ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ವರ್ಷದಿಂದ ಆಮೆನಡಿಗೆಯಲ್ಲಿ ಕಾಮಗಾರಿ!

ಸುರತ್ಕಲ್-–ಕುಂದಾಪುರ ರಾಷ್ಟ್ರೀಯ ಹೆದ್ದಾರಿ
Last Updated 26 ನವೆಂಬರ್ 2014, 7:05 IST
ಅಕ್ಷರ ಗಾತ್ರ

ಶಿರ್ವ: ಸುರತ್ಕಲ್–-ಕುಂದಾಪುರ ಚತುಷ್ಫಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭ­ಗೊಂಡು ಐದು ವರ್ಷ ಕಳೆದರೂ ಇನ್ನೂ ಆಮೆ­ನಡಿಗೆಯಲ್ಲಿ ನಡೆಯುತ್ತಿದೆ. ಸದ್ಯಕ್ಕೆ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಚತುಷ್ಪಥವಾಗುವ ಲಕ್ಷಣ­ಗಳು ಕಾಣುತ್ತಿಲ್ಲ.

ಈ ಹೆದ್ದಾರಿ ಕಾಮಗಾರಿಯನ್ನು ಕೈಗೆತ್ತಿ­ಕೊಂಡಿ­ರುವ ನವಯುಗ ನಿರ್ಮಾಣ ಸಂಸ್ಥೆ ಅದಾಗಲೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ­ಯನ್ನು ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಬಿಟ್ಟುಕೊಡಬೇಕಿತ್ತು. ಐದು ವರ್ಷಗಳಿಂದ ಅಲ್ಲಲ್ಲಿ ಅಪೂರ್ಣ ಕಾಮಗಾರಿಗಳು ನಡೆಯು­ತ್ತಿದ್ದು, ಸಾರ್ವಜನಿಕರು ಹಾಗೂ ವಾಹನ ಚಾಲಕರು ಹೆದ್ದಾರಿ ಪ್ರಯಾಣದ ವೇಳೆ ತೊಂದರೆ­ಗೀಡಾಗುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿ­ರು­ವುದರಿಂದ ಕಾಮಗಾರಿಗಾಗಿ ಅಲ್ಲಲ್ಲಿ ರಸ್ತೆ ಅಗೆತ, ಮಣ್ಣು ರಾಶಿ ಹಾಕಿರುವುದರಿಂದ ಅನೇಕ ಸಂದರ್ಭಗಳಲ್ಲಿ ಅವಘಡಗಳಿಗೆ ಕಾರಣವಾಗು­ತ್ತಿದೆ. ಹಲವು ಪ್ರದೇಶಗಳಲ್ಲಿ ಕಾಮಗಾರಿ ನಡೆಯುತ್ತಿರುವ ಬಗ್ಗೆ ಮತ್ತು ತಿರುವುಗಳ ಬಗ್ಗೆ ಸೂಕ್ತ ಫಲಕಗಳನ್ನು ಹಾಕದೇ ಇರುವುದರಿಂದ ವಾಹನ ಅಪಘಾತಗಳು ಆಗಾಗ ಸಂಭವಿಸುತ್ತಿದೆ. ಪಾಂಗಾಳ ಹಾಗೂ ಉದ್ಯಾವರದಲ್ಲಿ ಹೊಸ ಸೇತುವೆಗಳ ನಿರ್ಮಾಣ ಕಾಮಗಾರಿ ಆರಂಭ­ಗೊಂಡು ಸುಮಾರು 4 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಪು, ಕಟ­ಪಾಡಿ, ಉದ್ಯಾವರ, ಕಿನ್ನಿಮೂಲ್ಕಿ ಕೂಡು ರಸ್ತೆಗಳಲ್ಲಿಯೂ ಸಂಪರ್ಕ ಮತ್ತು ಸರ್ವಿಸ್‌ ರಸ್ತೆಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳದೇ ಇರುವುದರಿಂದ ಸಾರ್ವಜನಿಕರು ಗೊಂದಲದಲ್ಲಿ ಸಿಲುಕಿದ್ದಾರೆ.

ಡಿವೈಡರ್ ನಡುವೆ ಸೊರಗಿದ ಕನೇರಿಯ:
ಕುಂದಾಪುರದಿಂದ ಸುರತ್ಕಲ್‌ ವರೆಗಿನ ಸುಮಾರು 90 ಕಿ.ಮೀ. ರಾಷ್ಟ್ರೀಯ ಹೆದ್ದಾರಿ 66ರ ರಸ್ತೆ ವಿಭಜಕದಲ್ಲಿ ಮಳೆಗಾಲಕ್ಕೆ ಮುನ್ನ ನೆಟ್ಟಿರುವ ಸಾವಿರಾರು ಕನೇರಿಯಾ ಗಿಡಗಳೂ ಸೊರಗಿವೆ. ಹೂದೋಟ ನಿರ್ಮಿಸುವ ದೂರಾ­ಲೋಚನೆಯೊಂದಿಗೆ ಹೆದ್ದಾರಿ ಕಾಮಗಾರಿ ಗುತ್ತಿಗೆದಾರರು ನೆಟ್ಟಿರುವ ಗಿಡಗಳ ಸುತ್ತ ಇದೀಗ ಕಳೆಗಳು ತುಂಬಿಕೊಂಡಿವೆ. ಅವುಗಳ ನಿರ್ವಹಣೆ ಮಾಡುವವರು ಇಲ್ಲದೆ ಕನೇರಿಯಾ ಗಿಡಕ್ಕಿಂತ ಎತ್ತರಕ್ಕೆ ಕಳೆ ಗಿಡಗಳೇ ಬೆಳೆದು ನಿಂತಿವೆ. ರಾಷ್ಟ್ರೀಯ ಹೆದ್ದಾರಿ 66ರ ಕುಂದಾಪುರ–ಸುರತ್ಕಲ್ ಮತ್ತು ನಂತೂರು–ತಲಪಾಡಿಯ­ವರೆ­ಗಿನ ರಸ್ತೆಯಲ್ಲಿ ನಡೆಯುತ್ತಿರುವ ಚತುಷ್ಪಥ ಯೋಜನೆಯ ಕಾಮಗಾರಿಗೆ ಮಳೆಗಾಲ ಪ್ರಾರಂಭಕ್ಕೆ ಮುನ್ನ ಕನೇರಿಯಾ ಗಿಡಗಳನ್ನು ಬೆಳೆಸಲಾಗಿತ್ತು. ಹೆದ್ದಾರಿಯ ಇಕ್ಕೆಲಗಳಲ್ಲಿನ ರಸ್ತೆ ನಿರ್ಮಾಣ ಕಾರ್ಯ ಮುಗಿದಿರುವ ಕಡೆಗಳಲ್ಲಿ ನಿರ್ಮಿಸಿರುವ ರಸ್ತೆ ವಿಭಜಕದ ಮಧ್ಯದಲ್ಲಿ ಸುಂದರ ಹೂದೋಟವನ್ನು ನಿರ್ಮಿಸುವ ಯೋಜನೆ­ಗಾಗಿ ಹೆದ್ದಾರಿ ಕಾಮಗಾರಿಯ ಗುತ್ತಿಗೆಯನ್ನು ವಹಿಸಿ ಕೊಂಡಿರುವ ನವಯುಗ ಕಂಪೆನಿಯವರು ಎರಡೂವರೆ ಲಕ್ಷ ಗಿಡಗಳನ್ನು ಆಂಧ್ರ ಪ್ರದೇಶದಿಂದ ತಂದು ನೆಟ್ಟಿದ್ದರು. ಪ್ರಾರಂಭದ ದಿನಗಳಲ್ಲಿ ಗಿಡಗಳಿಗೆ ಅವಶ್ಯಕತೆಗೆ ತಕ್ಕಂತೆ ನೀರು ಪೂರೈಸುವ ಕಾರ್ಯವೂ ನಡೆಯು­ತ್ತಿತ್ತು. ಆದರೆ ಈಗ ವಿಭಜಕದ ತುಂಬ ಎತ್ತರ­ರೆತ್ತರಕ್ಕೆ ಕಳೆ ತುಂಬಿಕೊಂಡಿರುವುದರಿಂದ ರಾತ್ರಿ ವೇಳೆ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೂ ತೊಡಕುಂಟಾಗುತ್ತಿದೆ.

ಜಿಲ್ಲಾಡಳಿತಕ್ಕೆ ಮನವಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಿಸಿ ಐದು ವರ್ಷ ಸಂದರೂ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣಗಳು ಕಾಣಿ­ಸುತ್ತಿಲ್ಲ. ಇದರಿಂದಾಗಿ ಅಲ್ಲಲ್ಲಿ ಅಪಘಾತಗಳೂ ಸಂಭವಿಸುತ್ತಿದೆ ಎಂದು ಜಿಲ್ಲಾಡಳಿತಕ್ಕೆ ಉದ್ಯಾ­ವರದ ವಿವಿಧ ಸಾರ್ವಜನಿಕ ಸಂಘ ಸಂಸ್ಥೆಗಳ ನಿಯೋಗವೊಂದು ಈಗಾಗಲೇ ದೂರು ನೀಡಿವೆ.

ಉದ್ಯಾವರದ ಬಲಾಯಿಪಾದೆ ಜಂಕ್ಷನ್‌ನಲ್ಲಿ ಮೇ ತಿಂಗಳಿನಲ್ಲಿ ಮಳೆ ನೀರು ಹರಿದು ಹೋಗಲು ಚತುಷ್ಪಥ ರಸ್ತೆಯ ಒಂದು ಭಾಗದಲ್ಲಿ ಕಾಲುವೆ ತೆಗೆಯಲಾಗಿದ್ದು, ಅದರ ಕಾಮಗಾರಿಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸುವ ಭರವಸೆ­ಯನ್ನು ಕಾಮಗಾರಿ ಕೈಗೆತ್ತಿಕೊಂಡಿರುವ ಕಂಪೆನಿ ನೀಡಿತ್ತು. ಆದರೆ ಇದುವರೆಗೆ ಆ ಕಾಮಗಾರಿ ನಡೆದಿಲ್ಲ. ಈ ದಾರಿಯಲ್ಲಿ ಶಾಲಾ ಮಕ್ಕಳ ವಾಹನ ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಅಪಾಯ ಎದುರಾಗುವ ಮುನ್ನ ಸ್ಪಂದಿಸುವಂತೆಯೂ ನಿಯೋಗ ಮನವಿ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT