಡಿಗೆ ಬರುವ ಗ್ರಾಹಕರು ನಮ್ಮ ಬೆಲೆಯನ್ನು ಕೇಳಿ, ಆನ್‌ಲೈನ್‌ ಕಂಪೆನಿಗಳ ರಿಯಾಯ್ತಿ ದರವನ್ನೂ ಮೊಬೈಲ್‌ನಲ್ಲಿ ತೋರಿಸುತ್ತಾರೆ. ನಮ್ಮ ನಡುವೆಯೇ ಸ್ಪರ್ಧೆ ಇರುವಾಗ, ಆನ್‌ಲೈನ್‌ ಕಂಪೆನಿಗಳ ವಿರುದ್ಧವೂ ಹೋರಾಟ ಮಾಡಬೇಕಿದೆ. ಈ ವರ್ಷ ವಹಿವಾಟಿನಲ್ಲಿ ಶೇ 50ರಷ್ಟು ಇಳಿಕೆಯಾಗಿದೆ. ಸರ್ಕಾರಕ್ಕೆ ತೆರಿಗೆ ಕಟ್ಟುವುದಲ್ಲದೆ, ನಾವು ನಷ್ಟವನ್ನೂ ಅನುಭವಿಸಬೇಕಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ವರ್ಷಾ ಡಿಜಿಪೋರ್ಟ್‌ ಮಳಿಗೆಯ ಎಂ. ಬಿಹಾರಿಲಾಲ್‌.

700 ಮಳಿಗೆಗಳು
‘ಕಂಪ್ಯೂಟರ್‌ ಹಾರ್ಡ್‌ವೇರ್‌, ಮೊಬೈಲ್‌ ಹಾಗೂ ಎಲೆಕ್ಟ್ರಾನಿಕ್ಸ್‌ ಉಪಕರಣಗಳಿಗೆ ಸಂಬಂಧಿಸಿದ 700 ಮಳಿಗೆಗಳು ಇಲ್ಲಿವೆ. ಕಳೆದ ಒಂದು ವರ್ಷದಿಂದ ವಹಿವಾಟು ಕಡಿಮೆ ಆಗಿರುವುದರಿಂದ ಐದಾರು ಅಂಗಡಿಗಳು ಬಾಗಿಲು ಮುಚ್ಚಿವೆ. ಒಬ್ಬ ವ್ಯಾಪಾರಿ ಆತ್ಮಹತ್ಯೆಗೂ ಪ್ರಯತ್ನಿಸಿದ ಘಟನೆ ನಡೆದಿದೆ. ಆನ್‌ಲೈನ್‌ ವಹಿವಾಟು ಹೀಗೆ ದಿನದಿಂದ ದಿನಕ್ಕೆ ಹೆಚ್ಚಾದರೆ ನಮ್ಮ ವ್ಯಾಪಾರಿಗಳು ಅಂಗಡಿ ಬಾಗಿಲು ಮುಚ್ಚಬೇಕಾಗುತ್ತದೆ. ಇಂಥ ಕಾನೂನುಬಾಹಿರ ವಹಿವಾಟಿನ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಪತ್ರವನ್ನೂ ಬರೆಯಲಿದ್ದೇವೆ’ ಎನ್ನುತ್ತಾರೆ ಬೆಂಗಳೂರು ಎಲೆಕ್ಟ್ರಾನಿಕ್ಸ್‌ ಡೀಲರ್ಸ್‌ ಅಸೋಸಿಯೇಷನ್‌ನ ಅಧ್ಯಕ್ಷ ರಮೇಶ್‌ ಚಂದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT