ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ಜೂನಿಯರ್‌ ಟೆನಿಸ್‌: ಪ್ರಾಂಜಲ ಶುಭಾರಂಭ

Last Updated 3 ಮೇ 2016, 19:30 IST
ಅಕ್ಷರ ಗಾತ್ರ

ಪುಣೆ (ಪಿಟಿಐ): ಆಟದ ಎಲ್ಲಾ ವಿಭಾಗಗಳಲ್ಲಿಯೂ ಶ್ರೇಷ್ಠ ಸಾಮರ್ಥ್ಯ ತೋರಿದ ಭಾರತದ ಭರವಸೆಯ ಆಟಗಾರ್ತಿ  ಪ್ರಾಂಜಲ ಯಡ್ಲಪಳ್ಳಿ ಅವರು ಐಟಿಎಫ್‌  ಏಷ್ಯನ್‌ ಜೂನಿಯರ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

ಆತಿಥೇಯ ರಾಷ್ಟ್ರದ  ಜೀಲ್‌ ದೇಸಾಯಿ, ಮಹಕ್‌ ಜೈನ್‌ ಮತ್ತು ನಿಧಿ ಸುರಪನೇನಿ ಅವರೂ ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಬಾಳೇವಾಡಿ ಕ್ರೀಡಾಂಗಣದಲ್ಲಿ  ಮಂಗಳವಾರ ನಡೆದ ಬಾಲಕಿಯರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಪಂದ್ಯದಲ್ಲಿ ಪ್ರಾಂಜಲ 6–2, 6–2ರ ನೇರ ಸೆಟ್‌ಗಳಿಂದ ಜಪಾನ್‌ನ ಸತೊಕೊ ಸುಯೆನೊ ಅವರನ್ನು ಸೋಲಿಸಿದರು.

ಟೂರ್ನಿಯಲ್ಲಿ ಐದನೇ ಶ್ರೇಯಾಂಕ ಹೊಂದಿರುವ ಪ್ರಾಂಜಲಾ ಆರಂಭಿಕ ಸೆಟ್‌ನಲ್ಲಿ ಮಿಂಚಿನ ಆಟ ಆಡಿದರು.

ಭಾರತದ ಆಟಗಾರ್ತಿಯ ರ್‍ಯಾಕೆಟ್‌ ನಿಂದ ಸಿಡಿಯುತ್ತಿದ್ದ ಸರ್ವ್‌ಗಳನ್ನು ರಿಟರ್ನ್‌ ಮಾಡಲು ಜಪಾನ್‌ನ ಆಟಗಾರ್ತಿ ಸಾಕಷ್ಟು ಪ್ರಯಾಸ ಪಟ್ಟರು.
ಪ್ರಾಂಜಲ ಬೇಗನೆ ಮುನ್ನಡೆ ಗಳಿಸಿದ್ದರಿಂದ ಎದುರಾಳಿ ಆಟಗಾರ್ತಿ ಒತ್ತಡಕ್ಕೆ ಒಳಗಾದರು. ಇದನ್ನು ಅರಿತ ಪ್ರಾಂಜಲ ಆಕರ್ಷಕ ಡ್ರಾಪ್‌ ಮತ್ತು ಅಮೋಘ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳ ಮೂಲಕ ಅಂಗಳದಲ್ಲಿ ಅಕ್ಷರಶಃ ಮಿಂಚು ಹರಿಸಿದರು. ಈ ಮೂಲಕ ನಿರಾಯಾಸವಾಗಿ ಸೆಟ್‌ ಗೆದ್ದು ಮುನ್ನಡೆ ಕಂಡುಕೊಂಡರು.

ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಪ್ರಾಂಜಲ ಎರಡನೇ ಸೆಟ್‌ನಲ್ಲೂ ಆಕ್ರಮಣಕಾರಿ ಆಟ ಆಡಿದರು.

ತಮ್ಮ ಸರ್ವ್‌ ಕಾಪಾಡಿಕೊಳ್ಳುವ ಜತೆಗೆ ಎದುರಾಳಿಯ ಸರ್ವ್‌ಗಳನ್ನು ಮುರಿದು ಗೇಮ್‌ ಗೆದ್ದುಕೊಂಡ ಅವರು ಪಂದ್ಯದ ಮೇಲಿನ ಹಿಡಿತ ಬಿಗಿ ಮಾಡಿಕೊಂಡರು. ಆ ನಂತರವೂ ಛಲದ ಆಟ ಆಡಿ ಜಯದ ತೋರಣ ಕಟ್ಟಿದರು.

ಜೀಲ್‌ಗೆ ಜಯ:  ಮೂರನೇ ಶ್ರೇಯಾಂಕಿತ ಆಟಗಾರ್ತಿ ಜೀಲ್‌ ದೇಸಾಯಿ ಅವರು ಆರಂಭಿಕ ಸುತ್ತಿನಲ್ಲಿ ಜಯ ಸಾಧಿಸಿದರು.
ಜೀಲ್‌ 6–0, 3–6, 6–1ರಲ್ಲಿ ಜಪಾನ್‌ನ ಹಿಮಾರಿ ಸ್ಯಾಟೊ ಅವರನ್ನು ಪರಾಭವಗೊಳಿಸಿದರು.

ಮಹಕ್‌ ಜೈನ್‌ 1–6, 7–5, 6–4ರಲ್ಲಿ ಇಂಡೊನೇಷ್ಯಾದ ಏಳನೇ ಶ್ರೇಯಾಂಕದ ಆಟಗಾರ್ತಿ ರಿಫಾಂಟಿ ಕಹಫಿಯಾನಿಗೆ ಆಘಾತ ನೀಡಿದರು.
ಇನ್ನೊಂದು ಪಂದ್ಯದಲ್ಲಿ ನಿಧಿ 6–4, 6–1ರ ನೇರ ಸೆಟ್‌ಗಳಿಂದ ಭಾರತದವರೇ ಆದ ಶ್ರಾವ್ಯ ಶಿವಾನಿ ಚಿಲಕಲಾಪುದಿ ಎದುರು ಗೆದ್ದರು.

 ಇತರ ಪಂದ್ಯಗಳಲ್ಲಿ ಶಿವಾನಿ ಅಮಿನೇನಿ 6–7, 6–2, 3–6ರಲ್ಲಿ ಯೂಕಿ ನೈಟೊ ಎದುರೂ, ಎಂ.ಜಿತಾಶ ಶಾಸ್ತ್ರಿ 3–6, 0–6ರಲ್ಲಿ ಜೊಲೆಟಾ ಬುದಿಮಾನ್‌ ಮೇಲೂ, ಸಾತ್ವಿಕಾ ಸಮಾ 2–6, 1–6ರಲ್ಲಿ ಜಿಮಾ ದು ವಿರುದ್ಧವೂ, ಶ್ರಿವಾಲಿ ರಶ್ಮಿಕಾ ಭಮಿಡಿಪತಿ 0–6,0–6ರಲ್ಲಿ ಖೀಮ್‌ ಇಗ್ಲುಪಾಸ್‌ ಎದುರೂ, ಮಿಹಿಕಾ ಯಾದವ್‌ 3–6, 3–6ರಲ್ಲಿ ನಾಹೊ ಸ್ಯಾಟೊ ವಿರುದ್ಧವೂ, ಶಿವಾನಿ ಇಂಗಳೆ 2–6, 5–7ರಲ್ಲಿ ಅನ್ರಿ ನಗಟ ಮೇಲೂ, ಸ್ನೇಹಲ್‌ ಮಾನೆ 0–6, 2–6ರಲ್ಲಿ ಕ್ಸಿಯು ವಾಂಗ್‌ ವಿರುದ್ಧವೂ, ಪ್ರಿಯಾನ ಕಲಿತ 0–6, 1–6ರಲ್ಲಿ ಮಿ ಜುವೊಮಾ ಯೂ ಮೇಲೂ, ಹರ್ಷಾ ಸಾಯಿ ಚಲ್ಲಾ 0–6, 1–6 ರಲ್ಲಿ ಯಾನ್ನಿ ಲಿಯು ಎದುರೂ, ಆಕಾಂಕ್ಷಾ ಎ ಭಾನ್‌ 3–6, 6–2ರಲ್ಲಿ ಮಯೂಕಾ ಐಕಾವ ವಿರುದ್ಧವೂ ಸೋಲು ಕಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT