ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಾಂಗಿ ಸಾಹಸದ ಬೃಹತ್ ‘ಕನ್ನಡ–ಇಂಗ್ಲಿಷ್ ನಿಘಂಟು’

ಅಕ್ಷರ ಗಾತ್ರ

ಕನ್ನಡ ಭಾಷೆಯ ನಿಘಂಟುಗಳಿಗೆ ಒಂದು ಚರಿತ್ರೆಯಿದೆ. ‘ಕನ್ನಡ – ಕನ್ನಡ ನಿಘಂಟು’ಗಳಿಗೆ ಒಂದು ಸಾವಿರ ವರ್ಷಗಳ ಕಥೆಯಿದೆ. ರನ್ನ ಕವಿಯ ‘ರನ್ನ ಕಂದ’ ಎಂಬ ಪ್ರಾಚೀನವಾದ ನಿಘಂಟೇ ನಮ್ಮ ಮೊದಲನೆಯ ನಿಘಂಟು. ಅದು ತುಂಬ ಸಣ್ಣ ನಿಘಂಟು. ಆ ಬಳಿಕ ಕಾಲಕಾಲಕ್ಕೆ ಪ್ರಕಟವಾದ ಅನೇಕ ಬೇರೆ ಬೇರೆ ‘ಕನ್ನಡ – ಕನ್ನಡ ನಿಘಂಟು’ಗಳಿವೆ. ಆದರೆ ದ್ವಿಭಾಷಾ ನಿಘಂಟುಗಳು ಸಿದ್ಧವಾಗಲು ಬಹುಕಾಲ ಕಾಯಬೇಕಾಯಿತು.

ಕನ್ನಡದಲ್ಲಿ 1894ರಲ್ಲಿ ಪ್ರಕಟವಾದ ರೆವರೆಂಡ್ ಕಿಟೆಲ್ ಅವರ ನಿಘಂಟು ವಿಸ್ತಾರವಾದ ಮೊದಲ ನಿಘಂಟು. ಭಾರತದಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸವು ಹೆಚ್ಚಿದ ಹಾಗೆಲ್ಲಾ ‘ಇಂಗ್ಲಿಷ್ – ಕನ್ನಡ ನಿಘಂಟು’ಗಳು ಪ್ರಕಟವಾದವು. ಇವು ಎಲ್ಲ ಕಿರು ನಿಘಂಟುಗಳು. ಆದರೆ ಮೈಸೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಸಿದ್ಧವಾದ ‘ಆಕ್ಸ್‌ಫರ್ಡ್ ಸಂಕ್ಷಿಪ್ತ ನಿಘಂಟು’ವಿನ ಅನುವಾದವೇ ಪ್ರಥಮ ದೊಡ್ಡ ಪ್ರಯತ್ನ. ಅದು ಮತ್ತೆ ಮತ್ತೆ ಸಂಪಾದಿತವಾಗಿ ಈಗ ಒಂದು ಸಿದ್ಧ ಸ್ಥಿತಿಗೆ ಬಂದು ನಿಂತಿದೆ.

ಆದರೆ ‘ಕನ್ನಡ – ಇಂಗ್ಲಿಷ್ ನಿಘಂಟು’ಗಳು ಬೇಗ ತಯಾರಾಗಲಿಲ್ಲ. ಕ್ರೈಸ್ತ ಮಿಷನರಿಗಳು ಸಿದ್ಧಪಡಿಸುತ್ತಿದ್ದ ಶಬ್ದ ಸಂಗ್ರಹಗಳು ಪ್ರಕಟವಾಗುತ್ತಿದ್ದವು. Vocabulary ಎಂಬ ಶಬ್ದವನ್ನು ‘ಒಕ್ಕಬಿಲೇರಿ’ ಎಂದು ಉಚ್ಛರಿಸಿ ಹಾಗೆಯೇ ಬರೆದು ಕೆಲವು ಪುಸ್ತಕಗಳು ಪ್ರಕಟವಾದವು. ‘ಪಂಚಭಾಷೆಯ ಒಕ್ಕಬಿಲೇರಿ’ (1887), ‘ಷಡ್‌ಭಾಷೀಯ ಒಕ್ಕಬಿಲೇರಿ’ (ಪುನರ್ ಮುದ್ರಣ 1957) ಎಂಬಂಥ ಪದಕೋಶಗಳು ಪ್ರಕಟವಾದವು.

ಕನ್ನಡ ಸಾಹಿತ್ಯ ಪರಿಷತ್ತು ಒಂದು ವಿಶಿಷ್ಟ ಏಕಭಾಷಾ ನಿಘಂಟನ್ನು ತಯಾರು ಮಾಡಲು 1943ರಲ್ಲಿ ಆಲೋಚನೆ ಮಾಡಿತು. ಅದು ನಿಧಾನವಾಗಿ ಕಾರ್ಯ ಮಾಡುತ್ತಾ 1995ರ ವೇಳೆಗೆ ಒಂಬತ್ತು ಸಾವಿರ ಪುಟಗಳ ಆಧಾರಭೂತವಾದ ನಿಘಂಟು ತಯಾರಾಯಿತು. ಆದರೂ ‘ಕನ್ನಡ - ಇಂಗ್ಲಿಷ್ ನಿಘಂಟು’ಗಳು ಬರಲೇ ಇಲ್ಲ. ಯಾವ ಉಪಯುಕ್ತವಾದ ನಿಘಂಟುಗಳೂ ಸಿದ್ಧವಾಗಲಿಲ್ಲ. 1981ರಲ್ಲಿ ‘ಐಬಿಎಚ್’ ಸಂಸ್ಥೆಯ ವ್ಯವಸ್ಥಾಪಕರಾಗಿದ್ದ ಶ್ರೀ ಅನಂತರಾಮ್ ಅವರು ನನಗೆ ಒಂದು ಆಹ್ವಾನವನ್ನು ಒಡ್ಡಿದರು.

ಒಂದು 600–700 ಪುಟಗಳ ಕನ್ನಡ - ಇಂಗ್ಲಿಷ್ ನಿಘಂಟನ್ನು ತಯಾರು ಮಾಡಿಕೊಡಿ ಎಂದರು. ಅದನ್ನು ನಾನು ಆಹ್ವಾನವನ್ನಾಗಿ ಸ್ವೀಕರಿಸಿ, ನನ್ನ ಇಬ್ಬರು ತರುಣ ಮಿತ್ರರನ್ನು ಸೇರಿಸಿಕೊಂಡು ಸುಮಾರು 700 ಪುಟಗಳ ಒಂದು ಕನ್ನಡ - ಇಂಗ್ಲಿಷ್ ನಿಘಂಟನ್ನು ಸಿದ್ಧ ಮಾಡಿಕೊಟ್ಟೆ. ಅದು ಬಹುಬೇಗ ಜನಪ್ರಿಯವಾಗಿ 2000 ಇಸವಿಯ ವೇಳೆಗೇ ಸುಮಾರು ಇಪ್ಪತ್ತು ಮುದ್ರಣಗಳನ್ನು ಕಂಡಿತು. ಆದರೆ ಅದೂ ತುಂಬಾ ಚಿಕ್ಕದೇ.

ನಾನು ಅನುವಾದಕರಿಗೆಂದು ಸಿದ್ಧಪಡಿಸಿದ 700 ಪುಟಗಳ ‘ಇಂಗ್ಲಿಷ್ - ಕನ್ನಡ ನಿಘಂಟು’ ಪ್ರಿಸಮ್ ಸಂಸ್ಥೆಯಿಂದ 2001ರಲ್ಲಿ ಪ್ರಕಟವಾಗಿದೆ. ಅದು ಆಗಲೇ ಮೂರು ಮುದ್ರಣಗಳನ್ನು ಕಂಡಿದೆ. ನನ್ನ ಈ ನಿಘಂಟನ್ನು ಉಪಯೋಗಿಸಿ, ಅದರ ಆಕಾರದಲ್ಲಿಯೇ ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಅವರು ಒಂದು ನಿಘಂಟನ್ನು ತಯಾರಿಸಿದ್ದಾರೆ. ಆದರೆ ಇವೆಲ್ಲವೂ ತುಂಬಾ ಪ್ರಯೋಜನಕ್ಕೆ ಬರುವುದಿಲ್ಲ. ನಿಜವಾಗಿ ಬೃಹತ್ತಾದ ‘ಕನ್ನಡ - ಇಂಗ್ಲಿಷ್ ನಿಘಂಟು’ ಬರಬೇಕಾದ ಅವಶ್ಯಕತೆ ಬಹಳ ಇತ್ತು.

ಚೆನ್ನೈನಲ್ಲಿ ‘ಇನ್‌ಸ್ಟಿಟ್ಯೂಟ್ ಆಫ್ ಏಷಿಯನ್ ಸ್ಟಡೀಸ್’ ಎಂಬ ಸಂಸ್ಥೆಯು ನನ್ನ ಪ್ರಧಾನ ಸಂಪಾದಕತ್ವದಲ್ಲಿ ಸಿದ್ಧವಾದ ನಿಘಂಟನ್ನು

ಮೂಲವಾಗಿಟ್ಟುಕೊಂಡು ಒಂದು ಬಹುಭಾಷಾ ನಿಘಂಟನ್ನು ತಯಾರು ಮಾಡುತ್ತಿದೆ. ಅದು ‘ಕನ್ನಡ-ತಮಿಳು-ಇಂಗ್ಲಿಷ್-ಜಪಾನಿ ನಿಘಂಟು’. ಅದು ಪೂರೈಸಬೇಕಾದರೆ ಅನೇಕ ವರ್ಷಗಳು ಬೇಕಾಗುತ್ತವೆ.

ನಿಘಂಟುಗಳು ಯಾವುದೇ ಭಾಷೆಯ ಸತ್ವವನ್ನು, ಶ್ರೀಮಂತಿಕೆಯನ್ನು ಕನ್ನಡಿ ಹಿಡಿದು ತೋರಿಸುತ್ತವೆ. ಅದನ್ನು ತಯಾರಿಸುವ ವಿದ್ವಾಂಸರ ಶ್ರಮ, ದುಡಿಮೆ ಮತ್ತು ಸಮರ್ಪಣಾ ಭಾವಕ್ಕೆ ನಾಡು ಗೌರವ ಕೊಡಬೇಕು. ನಿಘಂಟುಗಳ ರಚನೆ ಎನ್ನುವುದು ಕನ್ನಡವನ್ನು ಕಟ್ಟುವ ಕೆಲಸದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಕನ್ನಡದ ಜೊತೆಗೆ ಎಷ್ಟು ಭಾಷೆಗಳನ್ನು ಜೋಡಿಸಿ ನಿಘಂಟುಗಳನ್ನು ತಯಾರಿಸಿದರೂ ಸ್ವಾಗತಾರ್ಹ. ಇನ್ನು ಇವತ್ತಿನ ಜೀವನಕ್ಕೆ ಅಗತ್ಯವಾದ ಇಂಗ್ಲಿಷ್ ಜೊತೆ ನಿಘಂಟು ತಯಾರಿಸುವುದು ನಮ್ಮ ಮುಂದಿನ ತಲೆಮಾರುಗಳಿಗೆ ನಾವು ಕೊಡಬಹುದಾದ ದೊಡ್ಡ ಆಸ್ತಿ.

ಕನ್ನಡ - ಇಂಗ್ಲಿಷ್ ನಿಘಂಟುಗಳ ತೀವ್ರ ಕೊರತೆಯ ಸ್ಥಿತಿಯಲ್ಲಿ ನನ್ನ ಮಿತ್ರರಾದ ಶ್ರೀ ವಿ. ಕೃಷ್ಣ ಅವರು, ಯಾವ ಆಡಂಬರವೂ ಇಲ್ಲದೆ ಮೌನವಾಗಿ ಒಂದು ಬೃಹತ್ತಾದ ‘ಕನ್ನಡ - ಇಂಗ್ಲಿಷ್ ನಿಘಂಟು’ ತಯಾರಿಸಿದ್ದಾರೆ. ಇದು ಇಪ್ಪತ್ತೈದು ಮೂವತ್ತು ವರ್ಷಗಳ ಹಟದ ತಪಸ್ಸಿನಂತಹ ಕೆಲಸ. ನಾನು ಅವರ ನಿಘಂಟಿನ ಹಸ್ತಪ್ರತಿಯನ್ನು ಪರಿಶೀಲಿಸಿದ್ದೇನೆ.

ನಿಘಂಟುಶಾಸ್ತ್ರವನ್ನು ಚೆನ್ನಾಗಿ ಅಭ್ಯಾಸ ಮಾಡಿದ ವಿದ್ವಾಂಸರು ತಯಾರು ಮಾಡಬಹುದಾದ ರೀತಿಯಲ್ಲೇ ಅದು ಸಿದ್ಧವಾಗಿದೆ. ಮುದ್ರಣದಲ್ಲಿ ಅದು 4750 ಪುಟಗಳಷ್ಟಾಗುತ್ತದೆ. ಈ ಸ್ವಸಂಪೂರ್ಣವಾದ ನಿಘಂಟಿನಲ್ಲಿ ಶಬ್ದಗಳು ಮಾತ್ರವಲ್ಲದೆ, ಶಬ್ದಗಳ ಜೊತೆಯಲ್ಲಿ ನುಡಿಗಟ್ಟುಗಳನ್ನೂ ಇಂಗ್ಲಿಷ್‌ಗೆ ಅನುಮಾದ ಮಾಡಿದ್ದಾರೆ. ನನ್ನ ಅನುಭವದಲ್ಲಿ ಇಲ್ಲಿಯವರೆಗೆ ಯಾರೂ ಇಷ್ಟು ವಿಸ್ತಾರವಾದ ಕನ್ನಡ-ಇಂಗ್ಲಿಷ್ ನಿಘಂಟನ್ನು ತಯಾರು ಮಾಡಿಲ್ಲ.

ವಿಶ್ವವಿದ್ಯಾಲಯಗಳು, ಸಂಸ್ಥೆಗಳು ಸಾಮೂಹಿಕವಾಗಿ ಪ್ರಯತ್ನಿಸಬಹುದಾದ ಒಂದು ದೊಡ್ಡ ನಿಘಂಟನ್ನು ಕೃಷ್ಣ ಅವರೊಬ್ಬರೇ ರಚಿಸಿರುವುದು ಅದ್ಭುತವಾದ ಸಾಹಸ. ಅವರ ನಿಘಂಟು ಕನ್ನಡ ನಾಡಿಗೆ ಒಂದು ಮಹತ್ವದ ಕೊಡುಗೆಯಾಗುವುದರಲ್ಲಿ ಸಂಶಯವಿಲ್ಲ. ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ. ವೀರಣ್ಣ ಅವರು ಅದನ್ನು ಪ್ರಕಟಿಸುತ್ತಿರುವುದು ಒಂದು ಉತ್ಸಾಹದ ಭಾಷಾಬದ್ಧತೆಯ ಕಾರ್ಯ.

ವಿ. ಕೃಷ್ಣ ಅವರ ಅಪೂರ್ವ, ಏಕಾಂಗಿ ಸಾಹಸದ ಕನ್ನಡ - ಇಂಗ್ಲಿಷ್ ಬೃಹನ್ನಿಘಂಟು ಪ್ರಕಟಣೆ ನಿಜಕ್ಕೂ ಒಂದು ‘ನಾಡ ಸಾಹಸ’ವೇ ಸರಿ. ನಾನು ಬಹುವಿಶ್ವಾಸದ ಅಂತರಂಗದ ಅಭಿನಂದನೆಗಳನ್ನು ನಿಘಂಟು ರಚಿಸಿದ ವಿ. ಕೃಷ್ಣ ಅವರಿಗೂ ಪ್ರಕಟಿಸುತ್ತಿರುವ ಡಾ. ಸಿ. ವೀರಣ್ಣ ಅವರಿಗೂ ಸಂತೋಷದಿಂದ ಸಮರ್ಪಿಸುತ್ತೇನೆ.

ವಾಣಿಜ್ಯವೂ ಪದಪ್ರೀತಿಯೂ
ಬೆಂಗಳೂರಿನ ವಿ. ಕೃಷ್ಣ ಅವರು ಕಲಿತದ್ದು ವಾಣಿಜ್ಯ ವಿಷಯವಾದರೂ (ಬಿ.ಕಾಂ ಪದವೀಧರರು) ಅವರಿಗೆ ಭಾಷೆಯ ಅಪರಿಮಿತ ಸಾಧ್ಯತೆಗಳ ಬಗ್ಗೆ ಇನ್ನಿಲ್ಲದ ಆಸಕ್ತಿ. ಅಕೌಂಟಿಂಗ್, ಕಾಸ್ಟ್ ಅಕೌಂಟಿಂಗ್, ಮೆಟೀರಿಯಲ್ ಮೇನೇಜ್‌ಮೆಂಟ್, ಕ್ವಾಲಿಟಿ ಕಂಟ್ರೋಲ್, ಲಾಜಿಸ್ಟಿಕ್ಸ್, ಹ್ಯೂಮನ್ ರಿಸೋರ್ಸ್ ಸೆಕ್ಷನ್ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿರುವ ಅವರು, ಈ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವು ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

‘ಕುವೆಂಪು ಭಾಷಾಭಾರತಿ’ಗಾಗಿ ಹಲವಾರು ಪುಸ್ತಕಗಳನ್ನು ಅನುವಾದಿಸಿದ್ದಾರೆ. ಪ್ರಸ್ತುತ ಪ್ರಕಟಗೊಳ್ಳುತ್ತಿರುವ ‘ಕನ್ನಡ–ಇಂಗ್ಲಿಷ್ ನಿಘಂಟು’ ಕೃತಿ ಅವರ ಮೂವತ್ತು ವರ್ಷಗಳ ಅಧ್ಯಯನದ ಫಲ. ಕೃಷ್ಣ ಅವರ ಮತ್ತೊಂದು ಮಹತ್ವಾಕಾಂಕ್ಷೆಯ ಕೃತಿ ‘ಕುಮಾರವ್ಯಾಸ ಪದಪ್ರಯೋಗ’ ಪ್ರಕಟವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT