ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಐ ಓದುವ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಸೈಕಲ್

Last Updated 3 ಮೇ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಐಟಿಐ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ 23 ಸಾವಿರ ವಿದ್ಯಾರ್ಥಿಗಳಿಗೆ ಈ ವರ್ಷ ಉಚಿತವಾಗಿ  ಸೈಕಲ್‌ ವಿತರಣೆ ಮಾಡಲಾಗುವುದು  ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.

‘ಈ ವಿದ್ಯಾರ್ಥಿಗಳಿಗೆ ಸದ್ಯ ಸಮವಸ್ತ್ರ, ಶೂ ಮತ್ತು ಸಾಕ್ಸ್‌ ನೀಡಲಾಗುತ್ತಿದೆ. ಅದರ ಜೊತೆಗೆ ಈ ಬಾರಿ ಸೈಕಲ್‌ ವಿತರಣೆಗೆ ವಿಶೇಷ ಘಟಕ ಮತ್ತು ಬುಡಕಟ್ಟು ಉಪ ಯೋಜನೆ ಅನುದಾನ ಬಳಸಲಾಗುವುದು’ ಎಂದು ಅವರು ಮಂಗಳವಾರ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರಿಗೆ  ತಿಳಿಸಿದರು.

ರಾಜ್ಯದ 258 ಸರ್ಕಾರಿ, 196  ಅನುದಾನಿತ ಮತ್ತು 1,160 ಖಾಸಗಿ ಐಟಿಐಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ದೊರೆಯುತ್ತದೆ ಎಂದು ಹೇಳಿದರು.

ಇಂಗ್ಲಿಷ್ ಕಲಿಕೆ ಕೋರ್ಸ್‌: ‘ಐಟಿಐ ವ್ಯಾಸಂಗ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಉದ್ಯೋಗ ಪಡೆಯಲು ಅನುಕೂಲ ಆಗುವಂತೆ ಇಂಗ್ಲಿಷ್  ತರಬೇತಿ ನೀಡಲಾಗುವುದು. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುತ್ತಾರೆ. ಆದರೆ, ಇಂಗ್ಲಿಷ್‌ ಜ್ಞಾನ ಮತ್ತು ಸಂವಹನ ಕೌಶಲ ಇಲ್ಲದ ಕಾರಣ ಉದ್ಯೋಗ ವಂಚಿತರಾಗುತ್ತಾರೆ. ಆದ್ದರಿಂದ ಕಲಬುರ್ಗಿ, ರಾಯಚೂರು, ಬಾಗಲಕೋಟ, ವಿಜಯಪುರ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಮಂಗಳೂರು ಸೇರಿ 22 ಕಡೆಗಳಲ್ಲಿ ಸರ್ಕಾರಿ ಐಟಿಐ ಕಾಲೇಜುಗಳಲ್ಲಿಯೇ ಈ ತರಗತಿಆರಂಭಿಸಲಾಗುವುದು’ ಎಂದರು.

ನಿರ್ಮಾಣ ಅಕಾಡೆಮಿ ಸ್ಥಾಪನೆ: ಕಟ್ಟಡ ಕಾರ್ಮಿಕರಿಗೆ ಕೌಶಲ್ಯ ತರಬೇತಿ ನೀಡಿ ಅವರ ಅರ್ಥಿಕ ಸ್ಥಿತಿ ಉತ್ತಮ ಪಡಿಸುವ ದೃಷ್ಟಿಯಿಂದ ₹346  ಕೋಟಿ ವೆಚ್ಚದಲ್ಲಿ ಕಾರ್ಮಿಕ ಭವನ ಆವರಣದಲ್ಲಿಯೇ ‘ನಿರ್ಮಾಣ (ಕನ್‌ಸ್ಟ್ರಕ್ಷನ್ ) ಅಕಾಡೆಮಿ’ ಸ್ಥಾಪನೆ ಮಾಡಲಾಗುವುದು. ಮೇ 14 ರಂದು ಮುಖ್ಯಮಂತ್ರಿ ಶಂಕುಸ್ಥಾಪನೆ ನೆರ ವೇರಿಸಲಿದ್ದಾರೆ ಎಂದು ವಿವರಿಸಿದರು.

ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ 60 ವರ್ಷ ಮೀರಿದ  ಕಾರ್ಮಿಕರಿಗೆ ಪಿಂಚಣಿ ವ್ಯವಸ್ಥೆ ಜಾರಿ ಮಾಡಲಾಗಿದೆ. ಮೇ 14ರಂದು ಮುಖ್ಯಮಂತ್ರಿ ಕೆಲವು ಕಾರ್ಮಿಕರಿಗೆ ಸಾಂಕೇತಿಕವಾಗಿ ಸೌಲಭ್ಯ ವಿತರಿಸುವರು ಎಂದರು.

ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸ, ಮದುವೆ, ಹೆರಿಗೆ ಹೀಗೆ 12 ಕಾರ್ಯಗಳಿಗೆ ಅನುದಾನ ನೀಡುವುದಕ್ಕೆ ಅವಕಾಶ ಇದೆ. ಈ ಯೋಜನೆಯಡಿ ₹130 ಕೋಟಿ ಖರ್ಚು ಮಾಡಲಾಗಿದೆ ಎಂದು ವಿವರಿಸಿದರು.

ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಓದುವ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕೋರ್ಸ್‌ನ ಪೂರ್ತಿ  ಶುಲ್ಕ ಸರ್ಕಾರದಿಂದಲೇ ಪಾವತಿ ಮಾಡಲಾಗುತ್ತದೆ. ಅಲ್ಲದೆ, ತಿಂಗಳಿಗೆ ₹2 ಸಾವಿರ ಪ್ರೋತ್ಸಾಹಧನವೂ ನೀಡಲಾ ಗುತ್ತದೆ. ಇದಲ್ಲದೆ, ಸ್ನಾತಕೋತ್ತರ ಕೋರ್ಸ್‌ ಓದುವ ವಿದ್ಯಾರ್ಥಿಗಳಿಗೂ ಸಹ ತಿಂಗಳಿಗೆ ₹2 ಸಾವಿರ ನೀಡಲಾಗುತ್ತಿದೆ ಎಂದರು.

ಗಾರ್ಮೆಂಟ್ಸ್‌ ಮಹಿಳಾ ನೌಕರರಿಗೆ ಸಹಾಯವಾಣಿ
ಗಾರ್ಮೆಂಟ್ಸ್‌ಗಳಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರ ಮೇಲೆ ಯಾವುದೇ ರೀತಿಯ ದೌರ್ಜನ್ಯಗಳು ನಡೆದರೂ ಅದನ್ನು ಸಂಬಂಧಿಸಿದ ವರ ಗಮನಕ್ಕೆ ತರಲು ಶೀಘ್ರದಲ್ಲಿಯೇ ಸಹಾಯವಾಣಿ ಆರಂಭಿಸಲಾಗುವುದು.  ಅಲ್ಲಿಯ ವರೆಗೂ ತಮ್ಮ ಮೊಬೈಲ್‌ ಸಂಖ್ಯೆಗೆ (94481 20755) ನೇರವಾಗಿ ಕರೆ ಮಾಡಬಹುದು ಎಂದರು.

ಮುಖ್ಯಾಂಶಗಳು
* 23 ಸಾವಿರ ವಿದ್ಯಾರ್ಥಿಗಳಿಗೆ ಈ ವರ್ಷದಿಂದಲೇ ವಿತರಣೆ

* ಕಲಬುರ್ಗಿ, ರಾಯಚೂರು, ಬಾಗಲಕೋಟೆ, ವಿಜಯ ಪುರ ಸೇರಿ 22 ಕಡೆಗಳಲ್ಲಿ ಇಂಗ್ಲಿಷ್‌ ಕಲಿಕಾ ಕೋರ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT