ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ ರಿಟರ್ನ್ ನಮೂನೆ ಅಲ್ಪ ಬದಲಾವಣೆ

Last Updated 28 ಜುಲೈ 2015, 19:30 IST
ಅಕ್ಷರ ಗಾತ್ರ

ಬದಲಾವಣೆ ಜಗದ ನಿಯಮ ಎನ್ನುವ ಮಾತಿದೆ. ಅದು ಆದಾಯ ತೆರಿಗೆ ಇಲಾಖೆಗೂ ಅನ್ವಯಿಸುತ್ತದೆ. ಈ ಬಾರಿ ಆದಾಯ ತೆರಿಗೆ ಇಲಾಖೆಗೆ ತೆರಿಗೆದಾರರು ಲೆಕ್ಕಪತ್ರ ಸಲ್ಲಿಸುವುದಕ್ಕೆ ಇರುವ ಮಾದರಿಗಳಲ್ಲಿಯೂ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಐ.ಟಿ ರಿಟರ್ನ್ ಸಲ್ಲಿಕೆ ಪ್ರಕ್ರಿಯೆಗೆ ಹೊಸದಾಗಿ ಕೆಲವು ಕಾಲಂಗಳು ಸೇರ್ಪಡೆಯಾಗಿವೆ. ಮೊದಲಿಗೆ ತೆರಿಗೆದಾರರ ಗಮನ ಸೆಳೆಯುವಂತಹದ್ದು ಆಧಾರ್ ಸಂಖ್ಯೆ ನಮೂದಿಸುವುದು.

ಆನ್‌ಲೈನ್‌ನಲ್ಲಿ ಆದಾಯ ತೆರಿಗೆ ಇಲಾಖೆಗೆ ವಾರ್ಷಿಕ ಲೆಕ್ಕಪತ್ರವನ್ನು ಸಲ್ಲಿಸುವ ಪ್ರಕ್ರಿಯೆ ಆರಂಭಿಸುತ್ತಿದ್ದಂತೆಯೇ ಮೊದಲಿಗೆ ಎದುರಾಗುವ ಪ್ರಶ್ನೆ, ‘ನೀವು ಆಧಾರ್ ಸಂಖ್ಯೆ ಹೊಂದಿದ್ದೀರಾ?’ ಉತ್ತರ ‘ಹೌದು’ ಎನ್ನುವುದಾದರೆ, ನಿಮ್ಮ ಆಧಾರ್ ಗುರುತಿನ ಚೀಟಿ ಮತ್ತು ಪ್ಯಾನ್ ಕಾರ್ಡ್‌ನಲ್ಲಿನ ಕೆಲವು ಮಾಹಿತಿಗಳು ತಾಳೆ ಆಗುತ್ತವೆಯೇ? ಮೊದಲು ಖಚಿತ ಪಡಿಸಿಕೊಳ್ಳಿ ಎಂಬ ಸೂಚನೆ ಎದುರಾಗುತ್ತದೆ.

ಅಂದರೆ, ಪ್ಯಾನ್ ಕಾರ್ಡ್‌ ಮತ್ತು ಆಧಾರ್‌ ಗುರುತಿನ ಚೀಟಿಯಲ್ಲಿ ನಮೂದಾಗಿರುವ ಹೆಸರು, ಜನ್ಮ ದಿನಾಂಕ ಒಂದೇ ಆಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿರಿ. ಈ ಎರಡೂ ಅಂಶಗಳಲ್ಲಿ ವ್ಯತ್ಯಾಸವಿದ್ದರೆ ನಿಮ್ಮ ಆಧಾರ್ ಸಂಖ್ಯೆಯನ್ನು ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯಲ್ಲಿ ದಾಖಲಿಸಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ‘ನಂತರ ಪ್ರಯತ್ನಿಸಿ’ ಎಂಬ ಅಯ್ಕೆ ಮೇಲೆ ಮೌಸ್‌ ಕ್ಲಿಕ್ ಮಾಡಿರಿ. ಪ್ಯಾನ್ ಕಾರ್ಡ್‌ನಲ್ಲಿ ಇರುವಂತೆಯೇ ನಿಮ್ಮ ಆಧಾರ್ ಗುರುತಿನ ಚೀಟಿಯಲ್ಲಿ ಹೆಸರು ಮತ್ತು ಜನ್ಮದಿನಾಂಕದ ಮಾಹಿತಿ ಸರಿಪಡಿಸಿಕೊಂಡು ನಂತರ ಪ್ರಯತ್ನಿಸಿರಿ ಎಂಬ ಸಲಹೆ ಬರುತ್ತದೆ.

ಆಧಾರ್ ಸಂಖ್ಯೆ ನಂತರ ದಾಖಲಿಸುವ ಆಯ್ಕೆಯನ್ನು ಕ್ಲಿಕ್ ಮಾಡಿದ ತರುವಾಯ ಇನ್ಕಂ ಟ್ಯಾಕ್ಸ್ ರಿಟರ್ನ್ (ಐಟಿಆರ್) ನಮೂನೆಗಳು ತೆರೆದುಕೊಳ್ಳುತ್ತವೆ. ತೆರಿಗೆದಾರ ವ್ಯಕ್ತಿ (ಐಟಿಆರ್1), ಹಿಂದೂ ಅವಿಭಕ್ತ ಕುಟುಂಬ (ಎಚ್‌ಯುಎಫ್), ಸಂಸ್ಥೆಗಳು ತಮಗೆ ಮೀಸಲಾದ ಮಾದರಿಯನ್ನು ಆಯ್ಕೆ ಮಾಡಿಕೊಂಡು 2014-15ನೇ ಹಣಕಾಸು ವರ್ಷದ ಆದಾಯ, ಉಳಿತಾಯ, ಹೂಡಿಕೆ ವಿವರಗಳನ್ನು ದಾಖಲಿಸಬೇಕು.

ಪ್ರಾಥಮಿಕ ಮಾಹಿತಿ ಹಂತಗಳು ಪೂರ್ಣಗೊಂಡ ನಂತರ, ಬ್ಯಾಂಕ್ ಖಾತೆಗಳ ವಿವರವನ್ನು ನಮೂದಿಸುವ ಕಾಲಂ ಎದುರಾಗುತ್ತದೆ. ಇದು ಸಹ ಈ ಬಾರಿ ಹೊಸದಾಗಿ ಸೇರ್ಪಡೆಯಾಗಿದೆ. ನೀವು ಕಳೆದ ಹಣಕಾಸು ವರ್ಷದಲ್ಲಿ ಎಷ್ಟು ಬ್ಯಾಂಕ್‌ಗಳಲ್ಲಿ, ಎಷ್ಟು ಖಾತೆಗಳನ್ನು ಹೊಂದಿದ್ದೀರಿ? ಅವು ಯಾವ ಬಗೆಯ ಖಾತೆಗಳು? ಖಾತೆ ಸಂಖ್ಯೆ (11 ಅಥವಾ 13 ಅಂಕಿಗಳನ್ನು) ನಮೂದಿಸಿರಿ.

ಖಾತೆ ಹೊಂದಿರುವ ಬ್ಯಾಂಕ್ ಶಾಖೆಗಳ ಐಎಫ್‌ಎಸ್ ಕೋಡ್ (ಐಎಫ್‌ಎಸ್‌ಸಿ) ನಮೂದಿಸಿ ಎಂಬ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ. ನಿಮ್ಮ ಖಾತೆ ಇರುವ ಬ್ಯಾಂಕ್ ಶಾಖೆಯ ಐಎಫ್‌ಎಸ್‌ಸಿ ಕೋಡ್ ಯಾವುದು ಎಂಬುದನ್ನು ಮೊದಲೇ ಒಂದು ಕಾಗದದಲ್ಲಿ ಬರೆದಿಟ್ಟುಕೊಂಡಿದ್ದರೆ ಆನ್‌ಲೈನ್ ಫೈಲಿಂಗ್ ಪ್ರಕ್ರಿಯೆ ವೇಳೆ ಹುಡುಕಾಡುವುದು ತಪ್ಪುತ್ತದೆ. ಇ-ಫೈಲಿಂಗ್‌ ಪ್ರಕ್ರಿಯೆ ಸರಾಗವಾಗಿ ಸಾಗಿ ಪೂರ್ಣಗೊಳ್ಳುತ್ತದೆ.

ಪ್ರತಿಯೊಂದು ಬ್ಯಾಂಕ್ ಶಾಖೆಯ ಐಎಫ್‌ಎಸ್ ಕೋಡ್ ಸಾಮಾನ್ಯವಾಗಿ ಪಾಸ್ ಪುಸ್ತಕದಲ್ಲಿ, ಚೆಕ್ ಹಾಳೆಯ ಮೇಲೆ ಮುದ್ರಿತವಾಗಿರುತ್ತದೆ. ಇಲ್ಲವಾದರೆ, ಬ್ಯಾಂಕ್ ಶಾಖೆಯಲ್ಲಿ ವಿಚಾರಿಸಿ ಮೊದಲೇ ತಿಳಿದುಕೊಳ್ಳುವುದು ಉತ್ತಮ. ಉಳಿದಂತೆ ಐಟಿಆರ್ ಮಾದರಿಗಳಲ್ಲಿ ಹೆಚ್ಚಿನ ಬದಲಾವಣೆ ಮಾಡಲಾಗಿಲ್ಲ. ಹಿಂದಿನ ವರ್ಷದಲ್ಲಿ ಇದ್ದಂತೆಯೇ ಕಾಲಂಗಳಿವೆ. ಐಟಿಆರ್ 1 ಮೂರು ಪುಟದಲ್ಲಿ ಕೊನೆಗೊಳ್ಳುತ್ತದೆ.

ಈ ಹಿಂದಿನ ವರ್ಷಗಳಲ್ಲಿ ಇ-ಫೈಲಿಂಗ್ ಮಾಡಿದ್ದವರಿಗೆ ಐಟಿಆರ್ ಸಲ್ಲಿಸುವುದು ಹೆಚ್ಚು ಕಷ್ಟವಾಗದು. ಏಕೆಂದರೆ, ಯೂಸರ್ ಐಡಿ ಮತ್ತು ಪಾಸ್‌ವರ್ಡ್ ನಮೂದಿಸಿ ಲಾಗಿನ್ ಆಗುತ್ತಿದ್ದಂತೆಯೇ ಐಟಿಆರ್ ನಮೂನೆ ತೆರೆದುಕೊಳ್ಳುತ್ತದೆ. ಅದಕ್ಕೂ ಮುನ್ನ ವಿಳಾಸ ಯಾವುದು ಎಂಬುದಕ್ಕೆ ಎದುರಾಗುವ ಆಯ್ಕೆಗಳಲ್ಲಿ ‘ಹಿಂದಿನ ವರ್ಷದ ರಿಟರ್ನ್ ಸಲ್ಲಿಕೆ ವೇಳೆ ನೀಡಿರುವುದು’ ಎಂಬುದನ್ನು ಆರಿಸಿಕೊಂಡರೆ ಹೊಸದಾಗಿ ಹೆಸರು ಮತ್ತು ವಿಳಾಸದ ಕಾಲಂಗಳನ್ನು ಭರ್ತಿ ಮಾಡುವ ಶ್ರಮ ಇರುವುದಿಲ್ಲ.

ನಂತರದಲ್ಲಿ ಉದ್ಯೋಗಿಗಳು ತಮ್ಮ ಕಂಪೆನಿಯಿಂದ ನೀಡಲಾಗಿರುವ ಫಾರಂ ನಂಬರ್ 16ನ್ನು ಮುಂದಿಟ್ಟುಕೊಂಡು ಅದರಲ್ಲಿ ನಮೂದಿಸಿರುವಂತೆ ತೆರಿಗೆಗೆ ಒಳಪಡುವ ಆದಾಯ ಎಷ್ಟು ಎಂಬ ಒಂದು ಕಾಲಂ ಭರ್ತಿ ಮಾಡಿದರೆ ಆಯಿತು. ಉಳಿದಂತೆ, ಮುಂದೆ ಕಾಣಿಸುವ ವೃತ್ತಿ ತೆರಿಗೆ ಕಡಿತ, ಮನೆ ಬಾಡಿಗೆ ಭತ್ಯೆ, ಸೆಕ್ಷನ್ 80 ಸಿ, ಸಿಸಿ, ಸಿಸಿಸಿ, ಸಿಸಿಡಿ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅನ್ವಯ ತೆರಿಗೆ ವಿನಾಯ್ತಿಗೆ ಅವಕಾಶವಿರುವಂತೆ ನೀವು ಹೂಡಿಕೆ ಮಾಡಿರುವ ಮಾಹಿತಿಗಳು ಸ್ವಯಂ ಚಾಲಿತವಾಗಿ ಭರ್ತಿಯಾಗುತ್ತವೆ. ತೆರಿಗೆದಾರರು ಒಮ್ಮೆ ಫಾರಂ 16ರಲ್ಲಿನ ಮಾಹಿತಿ, ಇ-ಫೈಲಿಂಗ್‌ನಲ್ಲಿ ಗೋಚರಿಸುತ್ತಿರುವ ಅಂಕಿ ಅಂಶ ತಾಳೆಯಾಗುತ್ತಿವೆಯೇ ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಂಡರೆ ಆಯಿತು.

ಬ್ಯಾಂಕ್‌ ಬಡ್ಡಿ ಗಳಿಕೆ?
ವೇತನ ಅಲ್ಲದೇ, ಹೆಚ್ಚುವರಿಯಾಗಿ ಯಾವುದಾದರೂ ಆದಾಯ ಗಳಿಸಿದ್ದರೆ, ಬ್ಯಾಂಕ್ ಠೇವಣಿಗಳಿಂದ ಕಳೆದ ಹಣಕಾಸು ವರ್ಷದಲ್ಲಿ ₹10 ಸಾವಿರಕ್ಕಿಂತ ಅಧಿಕ ಬಡ್ಡಿ ಗಳಿಕೆಯಾಗಿದ್ದರೆ ಆ ಮಾಹಿತಿಗಳನ್ನು ಭರ್ತಿ ಮಾಡಿರಿ. 2014-15ನೇ ವರ್ಷದಲ್ಲಿ ನಿಮ್ಮ ಬ್ಯಾಂಕ್‌ ಖಾತೆ, ಠೇವಣಿಗಳಿಂದ ಎಷ್ಟು ಬಡ್ಡಿ ಬಂದಿದೆ ಎಂಬುದು ನಿಮಗೆ ನಿಖರವಾಗಿ ತಿಳಿದಿಲ್ಲವೇ? ಚಿಂತೆ ಬೇಡ. ಬ್ಯಾಂಕ್‌ ಶಾಖೆಗೆ ತೆರಳಿ, 2014ರ ಏಪ್ರಿಲ್‌ 1ರಿಂದ 2015ರ ಮಾರ್ಚ್‌ 31ರವರೆಗಿನ ನಿಮ್ಮ ಬ್ಯಾಂಕಿಂಗ್ ವಹಿವಾಟು ಕುರಿತ ಮಾಹಿತಿಯನ್ನು ಉಳಿತಾಯ ಖಾತೆ ಪಾಸ್‌ ಪುಸ್ತಕದಲ್ಲಿ ಮುದ್ರಿಸಿಕೊಳ್ಳಿರಿ.

ಅದರಲ್ಲಿ ಕಳೆದ ಹಣಕಾಸು ವರ್ಷದಲ್ಲಿ ನಿಮ್ಮ ಖಾತೆಗೆ ಪ್ರತಿ ತ್ರೈಮಾಸಿಕದಲ್ಲಿ ಉಳಿತಾಯ ಖಾತೆಗೆ ಬಡ್ಡಿ ಜಮಾ ಆಗಿರುವ ಲೆಕ್ಕ ಸಿಗುತ್ತದೆ. ಠೇವಣಿಗಳೂ ಸಹ ಅವಧಿ ಮುಗಿದ ನಂತರ ಬಡ್ಡಿ ಸಮೇತವಾಗಿ ನಿಮ್ಮ ಖಾತೆಗೇ ಜಮಾ ಆಗಿರುತ್ತವೆ. ಒಟ್ಟು ಮೊತ್ತದಲ್ಲಿ ಠೇವಣಿಯ ಅಸಲು ಮೊತ್ತವನ್ನು ಕಳೆದರೆ ನಿಮಗೆ ಸಿಕ್ಕಿರುವ ಬಡ್ಡಿಯ ಲೆಕ್ಕವೂ ತಿಳಿಯುತ್ತದೆ. ಇದೆಲ್ಲವನ್ನೂ ಸೇರಿಸಿ ಲೆಕ್ಕಹಾಕಿರಿ. ಒಟ್ಟು ಬಡ್ಡಿ ₹10 ಸಾವಿರವನ್ನು ದಾಟಿದ್ದರೆ ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆ ವೇಳೆ ಮಾಹಿತಿ ದಾಖಲಿಸಬೇಕಾಗುತ್ತದೆ.

ದೇಣಿಗೆಗೆ ತೆರಿಗೆ ವಿನಾಯ್ತಿ
2014ರ ಏಪ್ರಿಲ್ 1ರಿಂದ 2015ರ ಮಾರ್ಚ್ 314ರ ನಡುವಿನ ಅವಧಿಯಲ್ಲಿ ದೇಣಿಗೆಯನ್ನೇನಾದರೂ ನೀಡಿದ್ದರೆ ಅದರ ಮಾಹಿತಿಯನ್ನು ಕಡೆಯ ಪುಟದಲ್ಲಿನ ಕಾಲಂಗಳಲ್ಲಿ ನಮೂದಿಸಬೇಕು. ಕೆಂಪು ನಕ್ಷತ್ರದ ಗುರುತಿರುವ ಕಾಲಂಗಳನ್ನು ಖಾಲಿ ಬಿಡುವಂತಿಲ್ಲ. ಅದರಲ್ಲಿ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಲೇಬೇಕು. ಎಲ್ಲ ಕಾಲಂಗಳೂ ಭರ್ತಿಯಾದ ನಂತರ submit (ಸಬ್‌ಮಿಟ್) ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದರೆ, 2014-15ನೇ ಹಣಕಾಸು ವರ್ಷದ ಹಾಗೂ 2015-16ನೇ ಅಸೆಸ್‌ಮೆಂಟ್ ಇಯರ್‌ನ (ಲೆಕ್ಕ ಪರಿಶೀಲನೆ ವರ್ಷದ) ಐ.ಟಿ ರಿಟರ್ನ್ ಫೈಲಿಂಗ್ ಪ್ರಕ್ರಿಯೆ ಮುಗಿದಂತೆ.

ನಂತರ ವಾರದ ನಂತರ ನಿಮ್ಮ ಮೇಲ್‌ ಐಡಿಗೆ ಆದಾಯ ತೆರಿಗೆ ಇಲಾಖೆಯ ಬೆಂಗಳೂರು ಕಚೇರಿಯಿಂದ ಸ್ವೀಕೃತಿ ಪತ್ರ ಬರುತ್ತದೆ. ಪಿಡಿಎಫ್‌ ಸ್ವರೂಪದಲ್ಲಿ ಇರುವ ಈ ಸ್ವೀಕೃತಿ ಪತ್ರದ ಒಂದೆರಡು ಪ್ರತಿಗಳನ್ನು ಮುದ್ರಿಸಿಕೊಳ್ಳಿರಿ. ಅದರಲ್ಲಿ ಒಂದು ಪ್ರತಿಗೆ ಸಹಿ ಹಾಕಿ ಆದಾಯ ತೆರಿಗೆಯ ಅದೇ ಬೆಂಗಳೂರು ಕೇಂದ್ರ ದಾಖಲೆ ಪರಿಶೀಲನಾ ಕಚೇರಿ ವಿಳಾಸಕ್ಕೆ ಸಾಮಾನ್ಯ ಅಂಚೆಯಲ್ಲಿಯೇ ರವಾನಿಸಿರಿ. ಈ ಸ್ವೀಕೃತಿ ಪತ್ರದ ಇನ್ನೊಂದು ಪ್ರತಿಯನ್ನು ನಿಮ್ಮ ಫೈಲ್‌ನಲ್ಲಿ ಜೋಪಾನವಾಗಿ ಇಟ್ಟುಕೊಂಡಿರಿ. ಗೃಹಸಾಲ, ಬ್ಯಾಂಕಿಂಗ್‌ ವಹಿವಾಟು, ಆಸ್ತಿ ಖರೀದಿ ಮೊದಲಾದ ಪ್ರಕ್ರಿಯೆಗಳ ವೇಳೆ ಅಗತ್ಯವಾಗಿ ಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT