ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ ಬೆದರಿಕೆಯ ಪರಾಮರ್ಶೆ ಹೇಗೆ?

ಉಗ್ರ ಸಂಘಟನೆಯ ವಿಷಯದಲ್ಲಿ ಭಾರತ ಎಚ್ಚರದ ನಡೆ ಇರಿಸಬೇಕಾಗುತ್ತದೆ
ಅಕ್ಷರ ಗಾತ್ರ

ಐಎಸ್‌ (ಇಸ್ಲಾಮಿಕ್‌ ಸ್ಟೇಟ್‌) ಉಗ್ರರಿಂದ ಪ್ಯಾರಿಸ್‌ ಮೇಲೆ ನಡೆದ ದಾಳಿ, ಈ ಗುಂಪಿನಿಂದ ಭಾರತಕ್ಕೆ ಎದುರಾಗಬಹುದಾದ ಬೆದರಿಕೆಯ ಬಗ್ಗೆ ಸಹಜವಾಗಿಯೇ ಆತಂಕಪಡುವಂತೆ ಮಾಡಿದೆ. ಈವರೆಗೆ ಈ ಸಂಘಟನೆಯಿಂದ ಭಾರತಕ್ಕೆ ಎದುರಾಗಿರುವ ಬೆದರಿಕೆಯು ಪರಸ್ಪರ ಸಂಬಂಧವೇ ಇಲ್ಲದ ಕೆಲವು ಘಟನೆಗಳನ್ನು ಆಧರಿಸಿದೆ.

ಮೊದಲನೆಯದಾಗಿ 2014ರ ಮಧ್ಯಭಾಗದಲ್ಲಿ, ಭಾರತದ ಪಶ್ಚಿಮ ಭಾಗವು ಇಸ್ಲಾಮಿಕ್‌ ಸ್ಟೇಟ್‌ ಖೊರಾಸನ್‌ ಪ್ರಾಂತ್ಯದ ಭಾಗ ಎಂದು ಚಿತ್ರಿಸುವಂತಹ  ಭೂಪಟವನ್ನು ಐಎಸ್‌ ಬಿಡುಗಡೆ ಮಾಡಿತ್ತು. ಈ ಮೂಲಕ, ಭಾರತ ಉಪಖಂಡದ ಮೇಲಿನ ತನ್ನ ಆಸಕ್ತಿಯನ್ನು ಅದು ಪ್ರಕಟಿಸಿತ್ತು. ಎರಡನೆಯದಾಗಿ, ಐಎಸ್‌ ಸೇರಬಯಸುವವರಿಗೆ ತನ್ನ ಟ್ವಿಟರ್‌ ಖಾತೆಯ ಮೂಲಕ ಮಾರ್ಗದರ್ಶನ ನೀಡುತ್ತಿದ್ದ ಬೆಂಗಳೂರಿನ ನಿವಾಸಿ ಮೆಹದಿ ಬಿಸ್ವಾಸ್‌ 2014ರ ಡಿಸೆಂಬರ್‌ನಲ್ಲಿ ಬಂಧನಕ್ಕೆ ಒಳಗಾದ.

ಮೂರನೆಯದು ಮತ್ತು ಇತ್ತೀಚಿನ ಮಹತ್ವದ ವಿಚಾರವೆಂದರೆ, ಸುಮಾರು 23 ಭಾರತೀಯರು ಸಿರಿಯಾ ಹಾಗೂ ಇರಾಕ್‌ನಲ್ಲಿ ಉಗ್ರರ ಪಡೆ ಸೇರಿಕೊಂಡು ಹೋರಾಟ ನಡೆಸುತ್ತಿರುವುದು ಭದ್ರತಾ ಸಂಸ್ಥೆಗಳಿಂದ ಬಹಿರಂಗಗೊಂಡಿರುವುದು. ಇದೇ ವೇಳೆ, ಐಎಸ್‌ನ ಸಿದ್ಧಾಂತ ಹಾಗೂ ಅದರ ಅತ್ಯಂತ ಕ್ರೂರ ವರ್ತನೆಗಳ ಬಗ್ಗೆ ವ್ಯಾಪಕ ವಿರೋಧವೂ ವ್ಯಕ್ತವಾಗಿದೆ. ಬೆಂಗಳೂರಿನ ಜಾಮಾ ಮಸೀದಿಯ ಮೌಲಾನ ಮತ್ತು ಇತರ ಹಲವು ಧರ್ಮಗುರುಗಳು ಐಎಸ್‌ ಬಗ್ಗೆ ಎಚ್ಚರದಿಂದ ಇರುವಂತೆ ಮುಸ್ಲಿಂ ಸಮುದಾಯಕ್ಕೆ ಮೇಲಿಂದ ಮೇಲೆ ಕರೆ ನೀಡಿರುವುದು ಇದಕ್ಕೊಂದು ಉದಾಹರಣೆ.

ಇಂತಹ ವಿಭಿನ್ನ ಹಾಗೂ ಬಹುತೇಕ ಅಸಂಗತವಾದ ವರದಿಗಳನ್ನು ನಾವು ಹೇಗೆ ಸ್ವೀಕರಿಸಬೇಕು ಮತ್ತು ಭಾರತಕ್ಕೆ ಐಎಸ್‌ನಿಂದ ಇರುವ ನಿಜವಾದ ಬೆದರಿಕೆಯನ್ನು ಹೇಗೆ ಗ್ರಹಿಸಬೇಕು? ಮುಖ್ಯವಾಗಿ ಭಾರತಕ್ಕೆ ಇರುವ ಐಎಸ್‌ ಬೆದರಿಕೆಯನ್ನು ಮೂರು ಹಂತಗಳಲ್ಲಿ ನೋಡಬಹುದು. ಮೊದಲ ಹಂತದ ಬೆದರಿಕೆ ಎಂದರೆ, ಐಎಸ್‌ ಉಗ್ರರಿಂದ ಸಿರಿಯಾ ಮತ್ತು ಇರಾಕ್‌ನಲ್ಲಿ ಆದಂತೆ ಭಾರತದ ಮೇಲೆ ನೇರ ದಾಳಿ. ಆದರೆ ಈ ಸಾಧ್ಯತೆ ಬಹಳ ಕಡಿಮೆ. ಇದಕ್ಕೆ ಮುಖ್ಯ ಕಾರಣವೆಂದರೆ, ಅರಬ್‌–ಸುನ್ನಿ ಕೇಂದ್ರಿತವಾದ ಐಎಸ್‌ನ ಯೋಜನೆಯ ಹೊರವಲಯದಲ್ಲಿ ಭಾರತ ಇರುವುದು. ವಾಸ್ತವದಲ್ಲಿ ಅಲ್‌ಕೈದಾ ಮತ್ತು ಅದರ ಸಂಸ್ಥಾಪಕ ಒಸಾಮ ಬಿನ್‌ ಲಾಡೆನ್‌ನಂತಹವರಿಗೂ ಭಾರತ ಪ್ರಮುಖ ಗುರಿಯಾಗಿರಲಿಲ್ಲ.

ಭಾರತೀಯ ಇಸ್ಲಾಂನ ಸಮನ್ವಯ ಸಿದ್ಧಾಂತವು ಇದಕ್ಕೆ ಕಾರಣ. ಪ್ರಸಕ್ತ ಬೆಳವಣಿಗೆಗಳನ್ನು ಆಧರಿಸಿ ಹೇಳುವುದಾದರೆ, ತನಗೆ ಆಸಕ್ತಿ ಇಲ್ಲದ ಅಥವಾ ಬೆಂಬಲವೂ ಇಲ್ಲದ ದೇಶದ ಮೇಲೆ ಐಎಸ್‌ ಪೂರ್ಣ ಪ್ರಮಾಣದ ಯುದ್ಧ ಸಾರುವುದು ಅಸಂಭವ. ಭಾರತವು ಐಎಸ್‌ನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುವುದು ಹೆಚ್ಚು ಸೂಕ್ತ. ಈ ವಿಷಯದಲ್ಲಿ ಒಂದು ರೀತಿ ನಮ್ಮನ್ನು ರಕ್ಷಿಸುತ್ತಿರುವ ಪಾಕಿಸ್ತಾನಕ್ಕೆ ನಾವು ಆಭಾರಿಯಾಗಿರಲೇಬೇಕು. ಏಕೆಂದರೆ ದೊಡ್ಡ ಪ್ರಮಾಣದಲ್ಲಿ ಐಎಸ್‌ ಬೆಳೆಯುವುದಕ್ಕೆ ಪಾಕಿಸ್ತಾನದ ಸೇನೆ ಮತ್ತು ಐಎಸ್‌ಐ ಅವಕಾಶ ನೀಡಲಾರವು. ಹಾಗೇನಾದರೂ ಮಾಡಿದರೆ ಅದರಿಂದ ಅವರ ತಾಯ್ನೆಲದ ಮಿಲಿಟರಿ ಜಿಹಾದಿ ಸಂಕೀರ್ಣ ಶಿಥಿಲಗೊಳ್ಳುವ ಸಾಧ್ಯತೆ ಇರುತ್ತದೆ.

ಎರಡನೇ ಹಂತದ ಬೆದರಿಕೆ, ತನ್ನ ನೆಲ ಅಥವಾ ಜಗತ್ತಿನ ಇತರೆಡೆ ಕಾರ್ಯಾಚರಣೆ ನಡೆಸಲು ಭಾರತ ಐಎಸ್‌ನ ನೇಮಕಾತಿ ನೆಲೆಯಾಗುತ್ತಿರುವುದು. ಈ ಹಂತದ ಬೆದರಿಕೆ ಮಧ್ಯಮ ಮಟ್ಟದಿಂದ ದೊಡ್ಡ ಮಟ್ಟದವರೆಗೂ ಇದೆ. ಇದಕ್ಕೆ ಕಾರಣ, ದೇಶದ 35 ಕೋಟಿಗೂ ಹೆಚ್ಚು ಮಂದಿ ಇಂಟರ್ನೆಟ್‌ ಸಂಪರ್ಕ ಹೊಂದಿದ್ದಾರೆ ಹಾಗೂ ಮುಸ್ಲಿಂ ಯುವಕರನ್ನು ಸೆಳೆಯಲು ಐಎಸ್‌ ಅಳವಡಿಸಿಕೊಂಡಿರುವ ಚಾಣಾಕ್ಷ ಆನ್‌ಲೈನ್‌ ಪ್ರಚಾರದ ಬಲೆಗೆ ಕೆಲವರು ಬೀಳುವ ಸಾಧ್ಯತೆ ಇರುವುದು.

ಜನ ಇಂದು ತೀವ್ರಗಾಮಿ ಜಾಲ ಹೊಂದಿರುವ ಸಮುದಾಯಗಳು ಹಾಗೂ ವೆಬ್‌ಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಅವರೆಲ್ಲರೂ ರಾಜಕೀಯ ಕಾರಣದಿಂದ ಪ್ರೇರೇಪಿತರಾಗಿದ್ದಾರೆ. ಇಂತಹ ಜಾಲಗಳ ನಡುವೆ ವೇಗವಾಗಿ ಮಾಹಿತಿ ರವಾನೆಯಾಗುತ್ತದೆ. ಇದರಿಂದ, ದ್ವೇಷ ಹಬ್ಬಿಸುವ ಶಕ್ತಿಗಳನ್ನು ದಮನಿಸುವ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳುವುದು ಸರ್ಕಾರಕ್ಕೆ ಕಷ್ಟವಾಗುತ್ತದೆ. ಹೊರಗೆ ಇಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವ ರೀತಿಯಲ್ಲೇ ಆನ್‌ಲೈನ್ ಮೂಲಕ ಸಂಚು ರೂಪಿಸುವವರನ್ನೂ ಬಯಲಿಗೆಳೆಯಬೇಕಾದ ಕೆಲಸವನ್ನು ಸರ್ಕಾರ ಮಾಡಲೇಬೇಕಾಗುತ್ತದೆ. ಈ ಹಂತದ ಬೆದರಿಕೆಯನ್ನು ಎದುರಿಸಬೇಕಿದ್ದರೆ ನಮ್ಮ ಆನ್‌ಲೈನ್‌ ಕ್ಷೇತ್ರದ ಗುಪ್ತಚರ ವ್ಯವಸ್ಥೆಯ ಸುಧಾರಣೆ ಅತ್ಯಗತ್ಯ.

ಭಾರತಕ್ಕೆ ಐಎಸ್‌ನಿಂದ ಎದುರಾಗಿರುವ ಬಹುದೊಡ್ಡ ಬೆದರಿಕೆ ಎಂದರೆ, ಈ ಸಂಘಟನೆ ಭಾರತೀಯ ಭಯೋತ್ಪಾದಕ ಸಂಘಟನೆಗಳ ಪ್ರತಿನಿಧಿಯಾಗಿ
ಬದಲಾಗಬಹುದಾದ ಸಾಧ್ಯತೆ. ಈ ಭಯೋತ್ಪಾದಕ ಗುಂಪುಗಳಿಗೆ ಐಎಸ್‌ನ ಸಿದ್ಧಾಂತದ ಬಗ್ಗೆ ಅರಿವಿರುತ್ತದೋ ಇಲ್ಲವೋ, ಇದ್ದರೂ ಅದು ತಮಗೆ ಒಪ್ಪಿತವೋ ಅಲ್ಲವೋ ಎಂಬುದನ್ನೂ ವಿವೇಚಿಸದೆ ಅವು ಐಎಸ್‌ ಜೊತೆಗೆ ತಮ್ಮನ್ನು ಗುರುತಿಸಿಕೊಳ್ಳಬಯಸುತ್ತವೆ. ಇಂಡಿಯನ್‌ ಮುಜಾಹಿದ್ದೀನ್‌ ಅನ್ನು ನಿಯಂತ್ರಿಸಿದ ಬಳಿಕ ದೇಶದ ಹಲವಾರು ಉಗ್ರಗಾಮಿ ಸಂಘಟನೆಗಳು ತಾವು ಗುರುತಿಸಿಕೊಳ್ಳಬಯಸುವ ಪರ್ಯಾಯ ಆಯ್ಕೆಗಾಗಿ ಎದುರು ನೋಡುತ್ತಿವೆ. ಅವುಗಳ ಇಂತಹ ಆಕಾಂಕ್ಷೆಯನ್ನು ಐಎಸ್‌ ಅಗತ್ಯವಾಗಿ ಪೂರೈಸಬಹುದು.

ಪ್ರಧಾನಿ ನರೇಂದ್ರ ಮೋದಿ ಅವರ ಜಮ್ಮು ಮತ್ತು ಕಾಶ್ಮೀರ ಭೇಟಿಗೆ ಮುನ್ನ ಕಪ್ಪು ಬಾವುಟ ಕಾಣಿಸಿಕೊಂಡಿದ್ದು ಇದಕ್ಕೊಂದು ನಿದರ್ಶನ. ಗಮನ ಸೆಳೆಯುವುದಕ್ಕಾಗಿ ಸ್ಥಳೀಯ ದಂಗೆಕೋರ ಸಂಘಟನೆಗಳು ಐಎಸ್‌ನ (ಇಸ್ಲಾಮಿಕ್‌ ಸ್ಟೇಟ್‌)  ಹೆಸರು ಬಳಸಿಕೊಂಡಿದ್ದವು. ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ಭಾರತಕ್ಕೆ ಆಘಾತ ತರಬಹುದಾದ ದೊಡ್ಡ ಬೆದರಿಕೆ ಇದು.

ಈ ಸವಾಲನ್ನು ಎದುರಿಸಬೇಕಾದರೆ ಭಾರತದಲ್ಲಿರುವ ಮುಸ್ಲಿಮರ ಅಸಮಾಧಾನವನ್ನು ನಿವಾರಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಈ ಹಿಂದೆ ಭಾರತೀಯ ಮುಸ್ಲಿಮರು ಸರ್ಕಾರ ಅಥವಾ ಇತರ ಸಮುದಾಯಗಳ ವಿರುದ್ಧ ಶಸ್ತ್ರ ಕೈಗೆತ್ತಿಕೊಂಡಿದ್ದು ನಿಜ. ಆದರೆ ಅದು ಯಾವುದೇ ಜಾಗತಿಕ ಕರೆಯ ಕಾರಣಕ್ಕಾಗಿ ಅಲ್ಲ. ಬದಲಿಗೆ ದೇಶದೊಳಗಿನ ತಾರತಮ್ಯ ಮತ್ತು ಒತ್ತಾಯಪೂರ್ವಕ ಬಹುಸಂಖ್ಯಾತವಾದದ ಕಾರಣಕ್ಕಾಗಿ. ಭಾರತೀಯ ರಾಷ್ಟ್ರೀಯತೆಯ ಲಕ್ಷಣವಾಗಿರುವ ಬಹುತ್ವ ಮತ್ತು ಸಹಿಷ್ಣುತೆಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದೇ ಆದರೆ ಈ ಬೆದರಿಕೆಯನ್ನು ನಾವು ನಿಭಾಯಿಸಬಹುದು.

ಕೊನೆಯ, ಆದರೆ ನಿರ್ಲಕ್ಷಿಸಲು ಸಾಧ್ಯವಿಲ್ಲದ ವಿಚಾರವೆಂದರೆ, ಭಾರತೀಯ ರಾಷ್ಟ್ರೀಯ ಭದ್ರತೆಗೆ ಎದುರಾಗಿರುವ ಬಹುದೊಡ್ಡ ಬೆದರಿಕೆ ಈಗಲೂ ಬರುತ್ತಿರುವುದು ಪಾಕಿಸ್ತಾನದ ಮಿಲಿಟರಿ– ಜಿಹಾದಿ ಸಂಕೀರ್ಣಕ್ಕೆ ಸೇರಿದ ಜಿಹಾದಿ ಶಕ್ತಿಗಳಿಂದ ಎಂಬುದು. ಪಾಕಿಸ್ತಾನದಲ್ಲಿನ ಈ ಸಂಕೀರ್ಣವನ್ನು ಛಿದ್ರಗೊಳಿಸುವ, ಭಾರತದಲ್ಲಿ ಬಹುಸಂಖ್ಯಾತವಾದಕ್ಕೆ ಕೊನೆ ಹಾಡುವ ಕೆಲಸ ಸಾಧ್ಯವಾದರೆ ಯಾವ ವಿದೇಶಿ ಭಯೋತ್ಪಾದನಾ ಸಂಘಟನೆಯೂ ಭಾರತಕ್ಕೆ ಸವಾಲು ಹಾಕಲು ಸಾಧ್ಯವಿಲ್ಲ.

(ಲೇಖಕ ಬೆಂಗಳೂರಿನ ತಕ್ಷಶಿಲಾ ಸಂಸ್ಥೆಯಲ್ಲಿ ಸಂಶೋಧಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT