ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಿದು ತಿದ್ದುಪಡಿ?

ಭೂಸ್ವಾಧೀನ ಕಾಯ್ದೆ: ತಿದ್ದುಪಡಿ ಆಜೂಬಾಜು
Last Updated 30 ಜನವರಿ 2015, 19:30 IST
ಅಕ್ಷರ ಗಾತ್ರ

ಪ್ರಸ್ತುತ ಸುಗ್ರೀವಾಜ್ಞೆಯಲ್ಲಿ ಐದು ಮುಖ್ಯ ತಿದ್ದುಪಡಿಗಳಿವೆ.

*10ಎ ಎನ್ನುವ ಹೊಸ ಪರಿಚ್ಛೇದವನ್ನು ಸೇರಿಸುವ ಮೂಲಕ ‘ವಿಶೇಷ ಗುಂಪಿನ ಯೋಜನೆ’ಗಳಿಗಾಗಿ ಭೂಸ್ವಾಧೀನ ಮಾಡುವಾಗ ಸಮುದಾಯದ ಸಮ್ಮತಿ ಇರಬೇಕು ಎನ್ನುವ 2013ರ ಕಾಯ್ದೆಯ ಷರತ್ತನ್ನು ತೆಗೆದು ಹಾಕಲಾಗಿದೆ. ಈ ವಿಶೇಷ ಗುಂಪಿನ ಯೋಜನೆಗಳಲ್ಲಿ ಪಿಪಿಪಿ (ಸಾರ್ವಜನಿಕ -ಖಾಸಗಿ ಸಹಭಾಗಿತ್ವ) ಯೋಜನೆಗಳೂ ಸೇರಿದಂತೆ ಕೈಗಾರಿಕಾ ಕಾರಿಡಾರ್‌ಗಳು ಮತ್ತು  ಮೂಲಸೌಕರ್ಯ ಯೋಜನೆಗಳು ಸೇರುತ್ತವೆ. ಬಹುತೇಕ ಭೂಸ್ವಾಧೀನಗಳು ಇಂತಹ ಯೋಜನೆಗಳಿಗಾಗಿಯೇ  ನಡೆಯುವುದರಿಂದ, 2013ರ ಕಾಯ್ದೆಯಲ್ಲಿ ಸರ್ಕಾರಗಳು  ಮಾಡಿಕೊಳ್ಳುವ ಭೂಸ್ವಾಧೀನಕ್ಕೆ ಶೇ 70 ಮತ್ತು ಖಾಸಗಿಯವರ ಭೂಸ್ವಾಧೀನಕ್ಕೆ ಶೇ 80ರಷ್ಟು ಸಮುದಾಯದ ಸಮ್ಮತಿಯನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ ಈಗಿನ ಸುಗ್ರೀವಾಜ್ಞೆಯಲ್ಲಿ ಇದನ್ನು ತೆಗೆದು ಹಾಕಲಾಗಿದೆ. ಈಗ ಸದ್ಯ ದೆಹಲಿ–- ಮುಂಬೈ ಕೈಗಾರಿಕಾ ಕಾರಿಡಾರ್ ಒಂದೇ 3.90 ಲಕ್ಷ ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆ ಹೊಂದಿದ್ದು, ಪ್ರಸ್ತುತ ತಿದ್ದುಪಡಿ ಇದನ್ನು ಸುಗಮಗೊಳಿಸುತ್ತದೆ.

* 2013ರ ಕಾಯ್ದೆಯಲ್ಲಿದ್ದ, ಯೋಜನೆಗಳಿಗೆ ಪೂರ್ವಭಾವಿಯಾಗಿ ಎಸ್ಐಎ (ಸಾಮಾಜಿಕ ಪರಿಣಾಮದ ಅಂದಾಜು) ಕೈಗೊಳ್ಳಬೇಕೆನ್ನುವುದು ಮತ್ತು ವೈವಿಧ್ಯಮಯ ಬೆಳೆಯ, ನೀರಾವರಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವಂತಿಲ್ಲ ಎನ್ನುವ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಇಲ್ಲಿ ಸಮುದಾಯಗಳಿಗೆ ಯೋಜನೆಯ ಸಾಧಕ ಬಾಧಕಗಳನ್ನು ಗ್ರಾಮಸಭೆಗಳಲ್ಲಿ ಚರ್ಚಿಸಿ, ಅದನ್ನು ಒಪ್ಪಿಕೊಳ್ಳುವ ಅಥವಾ ಬಿಡುವ ಅವಕಾಶ ಇತ್ತು. ಯೋಜನೆಯ ಸಾಮಾಜಿಕ ಪರಿಣಾಮ ಎನ್ನುವುದು ಅತ್ಯಂತ ಮಹತ್ವ ಮತ್ತು ಸೂಕ್ಷ್ಮ ವಿಚಾರ. ಸದ್ಯ ರಾಜ್ಯದಲ್ಲಿ  ಚಾಲ್ತಿಯಲ್ಲಿರುವ ಕೂಡಗಿ ಶಾಖೋತ್ಪನ್ನ ಯೋಜನೆಯ ಉದಾಹರಣೆಯನ್ನೇ ತೆಗೆದುಕೊಂಡರೆ, ತಮ್ಮ ಭೂಮಿ ಸ್ವಾಧೀನಕ್ಕೆ ಒಳಗಾಗಿಲ್ಲವಾದರೂ ಮುಂದೆ ಶಾಖೋತ್ಪನ್ನ ಘಟಕದ ಹಾರು ಬೂದಿಯಿಂದ ತಮ್ಮ ಜೀವಮಾನದ ಕೃಷಿಯೇ ನಾಶವಾಗಿ ಬಿಡುತ್ತದೆ ಎನ್ನುವುದು ರಾಷ್ಟ್ರ ಪ್ರಶಸ್ತಿ ವಿಜೇತ ಸಹಜ ಕೃಷಿಕ ಬಸವರಾಜ್ ದಾನಪ್ಪ ಕಮತಗಿ ಅವರ ಅಳಲು. ಇಂಥದ್ದನ್ನೆಲ್ಲ ಪರಿಶೀಲಿಸುವ ಅವಕಾಶ 2013ರ ಕಾಯ್ದೆಯಲ್ಲಿತ್ತು.

ಆದರೆ ಕಾಯ್ದೆಯಲ್ಲಿನ ಈ ಮೂಲಭೂತ ಅಂಶವನ್ನೇ ಕೈಬಿಟ್ಟ ಮೇಲೆ ಸರ್ಕಾರಗಳು ಅಗತ್ಯವಿರುವುದಕ್ಕಿಂತ ಎಷ್ಟೋ ಹೆಚ್ಚು ಭೂಮಿಯನ್ನು ಯಾವ ನಿರ್ಬಂಧವೂ ಇಲ್ಲದೆ ಸ್ವಾಧೀನಪಡಿಸಿಕೊಳ್ಳಬಹುದು.  1894ರ ಕಾಯ್ದೆಯಡಿ ಹೀಗೆ ಸರ್ಕಾರಗಳು ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಮೂಲ ಉದ್ದೇಶಕ್ಕೆ ಬಳಸದೆ ಖಾಸಗಿ ಬಿಲ್ಡರ್‌ಗಳಿಗೆ  ಮಾರಾಟ ಮಾಡಿದ ಅಕ್ರಮ ದೇಶದೆಲ್ಲೆಡೆ ವ್ಯಾಪಕವಾಗಿ ನಡೆದಿದೆ. 2013ರ ಕಾಯ್ದೆ ಇದಕ್ಕೆಲ್ಲ ಕಡಿವಾಣ ಹಾಕುವಂತಿತ್ತು. ಆದರೆ ಈಗ ಮತ್ತದೇ ವಸಾಹತುಶಾಹಿ ವ್ಯವಸ್ಥೆ ಮರುಕಳಿಸಿದಂತಾಗಿದೆ.

* ‘ಕೋರ್ಟ್‌ನಲ್ಲಿ ಜಮಾ ಮಾಡಿದ ಮೊತ್ತ’ ಎಂದು ಸುಪ್ರೀಂಕೋರ್ಟ್‌ ಪರಿಹಾರದ ಬಗ್ಗೆ ವ್ಯಾಖ್ಯಾನಿಸಿದ್ದನ್ನು ಈಗ ‘ಪರಿಹಾರದ ಉದ್ದೇಶಕ್ಕೆ ಯಾವುದೇ ಖಾತೆಗೆ ಜಮಾ ಮಾಡಲಾದ ಯಾವುದೇ ಮೊತ್ತ’ ಎಂದು ತಿದ್ದುಪಡಿ ಮಾಡಲಾಗಿದೆ. ಬಾಧಿತರು ತಡೆಯಾಜ್ಞೆ  ತಂದಂಥ ಸಂದರ್ಭದಲ್ಲಿ ಮೊಕದ್ದಮೆಗೆ ಸಮಯ ವ್ಯಯವಾಗುವುದನ್ನು ತಪ್ಪಿಸಲು ಪರಿಚ್ಛೇದ 24(ಎ)ಗೆ ತಿದ್ದುಪಡಿ ಮಾಡಿರುವುದು. ಇವೆರಡೂ ತಿದ್ದುಪಡಿಗಳು ಬಹುತೇಕ ಫಲಾನುಭವಿಗಳನ್ನು ಅನರ್ಹರನ್ನಾಗಿ ಮಾಡಿ ಸರ್ಕಾರ ಮತ್ತು ಅದರ ಲ್ಯಾಂಡ್‌ಬ್ಯಾಂಕ್‌ಗಳ ಹಿತಾಸಕ್ತಿಯನ್ನು ಮಾತ್ರ ಕಾಪಾಡುತ್ತವೆ. ಇಂಥ ಮುಕ್ತ ಭೂಸ್ವಾಧೀನದಿಂದ ದೇಶದ ಆಹಾರ ಭದ್ರತೆಯ ಮೇಲಾಗುವ ಪರಿಣಾಮ ಅದೆಷ್ಟು ಘೋರ!

2013ರ ಕಾಯ್ದೆಯ ಪರಿಚ್ಛೇದ 87ರಲ್ಲಿ, ಕಾಯ್ದೆಯ ಅನುಷ್ಠಾನಕ್ಕೆ ಸರ್ಕಾರಿ ಅಧಿಕಾರಿಗಳನ್ನು ಸಂಪೂರ್ಣ ಜವಾಬ್ದಾರರನ್ನಾಗಿ ಮಾಡಿ ಉಲ್ಲಂಘನೆಯ ಸಮಯದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಇದ್ದರೆ, ಈಗ ಮಾಡಲಾದ ತಿದ್ದುಪಡಿಯು ಸರ್ಕಾರಿ ಅನುಷ್ಠಾನಾಧಿಕಾರಿಗಳನ್ನು ಎಲ್ಲ ಕಟ್ಟುಪಾಡುಗಳಿಂದ ಮುಕ್ತಗೊಳಿಸುತ್ತದೆ.

* 2013ರ ಕಾಯ್ದೆಯ ಪರಿಚ್ಛೇದ 101ರಲ್ಲಿ, ಸ್ವಾಧೀನಪಡಿಸಿಕೊಂಡ ಭೂಮಿಯನ್ನು 5 ವರ್ಷಗಳ ನಂತರವೂ ಬಳಕೆ ಮಾಡದಿದ್ದಲ್ಲಿ ಅದನ್ನು ರೈತರಿಗೆ ವಾಪಸ್‌ ಮಾಡಬೇಕು ಎಂದಿದೆ. ಆದರೆ ಈಗ ‘ಐದು ವರ್ಷ ಅಥವಾ ಯೋಜನೆ ಪ್ರಾರಂಭಿಸಲು ನೀಡಲಾದ ಅವಧಿ ಇವೆರಡರಲ್ಲಿ ಯಾವುದು ಹೆಚ್ಚೋ ಅದು’ ಎಂದು ಬದಲಾಯಿಸಲಾಗಿದೆ. ಇವೆಲ್ಲದರ ಜೊತೆಗೆ ಇನ್ನೊಂದು ತಿದ್ದುಪಡಿಯೂ ಇದೆ. 2013ರ ಕಾಯ್ದೆ ಪರಿಚ್ಛೇದ 113ರಲ್ಲಿ ಹೊಸ ಕಾಯ್ದೆ ಅಸ್ತಿತ್ವಕ್ಕೆ ಬಂದ ನಂತರ ಅದರ ಅನುಷ್ಠಾನಕ್ಕೆ ಅಗತ್ಯವಾದ ಕ್ರಮ ಕೈಗೊಳ್ಳಲು 2 ವರ್ಷಗಳ ಸಮಯ ನಿಗದಿಪಡಿಸಲಾಗಿತ್ತು. ಈ ಕಾಲಾವಧಿಯು ಕಾಯ್ದೆಯ  ದುರ್ಬಳಕೆ ಸಾಧ್ಯತೆಗಳನ್ನು ತಪ್ಪಿಸಲು ಬಹಳ ಮುಖ್ಯವಾಗಿತ್ತು. ಈಗಿನ ತಿದ್ದುಪಡಿಯಲ್ಲಿ ಇದನ್ನು 5 ವರ್ಷಕ್ಕೆ ವಿಸ್ತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT