ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ನಿರ್ಧಾರ

Last Updated 8 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಕರ್ನಾಟಕ ಲೋಕಸೇವಾ ಆಯೋಗದ  (ಕೆಪಿಎಸ್‌ಸಿ)  2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ಆಯ್ಕೆ ಪಟ್ಟಿಯನ್ನು ರಾಜ್ಯ ಸಚಿವ ಸಂಪುಟ ತಿರಸ್ಕರಿಸಿದೆ. ಈ ನೇಮಕಾತಿಯ ವಿವಿಧ ಹಂತ­ಗಳಲ್ಲಿ ಯಾವ ಯಾವ ಬಗೆಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಬಗ್ಗೆ ಆಘಾತಕಾರಿ ವಿವರಗಳನ್ನು ಸಿಐಡಿ  ವರದಿ ನೀಡಿತ್ತು. ಇದನ್ನು ಆಧ­ರಿಸಿ ಆಯ್ಕೆ ಪಟ್ಟಿಯನ್ನು ತಿರಸ್ಕರಿಸುವಂತಹ ನಿರ್ಧಾರವನ್ನು ರಾಜ್ಯದ ಇತಿಹಾಸ­ದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರ ಕೈಗೊಂಡಿರುವುದು ಮಹತ್ವದ ಹೆಜ್ಜೆ. ಇಂತಹದೊಂದು ದಿಟ್ಟ ನಿರ್ಧಾರ ಕೈಗೊಳ್ಳಲು ರಾಜ್ಯ ಸಚಿವ ಸಂಪುಟದಲ್ಲೇ ವಿರೋಧದ ಕೆಲವು ದನಿಗಳೂ ಇದ್ದವು. 

ಈ  ಒತ್ತಡಗಳನ್ನು ಮೀರಿ ನಿರ್ಧಾರವನ್ನು ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದ­ರಾಮ­ಯ್ಯ­ನವರು ನಾಯಕತ್ವದ ಆದರ್ಶವನ್ನು ಮೆರೆದಿದ್ದಾರೆ. ಅದರಲ್ಲೂ ದಲಿತ ನಾಯಕರ ವಿರೋಧವನ್ನು ಎದುರು ಹಾಕಿಕೊಳ್ಳುವುದು ಸುಲ­ಭದ್ದೇನಲ್ಲ. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಇಂತಹ ನಿರ್ಧಾ­ರಗಳು ದೂರ­ಗಾಮಿ ಪರಿಣಾಮಗಳನ್ನು ಬೀರುವಂತಹದ್ದು. ಸಮಾಜಕ್ಕೆ ಗಟ್ಟಿ ಸಂದೇಶ­ವನ್ನು ರವಾನಿಸುವ ಇಂತಹ ನಿರ್ಧಾರ ಶ್ಲಾಘ­ನೀಯ. ಆಯ್ಕೆ­ಯಾದ ಕೆಲವು ಪ್ರಾಮಾಣಿಕ ಅಭ್ಯರ್ಥಿಗಳಿಗೆ  ಅವರು ವರ್ಷಾನು­ಗಟ್ಟಲೆ ಹಾಕಿದ ಶ್ರಮ ವ್ಯರ್ಥವಾಗಿ ತೊಂದರೆ­ಯಾಗಿದೆ ಎಂಬುದನ್ನೂ ಕಡೆಗಣಿ­ಸುವಂತಿಲ್ಲ. ಆದರೆ  ಕೊಳೆತು ನಾರುತ್ತಿರುವ ವ್ಯವಸ್ಥೆಯ ಶುದ್ಧೀಕರಣದ ಪ್ರಕ್ರಿ­­ಯೆ­ಯಲ್ಲಿ ಇದು ಅನಿವಾರ್ಯ. ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಸಿದ್ಧಾಂತದ ಕುರಿತಾದ ಕಾಳಜಿಗೆ ಬದ್ಧತೆ  ಇರಬೇಕಾದುದು ಇಲ್ಲಿ ಅವಶ್ಯ.

ಹಲವು ದಶಕಗಳಿಂದ ಕೆಪಿಎಸ್‌ಸಿಯಲ್ಲಿ ಅಕ್ರಮಗಳು ನಡೆದು­ಕೊಂಡೇ ಬಂದಿವೆ. 1998, 1999 ಹಾಗೂ 2004ರ ಸಾಲಿನ ನೇಮ­ಕಾತಿಗಳಲ್ಲಿ ಅಕ್ರಮಗಳು ನಡೆದಿತ್ತು ಎಂಬುದನ್ನೂ ಸಿಐಡಿ ತನಿಖಾ ವರದಿ ಹೇಳಿದೆ. 1998ರಿಂದ 2004ರ ಅವಧಿಯಲ್ಲಿ  ಗೆಜೆಟೆಡ್ ಪ್ರೊಬೇ­ಷನರಿಗಳ ನೇಮಕಾತಿಗೆ ಸಂಬಂಧಿಸಿದಂತೆ ನಡೆದ ಅವ್ಯವಹಾ­ರಗಳು ಹಾಗೂ ಭ್ರಷ್ಟಾಚಾರ ಆರೋಪದ ಮೇಲೆ ಕೆಪಿಎಸ್‌ಸಿಯ  ಅಂದಿನ ಅಧ್ಯಕ್ಷ ಎಚ್.ಎನ್.ಕೃಷ್ಣ ಅವರು ಜೈಲಿಗೂ ಹೋಗಿದ್ದರು.  ಲಕ್ಷಗಟ್ಟಲೆ ಲಂಚ ನೀಡಿ ಹುದ್ದೆ ಗಿಟ್ಟಿಸಿದವರು ಮುಂದೆ ಅಧಿಕಾರಿ­ಗಳಾದ ನಂತರ ಪ್ರಾಮಾಣಿಕ ಆಡಳಿತ ನೀಡುತ್ತಾರೆಂದು ನಿರೀಕ್ಷಿಸು­ವುದು ಕಷ್ಟ. ಈ  ಭ್ರಷ್ಟಾಚಾರದ ಸರಪಳಿಗೆ ಕೊನೆಯೇ ಇಲ್ಲ­ದಂತಾ­ಗು­ತ್ತದೆ. ಭ್ರಷ್ಟಾಚಾರ ಸಾಂಸ್ಥೀಕರಣ­ಗೊಳ್ಳುತ್ತಾ ಸಾಗಿದಂತೆ ಸೃಷ್ಟಿಯಾ­ಗುವ ರಾಜಕೀಯ ಸಂಸ್ಕೃತಿ ಕಡೆಗೆ ನಮ್ಮನ್ನು ಎಲ್ಲಿಗೆ ಒಯ್ಯಬಹುದು ಎಂಬುದನ್ನು ನಾವು ವಿಮರ್ಶಿಸಬೇಕು.

ಅಭ್ಯರ್ಥಿಗಳು ಹುದ್ದೆ ಪಡೆ­ದುಕೊಳ್ಳಲು ತಮ್ಮ ಕ್ಷೇತ್ರಗಳ ರಾಜಕಾರಣಿಗಳ ಶಿಫಾರಸು ಅಥವಾ  ಪ್ರಭಾವ ಬಳಸಿಕೊಂಡಲ್ಲಿ ತಪ್ಪೇನೂ ಇಲ್ಲ ಎಂದು ಜೆಡಿಎಸ್ ನಾಯಕ  ಎಚ್.ಡಿ.ಕುಮಾರಸ್ವಾಮಿ ಅವರು ಸದನದಲ್ಲೇ ಈ ಹಿಂದೆ ಹೇಳಿ­ದ್ದುದನ್ನು ಇಲ್ಲಿ ಸ್ಮರಿಸಬಹುದು. ಈಗ ಅದೇ ಕುಮಾರ­ಸ್ವಾಮಿ­ಯವರು, ಆಯ್ಕೆಪಟ್ಟಿ ರದ್ದತಿ ವಿರುದ್ಧ ಧರಣಿ ಕೂರುವುದಾಗಿ ಹೇಳು­ವಂತಹ ಮಟ್ಟಕ್ಕೆ ಹೋಗಿರುವುದು ನಾಚಿಕೆಗೇಡು. ಈ ವಿಷಯದಲ್ಲಿ ಜಾತಿ ರಾಜಕಾರಣ ಎಳೆದು ತರುವುದು ಸರಿಯಲ್ಲ. ಹಾಗೆಯೇ ಇದನ್ನು ರಾಜಕೀಯಕರಣಗೊಳಿಸಲು ಜೆಡಿಎಸ್ ಹಾಗೂ ಬಿಜೆಪಿಯ  ಕೆಲವು ನಾಯಕರು ಮುಂದಾಗಿರುವುದೂ ಸರಿಯಲ್ಲ. 

ಆಡಳಿತ ಸೇವೆ ಅಧಿಕಾರಿಗಳು, ಉಪನ್ಯಾಸಕರು ಹಾಗೂ ವಿವಿಧ ಇಲಾಖೆಗಳ ಬಹು­ತೇಕ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಕೆಪಿಎಸ್‌ಸಿ ಮೂಲಕ ನಡೆ-­ಯಬೇಕು. ಇದಕ್ಕಾಗಿ ಅದಕ್ಕೆ ಕಟ್ಟಡ, ಸಿಬ್ಬಂದಿ ಹೀಗೆ ಎಲ್ಲಾ ಮೂಲ­ಸೌಕರ್ಯ ಇದೆ. ಕೋಟ್ಯಂತರ ಹಣವೂ ವ್ಯಯವಾಗುತ್ತಿದೆ. ಹೀಗಿದ್ದೂ ಎಷ್ಟೋ ಸಂದರ್ಭಗಳಲ್ಲಿ ನೇರ ನೇಮಕಾತಿಗಳನ್ನು ಮಾಡಬೇಕಾದ ಸ್ಥಿತಿ ಇರುವುದು ಸರಿಯಲ್ಲ. ನಿಜಕ್ಕೂ  ಕೆಪಿಎಸ್‌ಸಿಗೆ ಕಾಯಕಲ್ಪ ಬೇಕಾ­ಗಿದೆ. ಈ ನಿಟ್ಟಿನಲ್ಲಿ ಈ ನಿರ್ಣಯ ಮೊದಲ ಹೆಜ್ಜೆ. ಭ್ರಷ್ಟಾ­ಚಾರದ ವಿರುದ್ಧದ ಹೋರಾಟಕ್ಕೆ ಇದು ಚಾಲನೆಯಾಗಬೇಕು. ಅರ್ಹ ಯುವಜನರಿಗೆ ಉದ್ಯೋಗಗಳು ಲಭಿಸುವಂತಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT