ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ ಚಾಂಪಿಯನ್ನರ ಜಯದ ಆರಂಭ

ಚಾಂಪಿಯನ್ಸ್‌ ಲೀಗ್‌ ಕ್ರಿಕೆಟ್‌: ರಸೆಲ್‌, ಡಷೆಟ್ ಅಬ್ಬರ; ದೋನಿ ಆಟ ವ್ಯರ್ಥ
Last Updated 17 ಸೆಪ್ಟೆಂಬರ್ 2014, 20:09 IST
ಅಕ್ಷರ ಗಾತ್ರ

ಹೈದರಾಬಾದ್‌ (ಪಿಟಿಐ): ಇನ್ನೇನು ಸೋಲೇ ಗತಿ ಎನ್ನುವ ಸಂಕಷ್ಟ ಎದುರಾಗಿದ್ದಾಗ ಕೆಚ್ಚೆದೆಯ ಹೋರಾಟ ತೋರಿದ ಐಪಿಎಲ್‌ ಚಾಂಪಿಯನ್‌ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಗೆಲುವಿನ ಆರಂಭ ಪಡೆದಿದೆ.

ಉಪ್ಪಳದಲ್ಲಿರುವ ರಾಜೀವ್‌ ಗಾಂಧಿ ಅಂತರ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರಿನ ಪಂದ್ಯದಲ್ಲಿ ಆ್ಯಂಡ್ರೆ ರಸೆಲ್‌ (58) ಮತ್ತು  ರ್‍ಯಾನ್‌ ಟೆನ್‌ ಡಷೆಟ್‌ (ಅಜೇಯ 51) ಅಮೋಘ ಆಟ ತೋರಿ ನೈಟ್‌ ರೈಡರ್ಸ್‌ ತಂಡಕ್ಕೆ ಮೂರು ವಿಕೆಟ್‌ಗಳ ಗೆಲುವು ತಂದುಕೊಟ್ಟರು.

ಮಹೇಂದ್ರ ಸಿಂಗ್ ದೋನಿ ಸಾರಥ್ಯದ ಸೂಪರ್‌ ಕಿಂಗ್ಸ್‌ ತಂಡ ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡಿತು. ನಿಗದಿತ ಓವರ್‌ ಗಳಲ್ಲಿ  ನಾಲ್ಕು ವಿಕೆಟ್‌ಗೆ 157ರನ್‌ ಪೇರಿಸಿತು. ಸವಾಲಿನ ಗುರಿ ಬೆನ್ನಟ್ಟಿದ ನೈಟ್‌ ರೈಡರ್ಸ್‌  19 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು.

ಅಬ್ಬರದ ಆರಂಭ: ಸೂಪರ್‌ ಕಿಂಗ್ಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ  ಡ್ವೇನ್‌ ಸ್ಮಿತ್‌ (20; 13ಎ, 4ಬೌಂ) ಮತ್ತು ಬ್ರೆಂಡನ್‌ ಮೆಕ್ಲಮ್‌ (22; 19ಎ, 3ಬೌಂ) ಉತ್ತಮ ಆರಂಭ ಒದಗಿಸಿದರು.  ಈ ಜೋಡಿ 24 ಎಸೆತ ಗಳಲ್ಲಿ 37 ರನ್‌ ಗಳಿಸಿ  ಬೌಲರ್‌ಗಳ ಬೆವರಿಳಿಸಿತು. ಈ ಹಂತದಲ್ಲಿ ಪಿಯೂಷ್‌ ಚಾವ್ಲಾ ತಮ್ಮ ಸ್ಪಿನ್‌ ಮೋಡಿಯಿಂದ ಕೋಲ್ಕತ್ತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು
ಚಾವ್ಲಾ ಎಸೆದ  ಪಂದ್ಯದ ನಾಲ್ಕನೇ ಓವರ್‌ನ ಕೊನೆಯ ಎಸೆತ ಅಂದಾಜಿಸುವಲ್ಲಿ ವಿಫಲವಾದ  ಸ್ಮಿತ್‌ ವಿಕೆಟ್‌ ಕೀಪರ್‌ ಬಿಸ್ಲಾಗೆ ಕ್ಯಾಚಿತ್ತು ಪೆವಿಲಿಯನ್‌ ಕಡೆ ಹೆಜ್ಜೆಹಾಕಿದರು. ಇದರ ಬೆನ್ನಲ್ಲೇ ಯೂಸುಫ್‌ ಪಠಾಣ್‌, ಮೆಕ್ಲಮ್‌ ಅವರು ಎಲ್‌ಬಿ ಬಲೆಯಲ್ಲಿ ಬಂದಿಯಾದರು.

ಆ ಬಳಿಕ ರೈನಾ ಅಬ್ಬರಿಸಲು ಶುರುಮಾಡಿ ದರು. ಅವರು 24 ಎಸೆತಗಳಲ್ಲಿ ಮೂರು ಬೌಂಡರಿ ಒಳಗೊಂಡಂತೆ 28ರನ್‌ ಗಳಿಸಿದ್ದ ವೇಳೆ ದೊಡ್ಡ ಹೊಡೆತಕ್ಕೆ ಮುಂದಾಗಿ ಕೈ ಸುಟ್ಟು ಕೊಂಡರು. ಸುನಿಲ್‌ ನಾರಾಯಣ್‌ ಬೌಲಿಂಗ್‌ ಮೋಡಿಯಿಂದ ರೈನಾಗೆ ಪೆವಿಲಿಯನ್‌ ಹಾದಿ ತೋರಿಸಿದರು.

ದೋನಿ–ಬ್ರಾವೊ ಮಿಂಚು: ಆರಂಭದಲ್ಲಿ ತಾಳ್ಮೆಯ ಆಟ ತೋರಿದ ನಾಯಕ ದೋನಿ  ಬಳಿಕ ಆಕ್ರಮಣಕಾರಿ ಆಟಕ್ಕೆ ಮುಂದಾದರು. 20 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್‌ ಸಿಡಿಸಿದ್ದೆ ಇದಕ್ಕೆ ಸಾಕ್ಷಿ. ಉಮೇಶ್‌ ಯಾದವ್‌ ಎಸೆದ ಅಂತಿಮ ಓವರ್‌ನ ಕೊನೆಯ ಎಸೆತವನ್ನು ದೋನಿ ಸಿಕ್ಸರ್‌ಗಟ್ಟಿದ ರೀತಿಯಂತೂ ಮನಮೋಹಕವಾಗಿತ್ತು.

ನಾಯಕನಿಗೆ ತಕ್ಕ ಬೆಂಬಲ ನೀಡಿದ ಬ್ರಾವೊ (28; 28ಎ, 2ಬೌಂ, 2ಸಿ) ತಂಡದ ಮೊತ್ತ 150ರ ಗಡಿ ದಾಟಲು ನೆರವಾದರು. ನೈಟ್‌ ರೈಡರ್ಸ್‌ ತಂಡದ ಚಾವ್ಲಾ ನಾಲ್ಕು ಓವರ್‌ ಗಳಲ್ಲಿ 26ರನ್‌ ನೀಡಿ 2 ವಿಕೆಟ್‌ ಪಡೆದರು.

ಆರಂಭಿಕ ಆಘಾತ: ಸವಾಲಿನ ಗುರಿ ಬೆನ್ನಟ್ಟಿದ ನೈಟ್‌ ರೈಡರ್ಸ್‌ ತಂಡಕ್ಕೆ ಆರಂಭದಲ್ಲೇ ಸಂಕಷ್ಟ ಎದುರಾಯಿತು.
ತಂಡದ ಮೊತ್ತ 21ರನ್‌ ಆಗುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ ಪತನವಾದವು. ಇದಕ್ಕೆ ಕಾರಣವಾಗಿದ್ದು ಆಶಿಶ್‌ ನೆಹ್ರಾ ಅವರ ಶಿಸ್ತಿನ ದಾಳಿ.

ವೇಗಿ ನೆಹ್ರಾ ನೈಟ್ ರೈಡರ್ಸ್ ನಾಯಕ ಗೌತಮ್‌ ಗಂಭೀರ್‌ (9), ಮನ್ವಿಂದರ್‌ ಬಿಸ್ಲಾ (2) ಮತ್ತು ಮನೀಷ್‌ ಪಾಂಡೆ (0) ಅವರ ವಿಕೆಟ್‌ ಪಡೆದು ಸಂಭ್ರಮಿಸಿದರು.

ಸೊಬಗು: ಆ ಬಳಿಕ ಸೂಪರ್‌ ಕಿಂಗ್ಸ್‌ ಬೌಲರ್‌ ಗಳನ್ನು ದಿಟ್ಟತನದಿಂದ ಎದುರಿಸಿದ ರಸೆಲ್‌ ಮತ್ತು ಡಷೆಟ್‌ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು. ಇವರಿಬ್ಬರು 6ನೇ ವಿಕೆಟ್‌ಗೆ 80ರನ್‌   ಕಲೆ ಹಾಕಿ ಎದುರಾಳಿ ಬೌಲರ್‌ಗಳ ಚಳಿ ಬಿಡಿಸಿದರು. ಇದರಿಂದ ಪಂದ್ಯದ ಫಲಿತಾಂಶವೇ ಬದಲಾಗಿ ಹೋಯಿತು.

25 ಎಸೆತ ಎದುರಿಸಿದ ರಸೆಲ್‌ ನಾಲ್ಕು ಬೌಂಡರಿ ಹಾಗೂ 5 ಸಿಕ್ಸರ್‌ ಸಿಡಿಸಿ ನೆರೆದಿದ್ದ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ಡಷೆಟ್‌ 41 ಎಸೆತ ಎದುರಿಸಿ 3ಬೌಂಡರಿ ಹಾಗೂ 2 ಸಿಕ್ಸರ್‌ ಸಿಡಿಸಿದರು.

19ನೇ ಓವರ್‌ನ ಅಂತಿಮ ಎಸೆತದಲ್ಲಿ ಪಿಯೂಷ್‌ ಚಾವ್ಲಾ ಬೌಂಡರಿ ಬಾರಿಸುತ್ತಿದ್ದಂತೆ ನೈಟ್‌ ರೈಡರ್ಸ್‌ ಪಾಳಯದಲ್ಲಿ ಹರ್ಷದ ಹೊನಲು ಹರಿಯಿತು. ಆಟಗಾರರು ಪರಸ್ಪರ ಒಬ್ಬರನ್ನೊಬ್ಬರು ಅಪ್ಪಿಕೊಂಡು ಸಂಭ್ರಮಿಸಿದರು. ಗೆಲುವಿನ ಆಸೆ ಕಂಡಿದ್ದ ದೋನಿ ಬಳಗದ ಹುಡುಗರಲ್ಲಿ ನಿರಾಸೆ ಮೂಡಿತು.

ಸ್ಕೋರ್ ವಿವರ

ಚೆನ್ನೈ ಸೂಪರ್‌ ಕಿಂಗ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 157
ಡ್ವೇನ್‌ ಸ್ಮಿತ್‌ ಸಿ ಮನ್ವಿಂದರ್ ಬಿಸ್ಲಾ ಬಿ ಪಿಯೂಷ್‌ ಚಾವ್ಲಾ  20
ಬ್ರೆಂಡನ್‌ ಮೆಕ್ಲಮ್‌ ಎಲ್‌ಬಿಡಬ್ಲ್ಯು  ಬಿ ಯೂಸುಫ್‌ ಪಠಾಣ್‌  22
ಸುರೇಶ್‌ ರೈನಾ ಎಲ್‌ಬಿಡಬ್ಲ್ಯು ಬಿ ಸುನಿಲ್‌ ನಾರಾಯಣ್‌  28
ಫಾಫ್‌ ಡು ಪ್ಲೆಸಿಸ್‌ ಸ್ಟಂಪ್ಡ್‌ ಮನ್ವಿಂದರ್ ಬಿಸ್ಲಾ ಬಿ ಪಿಯೂಷ್‌ ಚಾವ್ಲಾ  14
ಮಹೇಂದ್ರ ಸಿಂಗ್‌ ದೋನಿ ಔಟಾಗದೆ  35
ಡ್ವೇನ್‌ ಬ್ರಾವೊ ಔಟಾಗದೆ 28
ಇತರೆ: (ಲೆಗ್‌ ಬೈ–2, ವೈಡ್‌–8)  10
ವಿಕೆಟ್‌ ಪತನ: 1–37 (ಸ್ಮಿತ್‌; 3.6), 2–49 (ಮೆಕ್ಲಮ್‌; 6.4), 3–84 (ರೈನಾ; 11.4), 4–86 (ಡು ಪ್ಲೆಸಿಸ್‌; 12.3)
ಬೌಲಿಂಗ್‌: ಪ್ಯಾಟ್‌ ಕಮಿನ್ಸ್‌ 4–0–49–0 (ವೈಡ್‌–2), ಉಮೇಶ್‌ ಯಾದವ್‌ 4–0–43–0, ಪೀಯೂಷ್‌ ಚಾವ್ಲಾ 4–0–26–2 (ವೈಡ್‌–1), ಸುನಿಲ್‌ ನಾರಾಯಣ್‌ 4–0–9–1 (ವೈಡ್‌–1), ಯೂಸುಫ್‌ ಪಠಾಣ್‌ 3–0–16–1, ಆ್ಯಂಡ್ರೆ ರಸೆಲ್‌ 1–0–12–0
ಕೋಲ್ಕತ್ತ ನೈಟ್‌ ರೈಡರ್ಸ್‌ 19  ಓವರ್‌ಗಳಲ್ಲಿ  7 ವಿಕೆಟ್‌ಗೆ 159
ಮನ್ವಿಂದರ್‌ ಬಿಸ್ಲಾ ಸಿ ರವಿಚಂದ್ರನ್‌ ಅಶ್ವಿನ್‌ ಬಿ ಆಶಿಶ್‌ ನೆಹ್ರಾ  02
ಗೌತಮ್‌  ಗಂಭೀರ್‌ ಸಿ ಡ್ವೇನ್‌ ಬ್ರಾವೊ ಬಿ ಆಶಿಶ್‌ ನೆಹ್ರಾ  06
ಮನೀಷ್‌ ಪಾಂಡೆ ಸಿ ಮೋಹಿತ್‌ ಶರ್ಮ ಬಿ ಆಶಿಶ್‌ ನೆಹ್ರಾ  00
ಯೂಸುಫ್‌ ಪಠಾಣ್‌ ಸಿ ಫಾಫ್‌ ಡು ಪ್ಲೆಸಿಸ್‌ ಬಿ ಮೋಹಿತ್‌ ಶರ್ಮ  01
ರ್‍ಯಾನ್‌ ಟೆನ್‌ ಡಷೆಟ್‌ ಔಟಾಗದೆ  51
ಸೂರ್ಯ ಕುಮಾರ್‌ ಯಾದವ್‌ ಸಿ ಅಶ್ವಿನ್‌ ಬಿ ರವೀಂದ್ರ ಜಡೇಜ  19
ಆ್ಯಂಡ್ರೆ ರಸೆಲ್‌ ಬಿ ಆಶಿಶ್‌ ನೆಹ್ರಾ  58
ಪ್ಯಾಟ್‌ ಕಮಿನ್ಸ್‌ ರನೌಟ್‌ (ರವೀಂದ್ರ ಜಡೇಜ/ದೋನಿ)  08
ಪಿಯೂಷ್‌ ಚಾವ್ಲಾ ಔಟಾಗದೆ  04
ಇತರೆ: (ಲೆಗ್‌ ಬೈ–1, ವೈಡ್‌–9)  10
ವಿಕೆಟ್‌ ಪತನ: 1–9 (ಗಂಭೀರ್‌;2.1), 2–9 (ಪಾಂಡೆ; 2.2), 3–10 (ಪಠಾಣ್‌; 3.1), 4–21 (ಬಿಸ್ಲಾ;4.4), 5–51 (ಸೂರ್ಯಕುಮಾರ್‌; 8.6), 6–131 (ರಸೆಲ್‌; 16.3), 7–155 (ಕಮಿನ್ಸ್‌; 18.5)
ಬೌಲಿಂಗ್‌: ಆಶಿಶ್‌ ನೆಹ್ರಾ 4–0–21–4 (ವೈಡ್‌–2), ಈಶ್ವರ್‌ ಪಾಂಡೆ 4–0–31–0 , ಮೋಹಿತ್‌ ಶರ್ಮ 3–0–31–1, ರವೀಂದ್ರ ಜಡೇಜ 2–0–25–1, ರವಿಚಂದ್ರನ್‌ ಅಶ್ವಿನ್‌ 3–0–29–0 (ವೈಡ್‌–1), ಡ್ವೇನ್‌ ಬ್ರಾವೊ 3–0–21–0 (ವೈಡ್‌–1)
ಫಲಿತಾಂಶ: ಕೋಲ್ಕತ್ತ ನೈಟ್‌ ರೈಡರ್ಸ್‌ಗೆ  3 ವಿಕೆಟ್‌ ಗೆಲುವು ಹಾಗೂ
ನಾಲ್ಕು ಪಾಯಿಂಟ್‌. ಪಂದ್ಯ ಶ್ರೇಷ್ಠ: ಆ್ಯಂಡ್ರೆ ರಸೆಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT