ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನೂ ಅಲ್ಲವಾಗುವುದಕ್ಕೆ ಏನೇನೋ...

ಒಡಲಾಳ
Last Updated 4 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಅರ್ಥದ ಅರ್ಥ ತಿಳಿಸಿಕೊಡಲು ಎದುರು ನಿಂತ ಕಾಲ, ಗ್ರಹಿಕೆಯ ಗೂಡಿನಲ್ಲಿ ಜೋಡಿಸಿಟ್ಟ ತಿಳವಳಿಕೆಗಳನ್ನೆಲ್ಲ ತಡಕಾಡಿ ಮನಸ್ಸಿಗೆ ತಟ್ಟಲಾರಂಭಿಸಿದೆ. ಅರ್ಥವಾಗದ್ದು ನನಗೆ ನಾನೋ ಅಥವಾ ನನಗೆ ಅವಳೋ, ಇಲ್ಲ ಅವಳಿಗೆ ನಾನೋ ಎಂಬ ಪ್ರಶ್ನೆ ಈ ಕ್ಷಣದ ಗೊಂದಲವಾಗಿದೆ.

ಇಡುವ ಪ್ರತಿ ಹೆಜ್ಜೆಯೂ ದಿಗಂತದೆಡೆಗೆ ದೂಡುವಾಗ ಇರುವಲ್ಲೇ ಇದ್ದುಬಿಡುವ ಹಂಬಲವೂ ಕಾಲ ಬುಡಕ್ಕೆ ಬಂದು ಬೀಳುವುದು ನಿಲ್ಲುವ ಸುಖಕ್ಕೋ? ನಡೆಯಲಾರದ ನೆಪಕ್ಕೋ? ನಡೆದೂ ಎಡವಿ ಬಿದ್ದು ನೋವುಂಡ ದುಃಖಕ್ಕೋ?

ನಿನ್ನೆ ಸಹಜತೆಯ ಮುಖವಾಡ ತೊಟ್ಟು ಮೋಹಗೊಳಿಸಿದ ಮನಸ್ಸೊಂದು ಇಂದು ಏನೂ ತೊಡದೇ ಕಣ್ಣೆದುರು ಕುಂತದ್ದು ಕೃತಕವಾಗಿ ತೋರಿದ್ದು ಕಣ್ತಪ್ಪಿನಿಂದಲೋ? ವಾಸ್ತವ ಬಂದಪ್ಪಿದ್ದರಿಂದಲೋ?

ಕೊನೆ ಇಲ್ಲದ್ದನ್ನೇ ಕಣ್ತುಂಬಿಕೊಳ್ಳುತ್ತ ಬಂದವನ ಎದುರು ಪ್ರತ್ಯಕ್ಷವಾದ ಗುರಿಯೊಂದು, ಅದುವರೆಗಿನ ಬದುಕು ಅವನಿಗೆ ದಯಪಾಲಿಸಿದ ಖುಷಿಯನ್ನೆಲ್ಲ ಹೊತ್ತೊಯ್ಯುವ ಉಮೇದು ತೋರಿದ್ದು ಅವನು ಬದಲಾಗಲೆಂದೋ? ಬದಲಾವಣೆಯೇ ಅವನಾಗಲೆಂದೋ?
ಎಲ್ಲಿಯೂ ಸಲ್ಲದ ಜೀವವೊಂದು ಯಾರ ತಂಟೆಗೂ ಹೋಗದೇ ತನ್ನೊಳಗೆ ತಾನು ಅರಳುವ ಹಾದಿ ಕಂಡುಕೊಳ್ಳಲು ಹೊರಟದ್ದು ಜಗದ ಸೋಲೋ? ಆ ಜೀವದ ಗೆಲುವೋ?

ಇರುವು ಮತ್ತು ಅಳಿವಿನ ನಡುವೆ ಉಳಿದಿರಬಹುದಾದ ಕಾಲ ಅಸ್ತಿತ್ವವಿದ್ದೂ ಇಲ್ಲದಂತೆ ಕರಗುವುದು ಬದುಕಿನ ಚೆಲುವೋ?
ಅಬ್ಬರದ ಒಡಲಿಂದ ಹೊರ ಜಿಗಿದ ಸಾವಧಾನವೊಂದು ಅಬ್ಬರಿಸದೆ ಅಗಲುವುದು ಸೃಷ್ಟಿ ನಿಯಮವೋ? ಬದುಕು ದಯಪಾಲಿಸುವ ಸಂಯಮವೋ?

ಏನೂ ಅಲ್ಲವಾಗುವುದಕ್ಕೆ ಏನೇನೋ ಮಾಡಲೇಬೇಕಿರುವುದು ವರ್ತಮಾನದ ದುರಂತವೋ? ಭೂತಕಾಲ ನಿರ್ಮಿತವೋ?
ಇನ್ನೇನು ಎಲ್ಲಾ ಮುಗಿದೇ ಹೋಯಿತೆಂಬ ಭಾವ ಬಲವಾಗುವ ವೇಳೆಯಲ್ಲೇ ಇನ್ನೇನೋ ಶುರುವಾಗುವುದು ಸೋಲೊಪ್ಪಿಕೊಳ್ಳಲು ಬಯಸದ ಬದುಕಿನ ಕುತಂತ್ರದಿಂದಲೋ? ಬದುಕಿಗೂ ಅರ್ಥವಾಗದ ಮತ್ತೊಂದರ ಕೈವಾಡದಿಂದಲೋ?

ಕಾಣದ್ದಕ್ಕೆಲ್ಲ ಕಾಣುವ ನೆಪವೊಂದನ್ನು ತೂಗಿ ಹಾಕುವುದು ತರ್ಕದ ಬೆನ್ನತ್ತಿದ ಮನಸ್ಸಿನ ಚಾಳಿಯೋ? ಮನಸ್ಸಿನ ತಲೆ ಕೆಡಿಸಿದ ಸಮಾಜದ ಬಳುವಳಿಯೋ?

ಪ್ರಶ್ನೆಗಳೆಲ್ಲ ನಾಮಾವಶೇಷವಾದ ಕ್ಷಣ, ಉತ್ತರಗಳೂ ಅನಾಥವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT