ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ದಿನಗಳಲ್ಲಿ ಉತ್ತಮ ಮಳೆ ಸಂಭವ

ಆಂಧ್ರದ ರಾಯಲಸೀಮಾ ಭಾಗದಲ್ಲಿ ಮೇಲ್ಮೈ ಸುಳಿಗಾಳಿ
Last Updated 20 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆಂಧ್ರಪ್ರದೇಶದ ರಾಯಲಸೀಮಾ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ನಿರ್ಮಾಣವಾಗಿದ್ದು, ಮುಂದಿನ ಐದು ದಿನದೊಳಗೆ ರಾಜ್ಯದ ಕರಾವಳಿ ಪ್ರದೇಶದಲ್ಲಿ ಮಧ್ಯಮದಿಂದ ಭಾರಿ ಪ್ರಮಾಣದ ಮಳೆ ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ.

‘ಬಿಹಾರದ ಸುತ್ತಮುತ್ತ, ಹಿಮಾಲಯ ತಪ್ಪಲು ಮತ್ತು ಪಶ್ಚಿಮ ಬಂಗಾಳದ ಭಾಗದಲ್ಲಿ ಪ್ರಬಲ ಮೇಲ್ಮೈ ಸುಳಿಗಾಳಿ ನಿರ್ಮಾಣವಾಗಿದೆ. ಇದರಿಂದ ಆ ಭಾಗದಲ್ಲಿ ಹೆಚ್ಚಿನ ಮಳೆಯಾಗಲಿದೆ. ದಕ್ಷಿಣ ಭಾರತದಲ್ಲಿ ರಾಯಲಸೀಮಾ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ನಿರ್ಮಾಣವಾಗಿದೆ. ಇದರ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ನಿರ್ದೇಶಕ ಸುಂದರ್‌ ಎಂ. ಮೇತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕರಾವಳಿಯ ಹೆಚ್ಚಿನ ಪ್ರದೇಶಗಳಲ್ಲಿ ಭಾರಿ ಮಳೆ ಹಾಗೂ ದಕ್ಷಿಣ ಒಳನಾಡಿನ ಅನೇಕ ಹಾಗೂ ಉತ್ತರ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಮಧ್ಯಮ ಪ್ರಮಾಣದ ಮಳೆ ದಾಖಲಾಗುವ ಸಾಧ್ಯತೆ ಇದೆ. ತುಮಕೂರು, ಬೆಂಗಳೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, ಕೆಲವು ಬಾರಿ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ’ ಎಂದು ಹೇಳಿದರು.

‘ಸಾಮಾನ್ಯವಾಗಿ ಮುಂಗಾರು ಅವಧಿಯಲ್ಲಿ ಕರಾವಳಿ ಮತ್ತು ಮಲೆನಾಡು ಭಾಗದ ಏಳು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಉತ್ತರ ಒಳನಾಡಿನ 11 ಜಿಲ್ಲೆಗಳಲ್ಲಿ ಕಡಿಮೆ ಮಳೆಯಾಗುತ್ತದೆ. ರಾಜ್ಯದಲ್ಲಿ ಪ್ರಸಕ್ತ ವರ್ಷದ  ಜೂನ್‌ 1ರಿಂದ ಜುಲೈ 20ರವರೆಗೆ 373 ಮಿ.ಮೀ. ಮಳೆ ದಾಖಲಾಗಿದೆ. ಕಳೆದ ವರ್ಷವೂ ಇಷ್ಟೇ ಪ್ರಮಾಣದಲ್ಲಿ ಮಳೆಯಾಗಿತ್ತು’ ಎಂದರು.

‘ವಾಡಿಕೆಗಿಂತ ಕಡಿಮೆ ಮಳೆಯನ್ನು ಋಣಾತ್ಮಕ (–) ಹಾಗೂ ಹೆಚ್ಚಿನ ಮಳೆಯನ್ನು ಧನಾತ್ಮಕವಾಗಿ (+) ಗುರುತಿಸಲಾಗುತ್ತದೆ. ಶೇ 18ರವರೆಗೂ ಕಡಿಮೆ ಅಥವಾ ಹೆಚ್ಚು ಮಳೆ ದಾಖಲಾದರೆ ಅದನ್ನು ಸಹಜ ಸ್ಥಿತಿಯ ಮಳೆ ಎಂದೇ ಪರಿಗಣಿಸಲಾಗುತ್ತದೆ. ಈ ಬಾರಿ ಯಾದಗಿರಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 31ರಷ್ಟು ಕಡಿಮೆ ಮಳೆ ದಾಖಲಾಗಿದೆ. ತುಮಕೂರು ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 57ರಷ್ಟು ಹೆಚ್ಚು ಮಳೆಯಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT