ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ ಯಶೋಗಾಥೆ...

Last Updated 10 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಅದು 2011ರ ಅಕ್ಟೋಬರ್‌ನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಪಂದ್ಯ. ಆರ್‌ಸಿಬಿ ಮತ್ತು ಸೌತ್‌ ಆಸ್ಟ್ರೇಲಿಯಾ ನಡುವಣ ಮಹತ್ವದ ಹಣಾಹಣಿ ಅದಾಗಿತ್ತು. ಸೌತ್‌ ಆಸ್ಟ್ರೇಲಿಯಾ ನೀಡಿದ್ದ 215 ರನ್‌ಗಳ ಗುರಿ ಮುಟ್ಟಲು ಆರ್‌ಸಿಬಿ ಸಾಕಷ್ಟು ಹೋರಾಟ ಮಾಡಿತ್ತು.

ಅಂತಿಮವಾಗಿ ಕೊನೆಯ ಎಸೆತದಲ್ಲಿ ಆರು ರನ್ ಗಳಿಸುವ ಸವಾಲು ಬೆಂಗಳೂರಿನ ತಂಡದ ಮುಂದಿತ್ತು. ಬಲಗೈ ವೇಗಿ ಡೇನಿಯಲ್‌ ಕ್ರಿಸ್ಟಿಯನ್ ಹಾಕಿದ ಬೌಲಿಂಗ್‌ನಲ್ಲಿ ಕೆ.ಬಿ. ಅರುಣ್‌ ಕಾರ್ತಿಕ್ ಸಿಕ್ಸರ್ ಸಿಡಿಸಿ ಆರ್‌ಸಿಬಿ ಜಯಕ್ಕೆ ಕಾರಣರಾಗಿದ್ದರು. ಅಂದು ಕ್ರೀಡಾಂಗಣದಲ್ಲಿದ್ದ ಸುಮಾರು 30 ಸಾವಿರ ಜನರು ಪುಳಕಗೊಂಡಿದ್ದರು.

ಇಂಥ ಹಲವಾರು ರೋಚಕ ಕ್ಷಣಗಳಿಗೆ ಟ್ವೆಂಟಿ–20 ಮಾದರಿಯ ಕ್ರಿಕೆಟ್‌ ಸಾಕ್ಷಿಯಾಗಿದೆ. ಅಷ್ಟೇ ಏಕೆ, ಕಳೆದ ವಾರ ಮುಗಿದ ವಿಶ್ವ ಚುಟುಕು ಟೂರ್ನಿಯಲ್ಲಿ  ಅಚ್ಚರಿಯ ಫಲಿತಾಂಶಗಳು ಹೊರಬಿದ್ದಿವೆ.  ಸೋತೆ ಹೋದೆವು ಎಂದುಕೊಂಡಿದ್ದ ತಂಡಕ್ಕೆ ಅನಿರೀಕ್ಷಿತ ಗೆಲುವು ಒಲಿದಿತ್ತು. ಜಯದ ಖುಷಿಯಲ್ಲಿದ್ದ ತಂಡಕ್ಕೆ ನಿರಾಸೆ ಕಾಡಿತ್ತು.

ವಿಶ್ವ ಟೂರ್ನಿಯ ಸೂಪರ್ 10 ಹಂತದ ಪಂದ್ಯದಲ್ಲಿ ಬಾಂಗ್ಲಾದೇಶದ ಎದುರು ಭಾರತ ತಂಡ ಒಂದು ರನ್‌ನಿಂದ ಜಯ ಪಡೆದಿದ್ದು, ಆಸ್ಟ್ರೇಲಿಯಾ ವಿರುದ್ಧ ಭಾರತ ಕೊನೆಯ ಓವರ್‌ನಲ್ಲಿ ಗೆಲುವು ಸಾಧಿಸಿದ್ದು,  ಫೈನಲ್‌ನಲ್ಲಿ ಇಂಗ್ಲೆಂಡ್‌ ಎದುರು ವೆಸ್ಟ್‌ ಇಂಡೀಸ್ ಕೊನೆಯ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದ್ದು ಇವೆಲ್ಲವೂ ಕ್ರಿಕೆಟ್‌ ಪ್ರೇಮಿಗಳ ನೆನಪಿನ ಅಂಗಳದಿಂದ ಯಾವತ್ತೂ ಮಾಸುವುದಿಲ್ಲ.

ಇಷ್ಟೊಂದು ರೋಚಕತೆ ಮತ್ತು ಕುತೂಹಲಗಳಿಂದ ಕೂಡಿರುವ ಕಾರಣದಿಂದಲೇ  ಐಪಿಎಲ್‌ ಆರಂಭವಾದ ಕೆಲವೇ ವರ್ಷಗಳಲ್ಲಿ ವಿಶ್ವ ವ್ಯಾಪಿ ಜನಮನ್ನಣೆ ಪಡೆದಿದೆ. ಬೇರೆ ಬೇರೆ ಕ್ರೀಡೆಗಳಲ್ಲಿ ಲೀಗ್ ಆರಂಭವಾಗಲು ಪ್ರೇರಣೆಯೂ ಆಗಿದೆ. ಹಿಂದಿನ ಎಂಟೂ ಆವೃತ್ತಿಗಳಲ್ಲಿ ಸ್ಮರಣೀಯ ನೆನಪುಗಳಿವೆ. ಅವುಗಳ ಮೆಲುಕು ಇಲ್ಲಿದೆ.

* 2008, ರಾಜಸ್ತಾನ ರಾಯಲ್ಸ್‌
ಚೊಚ್ಚಲ ಟೂರ್ನಿಯಾಗಿದ್ದ ಕಾರಣ ಯಾರಿಗೆ ಪ್ರಶಸ್ತಿ ಎನ್ನುವ ಕುತೂಹಲ ಸಹಜವಾಗಿ ಎಲ್ಲರಲ್ಲೂ ಮೂಡಿತ್ತು. ಹಣ, ಮನರಂಜನೆ, ಚಿಯರ್ಸ್‌ ಗರ್ಲ್ಸ್‌ ನೃತ್ಯ, ಕ್ರಿಕೆಟ್‌ ಕುತೂಹಲಗಳ ಮಿಶ್ರಣವಾಗಿದ್ದ ಟೂರ್ನಿ ಅಭಿಮಾನಿಗಳಲ್ಲಿ ಹೊಸ ಹುರುಪು ತುಂಬಿತ್ತು. ರಾಜಸ್ತಾನ ರಾಯಲ್ಸ್‌, ಕಿಂಗ್ಸ್‌ ಇಲೆವೆನ್‌ ಪಂಜಾಬ್‌, ಚೆನ್ನೈ  ಸೂಪರ್ ಕಿಂಗ್ಸ್‌, ಡೆಲ್ಲಿ ಡೇರ್‌ಡೆವಿಲ್ಸ್‌, ಮುಂಬೈ ಇಂಡಿಯನ್ಸ್‌, ಕೋಲ್ಕತ್ತ ನೈಟ್‌ ರೈಡರ್ಸ್‌, ಆರ್‌ಸಿಬಿ ಮತ್ತು ಡೆಕ್ಕನ್ ಚಾರ್ಜಸ್‌ ತಂಡಗಳ ನಡುವೆ ರೌಂಡ್‌ ರಾಬಿನ್ ಲೀಗ್ ಮಾದರಿಯಲ್ಲಿ ಟೂರ್ನಿ ನಡೆದಿತ್ತು.

ಲೀಗ್ ಕಮ್ ನಾಕೌಟ್‌ ಮಾದರಿಯಲ್ಲಿ ನಡೆದಿದ್ದ ಟೂರ್ನಿಯಲ್ಲಿ ಗುಂಪಿನಲ್ಲಿ ಮೊದಲ ನಾಲ್ಕು ಸ್ಥಾನ ಪಡೆದ ತಂಡಗಳು (ರಾಯಲ್ಸ್‌, ಪಂಜಾಬ್‌, ಸೂಪರ್‌ ಕಿಂಗ್ಸ್ ಮತ್ತು ಡೇರ್‌ಡೆವಿಲ್ಸ್‌)  ಸೆಮಿಫೈನಲ್ ತಲುಪಿದ್ದವು. ಮುಂಬೈನ ಡಿ.ವೈ. ಪಾಟೀಲ್ ಸ್ಪೋರ್ಟ್ಸ್‌ ಅಕಾಡೆಮಿಯಲ್ಲಿ ನಡೆದಿದ್ದ ಫೈನಲ್‌ನಲ್ಲಿ   ಶೇನ್‌ ವಾರ್ನ್‌ ನಾಯಕತ್ವದ ರಾಯಲ್ಸ್ ತಂಡ ಚೊಚ್ಚಲ ಟೂರ್ನಿಯ ಚಾಂಪಿಯನ್‌ ಆಗಿತ್ತು.

ಫೈನಲ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಸೂಪರ್‌ ಕಿಂಗ್ಸ್‌ 163 ರನ್ ಗಳಿಸಿತ್ತು. ಉತ್ತಮ ಹೋರಾಟ ತೋರಿದ್ದ ರಾಯಲ್ಸ್  ಕೊನೆಯ ಎಸೆತದಲ್ಲಿ  ಗೆಲುವು ಪಡೆದುಕೊಂಡಿತ್ತು. ರಾಯಲ್ಸ್ ಜಯಕ್ಕೆ ಕೊನೆಯ ಎಸೆತದಲ್ಲಿ ಒಂದು ರನ್ ಅಗತ್ಯವಿತ್ತು. ಲಕ್ಷ್ಮಿಪತಿ ಬಾಲಾಜಿ ಬೌಲಿಂಗ್‌ನಲ್ಲಿ ಸೊಹಾಲಿ ತನ್ವೀರ್‌ ವಿಜಯದ ರನ್ ಬಾರಿಸಿದ್ದರು. ರಾಯಲ್ಸ್ ತಂಡದ ಶೇನ್ ವ್ಯಾಟ್ಸನ್‌ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.

* 2009, ಡೆಕ್ಕನ್‌ ಚಾರ್ಜರ್ಸ್‌
ಐಪಿಎಲ್‌ನ ಎರಡನೇ ಆವೃತ್ತಿ ವೇಳಾಪಟ್ಟಿ ಪ್ರಕಟವಾಗುವ ವೇಳೆಗೆ  ಭಾರತದಲ್ಲಿ ಲೋಕಸಭಾ ಚುನಾವಣೆ ನಿಗದಿಯಾಗಿತ್ತು. ಈ ಟೂರ್ನಿ ನಡೆಯಲು ಕೆಲವೇ ತಿಂಗಳ ಹಿಂದೆ ಮುಂಬೈನಲ್ಲಿ ಭಯೋತ್ಪಾದಕರ ದಾಳಿ ನಡೆದಿತ್ತು. ಆದ್ದರಿಂದ ಮೊದಲ ಬಾರಿಗೆ   ಐಪಿಎಲ್‌ ಅನ್ನು ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು.

ಮೊದಲ ಆವೃತ್ತಿಯಲ್ಲಿ ಆಡಿದ್ದ ತಂಡಗಳು ಪಾಲ್ಗೊಂಡಿದ್ದವು. 2008ರಲ್ಲಿ ಚಾಂಪಿಯನ್‌ ಆಗಿದ್ದ ರಾಜಸ್ತಾನ ರಾಯಲ್ಸ್ ಮತ್ತು ಹರಿಣಗಳ ನಾಡಿನ ಸ್ಥಳೀಯ ತಂಡ ಕೇಪ್‌ ಕೋಬ್ರಾಸ್‌ ನಡುವೆ ಅಭ್ಯಾಸ ಪಂದ್ಯ ನಡೆದಿತ್ತು. ಇದು ಐಪಿಎಲ್‌ ಟೂರ್ನಿಯಲ್ಲಿ ಜರುಗಿದ ಮೊದಲ ಅಭ್ಯಾಸ ಪಂದ್ಯವಾಗಿದೆ.

ಅನಿಲ್‌ ಕುಂಬ್ಳೆ ನಾಯಕತ್ವದ ಆರ್‌ಸಿಬಿ ತಂಡ ಫೈನಲ್‌ನಲ್ಲಿ ಡೆಕ್ಕನ್‌ ಚಾರ್ಜರ್ಸ್‌ ವಿರುದ್ಧ ಆಡಿತ್ತು. ಡೆಕ್ಕನ್ ನೀಡಿದ್ದ 144 ರನ್‌ಗಳ ಸಾಧಾರಣ ಗುರಿಯನ್ನೇ ಮುಟ್ಟಲು ಸಾಧ್ಯವಾಗಿರಲಿಲ್ಲ. ಸೂಪರ್ ಕಿಂಗ್ಸ್‌ನಲ್ಲಿದ್ದ ಮ್ಯಾಥ್ಯೂ ಹೇಡನ್‌ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಡೆಕ್ಕನ್ ತಂಡದಲ್ಲಿದ್ದ ಆರ್‌.ಪಿ ಸಿಂಗ್ ಹೆಚ್ಚು ವಿಕೆಟ್‌ ಪಡೆದವರಲ್ಲಿ ಮೊದಲಿಗರಾಗಿದ್ದರು.

* 2010 ಚೆನ್ನೈ ಸೂಪರ್ ಕಿಂಗ್ಸ್‌
ಯಾವ ರಾಜ್ಯ ಐಪಿಎಲ್‌ ಫ್ರಾಂಚೈಸ್‌ ಹೊಂದಿದೆಯೊ ಆ ತಂಡಕ್ಕೆ ನಿರ್ದಿಷ್ಟ ಅಂಗಳದಲ್ಲಿ ಪಂದ್ಯಗಳನ್ನು ಆಡಿಸಲಾಗುತ್ತಿತ್ತು. ಆದರೆ ಮೂರನೇ ಆವೃತ್ತಿಯ ವೇಳೆ ಐದು ಹೊಸ ಕ್ರೀಡಾಂಗಣಗಳಲ್ಲಿ ಪಂದ್ಯ ನಡೆಸಲು ನಿರ್ಧರಿಸಲಾಯಿತು. ನಾಗಪುರ, ಕಟಕ್‌, ಅಹಮದಾಬಾದ್‌, ಧರ್ಮಶಾಲಾ ಮತ್ತು  ಮುಂಬೈ (ವಾಂಖೆಡೆ ಕ್ರೀಡಾಂಗಣ) ಪಂದ್ಯಗಳು ನಡೆದವು.

ರಾಯಲ್ಸ್ ಮತ್ತು ಪಂಜಾಬ್ ತಂಡಗಳ ಕೆಲ ಪಂದ್ಯಗಳು ಅಹಮದಾಬಾದ್‌ ಹಾಗೂ ಧರ್ಮಶಾಲಾದಲ್ಲಿ ಆಯೋಜನೆಯಾಗಿದ್ದವು. ಈ ಟೂರ್ನಿ ಕೆಲ ವಿವಾದಗಳಿಗೂ ಕಾರಣವಾಯಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆದ ವೇಳೆ ಬಾಂಬ್‌ ಸ್ಪೋಟಗೊಂಡಿದ್ದು ಅಭಿಮಾನಿಗಳು ಹಾಗೂ ಕ್ರಿಕೆಟಿಗರಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿತ್ತು.

ಆದ್ದರಿಂದ ಉದ್ಯಾನನಗರಿಯಲ್ಲಿ ನಡೆಯಬೇಕಿದ್ದ ಸೆಮಿಫೈನಲ್‌ ಪಂದ್ಯವನ್ನು ಸ್ಥಳಾಂತರ ಮಾಡಲಾಗಿತ್ತು.  ಮೊದಲ ಎರಡು ವರ್ಷಗಳ ಅವಧಿಯ ಆಟಗಾರರ ಜೊತೆಗಿನ ಒಪ್ಪಂದ ಮುಗಿದಿದ್ದ ಕಾರಣ ಹೊಸದಾಗಿ ಹರಾಜು ನಡೆಯಿತು.  ಮುಂಬೈನಲ್ಲಿ ನಡೆದ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಎದುರು ಚೆನ್ನೈ ಸೂಪರ್ ಕಿಂಗ್ಸ್‌ 22 ರನ್‌ಗಳ ಗೆಲುವು ಪಡೆದು ಚೊಚ್ಚಲ ಟ್ರೋಫಿ ಎತ್ತಿ ಹಿಡಿದಿತ್ತು.

* 2011, ಚೆನ್ನೈ ಸೂಪರ್‌ ಕಿಂಗ್ಸ್‌
ನಾಲ್ಕನೇ ಆವೃತ್ತಿಯ ಫೈನಲ್‌ನಲ್ಲಿ ಆರ್‌ಸಿಬಿ ತಂಡವನ್ನು 58 ರನ್‌ಗಳಿಂದ ಮಣಿಸಿದ ಸೂಪರ್ ಕಿಂಗ್ಸ್ ಎರಡು ಸಲ ಪ್ರಶಸ್ತಿ ಗೆದ್ದ ಏಕೈಕ ತಂಡ ಎನ್ನುವ ಕೀರ್ತಿಯನ್ನು ತನ್ನದಾಗಿಸಿಕೊಂಡಿತು.

ಮೊದಲ ಮೂರು ಆವೃತ್ತಿಗಳಲ್ಲಿ ಟೂರ್ನಿಯು ಡಬಲ್‌ ರೌಂಡ್‌ ರಾಬಿನ್ ಲೀಗ್ ಮಾದರಿಯಲ್ಲಿ ನಡೆದಿತ್ತು. 2011ರಿಂದ ಗುಂಪು ಹಂತ ಮತ್ತು ಪ್ಲೇ ಆಫ್‌ ಮಾದರಿಯಲ್ಲಿ ಟೂರ್ನಿ ನಡೆಸಲಾಯಿತು. ಆರಂಭದ ಮೂರು ಆವೃತ್ತಿಗಳಲ್ಲಿ ಎಂಟು ತಂಡಗಳ ನಡುವೆ ಪೈಪೋಟಿ ನಡೆದಿತ್ತು. ನಾಲ್ಕನೇ ಆವೃತ್ತಿಯಿಂದ ಎರಡು (ಪುಣೆ ವಾರಿಯರ್ಸ್‌ ಮತ್ತು ಕೊಚ್ಚಿ ಟಸ್ಕರ್ಸ್ ಕೇರಳ) ಹೊಸ ತಂಡಗಳಿಗೆ ಅವಕಾಶ ಕೊಡಲಾಯಿತು.

* 2012 ಕೋಲ್ಕತ್ತ ನೈಟ್ ರೈಡರ್ಸ್‌
ಐಪಿಎಲ್‌ನಲ್ಲಿ ಮೊದಲ ನಾಲ್ಕು ಸ್ಥಾನ ಪಡೆದ ತಂಡಗಳಿಗೆ ಚಾಂಪಿಯನ್ಸ್‌ ಲೀಗ್ ಟೂರ್ನಿಯಲ್ಲಿ ನೇರವಾಗಿ ಆಡುವ ಅರ್ಹತೆ ಲಭಿಸಿದ್ದು 2012ರ ಐಪಿಎಲ್‌ನಿಂದ. ಆರಂಭದಲ್ಲಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನ ಗಳಿಸಿದ ತಂಡಗಳಿಗೆ ಚಾಂಪಿಯನ್ಸ್‌ ಲೀಗ್‌ಗೆ ಅವಕಾಶ ಲಭಿಸುತ್ತಿತ್ತು. ಇದರಿಂದ ಐಪಿಎಲ್‌ನ ಬೇಡಿಕೆಯೂ ಹೆಚ್ಚುತ್ತಾ ಹೋಯಿತು.  ಪ್ರತಿ ಕ್ರಿಕೆಟಿಗನಿಗೆ ಕೋಟಿ ಕೋಟಿ ಹಣ ಹರಿದು ಬರಲಾರಂಭಿಸಿತು.

2011ರಲ್ಲಿ  ಆಡಿದ್ದ ಕೊಚ್ಚಿ ತಂಡವನ್ನು ಐಪಿಎಲ್ ಆಡಳಿತ ಮಂಡಳಿ ಅಮಾನತು ಮಾಡಿತ್ತು. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೊಚ್ಚಿ ಫ್ರಾಂಚೈಸ್‌ ಮತ್ತು ಐಪಿಎಲ್‌ ಮಂಡಳಿ ನಡುವೆ ಏರ್ಪಟ್ಟಿದ್ದ ಸಂಘರ್ಷದ ಪರಿಣಾಮವಾಗಿ ಐದನೇ ಆವೃತ್ತಿಯಲ್ಲಿ ಒಂಬತ್ತು ತಂಡಗಳಷ್ಟೇ ಆಡಬೇಕಾಯಿತು. ಹಿಂದಿನ ವರ್ಷದ ಚಾಂಪಿಯನ್‌ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ನೈಟ್ ರೈಡರ್ಸ್ ಮೊದಲ ಸಲ ಪ್ರಶಸ್ತಿ ಜಯಿಸಿತ್ತು.

* 2013 ಮುಂಬೈ ಇಂಡಿಯನ್ಸ್‌
ಐಪಿಎಲ್‌ ಆಡಳಿತ ಮಂಡಳಿ ಮತ್ತು ಡೆಕ್ಕನ್ ಚಾರ್ಜರ್ಸ್ ತಂಡದ ನಡುವೆ ಹಣಕಾಸಿನ ವ್ಯವಹಾರದಲ್ಲಿ ಒಮ್ಮತ ಮೂಡಿಬರದ ಕಾರಣ ಡೆಕ್ಕನ್ ತಂಡವನ್ನು ಅಮಾನತು ಮಾಡಲಾಗಿತ್ತು.  ಆದ್ದರಿಂದ ಬದಲಿ ತಂಡವನ್ನು ಟೂರ್ನಿಯಲ್ಲಿ ಸೇರ್ಪಡೆ ಮಾಡಲು ಹೊಸ ಬಿಡ್ಡಿಂಗ್ ನಡೆಯಿತು. ಹೈದರಾಬಾದ್ ಮೂಲದ ಸನ್‌ ಟವಿ ನೆಟ್‌ವರ್ಕ್‌ ಬಿಡ್‌ ಜಯಿಸಿ ಸನ್‌ರೈಸರ್ಸ್ ಹೈದರಾಬಾದ್ ತಂಡವೆಂದು ನಾಮಕರಣ ಮಾಡಿತು.

ಈ ವೇಳೆಗಾಗಲೇ ಐಪಿಎಲ್ ಸಾಕಷ್ಟು ಹೆಸರು ಮಾಡಿತ್ತು. ದೇಶಿ ಟೂರ್ನಿಗಳಲ್ಲಿ ಕೊಂಚ ಮಿಂಚಿದವರೂ ಕೋಟಿ, ಕೋಟಿ ಹಣ ಮಾಡಿಕೊಂಡಿದ್ದರು. ಅವ್ಯವಹಾರ ಆರಂಭವಾಗಿತ್ತು. ಕ್ರಿಕೆಟ್‌ ಲೋಕದಲ್ಲಿ ಕಾಡುತ್ತಿರುವ ಸ್ಪಾಟ್‌ ಫಿಕ್ಸಿಂಗ್ ಐಪಿಎಲ್‌ಗೂ ಲಗ್ಗೆ ಇಟ್ಟಿತು. ಸಾಕಷ್ಟು ವಿಚಾರಣೆ, ಸುಪ್ರೀಂ ಕೋರ್ಟ್ ಚಾಟಿ, ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ತಲೆದಂಡ ಹೀಗೆ ಹಲವಾರು ಬೆಳವಣಿಗೆಗಳು ನಡೆದವು.

ಆಗ ಪ್ರತಿ ಐಪಿಎಲ್‌ ಪಂದ್ಯವನ್ನೂ ಅನುಮಾನದಿಂದ ನೋಡುವಂತೆ ಈ ಟೂರ್ನಿ ಮಾಡಿತು. ಇವುಗಳೆಲ್ಲದರ ನಡುವೆಯೂ ಮುಂಬೈ ಇಂಡಿಯನ್ಸ್ ತಂಡ ಸೂಪರ್ ಕಿಂಗ್ಸ್ ವಿರುದ್ಧ 23 ರನ್‌ಗಳ ಜಯ ಸಾಧಿಸಿ ಚೊಚ್ಚಲ ಟ್ರೋಫಿ ಗೆದ್ದಿತ್ತು. ಜತೆಗೆ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್‌ ಅವರಿಗೆ  ವಿಜಯದ ವಿದಾಯವನ್ನೂ ನೀಡಿತ್ತು.

* 2014 ಕೋಲ್ಕತ್ತ ನೈಟ್‌ ರೈಡರ್ಸ್‌
ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಕಳಂಕದ ನಡುವೆ ಐಪಿಎಲ್ ಆಡಳಿತ ಮಂಡಳಿಗೆ ಏಳನೇ ಆವೃತ್ತಿಯಲ್ಲಿ ಮತ್ತೊಂದು ಆಘಾತ ಕಾಡಿತ್ತು. ಮಂಡಳಿಯ ಜೊತೆಗಿನ ಒಪ್ಪಂದವನ್ನು ರದ್ದು ಮಾಡಿಕೊಂಡ ಪುಣೆ ವಾರಿಯರ್ಸ್ ಟೂರ್ನಿಯಿಂದ ಹೊರಗುಳಿಯಿತು. ಆದ್ದರಿಂದ ಐಪಿಎಲ್‌ನಲ್ಲಿ ಎಂಟು ತಂಡಗಳಷ್ಟೇ ಸಾಕು ಎಂದು ನಿರ್ಧರಿಸಲಾಯಿತು.

ಈ ಟೂರ್ನಿಯ ವೇಳೆ ಲೋಕಸಭಾ ಚುನಾವಣೆ ಇದ್ದ ಕಾರಣ ಮೊದಲ ಹಂತದ ಪಂದ್ಯಗಳನ್ನು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ಆಯೋಜಿಸಲಾಯಿತು. ಚುನಾವಣೆ ಮುಗಿದ ಬಳಿಕ ಎರಡನೇ ಹಂತದ ಪಂದ್ಯಗಳು ಭಾರತದಲ್ಲಿ ನಡೆದವು. ಈ ಎಲ್ಲಕ್ಕಿಂತ ಹೆಚ್ಚಾಗಿ  ಮುಂಬೈ ಇಂಡಿಯನ್ಸ್ ತಂಡದ ‘ಫಿನಿಕ್ಸ್‌’ ಹೋರಾಟ ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆಗೆ ಕಾರಣವಾಗಿತ್ತು.

ಏಕೆಂದರೆ, ಮುಂಬೈ ತಂಡ ಲೀಗ್ ಹಂತದಲ್ಲಿ ಮೊದಲ ಐದೂ ಪಂದ್ಯಗಳಲ್ಲಿ ಸೋತಿದ್ದರಿಂದ ನಾಕೌಟ್ ಪ್ರವೇಶಿಸುವುದೇ ಅನುಮಾನವಿತ್ತು. ಲೀಗ್‌ನಲ್ಲಿ ಒಟ್ಟು 14 ಪಂದ್ಯಗಳಲ್ಲಿ ಏಳರಲ್ಲಿ ಮುಂಬೈ ಸೋತಿತ್ತು. ಆದರೆ, ಕೊನೆಯ ಹಂತದಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿ ಗೆಲುವು ಪಡೆದು ಸೆಮಿಫೈನಲ್‌ಗೆ ಬಂದಿತ್ತು. ಫೈನಲ್‌ ಹೋರಾಟದಲ್ಲಿ ಕಿಂಗ್ಸ್ ಇಲೆವೆನ್‌ ಪಂಜಾಬ್ ಎದುರು ಜಯ ಪಡೆದ ನೈಟ್‌ ರೈಡರ್ಸ್ ಚಾಂಪಿಯನ್ ಆಗಿತ್ತು.

* 2015 ಮುಂಬೈ ಇಂಡಿಯನ್ಸ್
2013ರ ಐಪಿಎಲ್‌ ಟೂರ್ನಿಯಲ್ಲಿ ಆದ ಸ್ಪಾಟ್‌ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದ ಪರಿಣಾಮ ಎಂಟನೇ ಆವೃತ್ತಿಯ ಮೇಲಾಯಿತು.   ಭ್ರಷ್ಟಾಚಾರ ತಡೆಘಟಕ ಅತ್ಯಂತ ಕಟ್ಟುನಿಟ್ಟಾಗಿ ಕ್ರಮ ಕೈಗೊಂಡಿತು.

ಹಿಂದಿನ ಆವೃತ್ತಿಯಂತೆ ಅಪೂರ್ವ ಹೋರಾಟ ತೋರಿದ್ದ ಮುಂಬೈ ಇಂಡಿಯನ್ಸ್ ಪ್ರಶಸ್ತಿ ಜಯಿಸಿತ್ತು. ಈ ಮೂಲಕ ಟೂರ್ನಿಯಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದ ಮೂರನೇ ತಂಡ ಎನಿಸಿತು. ನೈಟ್ ರೈಡರ್ಸ್ ಮತ್ತು ಸೂಪರ್ ಕಿಂಗ್ಸ್ ಹಿಂದೆ ಈ ಸಾಧನೆ ಮಾಡಿತ್ತು.

ಎಂಟನೇ ಆವೃತ್ತಿ ಮುಗಿದ ಕೆಲವೇ ದಿನಗಳಲ್ಲಿ ಸೂಪರ್‌ ಕಿಂಗ್ಸ್‌ ಮತ್ತು ರಾಯಲ್ಸ್ ತಂಡಗಳ ಕೆಲ ‘ಅಧಿಕಾರಿಗಳು’ ಮಾಡಿದ ಫಿಕ್ಸಿಂಗ್‌ ಬಯಲಿಗೆ ಬಂದಿತು. ಆದ್ದರಿಂದ ಈ  ತಂಡಗಳು ಎರಡು ವರ್ಷ ಐಪಿಎಲ್‌ನಿಂದ ದೂರ ಉಳಿಯಬೇಕಾಯಿತು. ಈ ಕಾರಣದಿಂದ 2016ರ ಆವೃತ್ತಿಯಲ್ಲಿ ಎರಡು ಹೊಸ ತಂಡಗಳಿಗೆ ಅವಕಾಶ ಕೊಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT