ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕತೆಯ ಸಂದೇಶ ಸಾರುವ ಚಿತ್ರಗಳು

ಕಲಾಪ
Last Updated 30 ಜೂನ್ 2016, 20:08 IST
ಅಕ್ಷರ ಗಾತ್ರ

ಹೂ ದಳಗಳು ಹಲವಿದ್ದರೂ, ಅವು ಒಂದೇ ತೊಟ್ಟಿನಲ್ಲಿ ಬಂಧಿಯಾಗಿರುತ್ತವೆ. ರೆಂಬೆಗಳು ಕವಲೊಡೆದರೂ ಅವು ಒಂದೇ ಕಾಂಡದಿಂದ ಬಂದಿರುತ್ತವೆ. ಮೀನುಗಳು ಬೇರೆ–ಬೇರೆಯಾಗಿದ್ದರೂ ಈಜಾಡುವ ಕೊಳ ಒಂದೇ...

ಇಂತಹ ಸರಳ ರೂಪಕಗಳಿಂದ ಸಾಮಾನ್ಯನಿಗೂ ಅರ್ಥವಾಗುವಂಥ ಕಲಾಕೃತಿಗಳ ಪ್ರದರ್ಶನ ಲ್ಯಾವೆಲ್ಲೆ ರಸ್ತೆಯ ‘ಗ್ಯಾಲರಿ ಜಿ’ಯಲ್ಲಿ ಆರಂಭಗೊಂಡಿದೆ. ಮುಂಬೈ ಮೂಲದ ಕಲಾವಿದೆ ಪೂನಂ ಅಗರವಾಲ್‌ ಅವರ ಕಲಾಕೃತಿಗಳ ‘ವಿದ್‌ ಇನ್: ದ ವೇ ಔಟ್ ’ ಹೆಸರಿನ ಪ್ರದರ್ಶನ ಜುಲೈ 7ರವರೆಗೆ ನಡೆಯಲಿದೆ. 

ಒಂದರಲ್ಲಿ ಚಿಟ್ಟೆಗಳ ಸಮೂಹ, ದೀಪಗಳ ಸಾಲು, ಚದುರಂಗದ  ಚೌಕಗಳು. ಮತ್ತೊಂದರಲ್ಲಿ ಸರೋವರದ ತಿಳಿನೀರಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವ ಹಂಸಗಳು, ದಡದಲ್ಲಿ ಆನೆಗಳ ಹಿಂಡು, ಹಬ್ಬಿರುವ ಬಳ್ಳಿಯ ಹರವು,

ಇನ್ನೊಂದರಲ್ಲಿ ಗಾಢನೀಲಿಯ ಕಮಲದ ಮೂಲಕ ಇಳಿಬಿಟ್ಟ ಕಾಲುಗಳು,  ಮಗದೊಂದರಲ್ಲಿ ಚಿಟ್ಟೆಯ ರೆಕ್ಕೆಗಳನ್ನೇ ಧರಿಸಿ ದೂರದಲ್ಲಿರುವ ಸುಂದರ ಪುಷ್ಪವನ್ನು ಸೇರಲು ಅಣಿಯಾಗಿರುವ ಹೆಣ್ಣು. ಆ ಪುಷ್ಪಕ್ಕೆ ಪುರುಷ ದಂಡಿನ ಕಾವಲು.

ಹಾಯಿದೋಣಿಯ ಅರಿವೆ, ರಂಗೋಲಿಯ ಚಿತ್ತಾರದ ಸುತ್ತಲು ಕಾಣುವ ಸುಮರಾಶಿ, ಜೋಡಿ ಹೆಜ್ಜೆ, ಹಕ್ಕಿ, ಮೀನು, ಮಹಿಳೆ, ಕಾಗದದ ದೋಣಿ ಹೀಗೆ ಪ್ರತಿಯೊಂದರಲ್ಲೂ ಸಮೂಹ ಪರಿಕಲ್ಪನೆಯ ಬಿಂಬ.

ತೆರೆದ ರಂಗಪರದೆಯ ಮೇಲೆ ಮುಚ್ಚಿದ ತುಟಿಗಳ ರಚನೆಯ ಬಲೂನುಗಳು ವ್ಯಕ್ತಿಯೊಬ್ಬರ ಕೈಯಲ್ಲಿ ಬಂಧಿಯಾಗಿವೆ. ಹಿನ್ನಲೆಯಾಗಿ ಒಡೆದ ದರ್ಪಣದ ಚೂರುಗಳು, ಇದರ ಇಬ್ಬದಿಗಳಲ್ಲೂ ಪುರುಷ ಮುಖದ ದರ್ಶನವಾಗಬೇಕಾದರೆ ನೀವು ಸೂಕ್ಷ್ಮಮತಿಗಳಾಗಿರಲೇಬೇಕು. ಈ ಚಿತ್ರ ಸ್ತ್ರೀ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಅಡ್ಡಿಗಳನ್ನು ಸೂಚಿಸುವಂತಿದೆ.  

‘ಯುನಿಟೆಡ್ ಬೈ ಲವ್ ಐ’ ಎಂಬ ಅಡಿಬರಹದ ಚಿತ್ರ  ಮೊಬೈಲ್‌ನ ಮೀರರ್‌ ಇಮೇಜಿನ ಆಯ್ಕೆಯನ್ನು ನೆನಪಿಸುತ್ತದೆ. ಇಲ್ಲಿಯೂ ಜೋಡಿ ಚಿತ್ರಗಳ ದರ್ಬಾರು ಮುಂದುವರಿದಿದೆ.

ವಿಳಾಸ: ಗ್ಯಾಲರಿ ಜಿ, ದಕ್ಷಿಣ್‌ ಹೋಂಡಾ ಷೋರೂಂ ಹತ್ತಿರ. 7ನೇ ಅಡ್ಡರಸ್ತೆ, ಲ್ಯಾವೆಲ್ಲೆ ರಸ್ತೆ. 

ಸಮಾನತೆಯ ತುಡಿತ
‘ಚಿಕ್ಕಂದಿನಿಂದಲೂ ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇತ್ತು. ಆದರೆ 2009ರಿಂದ ಈ ಕಲೆಯನ್ನೇ ವೃತ್ತಿಯಾಗಿಸಿಕೊಂಡಿದ್ದೇನೆ. ಇದರ ಮೂಲಕವೇ ನಾವೆಲ್ಲ ಒಂದು ಎಂಬ ಭಾವನೆಯನ್ನು ಜನರಲ್ಲಿ ಬೆಳೆಸಬೇಕೆಂಬ ಆಶಯ ನನ್ನದು.

ಜೊತೆಗೆ ಸ್ತ್ರೀ ಸಮಾನತೆ, ಸ್ವಾತಂತ್ರ್ಯ, ಸಬಲಿಕರಣದ ವಿಷಯಗಳೇ ನನ್ನ ಚಿತ್ರಗಳ ಜೀವಾಳವಾಗಿವೆ. ಮುಂದೊಂದು ದಿನ ಅವಕಾಶ, ಅದೃಷ್ಟ ಕೂಡಿ ಬಂದರೆ ಕಲಾ ಶಾಲೆಯೊಂದನ್ನು ಸ್ಥಾಪಿಸಿ ಮುಂದಿನ ಜನಾಂಗಕ್ಕೆ ಚಿತ್ರಕಲೆಯನ್ನು ಧಾರೆ ಎರೆಯುವ ಇರಾದೆಯನ್ನು ಹೊಂದಿದ್ದೇನೆ.
 –ಪೂನಂ ಅಗರವಾಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT