ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ಪಟ್ಟು ಹೆಚ್ಚಿಸಲು ಲೋಕಸಭಾ ಸದಸ್ಯರ ಆಗ್ರಹ

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ
Last Updated 26 ಜುಲೈ 2016, 19:40 IST
ಅಕ್ಷರ ಗಾತ್ರ

ನವದೆಹಲಿ: ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಐದು ಪಟ್ಟು ಹೆಚ್ಚಿಸಬೇಕು ಎಂದು ಲೋಕಸಭಾ ಸದಸ್ಯರು ಒತ್ತಾಯಿಸಿದರು. ಆದರೆ ಸಂಸದರ ಬೇಡಿಕೆ ಈಡೇರಿಸುವುದು ಕಷ್ಟ ಎಂದು ಸರ್ಕಾರ ಹೇಳಿದೆ.

ಸಂಸದರ ಸ್ಥಳೀಯಾಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಯ ಅಧ್ಯಕ್ಷರೂ ಆಗಿರುವ ಉಪಸಭಾಪತಿ ಎಂ. ತಂಬಿದೊರೈ ಅವರು  ಸಂಸದರ ನಿಧಿ ಬಳಕೆಯ ಹೊಸ ಮಾರ್ಗದರ್ಶಿ ಸೂತ್ರದ ವರದಿ ಮಂಡಿಸಿದಾಗ ಶೂನ್ಯ ವೇಳೆಯಲ್ಲಿ ಸದಸ್ಯರು ನಿಧಿಯನ್ನು ಐದು ಪಟ್ಟು ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟರು.

ಪ್ರತಿ ಸಂಸದರಿಗೆ  ವಾರ್ಷಿಕ ₹ 25 ಕೋಟಿ ನೀಡುವಂತೆ ಸರ್ಕಾರವನ್ನು ಕೋರಿದ್ದೇನೆ, ಸರ್ಕಾರದ ಪ್ರತಿಕ್ರಿಯೆ ಏನು ಎಂಬುದನ್ನು ಕಾದು ನೋಡೋಣ ಎಂದು ತಂಬಿದೊರೈ ತಿಳಿಸಿದರು.

ಅನೇಕ ಸದಸ್ಯರು ದೊರೈ ಅವರ ಹೇಳಿಕೆಯನ್ನು ಬೆಂಬಲಿಸಿ ಮಾತನಾಡಿದರು. ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದೆ ಇದ್ದರೆ ಈ ವರದಿ ಸಲ್ಲಿಸಿ ಏನು ಪ್ರಯೋಜನ ಎಂದು ಸದಸ್ಯರು ಕೇಳಿದರು.

ಕಾರ್ಯಕ್ರಮ ಜಾರಿ ಮತ್ತು ಸಾಂಖ್ಯಿಕ ಇಲಾಖೆಯ ಸಚಿವ ಡಿ. ವಿ. ಸದಾನಂದ ಗೌಡ ಅವರು ಸಂಸದರ ನಿಧಿ ಹೆಚ್ಚಳ ಸಾಧ್ಯವಿಲ್ಲ ಎಂದು ಕಳೆದ ವಾರ ತಿಳಿಸಿದ್ದಾರೆ ಎಂದು ಕಾಂಗ್ರೆಸ್ ಸದಸ್ಯ ಕೆ. ಸಿ. ವೇಣುಗೋಪಾಲ್ ತಿಳಿಸಿದರು.

ಈಗ ವಾರ್ಷಿಕ ₹3,950 ಕೋಟಿ ಮೊತ್ತವನ್ನು ಸಂಸದರ ನಿಧಿಯಾಗಿ ನೀಡಲಾಗುತ್ತದೆ. ಐದು ಪಟ್ಟು ಹೆಚ್ಚಿಸಿದರೆ ₹19,750 ಕೋಟಿ ಆಗುತ್ತದೆ ಎಂದು ಹಣಕಾಸು ಇಲಾಖೆ ಹೇಳಿದೆ.

ಸಂಸದರ ಪ್ರದೇಶಾಭಿವೃದ್ಧಿ ನಿಧಿಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಯು 2013ರ ಜುಲೈ 2ರಂದು ಸಭೆ ನಡೆಸಿ ನಿಧಿಯನ್ನು ₹10 ಕೋಟಿಗೆ ಏರಿಸಲು ಒತ್ತಾಯಿಸಿತ್ತು. 12 ವರ್ಷಗಳ ನಂತರ ₹ 2 ಕೋಟಿ ಇದ್ದ ಅನುದಾನವನ್ನು ₹ 5ಕೋಟಿಗೆ ಏರಿಸಲಾಗಿದೆ. ಈಗ ಕೇವಲ ಐದು ವರ್ಷಗಳ ನಂತರ ಐದು ಪಟ್ಟು ಹೆಚ್ಚಿಸಲು ಒತ್ತಾಯಿಸಲಾಗುತ್ತಿದೆ. ಇದು ಭಾರಿ ಹೊರೆ ಉಂಟು ಮಾಡುತ್ತದೆ ಎಂದು ಹಣಕಾಸು ಇಲಾಖೆಯ ಮೂಲಗಳು ಹೇಳಿವೆ.

ಮುಖ್ಯಾಂಶಗಳು
* ಸಂಸದರ ಬೇಡಿಕೆ ಈಡೇರಿಕೆ ಕಷ್ಟ: ಕೇಂದ್ರ

* ವಾರ್ಷಿಕ ₹ 25 ಕೋಟಿ ನೀಡುವಂತೆ ಕೋರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT