ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌ನಲ್ಲಿ ಕನ್ನಡಿಗನ ಮಿಂಚು...

Last Updated 22 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಬ್ರೆಜಿಲ್‌, ಅರ್ಜೆಂಟೀನಾ, ಫ್ರಾನ್ಸ್‌, ಇಟಲಿ ದೇಶಗಳ ಫುಟ್‌ಬಾಲ್‌ ಆಟಗಾರರು ಹೊಂದಿರುವ ವೃತ್ತಿಪರತೆ ಎದ್ದು ಕಾಣುವಂತಹದ್ದು. ಲಯೊನೆಲ್‌ ಮೆಸ್ಸಿ, ನೇಮರ್‌, ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪ್ರತಿಭೆ ಬಗ್ಗೆ ಫುಟ್‌ಬಾಲ್‌ ಪ್ರಿಯರಿಗೆಲ್ಲರಿಗೂ ಗೊತ್ತಿದೆ. ಇವರ ಈ ಶ್ರೇಷ್ಠ ಸಾಮರ್ಥ್ಯದ ಹಿಂದೆ ‘ವೃತ್ತಿಪರತೆ’ ಎನ್ನುವ ಮಂತ್ರವಿದೆ.

ಈ ವಿಷಯವನ್ನು ಭಾರತದ ಫುಟ್‌ಬಾಲ್‌ಗೆ ಹೋಲಿಸಿ ಹೇಳುವುದು ಕೊಂಚ ಕಷ್ಟ. ಸಮಾಧಾನದ ವಿಷಯವೆಂದರೆ ಇತ್ತೀಚಿನ ವರ್ಷಗಳಲ್ಲಿ ಭಾರತದ ಆಟಗಾರರೂ ವೃತ್ತಿಪರತೆ ಮೈಗೂಡಿಸಿಕೊಳ್ಳುತ್ತಿದ್ದಾರೆ. ಐ ಲೀಗ್‌ ಮತ್ತು ಇಂಡಿಯನ್ ಸೂಪರ್‌ ಲೀಗ್‌ ಟೂರ್ನಿಗಳಲ್ಲಿ ವಿದೇಶದ ಕೆಲ ಖ್ಯಾತನಾಮ ಆಟಗಾರರು ಆಡುತ್ತಿದ್ದಾರೆ. ಅವರ ಪ್ರಭಾವ ಭಾರತೀಯರ ಮೇಲೂ ಬೀಳುತ್ತಿದೆ.

ಮೂರು ವರ್ಷಗಳ ಹಿಂದೆ ಬೆಂಗಳೂರು ಫುಟ್‌ಬಾಲ್‌ ಕ್ಲಬ್ ತಂಡಕ್ಕೆ ಇಂಗ್ಲೆಂಡ್‌ನ ಆ್ಯಷ್ಲೆ ವೆಸ್ಟ್‌ವುಡ್‌ ಕೋಚ್‌ ಆಗಿ ಬಂದ ಬಳಿಕ ಬೆಂಗಳೂರು ತಂಡದ ಆಟಗಾರರೂ ವೃತ್ತಿಪರತೆಯತ್ತ ಹೆಚ್ಚು ಗಮನ ಕೊಡುತ್ತಿದ್ದಾರೆ. ಬಿಎಫ್‌ಸಿ ತಂಡ ಪ್ರತಿಭೆಗಳ ಕಣಜ. ಎಷ್ಟೇ ಹಿರಿಯ ಆಟಗಾರ ನಾಗಿದ್ದರೂ ಪಂದ್ಯದ ದಿನ ಶ್ರೇಷ್ಠ ಸಾಮರ್ಥ್ಯ ತೋರಿಸಿದರಷ್ಟೇ ಮುಂದಿನ ಪಂದ್ಯದಲ್ಲಿ ಅವಕಾಶ. ಆದ್ದರಿಂದ ಬಿಎಫ್‌ಸಿ ತಂಡದಲ್ಲಿ ಸ್ಥಾನ ಪಡೆಯುವುದು ಹಾಗೂ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸುವುದು ಎರಡೂ ಒಂದೇ ಎನ್ನುವ ಮಾತು ಫುಟ್‌ಬಾಲ್‌ ವಲಯದಲ್ಲಿದೆ.

ಈ ಸವಾಲು ಮತ್ತು ಪೈಪೋಟಿಯನ್ನು ಸಮರ್ಥವಾಗಿ ಎದುರಿಸಿರುವ ಕರ್ನಾಟಕದ ಶಂಕರ್‌ ಸಂಪಂಗಿರಾಜ್ ಭಾರತದ ಫುಟ್‌ಬಾಲ್‌ನಲ್ಲಿ ಭರವಸೆ ಮೂಡಿಸುತ್ತಿದ್ದಾರೆ. ಇದಕ್ಕೆ ಕಾರಣ ಶಂಕರ್‌ ವೃತ್ತಿಪರತೆಗೆ ಮಹತ್ವ ಕೊಟ್ಟಿದ್ದು. ಎಚ್‌ಎಎಲ್ ಮತ್ತು ಬಿಎಫ್‌ಸಿ ತಂಡಗಳಲ್ಲಿ ಆಡಿರುವ ಶಂಕರ್‌ ಈ ವರ್ಷ ಐಎಸ್‌ಎಲ್‌ನಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ 21 ವರ್ಷದ ಶಂಕರ್‌ ಐಎಸ್‌ಎಲ್‌ನಲ್ಲಿ ಆಡುತ್ತಿರುವ ಕರ್ನಾಟಕದ ಏಕೈಕ ಆಟಗಾರ.

ಫುಟ್‌ಬಾಲ್‌ ಕ್ರೀಡೆಯಲ್ಲಿ ದೊಡ್ಡ ಸಾಧನೆ ಮಾಡುವ ಆಸೆಯೊಂದಿಗೆ ಕೆಜಿಎಫ್‌ನಿಂದ ಬೆಂಗಳೂರಿಗೆ ಬಂದ ಶಂಕರ್‌ಗೆ ಬೇಗನೆ ಐ ಲೀಗ್ ಮತ್ತು ಐಎಸ್‌ಎಲ್‌ ತಂಡಗಳಲ್ಲಿ ಆಡಲು ಅವಕಾಶ ಲಭಿಸಿತು. ಇವರ ಚಿಕ್ಕಪ್ಪ ಕೂಡ ಫುಟ್‌ಬಾಲ್‌ ಆಟಗಾರ. ಅವರ ಪ್ರಭಾವವೂ ಶಂಕರ್‌ ಮೇಲೆ ಆಗಿದೆ.

ಕೇರಳ ಬ್ಲಾಸ್ಟರ್ಸ್‌ ತಂಡವನ್ನು ಪ್ರತಿನಿಧಿಸುವ ಕನ್ನಡಿಗ ಶಂಕರ್‌ ಮೂರು ಐಎಸ್‌ಎಲ್‌ ಪಂದ್ಯಗಳಲ್ಲಿ ಆಡಿದ್ದಾರೆ. ಅಲ್ಲಿನ ಅನುಭವ ಹಾಗೂ ವೃತ್ತಿಪರತೆಯ ಪ್ರಾಮುಖ್ಯತೆ ಬಗ್ಗೆ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

* ಕ್ಲಬ್‌ ಮಟ್ಟದಿಂದ ಐಎಸ್‌ಎಲ್‌ವರೆಗೂ ಸಾಗಿದ ಪಯಣದ ಬಗ್ಗೆ ಹೇಳಿ?
ಫುಟ್‌ಬಾಲ್ ಆಟಗಾರನಾಗುವ ಕನಸು ಬಾಲ್ಯದಲ್ಲಿಯೇ ಇತ್ತು. ಬೆಂಗಳೂರು ಸೇರಿದ ಬಳಿಕ ನನ್ನ ಆಸೆ ಈಡೇರಿತು. ಪಂಜಾಬ್‌ನಲ್ಲಿ ನಡೆದ 16 ವರ್ಷದ ಒಳಗಿನವರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದೆ. ಆ ಟೂರ್ನಿಯಲ್ಲಿ ನಮ್ಮ ತಂಡ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತ್ತು. ಆಯ್ಕೆ ಸಮಿತಿಯವರೂ ಅಲ್ಲಿಯೇ ಇದ್ದರು. ನನ್ನ ಆಟವನ್ನು ನೋಡಿದ ಅವರು 16 ವರ್ಷದ ಒಳಗಿನವರ ರಾಷ್ಟ್ರೀಯ ತಂಡದ ತರಬೇತಿ ಶಿಬಿರಕ್ಕೆ ಆಯ್ಕೆ ಮಾಡಿದ್ದರು. ಅದೇ ಮೊದಲ ಬಾರಿಗೆ ರಾಷ್ಟ್ರೀಯ ಜೂನಿಯರ್‌ ತಂಡದಲ್ಲಿ ಸ್ಥಾನ ಸಿಕ್ಕಿತ್ತು. ಇದು ನನ್ನ ಬದುಕಿಗೆ ಸಿಕ್ಕ ದೊಡ್ಡ ತಿರುವು. 

ತರಬೇತಿ ಶಿಬಿರದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ತಂಡಕ್ಕೆ ಆಯ್ಕೆಯಾದೆ. ವೃತ್ತಿಪರ ಆಟಗಾರನಾಗಿ ಬದಲಾದೆ. ಆ ವೇಳೆ ಎಚ್‌ಎಎಲ್ ತಂಡ ಐ ಲೀಗ್‌ ಎರಡನೇ ಡಿವಿಷನ್‌ನಲ್ಲಿ ಆಡುತ್ತಿತ್ತು. ಈ ತಂಡದಲ್ಲಿ ಆಡಲು ಅವಕಾಶ ಸಿಕ್ಕಿತು. ಮುಂದಿನ ವರ್ಷವೇ ನಮ್ಮ ತಂಡ ಮೊದಲ ಡಿವಿಷನ್‌ಗೆ ಬಡ್ತಿ ಪಡೆಯಿತು.

ಅದೊಮ್ಮೆ ಪಂದ್ಯ ಆಡುವಾಗ ಬಿದ್ದು ಪೆಟ್ಟು ಮಾಡಿಕೊಂಡಿದ್ದೆ. ಆದ್ದರಿಂದ ಎಚ್ಎಎಲ್‌ ತೊರೆಯಬೇಕಾಯಿತು. ಶಸ್ತ್ರಚಿಕಿತ್ಸೆಗೂ ಒಳಗಾದೆ. ಕೆಲವು ತಿಂಗಳು ವಿಶ್ರಾಂತಿ ಪಡೆದು ಪೈಲಾನ್‌ ಏರೋಸ್‌ ತಂಡಕ್ಕೆ ಹೋದೆ. ಅಲ್ಲಿ ಎರಡು ವರ್ಷ ಆಡಿದೆ. ಡಿಎಸ್‌ಕೆ ಶಿವಾಜಿಯನ್ಸ್‌ ತಂಡದಲ್ಲಿ ಎರಡನೇ ಡಿವಿಷನ್‌ನಲ್ಲಿ ಆಡಿದೆ. ಡಿಎಸ್‌ಕೆಯಲ್ಲಿ ಚೆನ್ನಾಗಿ ಆಡಿದ್ದರಿಂದ ಜೀವನಕ್ಕೆ ಮತ್ತೊಂದು ತಿರುವು ಲಭಿಸಿತು. ಆಗಷ್ಟೇ ಬೆಂಗಳೂರಿನಲ್ಲಿ ಹೊಸದಾಗಿ ಆರಂಭವಾಗಿದ್ದ ಬಿಎಫ್‌ಸಿ ತಂಡದಲ್ಲಿ ಅವಕಾಶ ಸಿಕ್ಕಿತು. ಈ ಮೂರು–ನಾಲ್ಕು ವರ್ಷಗಳ ಅವಧಿಯಲ್ಲಿ 19 ಮತ್ತು 23 ವರ್ಷದ ಒಳಗಿನವರ ತಂಡದಲ್ಲಿ ಆಡಿದೆ. ಹೀಗೆ ಹಂತ ಹಂತವಾಗಿ ಅವಕಾಶಗಳು ಲಭಿಸಿದವು.

* ನಿಮ್ಮಲ್ಲಿನ ಪ್ರತಿಭೆಗೆ ಬಿಎಫ್‌ಸಿ ಹೇಗೆ ನೆರವಾಯಿತು?
ಬಿಎಫ್‌ಸಿ ಸೇರಿದ ಬಳಿಕ ಫುಟ್‌ಬಾಲ್‌ ಬಗ್ಗೆ ನನ್ನ ಕಲ್ಪನೆಯೇ ಬದಲಾಯಿತು. ಕೆಲ ವಿದೇಶಿ ಆಟಗಾರರ ಜೊತೆ ಆಡಲು ಅವಕಾಶ ಸಿಕ್ಕಿದ್ದರಿಂದ ಹೆಚ್ಚು ಕೌಶಲಗಳನ್ನು ಕಲಿತೆ. ಕೋಚ್‌ ಆ್ಯಷ್ಲೆ ವೆಸ್ಟ್‌ವುಡ್‌ ನನ್ನಲ್ಲಿನ ಆಟದ ಶೈಲಿಯನ್ನು ಬದಲಿಸಿದರು. ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವ ವಿಧಾನ, ಎದುರಾಳಿ ಆಟಗಾರನಿಂದ ಚೆಂಡು ಕಸಿದುಕೊಳ್ಳುವ ಕೌಶಲ ಹೀಗೆ ಹಲವಾರು ವಿಷಯಗಳನ್ನು ಕಲಿಸಿಕೊಟ್ಟರು. ಎಲ್ಲಕ್ಕಿಂತ ಹೆಚ್ಚಾಗಿ ವೃತ್ತಿಪರತೆಗೆ ಒತ್ತು ಕೊಡುವುದನ್ನು ಕಲಿಸಿದರು.

ಐ ಲೀಗ್‌ನಲ್ಲಿ ಆಡುವ ಹಲವಾರು ಕ್ಲಬ್‌ಗಳಿಗಿದ್ದರೂ ಬಿಎಫ್‌ಸಿ ತಂಡ ಎಲ್ಲಕ್ಕಿಂತಲೂ ಭಿನ್ನ. ವೆಸ್ಟ್‌ವುಡ್‌ ತರಬೇತಿ ವಿಧಾನವೇ ತುಂಬಾ ವಿಭಿನ್ನ. ಅವರು ಆಟಗಾರರ ಜೊತೆ ಸಂವಹನ ನಡೆಸುವ ಕೌಶಲವೂ ನನ್ನ ಮೇಲೆ ತುಂಬಾ ಪ್ರಭಾವ ಬೀರಿದೆ. ಐಎಸ್‌ಎಲ್‌ನಲ್ಲಿ ಸ್ಥಾನ ಪಡೆಯಲು ವೆಸ್ಟ್‌ವುಡ್‌ ನೀಡಿದ ತರಬೇತಿ ಕಾರಣವಾಯಿತು.

* ವೆಸ್ಟ್‌ವುಡ್‌ ತರಬೇತಿ ನೀಡುವ ವಿಧಾನದ ಬಗ್ಗೆ ಹೇಳಿ?
ಅಭ್ಯಾಸದ ಅವಧಿ ಅಥವಾ ಪಂದ್ಯದ ಅವಧಿ ಯಾವುದೇ ಆಗಲಿ ವೃತ್ತಿಪರತೆ ಇರಬೇಕು. ಪೂರ್ಣ ಶಕ್ತಿಯೊಂದಿಗೆ ಆಡಬೇಕು. ಬಿಎಫ್‌ಸಿ ತಂಡದಲ್ಲಿಯೇ ಸಾಕಷ್ಟು ಪೈಪೋಟಿಯಿದೆ. ಸಾಮರ್ಥ್ಯ ತೋರಿಸದೇ ಹೋದರೆ ಎಷ್ಟೇ ಹಿರಿಯ ಆಟಗಾರನಾದರೂ ತಂಡದಿಂದ ಹೊರ ಹಾಕಲು ವೆಸ್ಟ್‌ವುಡ್‌  ಹಿಂದೆ ಮುಂದೆ ನೋಡುವುದಿಲ್ಲ. ಮೊದಲು ಎಲ್ಲರಿಗೂ ಸಮಾನ ಅವಕಾಶ ಕೊಡುತ್ತಾರೆ.  ಒಂದು ಅಭ್ಯಾಸದ ಅವಧಿಯಲ್ಲಿ ಪಂದ್ಯವಾಡಿದಷ್ಟೇ ಕಷ್ಟಪಡಬೇಕಾಗುತ್ತದೆ. ತುಂಬಾ ವೃತ್ತಿಪರತೆಯನ್ನು ಮೈಗೂಡಿಸಿಕೊಂಡಿದ್ದರಿಂದಲೇ ಒಂದು ವರ್ಷ ಐ ಲೀಗ್‌ನಲ್ಲಿ ಚಾಂಪಿಯನ್‌ ಮತ್ತೊಂದು ಸಲ ರನ್ನರ್ಸ್ ಅಪ್‌ ಆಗಲು ಸಾಧ್ಯವಾಯಿತು. ಉತ್ತಮ ಕೋಚ್‌ ಇದ್ದಿದ್ದರಿಂದಲೇ ನನಗೆ ಇಟಲಿಯಲ್ಲೂ ತರಬೇತಿ ಪಡೆಯಲು ಅವಕಾಶ ಲಭಿಸಿತು.

* ಇಟಲಿಯಲ್ಲಿ ಪಡೆದ ತರಬೇತಿ ಬಗ್ಗೆ ಹೇಳಿ?
ಸುಂದರ ಕ್ರೀಡಾಂಗಣ ಮತ್ತು ಅನುಭವಿ ಆಟಗಾರರ ಜೊತೆ ಒಂದು ತಿಂಗಳು ತರಬೇತಿ ಪಡೆಯಲು ಅವಕಾಶ ಮಾಡಿಕೊಟ್ಟ ಬಿಎಫ್‌ಸಿಗೆ ಧನ್ಯವಾದಗಳು. ಇಟಲಿಯ ಆಟಗಾರರು ತಾಂತ್ರಿಕವಾಗಿ ತುಂಬಾ ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಸದಾ ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವ ಮತ್ತು ಚೆಂಡಿನೊಂದಿಗೆ ಸಾಗುವ ಕೌಶಲ ಅವರಿಗೆ ಕರಗತವಾಗಿದೆ.

ಅವರು ಆಡುವ ರೀತಿಯೂ ಭಿನ್ನ. ದೈಹಿಕ ಶಕ್ತಿ, ಉತ್ತಮ ದೇಹತೂಕ ಮತ್ತು ಹೆಚ್ಚು ಎತ್ತರ ಇರುವುದು ಆ ದೇಶದ ಆಟಗಾರರ ಸಕಾರಾತ್ಮಕ ಅಂಶ. ವಿಶೇಷವೆಂದರೆ ಅವರು ಆಹಾರದಲ್ಲಿಯೂ ವೃತ್ತಿಪರತೆಯನ್ನು ಅನುಸರಿಸುತ್ತಾರೆ. ಹೆಚ್ಚು ಪೌಷ್ಠಿಕಾಂಶ ಇರುವ ಆಹಾರವನ್ನು ಸೇವಿಸುತ್ತಾರೆ.

* ಭಾರತದಲ್ಲಿನ ತರಬೇತಿ ವಿಧಾನಕ್ಕೂ ಇಟಲಿಗೂ ಇರುವ ವ್ಯತ್ಯಾಸವೇನು?
ತರಬೇತಿ ವಿಧಾನದಲ್ಲಿ ಹೆಚ್ಚು ವ್ಯತ್ಯಾಸಗಳೇನು ಕಾಣಲಿಲ್ಲ. ಆದರೆ ಆಟಗಾರರ ಮನಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಯಿದೆ.

* ಏನು ಆ ಬದಲಾವಣೆ?
ಇಟಲಿಯ ಆಟಗಾರರು ಏನೇ ಮಾಡಿದರೂ ವೃತ್ತಿಪರತೆಗೆ ಒತ್ತು ಕೊಟ್ಟು ಮಾಡುತ್ತಾರೆ. ವೇಗವಾಗಿ ಓಡುತ್ತಾರೆ. ಒಂದು ಕ್ರೀಡೆಯನ್ನು ಆಯ್ಕೆ ಮಾಡಿಕೊಂಡರೆ ಕೊನೆಯವರೆಗೂ ಅದೇ ಕ್ರೀಡೆಯಲ್ಲಿ ಮುಂದುವರಿ ಯುತ್ತಾರೆ. ಚಿಕ್ಕ ವಯಸ್ಸಿನಿಂದ ಆಟಗಾರರಲ್ಲಿ ಒಂದೇ ರೀತಿಯ ಮನಸ್ಥಿತಿ ಮತ್ತು ಗುರಿ ಬೇರೂರಿರುತ್ತದೆ. ಆದರೆ ನಮ್ಮಲ್ಲಿ ಹಾಗಿಲ್ಲವಲ್ಲ.

ವಿಶ್ವಕಪ್‌ ಕ್ರಿಕೆಟ್‌ ಇದ್ದರೆ ಎಲ್ಲರೂ ಕ್ರಿಕೆಟ್‌ ಅನ್ನೇ ಹಿಂಬಾಲಿಸುತ್ತಾರೆ. ಐಪಿಎಲ್‌ ಇದ್ದರೆ ಎಲ್ಲರೂ ಐಪಿಎಲ್‌ ಹಿಂದೆಯೇ ಓಡುತ್ತಾರೆ. ಜೊತೆಗೆ ಕ್ರಿಕೆಟ್‌ ಆಡುತ್ತಾರೆ. ಕಬಡ್ಡಿ, ಬ್ಯಾಡ್ಮಿಂಟನ್‌ ಕ್ರೀಡೆಗಳು ನಡೆಯುತ್ತಿದ್ದರೆ ಆ ಕ್ರೀಡೆಗಳ ಬೆನ್ನು ಹತ್ತಿ ಹೋಗುತ್ತಾರೆ. ಆದ್ದರಿಂದ ನಮ್ಮಲ್ಲಿನ ಆಟಗಾರರ ಮನಸ್ಸು ಒಂದೇ ರೀತಿ ಇರುವುದಿಲ್ಲ. ಯಾವುದಕ್ಕೆ ಹೆಚ್ಚು ಪ್ರಚಾರ ಇರುತ್ತದೆಯೇ ಅದರ ಹಿಂದೆ ಹೋಗುತ್ತಾರೆ. ಹೀಗಾದರೆ ವೃತ್ತಿಪರತೆ ಬೆಳೆಯಲು ಹೇಗೆ ಸಾಧ್ಯ. ನಮ್ಮಲ್ಲಿ ಫುಟ್‌ಬಾಲ್‌ ಎನ್ನುವುದು ಸೀಸನ್‌ ಗೇಮ್‌ ಎನ್ನುವಂತಾಗಿದೆ. ಆದರೆ ಜರ್ಮನಿಯಲ್ಲಿ ಪರಿಸ್ಥಿತಿ ಹಾಗಿಲ್ಲ. ಒಬ್ಬ ಆಟಗಾರ ಫುಟ್‌ಬಾಲ್‌ನಲ್ಲಿ ಸಾಧನೆ ಮಾಡಬೇಕು ಎಂದು ಕೊಂಡರೆ ಸಾಕು. ಪ್ರತಿ ಕ್ಷಣವೂ ಫುಟ್‌ಬಾಲ್‌ ಬಗ್ಗೆಯೇ ಚಿಂತಿಸುತ್ತಿರುತ್ತಾನೆ.

* ಫುಟ್‌ಬಾಲ್‌ ಕ್ರೀಡೆಯನ್ನೇ ಆಯ್ಕೆ ಮಾಡಿಕೊಳ್ಳಲು ಪ್ರೇರಣೆಯಾದ ಅಂಶವೇನು?
ಪ್ರತಿಯೊಬ್ಬರೂ ಒಂದೊಂದು ಹಂತದಲ್ಲಿ ನೆರವಾಗಿದ್ದಾರೆ. ನನ್ನಲ್ಲಿ ಸ್ಫೂರ್ತಿ ತುಂಬಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಚಿಕ್ಕಪ್ಪ ಸುಂದರರಾಜನ್ ಅವರ ಆಟವನ್ನು ನೋಡಿದ್ದೇನೆ. ಅವರು ಮಹೀಂದ್ರಾ ಯುನೈಟೆಡ್‌, ಮಹಮ್ಮಡನ್‌ ಸ್ಪೋರ್ಟಿಂಗ್‌, ಈಸ್ಟ್‌ ಬೆಂಗಾಲ್‌, ಐಟಿಐ ತಂಡಗಳಲ್ಲಿ ಆಡಿದ್ದಾರೆ. ಆದ್ದರಿಂದ ಮನೆಯವರಿಗೆಲ್ಲಾ ಫುಟ್‌ಬಾಲ್‌ ಹೆಚ್ಚು ಪರಿಚಿತ. ಬಿಇಎಮ್‌ಎಲ್‌ ತಂಡಕ್ಕೆ ಆಡಿದ್ದ ರನ್ನ ಕುಮಾರ್‌ ನನ್ನ ಬಾಲ್ಯದ ಕೋಚ್‌. ಅವರಿಂದಲೂ ಹಲವಾರು ವಿಷಯಗಳನ್ನು ಕಲಿತಿದ್ದೇನೆ. ಜೊತೆಗೆ ಅಮ್ಮನ ಮಾತುಗಳು ನನ್ನಲ್ಲಿ ಪ್ರೇರಣೆ ತುಂಬಿವೆ.

ಓದಿನ ಬಗ್ಗೆ ಕಿಂಚಿತ್ತೂ ಆಸಕ್ತಿ ತೋರಿಸದೆ ಫುಟ್‌ಬಾಲ್‌ನಲ್ಲಿಯೇ ಮುಳುಗಿ ಹೋಗುತ್ತಿದ್ದೆ. ಅದೊಂದು ದಿನ ಅಮ್ಮ  ತುಂಬಾ ಗಂಭೀರವಾಗಿ ಕೇಳಿದ್ದರು. ವೃತ್ತಿಪರ ಫುಟ್‌ಬಾಲ್ ಆಟಗಾರನಾಗಿ ಸಾಧನೆ ಮಾಡಬೇಕೆಂದು ಕೊಂಡಿರುವೆಯಾ ಅಥವಾ ಓದಿನಲ್ಲಿ ಸಾಧನೆ ಮಾಡುವ ಆಸೆ ಇದೆಯೇ ಎಂದಿದ್ದರು. ನಾನು ಫುಟ್‌ಬಾಲ್‌ ಆಟಗಾರ ನಾಗುತ್ತೇನೆ ಎಂದು ಹೇಳಿದ್ದೆ. ಆಗ ಅಮ್ಮ ಮರು ಮಾತನಾಡದೇ ನನ್ನ ನಿರ್ಧಾರವನ್ನು ಬೆಂಬಲಿಸಿದ್ದರು. ಈ ಅಂಶಗಳು ಇದೇ ಕ್ರೀಡೆಯಲ್ಲಿ ಮುಂದುವರಿಯಲು ಪ್ರೇರಣೆಯಾದವು.

* ಐಎಸ್‌ಎಲ್‌ನಲ್ಲಿ ಆಡುತ್ತಿರುವ ಕರ್ನಾಟಕದ ಏಕೈಕ ಆಟಗಾರ ನೀವು. ಈ ಬಗ್ಗೆ ಏನೆನಿಸುತ್ತದೆ?
ತುಂಬಾ ಖುಷಿಯಾಗುತ್ತದೆ. ಹೋದ ವರ್ಷವೇ ಐಎಸ್‌ಎಲ್ ಆಡುವ ಅವಕಾಶವಿತ್ತು. ಆದರೆ, ಬಿಎಫ್‌ಸಿ ತಂಡದ ಜೊತೆ ಒಪ್ಪಂದವಿತ್ತು. ತಂಡ ಆಡಲು ಅನುಮತಿ ಕೊಡಲಿಲ್ಲ. ಅದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು. ಒಂದು ವರ್ಷದ ಅವಧಿಯಲ್ಲಿ ಮತ್ತಷ್ಟು ವಿಷಯಗಳನ್ನು ಕಲಿಯಲು ಸಾಧ್ಯವಾಯಿತು.

* ಐಎಸ್‌ಎಲ್‌ನಲ್ಲಿ ಕರ್ನಾಟಕದ ಆಟಗಾರರು ಹೆಚ್ಚು ಅವಕಾಶ ಪಡೆಯುತ್ತಿಲ್ಲ. ಇದಕ್ಕೆ  ಏನು ಕಾರಣವೆನಿಸುತ್ತದೆ?
ನಮ್ಮಲ್ಲಿ ವೃತ್ತಿಪರತೆಯ ಕೊರತೆಯಿದೆ. ಐಎಸ್‌ಎಲ್‌ ತಂಡಕ್ಕೆ ಯಾರೂ ನೇರವಾಗಿ ಅವಕಾಶ ಕೊಡುವುದಿಲ್ಲ. ಐ ಲೀಗ್ ಮತ್ತು ಕ್ಲಬ್‌ ಮಟ್ಟದ ಪಂದ್ಯಗಳಲ್ಲಿ ಸಾಮರ್ಥ್ಯ ಸಾಬೀತು ಮಾಡಬೇಕು. ಹೆಚ್ಚು ಪಂದ್ಯಗಳನ್ನು ಆಡಬೇಕು.

* ತುಂಬಾ ನೆನಪಿನಲ್ಲಿ ಉಳಿದಿರುವ ಪಂದ್ಯ ಯಾವುದು?
ಹಂತಹಂತವಾಗಿ ಮೇಲೇರುತ್ತಾ ಸಾಗಿದ ಪ್ರತಿ ಸಂದರ್ಭವೂ ಮರೆಯಲಾಗದ ಕ್ಷಣಗಳೇ. ವಿವಿಧ ವಯೋಮಿತಿಯೊಳಗಿನ ಟೂರ್ನಿಗಳಲ್ಲಿ  ಆಡಿದ್ದು, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದು ಮತ್ತು ಬೆಂಗಳೂರಿನಲ್ಲಿ ನಡೆದಿದ್ದ ಎಎಫ್‌ಸಿ ಕಪ್‌ ಪಂದ್ಯದಲ್ಲಿ ಗೋಲು ಹೊಡೆದದ್ದನ್ನು ಯಾವತ್ತಿಗೂ ಮರೆಯಲಾರೆ.

ಮೊದಲ ಗೋಲು
ಐ ಲೀಗ್‌ ಟೂರ್ನಿಯಲ್ಲಿ ಶಂಕರ್‌ ಇದೇ ವರ್ಷದ ಏಪ್ರಿಲ್‌ನಲ್ಲಿ ಮೊದಲ ಗೋಲು ಬಾರಿಸಿದ್ದರು. ರಾಯಲ್‌ ವಾಹಿಂಗ್ಡೊ ಎದುರಿನ ಪಂದ್ಯದಲ್ಲಿ ಗೋಲು ಹೊಡೆದಿದ್ದರು. ಆ ಪಂದ್ಯ 3–3 ಗೋಲುಗಳಿಂದ ಡ್ರಾ ಆಗಿತ್ತು.

ತವರಿನ ಅಂಗಳದ ಹೀರೊ...
ಶಂಕರ್‌ ಸಂಪಂಗಿರಾಜ್‌ ಹಲವು ಕ್ಲಬ್‌ಗಳಲ್ಲಿ ಆಡಿದ್ದರೂ ಅವರು ಪ್ರಸಿದ್ಧಿ ಪಡೆದಿದ್ದು ಬಿಎಫ್‌ಸಿ ತಂಡ ಸೇರಿದ ಮೇಲೆಯೇ. ಒಂದು ಪಂದ್ಯದಲ್ಲಿ ಅವರು ಗಳಿಸಿದ ಅತ್ಯಮೂಲ್ಯ ಗೋಲು ಅವರನ್ನು ರಾತ್ರೊ ರಾತ್ರಿ ಹೀರೊ ಆಗಿ ಮಾಡಿತ್ತು. ಇದೇ ವರ್ಷದ ಫೆಬ್ರುವರಿಯಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಎಎಫ್‌ಸಿ ಕಪ್ ಟೂರ್ನಿಯ ಪಂದ್ಯವದು. ಆ ಪಂದ್ಯದಲ್ಲಿ ಬಿಎಫ್‌ಸಿ ತಂಡ ಮಾಲ್ಡೀವ್ಸ್‌ನ ಮಜಿಯಾ ಸ್ಪೋರ್ಟ್ಸ್‌ ಆ್ಯಂಡ್‌ ರಿಕ್ರಿಯೇಷನ್‌ ಕ್ಲಬ್‌ ಎದುರು ಆಡುತ್ತಿತ್ತು. ಪಂದ್ಯ ಮುಗಿಯಲು ಕೆಲವೇ ನಿಮಿಷ ಬಾಕಿಯಿತ್ತು. ಉಭಯ ತಂಡಗಳು ತಲಾ ಒಂದು ಗೋಲು ಗಳಿಸಿದ್ದವು. 

ಪಂದ್ಯ ಡ್ರಾ ಎಂದು ಅಭಿಮಾನಿಗಳು ಕ್ರೀಡಾಂಗಣ ದಿಂದ ಹೊರ ನಡೆದಿದ್ದರು. 93ನೇ  ನಿಮಿಷದಲ್ಲಿ ಮಿಂಚಿನ ವೇಗದಲ್ಲಿ ಚೆಂಡಿನೊಂದಿಗೆ ನುಗ್ಗಿ ಬಂದಿದ್ದ ಶಂಕರ್‌ ಆಕರ್ಷಕವಾಗಿ ಚೆಂಡನ್ನು ಗುರಿ ಸೇರಿಸಿಯೇ ಬಿಟ್ಟರು. ಆಗ ಮಜಿಯಾ ತಂಡದಲ್ಲಿ ನೀರವ ಮೌನ. ತವರಿನ ಅಭಿಮಾನಿಗಳಿಗೆ ಬಿಎಫ್‌ಸಿ ತಂಡ ಗೆದ್ದ ಖುಷಿ. ಇದಕ್ಕಿಂತ ಹೆಚ್ಚಾಗಿ ಆ ಗೆಲುವಿಗೆ ಕಾರಣವಾಗಿದ್ದು ಕನ್ನಡಿಗ ಶಂಕರ್‌ ಎನ್ನುವ ಹೆಮ್ಮೆ. ಅವತ್ತು ಇಡೀ ಕ್ರೀಡಾಂಗಣದಲ್ಲಿ ‘ಶಂಕರ್‌... ಶಂಕರ್‌..’ ಎನ್ನುವ ಉದ್ಗೋಷ ಕೇಳಿ ಬಂದಿತ್ತು. ಆಗಿನಿಂದ ಶಂಕರ್‌ ಫುಟ್‌ಬಾಲ್‌ ಪ್ರೇಮಿಗಳ ನೆಚ್ಚಿನ ಆಟಗಾರನಾದರು. ವಿಶೇಷವೆಂದರೆ ಬಿಎಫ್‌ಸಿ ತಂಡ ಎಎಫ್‌ಸಿ ಕಪ್‌ನಲ್ಲಿ ಪಡೆದ ಚೊಚ್ಚಲ ಗೆಲುವು ಅದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT