ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಿದೇನಿದು ತೇಲುನೋಟದ ಹೊರಳುಗಣ್ಣಿನ ಸೂಚನೆ

Last Updated 9 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಕಳೆದ ಸುಮಾರು 40 ವರ್ಷಗಳಿಂದ ನಾನು ಅನೇಕ ವಿಚಾರ ಸಂಕಿರಣಗಳಲ್ಲಿ ಪ್ರೇಕ್ಷಕನಾಗಿ ಮತ್ತು ಪ್ರಬಂಧ ಮಂಡನಾಕಾರನಾಗಿ  ಭಾಗವಹಿಸಿದ್ದೇನೆ. ಆದರೆ ಈ ವಿಚಾರ ಸಂಕಿರಣಗಳಲ್ಲಿ ಒಂದೇ ಒಂದು ಸಲವಾದರೂ ನಾನು ಬಲಪಂಥೀಯನೆಂದು ಘೋಷಿಸಿಕೊಂಡು ವಿದ್ವತ್ ಪೂರ್ಣವಾದ ಪ್ರಬಂಧ ಮಂಡಿಸಿ, ನಮ್ಮನ್ನೆಲ್ಲ ಬೆಚ್ಚಿ ಬೀಳಿಸಿದ ಒಬ್ಬನೇ ಒಬ್ಬ ವಿದ್ವಾಂಸ ನನ್ನ ಕಣ್ಣಿಗೆ ಬಿದ್ದಿಲ್ಲ.

ಆದರೆ ನಮ್ಮ ನಿರೀಕ್ಷೆಗೆ ವ್ಯತಿರಿಕ್ತವಾಗಿ, ವೈಜ್ಞಾನಿಕ ಸಮಾವೇಶಗಳಲ್ಲಿ ಶಂಖ ಊದುವ, ವೈಚಾರಿಕ ಸಂಕಿರಣಗಳಲ್ಲಿ ಗಲಭೆ ಎಬ್ಬಿಸುವ, ಪುರಾಣವನ್ನೆ ಇತಿಹಾಸವೆಂದು ಭ್ರಮಿಸಿ ಮಾತಾಡುವ, ಅದನ್ನು ಅಲ್ಲಗಳೆದರೆ, ತೋಳೇರಿಸಿ ಆಕ್ರಮಣ ಮಾಡುವ ಕೆಲವಾದರೂ ಜನರನ್ನು ನಾನು  ಕಂಡಿದ್ದೇನೆ. ಬಲಪಂಥೀಯ ಚಿಂತಕರ ಬರಹಗಳಲ್ಲಿ ಹೇಳಿಕೆಗಳು ಮತ್ತು ಅಪಕ್ವ ವಿಶ್ಲೇಷಣೆಗಳೇ ಹೆಚ್ಚು. ಅವರಲ್ಲಿ ಅವರಿಗೆ ಬೇಕಾದ ಒಂದು ಸಿದ್ಧಾಂತ ಇದೆ, ಆದರೆ ಅದನ್ನು ಸಾಬೀತು ಪಡಿಸಲು ಬೇಕಾದ ಆಕರಗಳಾಗಲೀ ಕ್ಷೇತ್ರಕಾರ್ಯದ ಮಾಹಿತಿಗಳಾಗಲೀ ಇಲ್ಲ.

ಬೌದ್ಧಿಕ  ಕ್ಷೇತ್ರದಲ್ಲಿನ ಈ ದೊಡ್ಡ ಕೊರತೆಯನ್ನು ತುಂಬಿಸಿಕೊಳ್ಳಲು ಬಲಪಂಥೀಯ ರಾಜಕಾರಣಕ್ಕೆ ಸಾಧ್ಯವಾಗದಿರುವುದು ಇದೀಗ ಹಲವು ಬಗೆಯ ಮುಜುಗರಗಳಿಗೆ ಎಡೆ ಮಾಡಿಕೊಟ್ಟಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಪ್ರಸ್ತುತ ‘ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟೋರಿಕಲ್ ರಿಸರ್ಚ್‌’ನ ಅಧ್ಯಕ್ಷರಾಗಿರುವ ಪ್ರೊ. ವೈ. ಸುದರ್ಶನ ರಾವ್ ಮತ್ತು ನವೀನ ಪಠ್ಯಕ್ರಮದ ಮೇಲೆ ಅಪಾರ ಪ್ರಭಾವ ಬೀರುತ್ತಿರುವ ದೀನನಾಥ ಬಾತ್ರ ಅವರ ಚಿಂತನೆಗಳು.

ಸುದರ್ಶನ ರಾವ್ ಅವರು ಹೇಳಿಕೊಳ್ಳುವಂಥ ಒಂದೇ ಒಂದು ಒಳ್ಳೆಯ ಪುಸ್ತಕ ಬರೆದಿಲ್ಲ. ಪ್ರತಿಷ್ಠಿತ ಪತ್ರಿಕೆಗಳಲ್ಲಿ ವಿದ್ವಾಂಸರ ಗಮನ ಸೆಳೆಯುವಂಥ ಸಂಶೋಧನಾ ಲೇಖನಗಳನ್ನೂ ಬರೆದಿಲ್ಲ. ಪ್ರೊ. ಆರ್ ಎಸ್ ಶರ್ಮಾ, ಪ್ರೊ. ಲೋಕೇಶ್ ಚಂದ್ರಾ, ಪ್ರೊ. ಇರ್ಫಾನ್ ಹಬೀಬ್, ಪ್ರೊ. ಷ ಷೆಟ್ಟರ್, ಪ್ರೊ. ಎಂ.ಜಿ.ಎಸ್. ನಾರಾಯಣನ್ ಮೊದಲಾದ ಅಂತರರಾಷ್ಟ್ರೀಯ ಖ್ಯಾತಿಯ ಇತಿಹಾಸ ತಜ್ಞರು ಅಧ್ಯಕ್ಷರಾಗಿ ಮುನ್ನಡೆಸಿದ ಈ ಸಂಸ್ಥೆಯು ಇದೀಗ ತನ್ನ ಮಹತ್ವವನ್ನು ತಾನೇ ತಾನಾಗಿ ಕಳೆದುಕೊಂಡಿದೆ. ಇನ್ನು ಬಾತ್ರಾ ಅವರು ನೀಡಿದ ಅನೇಕ ಹೇಳಿಕೆಗಳು ಹಾಸ್ಯಾಸ್ಪದವಾಗಿವೆ. ಅವರ ಒಂದು ಸಂಶೋಧನೆಯ ಪ್ರಕಾರ ‘ಕಂದು ಬಣ್ಣದ ಭಾರತೀಯರನ್ನು ದೇವರೇ ಸೃಷ್ಟಿಸಿದ್ದು, ಅವರು ಜಗತ್ತನ್ನು ಆಳಲೆಂದೇ ಹುಟ್ಟಿಕೊಂಡವರು’.

ಬಾತ್ರಾ ಅವರು ತಾವೇ ರೂಪಿಸಿದ ಶಿಕ್ಷಣ ಕ್ರಮಗಳ ಮೂಲಕ ಭಾರತವನ್ನು ಮುನ್ನಡೆಸಲು ಹಾಕಿಕೊಟ್ಟ ಮಾರ್ಗಸೂತ್ರಗಳು ಭಾರತವನ್ನು ಮಧ್ಯಕಾಲೀನ ಯುಗಕ್ಕಿಂತಲೂ ಹಿಂದೆ ಒಯ್ಯುತ್ತವೆ. ಕನ್ನಡದ ಆಕರಗಳ ಮೂಲಕವೇ ಕನ್ನಡವನ್ನು ಮರು ಕಟ್ಟಿದ ನಮ್ಮ ಕಾಲದ ಬಹು ದೊಡ್ಡ ಸಂಶೋಧಕರಾದ ಡಾ. ಎಂ.ಎಂ. ಕಲಬುರ್ಗಿ ಅವರ ಬಗೆಗೆ ಗೆಂಟ್ ವಿಶ್ವವಿದ್ಯಾಲಯದ ಕನ್ನಡಿಗ ವಿದ್ವಾಂಸ ಪ್ರೊ. ಬಾಲಗಂಗಾಧರ ಅವರು ಹೇಳಿದ ಮಾತುಗಳೂ ಹೀಗೇ ಕ್ಷುಲ್ಲಕವಾದುವು.

ಈಗ ಈ ಸಮಸ್ಯೆಯ ಬೇರುಗಳು ಇನ್ನೂ ಜಟಿಲವಾಗಿ ನೆಲದಡಿಯಲ್ಲಿ ಚಾಚಿಕೊಳ್ಳುತ್ತಿವೆ. ದಡ್ಡತನವೇ ಒಂದು ದೊಡ್ಡ ಮೌಲ್ಯವಾಗಿ ಕಾಣಿಸಿಕೊಳ್ಳುತ್ತಿರುವ ವಿಚಿತ್ರ ಸಂದರ್ಭವಿದು. ಪ್ರೊ. ವೆಂಡಿ ಡಾನಿಗರ್ ಮತ್ತು ಪ್ರೊ. ಶೆಲ್ಡಾನ್ ಪೋಲಾಕ್ ಅವರ ವಿಷಯದಲ್ಲಿ ಬಲಪಂಥೀಯರಿಗೆ ನಿಜಕ್ಕೂ ಒಂದು ಗಂಭೀರವಾದ ವಿಶ್ಲೇಷಣೆಗೆ ಮುಂದಾಗುವ ಅವಕಾಶವಿತ್ತು. ಆದರೆ ವಿದ್ವತ್‌ಪೂರ್ಣ ಚರ್ಚೆಗಳ ಬದಲಾಗಿ ಅವರು ಅನುಸರಿಸಿದ ಮಾರ್ಗ ವಿಚಿತ್ರವಾದುದು. ಡಾನಿಗರ್ ಅವರ ವ್ಯಾಖ್ಯಾನಗಳು ಅಶ್ಲೀಲ ಮತ್ತು ಹಿಂದೂಗಳ  ಭಾವನೆಗಳಿಗೆ ನೋವುಂಟು ಮಾಡುವಂಥದ್ದು ಎಂದು ನ್ಯಾಯಾಲಯದಲ್ಲಿ ವಾದಿಸಲಾಯಿತೇ ವಿನಾ ನಮ್ಮಂಥವರನ್ನು ವಾದದ ಮೂಲಕ ಒಪ್ಪಿಸುವಂಥ ಒಂದು ಒಳ್ಳೆಯ ಲೇಖನವನ್ನೂ ಆಗ ಯಾರೂ ಬರೆಯಲಿಲ್ಲ.

ಆ ಮೂಲಕ ಡಾನಿಗರ್ ಅವರ ಹಿಂದೂ ಪಠ್ಯಗಳ ಗ್ರಹಿಕೆಗಳನ್ನು ಬೌದ್ಧಿಕವಾಗಿ ಇದಿರಿಸುವ, ಪ್ರಶ್ನಿಸುವ, ತಿರಸ್ಕರಿಸುವ ಅವಕಾಶವೊಂದನ್ನು ಸನಾತನಿಗಳು ಕಳಕೊಂಡರು. ಪ್ರೊ. ಬಾಲಗಂಗಾಧರ ಅವರಾದರೂ ಅಷ್ಟೆ. ಕಲಬುರ್ಗಿ ಅವರು ಬರೆದ ‘ಮಾರ್ಗ’ ಸಂಪುಟದ ಸುಮಾರು ಒಂದು ಸಾವಿರ ಲೇಖನಗಳನ್ನೋ, ಅವರ ಇತರ ಕೃತಿಗಳನ್ನೋ ವಿಮರ್ಶಿಸುವ ಬದಲು ಅವರು ಆಯ್ದುಕೊಂಡದ್ದು ಕಲಬುರ್ಗಿ ಅವರನ್ನು ಚೋಟಾ ರಾಜನ್ ಅವರೊಡನೆ ಹೋಲಿಸಿ ವ್ಯಂಗ್ಯ ಮಾಡುವ ವಿಧಾನವನ್ನು. ಪ್ರೊ. ಶೆಲ್ಡನ್ ಪೋಲಾಕ್ ಅವರ ವಿಷಯದಲ್ಲಿಯೂ ಹೀಗೇ ಆಯಿತು.

ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪರವಾಗಿ ಮಾತಾಡಿದ ತಕ್ಷಣ ಪೋಲಾಕ್ ಅವರು ಭಾರತ ವಿರೋಧಿ ಆಗಿಬಿಟ್ಟರು. ಆ ಹಂತದಲ್ಲಿ ಪೋಲಾಕ್ ಅವರು ‘ಮೂರ್ತಿ ಕ್ಲಾಸಿಕಲ್ ಸೀರೀಸ್‌’ಗೆ ಅನುವಾದಕ್ಕಾಗಿ ಆಯ್ದುಕೊಂಡ ಪುಸ್ತಕಗಳ ಗುಣಮಟ್ಟದ ಬಗ್ಗೆ, ಹಾಗೆ ಆಯ್ದುಕೊಳ್ಳುವುದರ ಮೂಲಕ ಅವರು ಅಮೆರಿಕಾದ ಚಿಂತನಾಕ್ರಮವನ್ನು ಭಾರತದ ಮೇಲೆ ಹೇರುವುದರ ಕುರಿತು ಗಂಭೀರವಾದ ವಿಶ್ಲೇಷಣೆ ನಡೆಸಿದ್ದರೆ, ಅದರಿಂದ ನಮಗೆಲ್ಲ ತುಂಬಾ ಉಪಯೋಗವಾಗುತ್ತಿತ್ತು. ಆದರೆ ಶೆಲ್ಡನ್ ವಿರೋಧಿಗಳು ಆಯ್ದುಕೊಂಡ ಮಾರ್ಗವೇ ಬೇರೆ.

ಅವರು ‘ಮೂರ್ತಿ ಕ್ಲಾಸಿಕಲ್ ಸಿರೀಸ್‌’ನ ಸಂಪಾದಕ ಹುದ್ದೆಯಿಂದ ಕೆಳಗಿಳಿಯುವಂತೆ ಕೋರಿ ಪತ್ರ ಬರೆದರು. ಈ ಪತ್ರಕ್ಕೆ ಸಹಿ ಹಾಕಿದವರಲ್ಲಿ ಬಹಳಷ್ಟು ಜನಕ್ಕೆ ಶೆಲ್ಡನ್ ಪೋಲಾಕ್ ಯಾರೆಂದೇ ಗೊತ್ತಿರಲಿಲ್ಲ. ಸ್ವಲ್ಪ ಗೊತ್ತಿರುವ ಪ್ರೊ. ಮಕರಂದ ಪರಾಂಜಪೆ ಅಂಥವರು ಬೌದ್ಧಿಕ ಚರ್ಚೆಗೆ ಇಳಿಯದೆ ಅವರನ್ನು ಪದಚ್ಯುತಿಗೊಳಿಸುವ ನಿರ್ಣಯ ಕೈಗೊಂಡು, ಪ್ರಾಧ್ಯಾಪಕ ಹುದ್ದೆ ಬಿಟ್ಟು ಪೊಲೀಸ್ ಕೆಲಸ ಮಾಡಲು ಹೊರಟರು. ಈ ಕೆಲಸಗಳು ಜನರ ಬೌದ್ಧಿಕ ದಾರಿದ್ರ್ಯವನ್ನು ಸೂಚಿಸುವುದರ ಜೊತೆಗೆ ಅದನ್ನು ಮುಚ್ಚಿಕೊಳ್ಳಲು ಅನಿವಾರ್ಯವಾಗಿ ಅನುಸರಿಸುವ ಫ್ಯಾಸಿಸ್ಟ್ ಧೋರಣೆಯನ್ನೂ ಪ್ರತೀತಗೊಳಿಸುತ್ತವೆ. ಇಂಥ ಅನೇಕ ಘಟನೆಗಳು  ಬಲಪಂಥೀಯ ಚಿಂತಕರು ಹಾಗೂ ಬರೆಹಗಾರರು ಬೌದ್ಧಿಕ  ಕ್ಷೇತ್ರದಲ್ಲಿ ತುಂಬಾ ಹಿಂದೆ ಬಿದ್ದಿರುವುದನ್ನು ಸಂಕೇತಿಸುತ್ತದೆ.

ಕೇಂದ್ರದಲ್ಲಿರುವ ಸರ್ಕಾರ ಹೀಗೆ ಬುದ್ಧಿಜೀವಿ ವಿರೋಧಿಯಾಗಿರುವುದು ಅದರ ಅನೇಕ ನಡೆಗಳಿಂದ ಈಗಾಗಲೇ ಸ್ಪಷ್ಟವಾಗಿದೆ. ಈ ನಡೆಯ ಅತ್ಯಂತ ದೌರ್ಭಾಗ್ಯದ ಹಂತವೆಂದರೆ, ಉರ್ದು ಲೇಖಕರು ಸರ್ಕಾರದ ವಿರುದ್ಧ ಬರೆಯುವುದಿಲ್ಲ ಎಂಬ  ಮುಚ್ಚಳಿಕೆ ಬರೆದುಕೊಡಬೇಕಾಗಿ ಬಂದದ್ದು. ಈ ಲೇಖನ ಬರೆಯುವ ಹೊತ್ತಿಗೆ ದೆಹಲಿ ಪೊಲೀಸರು ‘ಜವಾಹರಲಾಲ ನೆಹರೂ ವಿಶ್ವವಿದ್ಯಾಲಯ’ದ ಅಂತರರಾಷ್ಟ್ರೀಯ ಖ್ಯಾತಿಯ 21 ಪ್ರಮುಖ ಚಿಂತಕರ ಮೇಲೆ ಕಣ್ಣಿಡಲು ಪಟ್ಟಿಯನ್ನು ತಯಾರಿಸಿದೆ ಎಂಬ ಸುದ್ದಿ ಬಂದಿದೆ. ಇಂಥ ಘಟನೆಗಳು ಹಿಂದೆ ನಡೆದಿಲ್ಲ ಎಂದೇನೂ ಭಾವಿಸಬೇಕಾಗಿಲ್ಲ. ತಸ್ಲಿಮಾ, ಸಲ್ಮಾನ್ ರಶ್ದಿ ಮೊದಲಾದವರ ಬರಹಗಳೂ ಸೇರಿದಂತೆ ಸುಮಾರು 60 ಕೃತಿಗಳು ಭಾರತದಿಂದ ಉಚ್ಛಾಟನೆಗೊಂಡಿವೆ. ಈಗ ಇದರ ಪ್ರಮಾಣ ಹೆಚ್ಚುತ್ತಿದೆ ಅಷ್ಟೆ.

ಬುದ್ಧಿಜೀವಿಗಳೆಂದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿರೋಧಿಗಳು, ಹಾಗಾಗಿ ಅವರು ರಾಷ್ಟ್ರದ್ರೋಹಿಗಳು ಎಂಬ ಸರಳೀಕೃತ ಹೇಳಿಕೆಯೊಂದನ್ನು ಈಗ ಹರಿಯಬಿಡಲಾಗಿದೆ. ಮುಗ್ಧರು ಅದನ್ನು ನಂಬಿದ್ದಾರೆ ಕೂಡಾ. ತರ್ಕಬದ್ಧವಾಗಿ ಮತ್ತು ಗಂಭೀರವಾಗಿ ಯೋಚಿಸುವವರನ್ನು ಈಚಿನ ದಿನಗಳಲ್ಲಿ ಹಾಸ್ಯ ಮಾಡಲಾಗುತ್ತಿದೆ. ಆನಂದ ಕುಮಾರಸ್ವಾಮಿ ಅವರು ಇಂಥ ಬೆಳವಣಿಗೆಗಳನ್ನು 1909ರಷ್ಟು ಹಿಂದೆಯೇ ಊಹಿಸಿದ್ದರು. ಅವರ ಪ್ರಕಾರ ‘ರಾಷ್ಟ್ರವನ್ನು ರಾಜಕಾರಣಿಗಳು ಮತ್ತು ವ್ಯಾಪಾರಿಗಳು ಕಟ್ಟಬಾರದು, ಬದಲು ಕವಿಗಳು ಮತ್ತು ಕಲಾವಿದರು ಅದನ್ನು ನಿರ್ವಚಿಸಬೇಕು’.

ಆದರೆ ಇಂದು ಕವಿಗಳನ್ನು ಮತ್ತು ಕಲಾವಿದರನ್ನು ದೂರವಿಡಲಾಗಿದೆ. ಡಾ. ಅಶೀಶ್ ನಂದಿ ಮೊದಲಾದ ಪ್ರಖರ ಚಿಂತಕರು ಭಾರತದಲ್ಲಿ ಬೆಳೆಯುತ್ತಿರುವ ಅಸಹಿಷ್ಣುತೆ ಬಗ್ಗೆ ಮಾತಾಡಿದಾಗ ಸರ್ಕಾರ ಅದಕ್ಕೆ ಕಿವಿಗೊಡಲಾರದಷ್ಟು ಸಂವೇದನಾಶೀಲತೆಯನ್ನು ಕಳೆದುಕೊಂಡಿತ್ತು. ಪರಿಣಾಮವೋ ಎಂಬಂತೆ, ಇದೀಗ ಸಂವಾದರಹಿತವಾದ ಒಂದು ಪರಿಸ್ಥಿತಿ ಉಂಟಾಗಿದೆ. ಇದು ಪರೋಕ್ಷವಾಗಿ ದೇಶವನ್ನು ದುರ್ಬಲಗೊಳಿಸುತ್ತಾ  ಹೋಗುತ್ತಿರುವುದು ಸ್ಪಷ್ಟ. ನೋಮ್ ಚಾಮ್‌ಸ್ಕಿ ಅವರು 1967ರಲ್ಲಿ ಬರೆದ ‘ಬುದ್ಧಿಜೀವಿಗಳ ಜವಾಬ್ದಾರಿ’ ಎಂಬ ಲೇಖನದಲ್ಲಿ ‘ಬುದ್ಧಿ ಜೀವಿಗಳು ಸರ್ಕಾರಗಳ ಸುಳ್ಳುಗಳನ್ನು ಬಯಲಿಗೆಳೆಯುವ ಸ್ಥಾನದಲ್ಲಿರುತ್ತಾರೆ.

ಸರಕಾರದ ಕ್ರಿಯೆಗಳನ್ನು ವಿಶ್ಲೇಷಿಸುತ್ತಾರೆ, ಮತ್ತು ಅದರ ಗೌಪ್ಯ ಕಾರ್ಯಸೂಚಿಗಳನ್ನು ಬಯಲಿಗೆಳೆಯುತ್ತಾರೆ. ಪಶ್ಚಿಮದಲ್ಲಿ ಈ ಶಕ್ತಿಯು ಅವರಿಗೆ ಅಲ್ಲಿನ ರಾಜಕೀಯ ಸ್ವಾತಂತ್ರ್ಯದಿಂದ ಒದಗುತ್ತದೆ. ಅವರಿಗೆ ಮುಕ್ತವಾಗಿ ಸಿಗುವ ಮಾಹಿತಿಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಅದಕ್ಕೆ ಕಾರಣ’ ಎಂದು ಹೇಳುತ್ತಾರೆ. ಆದರೆ ನಮ್ಮಲ್ಲಿ ಸರ್ಕಾರದ ಸುತ್ತಮುತ್ತ ಬುದ್ಧಿಜೀವಿಗಳೇ ಇಲ್ಲದಂತಾಗಿದೆ. 

ಮುಕ್ತಚಿಂತನೆಗೆ ಮತ್ತು ವಿಮರ್ಶೆಗೆ ಪೂರ್ಣ ಅವಕಾಶ ಕೊಡುವುದು ಪ್ರಜಾಪ್ರಭುತ್ವವಾದೀ ಸರ್ಕಾರಗಳ ಅತಿ ದೊಡ್ಡ ಜವಾಬ್ದಾರಿ. ಜನರ ನೈತಿಕತೆಯನ್ನು ಹೆಚ್ಚಿಸಲು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು, ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸಲು ಮತ್ತು ಜೊತೆಗಿರುವ ಜನರ ಯೋಚನಾ ಶಕ್ತಿಯನ್ನು ತೀಕ್ಷ್ಣಗೊಳಿಸಲು ಸರ್ಕಾರ ಕೆಲಸ ಮಾಡುತ್ತಲೇ ಇರಬೇಕು. ಯಾವ ಸರ್ಕಾರವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೋ ಆಗ ಅದು ರೋಗಗ್ರಸ್ತವಾಗಿ ಕೊಳೆಯುತ್ತಿದೆ ಎಂದೇ ಅರ್ಥ. 

ಈ ನಡುವೆ ಸರ್ಕಾರಕ್ಕೆ ಬೇಡವಾದ ಎಡಪಂಥೀಯ ಚಿಂತಕರು ಏನು ಮಾಡುತ್ತಿದ್ದಾರೆ ಎಂಬುದೂ ಕುತೂಹಲದ ವಿಷಯವೇ ಹೌದು. ಫ್ರೆಂಚ್ ಕ್ರಾಂತಿಯ (1789) ಆನಂತರದ ಕಾಲದಲ್ಲಿ ಅರಸನ ಬಲಭಾಗದಲ್ಲಿ ಅವನ ಅನುಯಾಯಿಗಳೂ ಎಡಭಾಗದಲ್ಲಿ ಅವನ ಕಟು ವಿಮರ್ಶಕರೂ ಕುಳಿತಿರುತ್ತಿದ್ದರು. ಅರಸ ಅವರಿಬ್ಬರನ್ನೂ ಸಮಾನವಾಗಿ ಕಾಣುತ್ತಿದ್ದ. ಜೊತೆಗೆ ಎಡ ಮತ್ತು ಬಲದವರು ಕೂಡಾ ತಮ್ಮ ಅಸ್ತಿತ್ವವನ್ನು ಅಲ್ಲಿಯೇ ಕಂಡುಕೊಳ್ಳುತ್ತಿದ್ದರು. ಆದರೆ ಇಂದಿನ ಭಾರತದ ಕತೆಯೇ ಬೇರೆ. ಪ್ರಧಾನಿಗೆ ‘ಕಾಂಗ್ರೆಸ್ ಮುಕ್ತ ಭಾರತ’ ಬೇಕು. ಉಳಿದವರಿಗೆ ‘ಬುದ್ಧಿಜೀವಿಗಳಿಲ್ಲದ ಭಾರತ’ ಬೇಕು.

ಗಾಂಧೀಜಿ, ನೆಹರೂ, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಮೊದಲಾದವರು ಒಳ್ಳೆಯ ಓದುಗರಾಗಿದ್ದರು, ಕವಿ ಹೃದಯದವರಾಗಿದ್ದರು. ಗಾಂಧೀಜಿಯಂತೂ ಜೈಲಿನಲ್ಲಿದ್ದಾಗಲೆಲ್ಲ ಟಾಲ್ಸ್‌ಟಾಯ್, ರಸ್ಕಿನ್, ಜೆ.ಡಿ. ಕನ್ನಿಂಗ್ಹಾಮ್, ಡೇನಿಯಲ್ ಡೆಫೋ, ಗೋಯತೆ, ಹೋಮರ್, ಕಬೀರ, ಡಿಕನ್ಸ್, ಎಡ್ವರ್ಡ ಗಿಬ್ಬನ್, ಫ್ರಾನ್ಸಿಸ್ ಬೆಕೊನ್, ಥೋಮಸ್ ಕಾರ್ಲೈಲ್, ಮೊದಲಾದವರನ್ನು ಗಂಭೀರವಾಗಿ ಓದಿದ್ದರು. ನೆಹರೂ ಅವರು ಪ್ರಕಾಂಡ ಪಂಡಿತರಾಗಿದ್ದರು, ಜೊತೆಗೆ ರಾಮಮನೋಹರ ಲೋಹಿಯಾ ಅವರಂಥವರ ಜೊತೆಗೆ ಕೆಲಸ ಮಾಡಬೇಕಾದ ಒತ್ತಡವೂ ಅವರಿಗಿತ್ತು.

ಇಂದಿರಾ ಗಾಂಧಿ ಅವರಿಗೆ ಜಯಪ್ರಕಾಶ್ ನಾರಾಯಣ್ ಅವರು ಸವಾಲು ಒಡ್ಡಿದ್ದರು. ಈ ಎಲ್ಲ ಪ್ರಕ್ರಿಯೆಗಳು ನಮ್ಮ ನಾಯಕರನ್ನು ಗಟ್ಟಿಗೊಳಿಸುವುದರ ಜೊತೆಗೆ, ಭಾರತವನ್ನು ಪ್ರಬಲಗೊಳಿಸುತ್ತಲೇ ಬಂದುವು. ಆದರೆ ಈಗಣ ರಾಜಕಾರಣಕ್ಕೆ ಪ್ರಶ್ನೆಗಳೇ ಬೇಕಾಗಿಲ್ಲ. ಇಂಥ ಹತಾಶಕಾರಕ ಸಂದರ್ಭದಲ್ಲಿ ಸ್ಥೂಲವಾಗಿ ಎಡಪಂಥೀಯರೆಂದು ಕರೆಯಿಸಿಕೊಳ್ಳುತ್ತಿರುವ ಜನರೆಲ್ಲ ಒಂದು ವೇದಿಕೆಗೆ ಬರುತ್ತಿರುವುದು ಗಮನಾರ್ಹವಾಗಿದೆ.

ಎಡಪಂಥೀಯರೆಂದ ತಕ್ಷಣ ಇವರೆಲ್ಲರೂ ಕಮ್ಯುನಿಸ್ಟರೆಂದು ಬಲಪಂಥೀಯರು ಸರಳವಾಗಿ ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಎಡಪಂಥೀಯರೆಂಬ ದೊಡ್ಡ ಚೌಕಟ್ಟಿನಲ್ಲಿ ಪರಸ್ಪರ ವಿರೋಧಿಗಳಾಗಿರುವ ಅನೇಕ ಒಳಗುಂಪುಗಳಿವೆ. ಸ್ಥೂಲವಾಗಿ ಇವರನ್ನು ಮಾರ್ಕ್ಸ್‌ವಾದಿಗಳು, ಸಮಾಜವಾದಿಗಳು, ಲೋಹಿಯಾವಾದಿಗಳು, ಅಂಬೇಡ್ಕರ್‌ವಾದಿಗಳು, ಪೆರಿಯಾರ್‌ವಾದಿಗಳು, ಮಾವೋವಾದಿಗಳು, ಮಹಿಳಾವಾದಿಗಳು, ಉದಾರವಾದಿಗಳು, ನೆಹರೂವಾದಿಗಳು, ಗಾಂಧೀವಾದಿಗಳು ಎಂದೆಲ್ಲಾ ಗುರುತಿಸಬಹುದು. ಇದು ಕೂಡ ಬಹಳ ಸ್ಥೂಲವಾದ ವಿವರಣೆ. ಏಕೆಂದರೆ ಮಾರ್ಕ್ಸ್‌ವಾದಿಗಳಲ್ಲಿ ಮತ್ತೆ ಅನೇಕ ಗುಂಪುಗಳಿವೆ.

ಹಾಗೆಯೇ ಇತರ ಪ್ರಗತಿಪರ ಗುಂಪುಗಳಲ್ಲಿಯೂ ಒಬ್ಬರ ವಿಚಾರವನ್ನು ಒಪ್ಪದ ಇತರ ಅನೇಕ ಉಪಗುಂಪುಗಳಿವೆ. ಇವು ವರ್ಷಪೂರ್ತಿ ಪರಸ್ಪರ ಬಡಿದಾಡಿಕೊಳ್ಳುತ್ತವೆ. ಕೆಸರೆರಚಿಕೊಳ್ಳುತ್ತವೆ, ಪರಸ್ಪರ ಅಸೂಯೆ ಪಟ್ಟುಕೊಳ್ಳುತ್ತವೆ ಮತ್ತು ಎಷ್ಟೋ ಬಾರಿ ಪರಸ್ಪರ ಕೊಂದುಕೊಳ್ಳುತ್ತವೆ. ಬೌದ್ಧಿಕ ಅಹಂಕಾರದಿಂದ ಅನ್ಯರನ್ನು ತಿರಸ್ಕರಿಸುವ ಈ ಚಿಕ್ಕ ಪುಟ್ಟ ಗುಂಪುಗಳು ಭಿನ್ನಮತವನ್ನೇ ಆಧಾರವಾಗಿಟ್ಟುಕೊಂಡು ಬೆಳೆಯುವುದರಿಂದಾಗಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮುವಲ್ಲಿ ವಿಫಲವಾಗಿವೆ. ಇವರ ಪ್ರಖರ ಚಿಂತನಾಕ್ರಮವೇ ಅರಾಜಕತೆಯನ್ನು ಹುಟ್ಟು ಹಾಕಿದೆ.

ಸಮಾಜವನ್ನು ಅರ್ಥ ಮಾಡಿಕೊಳ್ಳುವ ವಿಧಾನದಲ್ಲಿ, ಚರಿತ್ರೆಯನ್ನು ವ್ಯಾಖ್ಯಾನಿಸುವ  ವಿಷಯದಲ್ಲಿ ಮತ್ತು ಸರ್ವ ಸಮಾನತೆಯ ಸಮಾಜವನ್ನು ಕಟ್ಟಿಕೊಳ್ಳುವ ಕನಸಿನಲ್ಲಿ ಇವರೆಲ್ಲರೂ ಬೇರೆ ಬೇರೆ ವಾದಗಳನ್ನು ಮಂಡಿಸುತ್ತಾರೆ. ವರ್ಗ ಹೋರಾಟದ ಮೂಲಕ ಸಮತೆಯನ್ನು ಸಾಧಿಸಬಹುದೆಂದು ವಾದಿಸುವ ಕೆಲವರು ಭಾರತದಲ್ಲಿ ಅದನ್ನು ಸಾಧಿಸಲು ಚುನಾವಣೆಯನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಅದೇ ವರ್ಗ ಸಮಾನತೆಯನ್ನು ಸಾಧಿಸಲು, ಚುನಾವಣಾ ಪ್ರಕ್ರಿಯೆಯನ್ನು ಒಪ್ಪದ ಇನ್ನು ಕೆಲವರು ಹಿಂಸೆಯನ್ನು ಇದಕ್ಕಾಗಿ ಒಪ್ಪಿಕೊಳ್ಳುತ್ತಾರೆ. ಪುರೋಹಿತಶಾಹಿಯನ್ನು ಖಂಡತುಂಡವಾಗಿ ನಿರಾಕರಿಸುವ ಕೆಲವರು, ಬ್ರಾಹ್ಮಣೇತರರ ಶೋಷಣೆಯ ಬಗ್ಗೆ ಅಷ್ಟೇ ಉತ್ಸಾಹದಿಂದ ಮಾತಾಡುವುದಿಲ್ಲ.

ದಲಿತ ಕೇಂದ್ರಿತ ರಾಜಕಾರಣ ಬೇಕೆಂಬ ವಾದವನ್ನು ಕೆಲವರು ಮುಂದಿಡುತ್ತಿರುವಾಗಲೇ ದಲಿತರೂ ಬ್ರಾಹ್ಮಣರೂ ಒಟ್ಟಾದರೆ ಅಧಿಕಾರ ಹಿಡಿಯಬಹುದೆಂಬುದನ್ನು ಕೆಲವರು ಸಾಧಿಸಿ ತೋರಿಸಿದರು. ಪ್ರಖರ ಚಿಂತಕ ಪ್ರೊ. ಯೋಗೇಂದ್ರ ಯಾದವರಿಗೆ ಅರವಿಂದ ಕೇಜ್ರಿವಾಲರೊಡನೆ ಆರು ತಿಂಗಳೂ ಇರಲಾಗಲಿಲ್ಲವಲ್ಲ? ಹೀಗೆ ಭಾರತದ ಪ್ರಗತಿಯ ಬಗ್ಗೆ ಭಿನ್ನವಾಗಿ ಯೋಚಿಸುವ ಸುಮಾರು 1703 ರಾಜಕೀಯ ಪಕ್ಷಗಳು 2014ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು.

ಕೂದಲು ಸೀಳುವಂಥ ವಾದ ಮಂಡಿಸುವ ಈ ಎಡಪಂಥೀಯ ಚಿಂತಕರಿಗೆ  ಬಲಪಂಥೀಯ ರಾಜಕಾರಣ ಉಂಟು ಮಾಡುವ ಅನಾಹುತಗಳ ಬಗ್ಗೆ ತಿಳಿವಳಿಕೆಯಿಲ್ಲವೇ? ಭಾರತದ ಸಂವಿಧಾನ ಅಂಗೀಕರಿಸಿದ ಮೌಲ್ಯಗಳಿಗೆ ವಿರುದ್ಧವಾಗಿ ಸಂವಿಧಾನೇತರ ಶಕ್ತಿಗಳು ದೇಶವನ್ನು ನಡೆಸುತ್ತಿರುವುದರ ಬಗ್ಗೆ ಅರಿವಿಲ್ಲವೇ? ಇರುವುದೇ ಹೌದಾದರೆ ಇವು ಯಾಕೆ ದೇಶ ರಕ್ಷಣೆಯ ವಿಷಯದಲ್ಲಿ ಜೊತೆಯಾಗಿ ಕೆಲಸ ಮಾಡಲು ಹಿಂಜರಿಯುತ್ತಿವೆ? ಹಾಗೆ ನೋಡಿದರೆ, ಎಡಪಂಥೀಯರ ನಡುವಣ ಭಿನ್ನಾಭಿಪ್ರಾಯಗಳೇ ಇವತ್ತು ಬಲಪಂಥೀಯರ ಶಕ್ತಿವರ್ಧನೆಗೆ ಕಾರಣವಾಗಿದೆ.

ಇಂಥ ಬೆಳವಣಿಗೆಗಳ ನಡುವೆ ಈಚಿನ ದಿನಗಳಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳಲ್ಲಿ ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳು ಸಮಾನ ವೇದಿಕೆಯೊಂದರ ಕಡೆಗೆ ಚಲಿಸುತ್ತಿರುವುದನ್ನು ಕಾಣಬಹುದು. ಹೈದರಾಬಾದಿನ ‘ಕೇಂದ್ರೀಯ ವಿಶ್ವವಿದ್ಯಾಲಯ’ದಲ್ಲಿ ಮತ್ತು ದೆಹಲಿಯ ‘ಜವಾಹರಲಾಲ ನೆಹರೂ ವಿಶ್ವವಿದ್ಯಾಲಯ’ದಲ್ಲಿ ನಡೆದ ಅನಪೇಕ್ಷಿತ ಘಟನೆಗಳು ಮತ್ತು ಅದರ ನಂತರದ ಕೆಲವು ಬೆಳವಣಿಗೆಗಳು ಎಡಪಂಥೀಯ ಧೋರಣೆಯ ವಿದ್ಯಾರ್ಥಿಗಳನ್ನು ಒಟ್ಟು ಮಾಡುತ್ತಿದೆ. ಅದರಲ್ಲಿಯೂ ಪ್ರಮುಖ ಮತ್ತು ಪ್ರಖರ ಚಿಂತಕರಾದ ಮಾರ್ಕ್ಸ್‌ವಾದಿ ವಿದ್ಯಾರ್ಥಿಗಳು ಮತ್ತು ಅಂಬೇಡ್ಕರ್‌ವಾದಿ ವಿದ್ಯಾರ್ಥಿಗಳು ಪರಸ್ಪರ ಕೈಜೋಡಿಸುತ್ತಿರುವುದು ಈಚಿನ ದಿನಗಳಲ್ಲಿ ಕಾಣಿಸುತ್ತಿರುವ ಒಂದು ಪ್ರಮುಖ ಬೆಳವಣಿಗೆಯಾಗಿದೆ.

ನಿರಂತರವಾದ ಹೋರಾಟದ ಮೂಲಕ ಶೇಕಡಾ 25ರಷ್ಟಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಇಂದು ತಮ್ಮ ಹೋರಾಟದ ಸಂಕೇತವನ್ನಾಗಿ ಮಾಡಿಕೊಂಡಿದ್ದಾರೆ. ಭಾರತದಲ್ಲಿ ಇವರ ಸಂಖ್ಯೆ ಸುಮಾರು 30 ಕೋಟಿ. ತಮಗಾದ ನಿರಂತರ ಅವಮಾನವನ್ನು ಆಧರಿಸಿ ಇವರೆಲ್ಲ  ಪ್ರತ್ಯೇಕ ರಾಷ್ಟ್ರವನ್ನು ಕೇಳಿದ್ದರೆ ಅದನ್ನು ತಪ್ಪಿಸಲು ಯಾರಿಗೂ ಸಾಧ್ಯವಿರಲಿಲ್ಲ.

ಆದರೆ ಸಂವಿಧಾನ ನಿರ್ಮಾತೃ ಅಂಬೇಡ್ಕರ್ ಅವರನ್ನು ತಮ್ಮ ಶ್ರದ್ಧಾಕೇಂದ್ರವನ್ನಾಗಿಸಿಕೊಂಡ ಈ ವರ್ಗ ದೇಶವನ್ನು ಒಡೆಯುವ ಕೆಲಸವನ್ನು ಮಾಡದೆ, ಸಂವಿಧಾನ ಕೊಡಮಾಡಿದ ಅವಕಾಶಗಳಿಗಾಗಿ ಬಗೆಬಗೆಯ ಹೋರಾಟಗಳನ್ನು ನಡೆಸುತ್ತಾ ಗಟ್ಟಿಗೊಳ್ಳುತ್ತಲೇ ಬಂದಿದೆ. ಆದರೂ ಈ ವರ್ಗದ ಸಂಕಟ ಹೊಸ ಬಗೆಯಲ್ಲಿ ಹೆಚ್ಚುತ್ತಿದೆ. ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ಇವರಿಗೆ ಸ್ಥಾನವೇ ಇಲ್ಲ. ಒಳ್ಳೆಯ ಶಿಕ್ಷಣ ಪಡೆಯಲಾರದ ಇವರು ಮೀಸಲಾತಿ ಕೇಳಿದರೆ ಅದನ್ನೂ ಕಿತ್ತುಕೊಳ್ಳುವ ಹುನ್ನಾರದ ಜೊತೆಗೆ ವ್ಯಂಗ್ಯದ ಮಾತುಗಳನ್ನೂ ಕೇಳಬೇಕಾದ ಪರಿಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಜಾಗತೀಕರಣದ ಆರ್ಥಿಕತೆಗೆ ದಲಿತರ ಹಂಗಿಲ್ಲವಾದ ಕಾರಣ ಅಭಿವೃದ್ಧಿಯಲ್ಲಿ ಇವರನ್ನು ತೊಡಗಿಸಿಕೊಳ್ಳುತ್ತಿಲ್ಲ. ಜೊತೆಗೆ ಬಲಪಂಥೀಯ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ಬಲಿಷ್ಠಗೊಳ್ಳುವ ಬಂಡವಾಳಶಾಹಿ ವರ್ಗಗಳು ಈ ಜನರನ್ನು ಮತ್ತೆ ಶೋಷಣೆಗೆ ಒಳಪಡಿಸಿ, ದಲಿತರು ತಾವಾಗಿಯೇ ಆತ್ಮಹತ್ಯೆ ಮಾಡಿಕೊಳ್ಳುವ ಹಾಗೆ ಮಾಡಿಕೊಳ್ಳುತ್ತವೆ. ರೋಹಿತ ವೇಮುಲ ಇದಕ್ಕೆ ಈಚಿನ ಉದಾಹರಣೆ. ಜಾತಿವಾದದ ಎಲ್ಲ ಅಸಂಗತಗಳಿಗೆ ಸಾವಿರಾರು ವರ್ಷಗಳಿಂದ ಬಲಿಯಾದ ದಲಿತರನ್ನೇ ಇದೀಗ ಜಾತಿವಾದಿಗಳೆಂದು ಕರೆವಾಗ, ಮತ್ತು ಅಂಥ ಆರೋಪಗಳಿಗೆ ಸರ್ಕಾರ ಕುಮ್ಮಕ್ಕು ನೀಡುವಾಗ, ದಲಿತ ಹುಡುಗನೊಬ್ಬ ಆತ್ಮಹತ್ಯೆ ಮಾಡಿಕೊಳ್ಳದೆ ಬೇರೇನು ಮಾಡಲು ಸಾಧ್ಯ? ವೇಮುಲನ ಆತ್ಮಹತ್ಯೆ ಹೇಡಿ ಕೃತ್ಯವಲ್ಲ, ಬದಲು ಮಾನವನ ಘನತೆಯನ್ನು ಎತ್ತಿ ಹಿಡಿದ ಅಪೂರ್ವ ಘಟನೆ. ಸಾವಿನ ಸಂದರ್ಭದಲ್ಲಿ ಆತ ಬರೆದ ಪತ್ರ ಭಾರತದ ಸಂವಿಧಾನಕ್ಕೆ ಬರೆದ ಹೊಸ ವ್ಯಾಖ್ಯಾನವೇ ಸರಿ. 

ಏನೇ ಇರಲಿ, ದಲಿತ ಹುಡುಗ ವೇಮುಲ ಆತ್ಮಹತ್ಯೆ ಮಾಡಿಕೊಂಡಾಗ ಇನ್ನೊಂದು ಪ್ರಬಲ ವಿದ್ಯಾರ್ಥಿ ಸಂಘಟನೆಯಾದ ‘ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ’ (ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ’ದ ವಿದ್ಯಾರ್ಥಿ ಘಟಕ) ತಕ್ಷಣವೇ ಪ್ರತಿಕ್ರಿಯಿಸಿ, ಹೋರಾಟಕ್ಕೆ ತನ್ನ ಪೂರ್ಣ ಬೆಂಬಲವನ್ನು ಸಾರಿತು. ಜೊತೆ ಜೊತೆಗೆ ‘ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್’ (ಭಾರತೀಯ ಕಮ್ಯುನಿಸ್ಟ್ ಪಕ್ಷದ  ವಿದ್ಯಾರ್ಥಿ ಘಟಕ) ಕೂಡ ಹೋರಾಟದಲ್ಲಿ ತಡಮಾಡದೆ ಸೇರಿಕೊಂಡಿತು.

ಇವುಗಳ ಜೊತೆಗೆ ‘ನ್ಯಾಶನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ’ (ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ), ‘ದಲಿತ್ ಸ್ಟೂಡೆಂಟ್ಸ್ ಯೂನಿಯನ್’, ‘ಅಂಬೇಡ್ಕರ್ ಸ್ಟೂಡೆಂಟ್ಸ್ ಯೂನಿಯನ್’, ‘ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್’, ‘ತೆಲಂಗಾಣ ವಿದ್ಯಾರ್ಥಿ ವೇದಿಕೆ’, ‘ಟ್ರೈಬಲ್ ಸ್ಟೂಡೆಂಟ್ಸ್ ಫ್ರಂಟ್’, ‘ಪೆಹೆಲ್’ ಮೊದಲಾದ ಸಣ್ಣ ಪುಟ್ಟ ವಿದ್ಯಾರ್ಥಿ ಸಂಘಟನೆಗಳೆಲ್ಲಾ ಪ್ರತಿಭಟನೆಯಲ್ಲಿ ಸೇರಿಕೊಂಡವು. ಈ ಹೋರಾಟದ ಮುಂಚೂಣಿಯಲ್ಲಿ ದಲಿತರೇ ಇದ್ದುದರಿಂದ ಮತ್ತು ಇತರರು ಅವರೊಡನೆ ಕೈಜೋಡಿಸಲು ಒಪ್ಪಿಕೊಂಡದ್ದರಿಂದ ಪ್ರತಿಭಟನೆಗೆ ಮತ್ತು ಸಂಘಟನೆಗೆ ಹೊಸ ಶಕ್ತಿ ದೊರಕಿತ್ತು.

ಇಂಥದ್ದೇ ಬೆಳವಣಿಗೆ ‘ಜೆಎನ್‌ಯು’ನಲ್ಲಿಯೂ ನಡೆಯಿತು. ‘ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್‌’ನ ಸದಸ್ಯನಾಗಿರುವ ಕನ್ಹಯ್ಯ ಕುಮಾರ್ ಅವರ ಬಂಧನವಾಗುತ್ತಲೇ ‘ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್’ ಒಂದನ್ನು ಹೊರತುಪಡಿಸಿ ಉಳಿದ ವಿದ್ಯಾರ್ಥಿ ಸಂಘಟನೆಗಳೆಲ್ಲ ಒಂದೇ ವೇದಿಕೆಗೆ ಬಂದವು. ಅದರಲ್ಲಿ ‘ಡೆಮೋಕ್ರಾಟಿಕ್ ಸ್ಟೂಡೆಂಟ್ಸ್ ಯೂನಿಯನ್’, ‘ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಶನ್’ ಮತ್ತು ‘ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್’ ಮುಖ್ಯವಾಗಿವೆ. ಇವರೆಲ್ಲರೂ ಒಟ್ಟಾದ್ದರಿಂದಲೇ ಸುಮಾರು 6000 ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಕಾಣಲಾರಂಭಿಸಿದರು. ಈ ಒಗ್ಗಟ್ಟು ಇಲ್ಲದೇ ಹೋಗಿದ್ದರೆ ಇಷ್ಟು ಹೊತ್ತಿಗೆ ‘ಜೆಎನ್‌ಯು’ವನ್ನು ಪೂರ್ತಿ ನಾಶ ಮಾಡಲಾಗುತ್ತಿತ್ತು. ಕನ್ಹಯ್ಯ ಪ್ರಕರಣದಲ್ಲಿ ಸರ್ಕಾರ ನಡೆದುಕೊಂಡ ಕ್ರಮದಲ್ಲಿಯೇ ಅದು ಸ್ಪಷ್ಟವಾಗುತ್ತದೆ.

ಅನೇಕ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ಒಂದು ನಿರ್ದಿಷ್ಟ ಕಾರಣಕ್ಕೆ ಹೈದರಾಬಾದ್‌, ದೆಹಲಿ ಮತ್ತು ಜಾಧವಪುರ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಒಟ್ಟಾಗಿರುವುದರಿಂದ ಎಡಪಂಥೀಯ ಶಕ್ತಿಗಳಿಗೆ ಮತ್ತೆ ಬಲ ಬಂದಂತಾಗಿದೆ. ಬಲಪಂಥೀಯ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಅವಕ್ಕೆ ಹೋರಾಟವನ್ನು ರೂಪಿಸಲೂ ಇದರಿಂದ ಸಾಧ್ಯವಾಗಿದೆ.  ಇದರಿಂದ ಹಿರಿಯ ರಾಜಕೀಯ ಶಕ್ತಿಗಳೂ ಪ್ರೇರಣೆ ಪಡೆದಿವೆ. ಹೈದರಾಬಾದ್ ಮತ್ತು ‘ಜೆಎನ್‌ಯು’ ಘಟನೆಗಳಿಗೆ ಭಾರತೀಯ ಜನತಾ ಪಕ್ಷ ಮತ್ತು ಅದರ ಕೆಲವು ಸಹಯೋಗೀ ಪಕ್ಷಗಳನ್ನು ಬಿಟ್ಟರೆ ಉಳಿದೆಲ್ಲರೂ ಮುಕ್ತವಾಗಿ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ.

ಎಲ್ಲರಿಗೂ ಸಾಮಾನ್ಯವಾಗಿರುವ ವಿರೋಧಿಯನ್ನು ಗುರುತಿಸುವಲ್ಲಿ ಇವರೆಲ್ಲ ಒಂದು ಬಗೆಯ ಪಕ್ವತೆಯನ್ನು ತೋರಿದ್ದಾರೆ. ಈ ಪಕ್ವತೆಯು ಒಂದು ರಾಜಕೀಯ ಶಕ್ತಿಯಾಗಿ ಹೇಗೆ ಮಾರ್ಪಾಟು ಹೊಂದುತ್ತದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ, ಆದರೆ ಅದರ ಕಡೆ ಇಟ್ಟಿರುವ ಹೆಜ್ಜೆಗಳು ದೃಢವಾಗಿವೆ. ಕೇವಲ ‘ಇಂಕ್ವಿಲಾಬ್ ಜಿಂದಾಬಾದ್’ ಎಂದು ಕೂಗುತ್ತಿರುವ ಪ್ರಗತಿಪರ ಶಕ್ತಿಗಳು ಇದೀಗ ‘ಇಂಕ್ವಿಲಾಬ್ ಜಿಂದಾಬಾದ್ – ಜೈ ಭೀಮ್’ ಎಂದು ತಮ್ಮ ಭಾಷಣಗಳನ್ನು ಕೊನೆಗೊಳಿಸುತ್ತಿವೆ. ಈ ಅನುಭವದ ಹಿನ್ನೆಲೆಯಲ್ಲಿ ಉತ್ತರ ಭಾರತದ ಎಲ್ಲ ವಿದ್ಯಾರ್ಥಿ ಸಂಘಟನೆಗಳನ್ನು ಒಂದೆಡೆ ತರುವ ಪ್ರಯತ್ನಗಳೂ ಆರಂಭವಾಗಿವೆ.

ಪ್ರಗತಿಪರ ವಿದ್ಯಾರ್ಥಿಗಳೇ ಭಾರತದ ಭವಿಷ್ಯ ಎಂಬುದನ್ನು ನಾವೀಗ ನಿಧಾನವಾಗಿ ಅರ್ಥಮಾಡಿಕೊಳ್ಳುತ್ತಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT