ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಾಗ್ರತೆಗೆ ಕಂಟಕ

Last Updated 18 ಜುಲೈ 2014, 19:30 IST
ಅಕ್ಷರ ಗಾತ್ರ

ಇಂಗ್ಲೆಂಡ್‌ನ ಕೆಲವು ಶಾಲೆಗಳಲ್ಲಿ ಮೊಬೈಲ್‌ ಇಡಲು ಶಾಲಾ ಆಡಳಿತ ಮಂಡಳಿಗಳು ಲಾಕರ್‌ಗಳ ಸೌಲಭ್ಯ ಒದಗಿಸಿವೆ. ಮಕ್ಕಳು ಶಾಲೆಗೆ ಬರುತ್ತಲೇ ಅವುಗಳನ್ನು ಲಾಕರ್‌ನಲ್ಲಿ ಜಮೆ ಮಾಡ­ಬೇಕು. ತರಗತಿಗಳು ಮುಗಿದ ಮೇಲೆ ಮನೆಗೆ  ಹೋಗು­ವಾಗ ಅವುಗಳನ್ನು ಪಡೆಯಬಹುದು. ತಮ್ಮ ಮಕ್ಕಳ ಸುರಕ್ಷತೆ ಕುರಿತು ಪಾಲಕರು ಆತಂಕ ವ್ಯಕ್ತಪಡಿಸಿದ್ದರಿಂದ ಶಾಲಾ ಆಡಳಿತ ಮಂಡಳಿಗಳು ಕೈಗೊಂಡ ಕ್ರಮ ಇದು. ಶಾಲಾ ಅವಧಿಯಲ್ಲಿ ಮಕ್ಕಳ ಕೈಯಲ್ಲಿ ಮೊಬೈಲ್‌ ಸಿಕ್ಕರೆ ಅವು­ಗಳನ್ನು ಮುಟ್ಟು ಗೋಲು ಹಾಕಿಕೊಳ್ಳ­ಲಾಗುತ್ತದೆ. ನಮ್ಮ ಕಾಲೇಜುಗಳಲ್ಲೂ ಇಂತಹ ವ್ಯವಸ್ಥೆ ತರುವ ಬಗೆಗೆ ಪರಿಶೀಲಿಸಬಹುದು.

ನನ್ನ ಮೊಮ್ಮಗನಿಗೆ ಈಗಷ್ಟೇ ಎಂಟು ವರ್ಷ. ನಾವು ಎಷ್ಟೇ ಬಚ್ಚಿಟ್ಟು­ಕೊಂಡರೂ ಮೊಬೈಲ್‌ ಸೆಟ್‌ಗೆ ಆತ ಗಂಟು ಬೀಳುತ್ತಾನೆ. ನಮಗೆ ಗೊತ್ತಿರದ ಹಲವು ‘ಆ್ಯಪ್‌’ಗಳು ಅವನಿಗೆ ಗೊತ್ತಿವೆ. ಸೆಟ್‌ನಲ್ಲಿ ಇರುವ ಎಲ್ಲ ಆಯ್ಕೆಗಳನ್ನು ಜಾಲಾಡುವ ಕೌಶಲ ಅವನಿಗೆ ಸಿದ್ಧಿಸಿದೆ. ಕೆಲವೊಮ್ಮೆ ‘ಇದು ಹಾಗಲ್ಲ, ಹೀಗೆ’ ಎಂದು ನಮಗೇ ಬಳಕೆ ವಿಧಾನವನ್ನು ತಿಳಿಸಿಕೊಡಲು ಬರುತ್ತಾನೆ. ಇದು ನನ್ನ ಮೊಮ್ಮಗನ ಕಥೆಯಷ್ಟೇ ಅಲ್ಲ. ಪ್ರತೀ ಕುಟುಂಬದ ಪ್ರತೀ ಮಗುವಿನ ವರ್ತನೆಯೂ ಹೌದು. ಮೊಬೈಲ್‌ ಒಂದಿದ್ದರೆ ಈಗಿನ ಪೀಳಿಗೆಗೆ ಬೇರೆ ಸ್ನೇಹಿತರು ಬೇಡವೇ ಬೇಡ. ಈ ಪುಟ್ಟ ಸಾಧನದಿಂದ ಮಕ್ಕಳನ್ನು ದೂರ ಮಾಡುವುದು ಒಂದು ಹರಸಾಹಸ.

ಶಾಲೆಗಳಲ್ಲೂ ಮಕ್ಕಳ ಕೈಯಲ್ಲಿ ಮೊಬೈಲ್‌ ಇರ­ಬೇಕು ಎಂಬ ವಾದ ಇದೆ. ಹೀಗೆ ವಾದ ಮಾಡುವ­ವರು ಸುರಕ್ಷತೆ ಕಾರಣವನ್ನು ಮುಂದೆ ಮಾಡುತ್ತಾರೆ. ಇದೊಂದು ರೀತಿಯಲ್ಲಿ ವಿಚಿತ್ರ ಬೇಡಿಕೆ. ನಾವೂ ಮಕ್ಕ­ಳಾಗಿ ಬೆಳೆದು ದೊಡ್ಡವರಾಗಿಲ್ಲವೆ? ಶಾಲೆಗೆ ಹೋಗಿ­ಲ್ಲವೆ? ಆಗ ಎಲ್ಲಿತ್ತು ಈ ಮೊಬೈಲ್‌ ಸಾಧನ? ಆಗಿನ ಕಾಲಕ್ಕೂ ಈಗಿನ ಗಡಿಬಿಡಿ ಹಾಗೂ ನೌಕರಿ ಜಮಾ­ನಕ್ಕೂ ಏಕೆ ಹೋಲಿಕೆ ಎಂಬ ಪ್ರಶ್ನೆ ಏಳಬಹುದು. ಎಲ್ಲ ಸಂಗತಿ­ಗಳನ್ನು ಗಣನೆಗೆ ತೆಗೆದುಕೊಂಡ ಮೇಲೂ ಅನಿ­ಸು­ವುದು: ಮಕ್ಕಳ ಕೈಯಲ್ಲಿ ಮೊಬೈಲ್‌ ಇದ್ದರೆ ಅಪಾ­ಯವೇ ಅಧಿಕ ಹೊರತು ಸುರಕ್ಷತೆ ಅಸಾಧ್ಯ.

ನಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬುದನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ ನೋಡಿ. ಬಸ್‌ ನಿಲ್ದಾಣ­ಗಳಲ್ಲಿ, ಹೋಟೆಲ್‌ಗಳಲ್ಲಿ, ಉದ್ಯಾನಗಳಲ್ಲಿ ಮತ್ತು ಶಾಲೆ­ಗಳ ಎದುರಿನಲ್ಲಿ ಕಾಣಸಿಗುವ ವಿದ್ಯಾರ್ಥಿಗಳ ಕೈಯಲ್ಲಿ ಮೊಬೈಲ್‌ ಸೆಟ್‌ಗಳದ್ದೇ ಕಾರುಬಾರು. ಸದಾ ಸಂದೇಶ ರವಾನಿಸುವಲ್ಲಿ ಅವರು ಮಗ್ನ. ಯಾರೊ­ಡ­ನೆಯೂ ಮಾತನಾಡುವುದಿಲ್ಲ. ಇದರಿಂದ ಸಂವಹನ ಕಲೆ ಮರೆತು ಹೋಗುತ್ತಿದ್ದು, ನಮ್ಮ ಸುತ್ತ­ಲಿನ ಆಗು–ಹೋಗುಗಳಿಗೆ ಸ್ಪಂದಿಸುವ ಗುಣವೂ ಗೌಣ­ವಾಗುತ್ತಿದೆ.

ಕಂಪ್ಯೂಟರ್‌ನ ಎಲ್ಲ ಆ್ಯಪ್‌ಗಳನ್ನೂ ಹೊಂದಿರುವ ಮೊಬೈಲ್‌ ಸೆಟ್‌ಗಳು ಮಾರುಕಟ್ಟೆಯಲ್ಲಿವೆ. ಮಕ್ಕಳಿಗೆ ಬೇಕಾಗಿದ್ದಕ್ಕಿಂತ ಬೇಡವಾದ ಕ್ಲಿಪಿಂಗ್‌ಗಳು ಒಂದು ಮೊಬೈ­ಲ್‌­ನಿಂದ ಮತ್ತೊಂದಕ್ಕೆ ಶರವೇಗದಲ್ಲಿ ಹರಿದಾ­ಡು­ತ್ತವೆ. ಹದಿಹರೆಯದ ಮಕ್ಕಳಲ್ಲಿ ಮನಸ್ಸು ಅಪ್ರ­ಬುದ್ಧ­ವಾಗಿರುತ್ತದೆ. ಯಾವುದನ್ನು ಸ್ವೀಕರಿಸ­ಬೇಕು, ಯಾವು­ದನ್ನು ನಿರಾಕರಿಸಬೇಕು ಎಂಬ ಅರಿವು ಅವ­ರಲ್ಲಿ ಇರುವುದಿಲ್ಲ. ಬೇಡದ ಸಂಗತಿಗಳ ಕಡೆಗೆ ಕುತೂ­ಹಲ ಹೆಚ್ಚಿರುತ್ತದೆ. ಮೊಬೈಲ್‌ಗಳು ಅವರ ಕುತೂಹಲ­ವನ್ನು ತಣಿಸುತ್ತವೆ. ಅವರ ಭವಿಷ್ಯಕ್ಕೂ ಇದರಿಂದ ಅಪಾ­ಯ­ವಿದೆ. ಮಕ್ಕಳು ಕೇಳಿದಂತಹ ಮೊಬೈಲ್‌ ಸೆಟ್‌ ಕೊಡಿಸುವ ಪಾಲಕರು ಇಂತಹ ಸೂಕ್ಷ್ಮಗಳನ್ನೆಲ್ಲ ಗಮನಿಸಬೇಕು.

ಶಾಲೆಗಳಿಗೆ ಮಕ್ಕಳು ಮೊಬೈಲ್‌ ತರುವುದರಿಂದ ವೈಯ­ಕ್ತಿ­ಕ­ವಾಗಿ ಅವರಿಗಲ್ಲದೆ ಇಡಿಯಾಗಿ ವಿದ್ಯಾರ್ಥಿ ಸಮುದಾ­ಯದ ಮೇಲೂ ಅದರ ಪರಿಣಾಮ ಬೀರು­ತ್ತದೆ. ಬಡ ಕುಟುಂಬಗಳಿಂದ ಬರುವ ಮಕ್ಕಳಿಗೆ ಸೆಟ್‌­ಗಳನ್ನು ಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಶ್ರೀಮಂ­ತರ ಮಕ್ಕಳಲ್ಲಿ ಹೆಚ್ಚಿನ ಬೆಲೆಯ ಸೆಟ್‌ ಖರೀದಿ­ಗಾಗಿ ಪೈಪೋಟಿ. ಒಂದು ರೀತಿಯ ಕೀಳರಿಮೆಯನ್ನು ಅದು ಹುಟ್ಟುಹಾಕುತ್ತದೆ. ನಾನು ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದ ಅಧ್ಯಕ್ಷೆಯಾಗಿದ್ದಾಗ ಇಂತಹ ಅನೇಕ ದೂರುಗಳು ಬಂದಿದ್ದವು. ಶಾಲೆಗಳಲ್ಲಿ ಮೊಬೈಲ್‌ ಬಳಕೆಯನ್ನೇ ನಿಷೇಧಿಸುವ ಬೇಡಿಕೆ ಸಹ ಬಂದಿತ್ತು.

ಇಂಗ್ಲೆಂಡ್‌ ಸೇರಿದಂತೆ ಜಗತ್ತಿನ ಹಲವು ದೇಶಗಳ ಶಾಲೆಗಳಲ್ಲಿ ಮೊಬೈಲ್‌ ಬಳಕೆಗೆ ಮುಕ್ತ ಅವಕಾಶ ಇದೆ. ಆದರೆ, ಇದರಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಕೊರತೆ, ಚಿತ್ತಕ್ಷೋಭೆ ಸಾಮಾನ್ಯ ಸಮಸ್ಯೆಯಾಗಿದೆ. ಅಲ್ಲಿನ ಕೆಲವು ಶಾಲೆಗಳಲ್ಲಿ ಮೊಬೈಲ್‌ ನಿಷೇಧಿಸಿದ ಬಳಿಕ ಮಕ್ಕಳ ವರ್ತನೆಯಲ್ಲಿ ಗಮನಾರ್ಹವಾದ ಬದ­ಲಾ­ವಣೆ ಕಂಡುಬಂದಿದೆ. ಮಕ್ಕಳಲ್ಲಿ ಆಗಿರುವ ಸಕಾ­ರಾತ್ಮಕ ಪರಿವರ್ತನೆಯನ್ನು ಶಾಲಾ ಮುಖ್ಯಸ್ಥರು ಬಲು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಮೊಬೈಲ್‌ನಿಂದ ಮಾನಸಿಕವಾಗಿ ಮಾತ್ರವಲ್ಲದೆ ದೈಹಿಕ­ವಾಗಿಯೂ  ಅಪಾಯ ಎನ್ನುವುದು ಹಲವು ಸಂಶೋ­ಧ­ನೆ­ಗಳಿಂದ ಸಾಬೀತಾಗಿದೆ. ಮೊಬೈಲ್‌ಗಳು ಹೊರ­ಡಿ­ಸುವ ತರಂಗಗಳು ಹೃದಯ, ಕಿಡ್ನಿಯಂತಹ ಅಂಗಾಂಗಗಳಿಗೆ ಅಪಾಯಕಾರಿ ಎನ್ನುವುದು ಹಲವು ಬಾರಿ ದೃಢಪಟ್ಟಿದೆ. 16ಕ್ಕಿಂತ ಕಡಿಮೆ ವಯೋಮಾನ­ದವ­ರಿಗೆ ಶಾಲೆ ಇಲ್ಲವೆ ಮನೆ ಎಲ್ಲಿಯೂ ಮೊಬೈಲ್‌ ಬಳಕೆಗೆ ಅವಕಾಶ ಕೊಡದಿರುವುದೇ ಒಳ್ಳೆಯದು. ಶಾಲಾ ಅವಧಿಯಲ್ಲಿ ಪಾಲಕರು ಮಕ್ಕಳನ್ನು ಸಂಪರ್ಕಿ­ಸ­ಲೇಬೇಕಾದರೆ ಅಂತಹವರ ಅನುಕೂಲಕ್ಕೆ ಪ್ರತೀ ಶಾಲೆಯಲ್ಲಿ ಸಹಾಯವಾಣಿ ಆರಂಭಿಸಬಹುದು.

ಮಕ್ಕಳಲ್ಲಿ ಕಂಡು ಬರುತ್ತಿರುವ ಏಕಾಗ್ರತೆ ಕೊರತೆಗೆ ಮೊಬೈಲ್‌ ಕೂಡ ಪ್ರಮುಖ ಕಾರಣ ಎಂಬುದು ನಮ್ಮ ದೇಶ­ದಲ್ಲೂ ನಡೆಸಿದ ಹಲವು ಸಮೀಕ್ಷೆಗಳಿಂದ ವ್ಯಕ್ತ­ವಾಗಿದೆ. ಇಂಟರ್ನೆಟ್‌, ವಾಟ್ಸ್‌ಆ್ಯಪ್‌, ಎಸ್‌ಎಂಎಸ್‌, ವಿಡಿಯೊ, ಆಡಿಯೊ ಎಲ್ಲ ಸೌಲಭ್ಯವನ್ನೂ ಹೊಂದಿದ ಮೊಬೈಲ್‌ಗಳು ಮಕ್ಕಳನ್ನು ಶಿಕ್ಷಣದಿಂದ ಬಹುದೂರ ಕರೆದು­ಕೊಂಡು ಹೋಗುತ್ತವೆ. ಶಿಕ್ಷಕರಂತೂ ಮಕ್ಕಳು ಮೊಬೈಲ್‌ ತರು­ವುದು ಬೇಡ ಎಂದು ಒಕ್ಕೊರಲಿನಿಂದ ಒತ್ತಾಯಿಸುತ್ತಾರೆ. ತರಗತಿ­ಗಳಲ್ಲಿ ಶಿಕ್ಷಕರು ಪಾಠ ಮಾಡು­ವಾಗ ಮಕ್ಕಳು ಮೊಬೈಲ್‌ ಸಂದೇಶ ಕಳು­ಹಿ­ಸುತ್ತಾ ಕುಳಿತರೆ ಹೇಳಿದ ಪಾಠ ತಲೆಗೆ ಹೋಗುವು­ದಾದರೂ ಹೇಗೆ?

ಭಾರತದಲ್ಲಿ ಮಧ್ಯಮ ವರ್ಗದ ಕುಟುಂಬಗಳ ಹಿನ್ನೆಲೆ ಹೊಂದಿದವರ ಸಂಖ್ಯೆ 40 ಕೋಟಿಯಷ್ಟಿದೆ. ಜಗತ್ತಿನ ಬೇರೆ ಯಾವ ಭಾಗದಲ್ಲೂ ಇಷ್ಟೊಂದು ಸಂಖ್ಯೆ­ಯಲ್ಲಿ ಮಧ್ಯಮ ವರ್ಗದ ಜನರು ಸಿಗುವುದಿಲ್ಲ. ಅದರ ಗರಿಷ್ಠ ಪ್ರಯೋಜನ ಪಡೆಯಲು ಮುಂದಾಗಿ­ರುವ ಮೊಬೈಲ್‌ ಕಂಪೆನಿಗಳು ಭಾರತೀಯ ಮಾರು­ಕಟ್ಟೆ ಮೇಲೆಯೇ ಹೆಚ್ಚಿನ ನಿಗಾ ವಹಿಸಿವೆ. ಅದಕ್ಕಾಗಿ ದಿನಕ್ಕೊಂದು ಬಗೆಯ ಮೊಬೈಲ್‌ ಸೆಟ್‌ ಜಾಹೀರಾತು ಮಾಧ್ಯಮಗಳಲ್ಲಿ ಬರುತ್ತದೆ. ಈ ಜಾಹೀರಾತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಹೆಚ್ಚಿನ ಪ್ರಭಾವ ಬೀರು­ತ್ತಿದೆ. ‘ಹೇಗೂ ಕೈಗೆಟುಕುವ ದರದ­ಲ್ಲಿದೆ. ಮಗನ ಬರ್ತ್‌ಡೇ ಬೇರೆ. ಈ ಮೊಬೈಲ್‌ ಕೊಡಿ­ಸಿ­ದರೆ ತಪ್ಪೇನು’ ಎಂಬ ಭಾವ ಅಪ್ಪ–ಅಮ್ಮಂದಿರಲ್ಲಿ ಬಂದೇ ಬರುತ್ತದೆ. ಮೊಬೈಲ್‌ ಸೆಟ್‌ ಕಾಣಿಕೆಯಾಗಿ ಮಕ್ಕಳ ಕೈ ಸೇರುತ್ತಿದೆ. 

ಮಕ್ಕಳಿಗೆ ಬೇಕಾಗಿರುವುದು ಮೊಬೈಲ್‌ ಅಲ್ಲ. ಅಪ್ಪ–ಅಮ್ಮಂದಿರ ಕಾಳಜಿ. ಪ್ರತಿದಿನ ತಮ್ಮ ಮಕ್ಕಳು  ಏನು ಮಾಡುತ್ತಿದ್ದಾರೆ, ಹೇಗೆ ಓದುತ್ತಿದ್ದಾರೆ ಎಂಬ ಸಂಗತಿ­ಗಳ ಕಡೆಗೆ ಗಮನ ಕೊಡುವುದು. ಕಾಲೇಜಿನ ವಿದ್ಯಾರ್ಥಿ­ಗಳಿಗೆ ಮೊಬೈಲ್‌ ಬಳಕೆಗೆ ಸಮ್ಮತಿ ನೀಡ­ಬಹುದು. ಆದರೆ, ಅದರ ಬಳಕೆ ಮೇಲೂ ನಿಯಂತ್ರಣ ವಿಧಿಸುವುದು ಅನಿವಾರ್ಯ.

(ಲೇಖಕರು ಮಕ್ಕಳ ಹಕ್ಕುಗಳ ಕಾರ್ಯಕರ್ತೆ) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT