ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಲಕ್ಕಿ ಬೆಳೆಯತ್ತ ನಿರಾಸಕ್ತಿ

ಅಪ್ಪಂಗಳ ಏಲಕ್ಕಿ ಸಂಶೋಧನಾ ಕೇಂದ್ರ ಪರಿಹಾರ ನೀಡೀತೆ?
Last Updated 9 ಅಕ್ಟೋಬರ್ 2015, 10:55 IST
ಅಕ್ಷರ ಗಾತ್ರ

ನಾಪೋಕ್ಲು: ಅತ್ಯುತ್ತಮ ಗುಣಮಟ್ಟದ ಸುಗಂಧಿತ ಏಲಕ್ಕಿ ಉತ್ಪಾದಿಸುವ ಪ್ರದೇಶವೆಂಬ ಖ್ಯಾತಿ ಹೊಂದಿದ್ದ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈಗ ಏಲಕ್ಕಿಯ ಕಂಪು ಇಲ್ಲ.

ಕಾಫಿ, ಕಾಳುಮೆಣಸು ಮೊದಲಾದ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿರುವ ರೈತರು ಏಲಕ್ಕಿ ಬೆಳೆಯೆಂದರೆ ಹೌಹಾರುವಂತಾಗಿದೆ.
ನೆರಳಿನ ಮರಗಳನ್ನು ಹೊಂದಿದ್ದ ತಂಪುನಾಡಿನಲ್ಲಿ ಏಲಕ್ಕಿ ಉದ್ದಗಲಕ್ಕೆ ವ್ಯಾಪಿಸಿತ್ತು. ಕಾಫಿ, ಜೇನಿನೊಂದಿಗೆ ಪ್ರಮುಖ ಬೆಳೆಯಾಗಿ ಏಲಕ್ಕಿಯ ಹೆಸರೂ ಜಿಲ್ಲೆಯಲ್ಲಿ ಖ್ಯಾತಿ ಹೊಂದಿತ್ತು. ಈಗ ಏಲಕ್ಕಿ ಬೆಳೆಯುವ ಪ್ರದೇಶ ಕಾಫಿ ತೋಟವಾಗಿ ಮಾರ್ಪಟ್ಟಿದೆ. ಅಳಿದುಳಿದ ಏಲಕ್ಕಿ ಬೆಳೆಗಾರರದ್ದು ಸಂಕಷ್ಟದ ದಿನಗಳು.

ಹವಾಮಾನದ ಬದಲಾವಣೆ ಯೊಂದಿಗೆ, ಕಟ್ಟೆರೋಗದ ಹಾವಳಿ ಯೊಂದಿಗೆ ಆರಂಭವಾದ ಏಲಕ್ಕಿಯ ಅವನತಿ ಇದೀಗ ಕಾರ್ಮಿಕರ ಕೊರತೆಯೊಂದಿಗೆ ನಷ್ಟದ ಬೆಳೆಯಾಗಿ ಪರಿಣಮಿಸಿದೆ. ಕಳೆ ನಿರ್ಮೂಲನೆಗೆ ತಗಲುವ ವೆಚ್ಚ, ಕೊಯ್ಲಿಗೆ ತಗಲುವ ವೆಚ್ಚ, ಒಣಗಿಸಲು ತಗಲುವ ವೆಚ್ಚ ಎಲ್ಲಾ ಲೆಕ್ಕ ಹಾಕಿದರೆ ಫಸಲು ಬಿಟ್ಟ ಗಿಡದಿಂದ ಏಲಕ್ಕಿ ಕೊಯ್ಲು ಮಾಡದೇ ಇರುವುದೇ ಉತ್ತಮ ಎಂಬುದು ಬೆಳೆಗಾರರ ಅಭಿಪ್ರಾಯ.

1990ರ ಅವಧಿಯಲ್ಲಿ ಶುಂಠಿ ಬೆಳೆ ಕಾಲಿರಿಸುವುದರೊಂದಿಗೆ ಏಲಕ್ಕಿ ಬೆಳೆಯ ಅವನತಿ ಆರಂಭವಾಯಿತು. ಶುಂಠಿಯನ್ನು ಕಾಡುವ ಕೊಳೆರೋಗದ ಬ್ಯಾಕ್ಟೀರಿಯಾಗಳು ಸುಲಭವಾಗಿ ಶುಂಠಿಗಿಡಗಳಿಗೆ ಅಂಟಿಕೊಂಡವು. ಕಟ್ಟೆರೋಗ ಅಥವಾ ಕೊಕ್ಕೆ ಕಂದುರೋಗ ಎಂದು ಗುರುತಿಸಿಕೊಂಡ ರೊಗದ ಹತೋಟಿಗೆ ಪರಿಹಾರ ಸಿಗದೇ ರೊಗ ಕಂಡುಬಂದ ಗಿಡಗಳನ್ನು ಕಿತ್ತುಹಾಕುವುದೊಂದೇ ಪರಿಹಾರ ಮಾರ್ಗವಾಯಿತು. ಫಸಲಿನೊಂದಿಗೆ ಗಿಡದ ನಾಶವೂ ಕಾರಣವಾಗಿ ರೈತರು ಏಲಕ್ಕಿಯ ಬದಲು ಕಾಫಿಯತ್ತ ವಾಲಿದರು.

ವರ್ಷದಿಂದ ವರ್ಷಕ್ಕೆ ಏಲಕ್ಕಿ ಫಸಲು ಇಳಿಮುಖಗೊಂಡಿತು. ಉತ್ಪಾದನಾ ವೆಚ್ಚವೂ ಹೆಚ್ಚಿದ ಪರಿಣಾಮ ಏಲಕ್ಕಿಯ ಬಗ್ಗೆ ರೈತರು ಆಸಕ್ತಿ ಕಳೆದುಕೊಂಡರು. ಇನ್ನು ಬೆಳೆಗಾರರ ಪಾಲಿಗೆ ಮಾರುಕಟ್ಟೆಯೂ ಆಶಾದಾಯಕವಾಗಿಲ್ಲ. ಹೀಗಾಗಿ ಏಲಕ್ಕಿ ಬೆಳೆ ಪುನಃ ಚೇತರಿಕೆ ಕಾಣುವ ಆಶಾಭಾವನೆ ರೈತರಲ ಇಲ್ಲ. ಹೀಗಾಗಿ ಕಾಫಿ, ಕಾಳುಮೆಣಸು ಗಿಡಗಳು ನರ್ಸರಿಯಿಂದ ಮಾರಾಟವಾಗುವಂತೆ ಏಲಕ್ಕಿ ಗಿಡಗಳಿಗೆ ಬೇಡಿಕೆಯೇ ಇಲ್ಲವಾಗಿದೆ.

ಸದ್ಯ ಮಡಿಕೇರಿ ತಾಲ್ಲೂಕಿನ ಅಪ್ಪಂಗಳ ಏಲಕ್ಕಿ ಸಂಶೋಧನಾ ಕೇಂದ್ರದಲ್ಲಿ ಐಐಎಸ್‌ಆರ್‌ ಅವಿನಾಶ ಹಾಗೂ ಐಐಎಸ್‌ಆರ್‌ ವಿಜೇತ ಎಂಬ ಕಟ್ಟೆರೋಗ ನಿರೋಧಕ ಶಕ್ತಿಯುಳ್ಳ ತಳಿಗಳನ್ನು ಈಚೆಗೆ ಅಭಿವೃದ್ಧಿಪಡಿಸ ಲಾಗಿದ್ದು ಪ್ರಾಯೋಗಿಕ ನಾಟಿ ನಡೆದಿದೆ. ಈ ತಳಿಗಳನ್ನು  ಬೆಳೆಸುವತ್ತ ರೈತರು ಆಸಕ್ತಿ ವಹಿಸಿದರೆ ಮಾತ್ರ ಏಲಕ್ಕಿ ಮತ್ತೆ ಕಂಪುಬೀರುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT