ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ಕ್ರೀಡಾಕೂಟ ದೆಹಲಿಯಿಂದ ಇಂಚೆನ್‌ವರೆಗೆ...

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

‘ಏಷ್ಯಾದ ರಾಷ್ಟ್ರಗಳ ನಡುವಿನ ಬಾಂಧವ್ಯ ಮತ್ತು ಸ್ನೇಹ ಸಂಬಂಧವನ್ನು ಗಟ್ಟಿಗೊಳಿಸಲು ಏಷ್ಯನ್‌ ಕ್ರೀಡಾಕೂಟ ವೇದಿಕೆಯಾಗಲಿ. ಕ್ರೀಡೆಯ ಮೂಲಕ ನಾವೆಲ್ಲರೂ ಒಂದಾಗೋಣ...’

–ಅದು ಮಾರ್ಚ್‌ ನಾಲ್ಕು 1951. ದೆಹಲಿಯಲ್ಲಿ ನಡೆದ ಚೊಚ್ಚಲ ಏಷ್ಯನ್‌ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ದಲ್ಲಿ ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಹೇಳಿದ ಸ್ಫೂರ್ತಿಯ ಮಾತುಗಳಿವು.

ಹೀಗೆ ನಮ್ಮ ರಾಷ್ಟ್ರದ ರಾಜಧಾನಿಯಿಂದ ಆರಂಭವಾದ ಏಷ್ಯನ್‌ ಕೂಟದ ಪಯಣ ಈಗ ದಕ್ಷಿಣ ಕೊರಿಯದ ಇಂಚೆನ್‌ ವರೆಗೆ ಬಂದು ತಲುಪಿದೆ. ಮೊದಲ ಸಲ 11 ರಾಷ್ಟ್ರಗಳಷ್ಟೇ ಪಾಲ್ಗೊಂಡಿದ್ದ ಕೂಟದಲ್ಲಿ ಈಗ 45 ದೇಶಗಳ ಸ್ಪರ್ಧಿಗಳು ಕಣಕ್ಕಿಳಿದಿದ್ದಾರೆ.  ಅಥ್ಲೀಟ್‌ಗಳ ಸಂಖ್ಯೆಯೂ ಹೆಚ್ಚಾಗಿದೆ.

ಒಲಿಂಪಿಕ್ಸ್‌ ನಂತರದ ಮೂರನೇ ಅತಿ ದೊಡ್ಡ ಕ್ರೀಡಾಕೂಟ ಎನಿಸಿಕೊಂಡಿರುವ ಏಷ್ಯನ್‌್ ಗೇಮ್ಸ್‌ನಲ್ಲಿ ತನ್ನ ಅಧಿಪತ್ಯ ಮುಂದುವರಿಸಲು ಚೀನಾ ಪಣತೊಟ್ಟಿದೆ. ಭಾರತ, ಜಪಾನ್‌, ದಕ್ಷಿಣ ಕೊರಿಯ, ಹಾಂಕಾಂಗ್‌ ಮತ್ತು ಇಂಡೊನೇಷ್ಯಾ ರಾಷ್ಟ್ರಗಳು ಚೀನಾದ ‘ಕ್ರೀಡಾಕೋಟೆ’ಗೆ ಲಗ್ಗೆ ಹಾಕಲು ಛಲತೊಟ್ಟು ನಿಂತಿವೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ  17ನೇ ಏಷ್ಯನ್‌ ಕೂಟದ

ಸಂಭ್ರಮಕ್ಕೆ ದೆಹಲಿ ಮೂರನೇ ಬಾರಿ ಸಾಕ್ಷಿಯಾಗುತ್ತಿತ್ತು. ಹಿಂದೆ ಕಾಮನ್‌ವೆಲ್ತ್‌ ಕೂಟ ಆಯೋಜಿಸಿದ್ದ ಭಾರತ ದೊಡ್ಡ ಕ್ರೀಡಾಕೂಟಗಳನ್ನು ಸಂಘಟಿಸಿ ವಿಶ್ವಕ್ಕೆ ತನ್ನ ಸಾಮರ್ಥ್ಯ ಸಾಬೀತು ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಲೇ ಬಂದಿದೆ. ಈ ಬಾರಿಯೂ ಇಂಥದ್ದೇ ಒಂದು ಪ್ರಯತ್ನ ನಡೆಯಿತು.

17ನೇ ಏಷ್ಯನ್‌ ಕೂಟ ಸಂಘಟಿಸಲು ಭಾರತ ಬಿಡ್‌ ಸಲ್ಲಿಸಿತ್ತು. ಕೊನೆಯ ಸುತ್ತಿಗೂ ಆಯ್ಕೆಯಾಗಿತ್ತು. ಆದರೆ, ದಕ್ಷಿಣ ಕೊರಿಯ 32 ಮತಗಳನ್ನು ಪಡೆದರೆ, ಭಾರತಕ್ಕೆ ಲಭಿಸಿದ್ದು 13 ಮತ ಗಳಷ್ಟೇ. ಆದ್ದರಿಂದ ಏಷ್ಯನ್‌ ಕೂಟ ಮೂರನೇ ಬಾರಿ ಸಂಘಟಿಸುವ ಅವಕಾಶ ಕೊನೆಯ ಹಂತದಲ್ಲಿ ಭಾರತದ ಕೈ ಜಾರಿತು. 1982ರಲ್ಲಿ ಕೊನೆಯ ಸಲ ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಏಷ್ಯನ್‌ ಕೂಟ ಜರುಗಿತ್ತು. ಕೊರಿಯ ಮೂರನೇ ಬಾರಿ ಕೂಟ ಸಂಘಟಿಸಿದೆ. 1986ರಲ್ಲಿ ಸೋಲ್‌ನಲ್ಲಿ ಮತ್ತು 2002ರಲ್ಲಿ ಬೂಸಾನ್‌ನಲ್ಲಿ ನಡೆದಿತ್ತು.

ನನಸಾಗಲಿ ಬಂಗಾರದ ಕನಸು
ಏಷ್ಯನ್‌ ಕೂಟದಲ್ಲಿ ಭಾರತ ಸಾಕಷ್ಟು  ಪದಕ ಗೆದ್ದಿದೆ ಯಾದರೂ, ಇನ್ನು ಕೆಲ ಸ್ಪರ್ಧೆಗಳಲ್ಲಿ ಬಂಗಾರದ ಸಾಧನೆ ತೋರಲು ಸಾಧ್ಯವಾಗಿಲ್ಲ. ಆ ಕನಸು ಈ ಬಾರಿಯಾದರೂ ನನಸಾಗಲಿ. ಬ್ಯಾಡ್ಮಿಂಟನ್‌ ಶಕ್ತಿ ಕೇಂದ್ರ ಎನಿಸಿರುವ ಚೀನಾ, ಮಲೇಷ್ಯಾ ಮತ್ತು ಹಾಂಕಾಂಗ್‌ ರಾಷ್ಟ್ರಗಳ ಸ್ಪರ್ಧಿಗಳನ್ನು ಭಾರತ ಸಾಕಷ್ಟು ಸಲ ಸೋಲಿಸಿದೆ.  ಏಷ್ಯನ್‌ ಕೂಟದಲ್ಲಿ ಭಾರತದ ಬ್ಯಾಡ್ಮಿಂಟನ್‌ ಸ್ಪರ್ಧಿಗಳು ಏಳು ಬಾರಿ ಕಂಚಿನ ಪದಕ  ಗೆದ್ದಿದ್ದಾರೆ. ಆದರೆ,  ಒಂದೇ ಒಂದು ಬಾರಿಯೂ ಚಿನ್ನ ಗೆಲ್ಲಲು ಸಾಧ್ಯವಾಗಿಲ್ಲ. 2010ರ ಕೂಟದ ನಂತರ  ಸೈನಾ ನೆಹ್ವಾಲ್‌  ಮತ್ತು ಪಿ.ವಿ. ಸಿಂಧು ಹಲವು ಕೂಟಗಳಲ್ಲಿ ಪದಕ ಜಯಿಸಿದ್ದಾರೆ. ಆದ್ದರಿಂದ ಅವರು ಬಂಗಾರದ ಕೊರಗನ್ನು ನೀಗಿಸಲಿದ್ದಾರೆ ಎನ್ನುವ ಭರವಸೆ ಮೂಡಿದೆ.

ಏಷ್ಯನ್‌ ಕೂಟದಲ್ಲಿ ಭಾರತ ವೇಟ್‌ಲಿಫ್ಟಿಂಗ್‌ನಲ್ಲಿ ಇದುವರೆಗೂ ಒಟ್ಟು 15 ಪದಕ ಜಯಿಸಿದೆ. ಆದರೆ, ‘ಬಂಗಾರ’ದ ಆಸೆ ಮಾತ್ರ

ಈಡೇರಿಲ್ಲ. ಈ ಬಾರಿ ಕಣದಲ್ಲಿರುವ ಸುಕೇನ್‌ ಡೆ, ಸತೀಶ್‌ ಶಿವಲಿಂಗಮ್‌, ಕೆ. ರವಿ ಕುಮಾರ್‌, ವಿಕಾಸ್‌ ಠಾಕೂರ್, ಕೆ. ಸಂಜಿತಾ ಚಾನು, ಮೀರಾಬಾಯಿ ಚಾನು, ಪೂನಮ್‌ ಯಾದವ್‌ ಅವರಾದರೂ ಈ ಕೊರತೆಯನ್ನು ನೀಗಿಸುವರೇ ಎನ್ನುವುದನ್ನು ಕಾದು ನೋಡಬೇಕಿದೆ.

ಇನ್ನುಳಿದಂತೆ ಸೇಲಿಂಗ್‌, ಆರ್ಚರಿ, ಸೈಕ್ಲಿಂಗ್‌,  ಟೇಕ್ವಾಂಡೊ, ಜಿಮ್ನಾಸ್ಟಿಕ್‌, ಸ್ಕ್ವಾಷ್‌, ಜೂಡೊ, ವುಶು ಮತ್ತು ಕೆನೊಯಿಂಗ್‌ ಸ್ಪರ್ಧೆಗಳಲ್ಲಿ  ಭಾರತಕ್ಕೆ ಒಂದೂ ಚಿನ್ನದ ಪದಕ ಲಭಿಸಿಲ್ಲ. 

ಮೊದಲಿನ ಹೊಳಪು ಕಳೆದುಕೊಂಡಿರುವ ಭಾರತ ಹಾಕಿ ತಂಡಕ್ಕೆ ಈ ಸಲದ ಕೂಟ ಮಹತ್ವವೆನಿಸಿದೆ. ಇದೇ ವರ್ಷದ ಅಂತ್ಯದಲ್ಲಿ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿ ಇದೆ. ಮುಂದಿನ ವರ್ಷ  ಹಾಲೆಂಡ್‌ನ ಹೇಗ್‌ನಲ್ಲಿ ವಿಶ್ವಕಪ್‌ ನಡೆಯಲಿದೆ. ಆದ್ದರಿಂದ ಸರ್ದಾರ್‌ ಸಿಂಗ್ ನೇತೃತ್ವದ ಭಾರತ ಹಾಕಿ ತಂಡಕ್ಕೆ ಏಷ್ಯನ್‌ ಕೂಟ ಅಗ್ನಿಪರೀಕ್ಷೆ ಎನಿಸಿದೆ.

ಎರಡು ಸಲ (1951 ಮತ್ತು 1982ರಲ್ಲಿ) ಭಾರತದಲ್ಲಿ ಈ ಕೂಟ ನಡೆದಾಗ ಆತಿಥೇಯರು 50ಕ್ಕಿಂತಲೂ ಹೆಚ್ಚು ಪದಕ ಜಯಿಸಿದ್ದರು. ಆದರೆ, ವಿದೇಶಿ ನೆಲದಲ್ಲಿ ಪದಕ ಗಳಿಕೆಯಲ್ಲಿ ‘ಅರ್ಧಶತಕ’ ಬಾರಿಸಿದ್ದು 2010ರಲ್ಲಿ. ಚೀನಾದ ಗುವಾಂಗ್‌ ಜೌನಲ್ಲಿ ನಡೆದ ಕೂಟದಲ್ಲಿ ಭಾರತ ಒಟ್ಟು 65 ಪದಕಗಳನ್ನು ಜಯಿಸಿತ್ತು. ಇದುವರೆಗಿನ ಒಟ್ಟಾರೆ ಕೂಟಗಳಲ್ಲಿ ಭಾರತ ಹೆಚ್ಚು ಪದಕಗಳನ್ನು ಗೆದ್ದಿದ್ದು ಅಥ್ಲೆಟಿಕ್ಸ್‌ನಲ್ಲಿ. ಆದ್ದರಿಂದ ಈ ಸ್ಪರ್ಧೆಯಲ್ಲಿಯೇ ನಿರೀಕ್ಷೆ ಹೆಚ್ಚಿದೆ.

ಹೋದ ತಿಂಗಳು ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್‌ ಕೂಟದಲ್ಲಿ ಭಾರತ 64 ಪದಕಗಳನ್ನು ಗೆದ್ದುಕೊಂಡಿದೆ. ಆದ್ದರಿಂದ ಸ್ಪರ್ಧಿಗಳ ವಿಶ್ವಾಸ ಸಹಜವಾಗಿಯೇ ಹೆಚ್ಚಿದೆ.

ಕರ್ನಾಟಕದ ವಿಕಾಸ್‌ ಗೌಡ, ಸಹನಾ ಕುಮಾರಿ, ಎಂ.ಆರ್‌. ಪೂವಮ್ಮ, ಅಶ್ವಿನಿ ಅಕ್ಕುಂಜಿ, ಹಾಕಿ ತಂಡದಲ್ಲಿರುವ ಎಸ್‌.ವಿ. ಸುನಿಲ್‌, ವಿ.ಆರ್‌. ರಘುನಾಥ್‌, ನಿಕಿನ್ ತಿಮ್ಮಯ್ಯ ಇವರ ಮೇಲೂ ಭರವಸೆ ಇದೆ. ನಡಿಗೆ ಸ್ಪರ್ಧಿ ಕೆ.ಟಿ. ಇರ್ಫಾನ್‌, ಡಿಸ್ಕಸ್‌ ಎಸೆತ ಸ್ಪರ್ಧಿ ಕೃಷ್ಣಾ ಪೂನಿಯಾ, ಸೀಮಾ ಪೂನಿಯಾ ಹೀಗೆ ಸಾಕಷ್ಟು ಸ್ಪರ್ಧಿಗಳು ಭರವಸೆಯ ತಾರೆಗಳು ಎನಿಸಿದ್ದಾರೆ. 2016ರಲ್ಲಿ ಒಲಿಂಪಿಕ್ಸ್‌ ನಡೆಯಲಿರುವ ಕಾರಣ ಈ ಸಲದ ಏಷ್ಯನ್‌ ಕೂಟ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ.  

ಕ್ರಿಕೆಟ್‌: ತಾತ್ಸಾರ ಏಕೆ ?
ಐಪಿಎಲ್‌, ಚಾಂಪಿಯನ್ಸ್‌ ಲೀಗ್‌ ಎಂದಾಕ್ಷಣ ಓಡೋಡಿ ಬರುವ ಭಾರತದ ಕ್ರಿಕೆಟಿಗರು ಏಷ್ಯನ್‌ ಕೂಟ ಎಂದಾಕ್ಷಣ ಅದೇಕೆ ಮೂಗು ಮುರಿಯುತ್ತಾರೆ ಎನ್ನುವುದೇ ಅರ್ಥವಾಗುವುದಿಲ್ಲ.

1998ರಲ್ಲಿ ಕ್ವಾಲಾಲಂಪುರದಲ್ಲಿ ನಡೆದ ಕಾಮನ್‌ವೆಲ್ತ್‌ ಕೂಟದಲ್ಲಿ ಕ್ರಿಕೆಟ್‌ ಇತ್ತು. ಇದರಿಂದ ಪ್ರೇರಣೆ ಪಡೆದು 2010ರ ಏಷ್ಯನ್ ಕೂಟದಲ್ಲಿ ಮೊದಲ ಸಲ ಕ್ರಿಕೆಟ್‌ ಸೇರ್ಪಡೆ ಮಾಡಲಾಯಿತು. ಆಗ ಪಾಕಿಸ್ತಾನ ತಂಡ ಚಿನ್ನ ಜಯಿಸಿತ್ತು. ಬಾಂಗ್ಲಾದೇಶ ರನ್ನರ್ಸ್‌ ಅಪ್‌ ಆಗಿತ್ತು.  ಈ ಸಲದ ಏಷ್ಯಾ ಕೂಟದಲ್ಲಿ  ಟೆಸ್ಟ್‌ ಆಡುವ ರಾಷ್ಟ್ರಗಳಾದ ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳು ಪಾಲ್ಗೊಂಡಿವೆ. ಆದರೆ, ಭಾರತ ತಂಡ ಈ ಕೂಟದಲ್ಲಿ ಪಾಲ್ಗೊಳ್ಳುವ ಬಗ್ಗೆ ಕೊಂಚವೂ ಯೋಚಿಸಿಲ್ಲ.  ನಾಲ್ಕು ವರ್ಷಗಳ ಹಿಂದೆಯೂ ಪಾಲ್ಗೊಂಡಿರಲಿಲ್ಲ. ಏಕೆಂದರೆ ಇಂಚೆನ್‌ನಲ್ಲಿ ದೊಡ್ಡ ಮೊತ್ತದ ನಗದು ಬಹುಮಾನಗಳಿರುವುದಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT