ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ಒಂಬತ್ತರ ‘ಮಹಿ’ಮೆ

Last Updated 20 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಮುಂದಿನ ವರ್ಷ ನಡೆಯಲಿರುವ ಐಪಿಎಲ್ – 9 ಪುಣೆ ಮತ್ತು ರಾಜಕೋಟ್ ತಂಡಗಳ ಹೊಸತನದೊಂದಿಗೆ ಗಮನ ಸೆಳೆಯಲಿದೆ. ಭಾರತ ಕ್ರಿಕೆಟ್ ರಂಗದ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹೇಂದ್ರಸಿಂಗ್ ದೋನಿಗೆ ಹೊಸ ವರ್ಚಸ್ಸು ಕಟ್ಟಿಕೊಡಲಿದೆಯೇ ಎಂದು ಕಾದು ನೋಡಬೇಕು. ಈ ಬಗ್ಗೆ ಗಿರೀಶ ದೊಡ್ಡಮನಿ ಬೆಳಕು ಚೆಲ್ಲಿದ್ದಾರೆ.

ಮಹೇಂದ್ರಸಿಂಗ್ ದೋನಿ ಸಿ ಸುರೇಶ್ ರೈನಾ ಬಿ ರವೀಂದ್ರ ಜಡೇಜ ಅಥವಾ ಸುರೇಶ್ ರೈನಾ ಸಿ ಮಹೇಂದ್ರಸಿಂಗ್ ದೋನಿ ಬಿ ರವಿ ಚಂದ್ರನ್ ಅಶ್ವಿನ್... ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಒಂಬತ್ತನೇ ಟೂರ್ನಿಯಲ್ಲಿ ಪುಣೆ ಮತ್ತು ರಾಜಕೋಟ್ ವಿರುದ್ಧದ ಪಂದ್ಯದ ಸ್ಕೋರ್‌ ಕಾರ್ಡ್‌ನಲ್ಲಿ ಈ ಸಾಲುಗಳು ಮೂಡುವ ಎಲ್ಲ ಸಾಧ್ಯತೆಯೂ ಇದೆ. 

ಆಡುವ ಆಟಗಾರರಿಗೆ ಮತ್ತು ಆಡಿಸುವ ಫ್ರಾಂಚೈಸ್ ಮಾಲೀಕರಿಗೆ ಧನಲಾಭವನ್ನೇ ಹರಿಸುವ ಐಪಿಎಲ್‌ ಟೂರ್ನಿಯಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಇದೂ ಒಂದು ನಿದರ್ಶನ. ಏಕೆಂದರೆ, ಕಳೆದ ಎಂಟು ಟೂರ್ನಿಗಳಲ್ಲಿ ಮಹೇಂದ್ರಸಿಂಗ್ ದೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ತಂಡದಲ್ಲಿ ಇವರೆಲ್ಲರೂ ಸೇರಿ ಆಡಿದವರು. ಇಂಡಿಯಾ ಸಿಮೆಂಟ್ಸ್ ಮಾಲೀಕ ತ್ವದ ತಂಡವು ಎರಡು ಬಾರಿ ಚಾಂಪಿಯನ್ ಆಗಲು ಪ್ರಮುಖ ಕಾರಣರಾದವರು.

ಆದರೆ, ಈಗ ಸ್ಥಿತಿ ತಿರುವುಮುರುವಾಗಿದೆ. 2013ರ ಸ್ಪಾಟ್ ಫಿಕ್ಸಿಂಗ್ ಹಗರಣದ ಕಳಂಕಕ್ಕೆ ಸಿಲುಕಿದ ಸಿಎಸ್‌ಕೆ ಅಮಾನತಿಗೆ ಒಳಗಾಯಿತು. ಅದರೊಂದಿಗೆ ರಾಜಸ್ತಾನ ರಾಯಲ್ಸ್ ಕೂಡ ಅಮಾನತು ಶಿಕ್ಷೆ ಅನುಭವಿಸುತ್ತಿದೆ. ಇದರಿಂದಾಗಿ ಎರಡು ಹೊಸ ತಂಡಗಳಾದ ಪುಣೆ ಮತ್ತು ರಾಜಕೋಟ್‌ಗಳಿಗೆ ಅವಕಾಶ ಲಭಿಸಿದೆ. ದೋನಿ ಪುಣೆ ಮತ್ತು ರೈನಾ ರಾಜ್‌ಕೋಟ್‌ಗ ತಂಡಗಳ (ತಲಾ ₹12.5 ಕೋಟಿ) ಪಾಲಾಗಿದ್ದಾರೆ.

ಕಳೆದ ಎಂಟು ಟೂರ್ನಿಗಳಲ್ಲಿ ತಮ್ಮ ನೆಚ್ಚಿನ ನಾಯಕ ‘ಮಹಿ’ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟವರು ಸುರೇಶ್ ರೈನಾ ಮತ್ತು ಜಡೇಜ. ಆದರೆ, ಅವರೇ ಈಗ ದೋನಿ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಪಂದ್ಯಗಳ ‘ಬೆಸ್ಟ್ ಫಿನಿಷರ್’ ಎಂದೇ ಖ್ಯಾತರಾಗಿರುವ ದೋನಿ ಮತ್ತು ರೈನಾ ಅವರ ಜೋಡಿಗಾನಕ್ಕೆ ತೆರೆ ಬಿದ್ದಿದೆ. 

ದೋನಿ ಮಂಕಾದರೆ?
2014ರಲ್ಲಿ ಮಹೇಂದ್ರಸಿಂಗ್ ದೋನಿ ಟೆಸ್ಟ್ ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ ನಂತರ ಅವರ ವರ್ಚಸ್ಸು ಕುಂದಿದೆಯೇ? ಎಂಬ ಪ್ರಶ್ನೆ ಮತ್ತೊಮ್ಮೆ ಸುಳಿದಾಡಲು ಪುಣೆ ತಂಡದ ಬಿಡ್ಡಿಂಗ್ ಕಾರಣವಾಯಿತು. ಏಕೆಂದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ‘ಐಕಾನ್’ ಆಟಗಾರರಾಗಿದ್ದ ದೋನಿ ಅವರನ್ನು ಪುಣೆಯಲ್ಲಿ ಬಿಡ್ಡಿಂಗ್ ಮೂಲಕ ಖರೀದಿಸಿದ್ದು ಈ ಸಂಶಯಕ್ಕೆ ಇಂಬು ನೀಡಿದೆ.

ಮೊದಲ ಆವಋತ್ತಿಯಲ್ಲಿ ಕಣಕ್ಕಿಳಿದಿದ್ದ ಎಲ್ಲ ತಂಡಗಳು ಒಬ್ಬೊಬ್ಬ ತಾರಾ ಆಟಗಾರನನ್ನು ಐಕಾನ್ ಆಟಗಾರನನ್ನಾಗಿ ನೇಮಕ ಮಾಡಿಕೊಂಡಿದ್ದವು. ಅವರಿಗೆ ಗೌರವ ಮೊತ್ತವನ್ನು ನಿಗದಿಪಡಿಸಲಾಗಿತ್ತು. ಆದರೆ, ಅವರನ್ನು ಬಿಡ್ಡಿಂಗ್‌ನಲ್ಲಿ ಕೂಗುವಂತಿರಲಿಲ್ಲ. 2007ರ ಟ್ವೆಂಟಿ–20 ವಿಶ್ವಕಪ್ ಜಯಿಸಿದ ದೋನಿ ಕೂಡ ಉತ್ತುಂಗ ಸ್ಥಾನದಲ್ಲಿದ್ದರು. ಅವರನ್ನು ಸಿಎಸ್‌ಕೆ ನಾಯಕನಾಗಿ ಮತ್ತು ಐಕಾನ್ ಆಟಗಾರನನ್ನಾಗಿ ನೇಮಿಸಿತ್ತು.  ಆದರೆ, ಈ ಬಾರಿ ಐಪಿಎಲ್ ಆಡಳಿತವು ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ಪುಣೆ ಮತ್ತು ರಾಜಕೋಟ್ ತಂಡಗಳ ಮಾಲೀಕರು ಮಾತ್ರ ಜಿದ್ದಿಗೆ ಬಿದ್ದು ದೋನಿಯ ಮೇಲೆ ಪಣ ಕಟ್ಟಿದರು.

ಕಡೆಗೆ ಪುಣೆ ಮೇಲುಗೈ ಸಾಧಿಸಿತು. ಆದರೆ, ತಂಡದ ನಾಯಕನಾಗಿ ದೋನಿ ಕಾರ್ಯನಿರ್ವಹಿಸುವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆಸ್ಟ್ರೇಲಿಯಾ ತಂಡದ ನಾಯಕರಾಗಿರುವ ಸ್ಟೀವನ್ ಸ್ಮಿತ್ ಕೂಡ ನಾಯಕ ಸ್ಥಾನದ ರೇಸ್‌ನಲ್ಲಿದ್ದಾರೆ. ಸದ್ಯ  ವಿಶ್ವದ ಅಗ್ರಮಾನ್ಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸ್ಮಿತ್ ಎರಡನೇ ಸ್ಥಾನದಲ್ಲಿದ್ದಾರೆ. ಕಳೆದ ಐಪಿಎಲ್‌ನಲ್ಲಿ ರಾಜಸ್ತಾನ ತಂಡದ ನಾಯಕರಾಗಿದ್ದರು.

ಆದರೆ, ಅನುಭವ ಮತ್ತು ನಾಯಕತ್ವದ ಗುಣಗಳ ಕಣಜವಾಗಿ ರುವ ದೋನಿಯತ್ತಲೇ ಮಾಲೀಕರ ಒಲವು ಹರಿಯುವ ನಿರೀಕ್ಷೆ ಇದೆ. ಆದರೆ, ಈ ಬಾರಿಯ ಟೂರ್ನಿ ದೋನಿಗೆ ಸುಲಭವೇನಲ್ಲ. ರೈನಾ ಮತ್ತು ಜಡೇಜ ಸಾಥ್ ಅವರಿಗೆ ಇಲ್ಲ. ಅಶ್ವಿನ್ ಮಾತ್ರ ಅವರೊಂದಿಗೆ ಸಿಎಸ್‌ಕೆಯಿಂದ ಪುಣೆಗೆ ನಡೆದು ಬಂದಿದ್ದಾರೆ. ರಾಜಸ್ತಾನ ತಂಡದಲ್ಲಿದ್ದ ಅಜಿಂಕ್ಯ ರಹಾನೆ, ದಕ್ಷಿಣ ಆಫ್ರಿಕಾದ ಪ್ರತಿಭಾವಂತ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿ ಅವರನ್ನು ಬಳಸಿಕೊಳ್ಳುವ ಅವಕಾಶ ದೋನಿಗೆ ಇದೆ.

ಇತ್ತ ಈಗಾಗಲೇ ರಾಜ್‌ಕೋಟ್‌ನ ನಾಯಕನಾಗಿ ರೈನಾಗೆ ಅವಕಾಶ ಸಿಗುವ ಎಲ್ಲ ಸಾಧ್ಯತೆಗಳೂ ಇವೆ.  ಬ್ರೆಂಡನ್ ಮೆಕ್ಲಮ್ ಕೂಡ ನಾಯಕರಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಸಿಎಸ್‌ಕೆಯ ಇನ್ನೊಬ್ಬ ಉತ್ತಮ ಆಲ್‌ರೌಂಡರ್ ಡ್ವೇನ್ ಬ್ರಾವೊ, ರವೀಂದ್ರ ಜಡೇಜ ರಾಜ್‌ಕೋಟ್ ತಂಡದ ಪ್ರಮುಖ ಶಕ್ತಿ. ಈ ಎರಡೂ ತಂಡಗಳಿಗೆ ಇನ್ನೂ ಐದು ಆಟಗಾರರ ಬಿಡ್ಡಿಂಗ್ ನಡೆಯಬೇಕಿದೆ.  ಆಗ ಈ ಎರಡೂ ತಂಡಗಳ ಇನ್ನುಳಿದ ಆಟಗಾರರಲ್ಲಿ ಯಾರು ಎಲ್ಲ ಅವಕಾಶ ಪಡೆಯುತ್ತಾರೆ ಎನ್ನುವುದು ನಿಚ್ಚಳವಾಗಲಿದೆ.

ಗಟ್ಟಿ ಛಾಪು
ರಿಕಿ ಪಾಂಟಿಂಗ್, ಸಚಿನ್ ತೆಂಡೂಲ್ಕರ್, ಜಾಕಸ್ ಕಾಲಿಸ್ ಸೇರಿದಂತೆ ಹಲವು ಆಟಗಾರರು ವಿವಿಧ ತಂಡಗಳಿಗೆ ಐಕಾನ್ ಆಟಗಾರರಾಗಿದ್ದವರು. ಆದರೆ, ಅವರೆಲ್ಲ ಈಗ ತಮ್ಮ ತಂಡಗಳಿಂದ ನಿರ್ಗಮಿಸಿದ್ದಾರೆ. ಐಪಿಎಲ್‌ನ ಕಳೆದ ಎಂಟು ವರ್ಷಗಳ ಇತಿಹಾಸದಲ್ಲಿ ಹಲವು ಬದಲಾವಣೆಗಳು ಆಗಿವೆ. ಆದರೆ, ಸಿಎಸ್‌ಕೆಯಲ್ಲಿ ದೋನಿಯ ಗಟ್ಟಿ ಹೆಜ್ಜೆಗುರುತು ಯಾವಾಗಲೂ ಮಾಸಿರಲಿಲ್ಲ. ಮಾಲೀಕರಾದ ಎನ್. ಶ್ರೀನಿವಾಸನ್ ಅವರಿಗೆ ಆಪ್ತರಾಗಿದ್ದ ದೋನಿ ಕೂಡ ತಂಡದ ಉತ್ತಮ ಪ್ರದರ್ಶನವನ್ನು ನಿರಂತರವಾಗಿ ಕಾಯ್ದುಕೊಂಡಿದ್ದರು. 2010 ಮತ್ತು 2011 ರಲ್ಲಿ ತಂಡವು ಎರಡು ಬಾರಿ ಟ್ರೋಫಿ ಗೆದ್ದಿತ್ತು. ನಾಲ್ಕು ಬಾರಿ ರನ್ನರ್ಸ್ ಅಪ್ ಅಗಿತ್ತು. 

2012ರಲ್ಲಿ ಬಿಸಿಸಿಐ ಕೊಚ್ಚಿ ಟಸ್ಕರ್ಸ್, ಪುಣೆ ವಾರಿಯರ್ಸ್, ಡೆಕ್ಕನ್ ಚಾರ್ಜರ್ಸ್ ತಂಡಗಳನ್ನು ರದ್ದುಗೊಳಿಸಿತ್ತು. ಹೈದರಾಬಾದ್ ಸನ್‌ರೈಸರ್ಸ್ ಹೊಸದಾಗಿ ಸೇರ್ಪಡೆಯಾಗಿತ್ತು. ಪ್ರತಿಬಾರಿ ಬಿಡ್ಡಿಂಗ್ ನಡೆದಾಗಲೂ ಸಿಎಸ್‌ಕೆ ದೋನಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಅವರ ಮುಂದೆ ಸವಾಲು ನಿಂತಿದೆ. ಸ್ಪಾಟ್ ಫಿಕ್ಸಿಂಗ್ ಕಳಂಕಕ್ಕೆ ಸಿಲುಕಿರುವ ತಂಡದ ಹಣೆಪಟ್ಟಿ ಕಳಚಿಟ್ಟು, ಹೊಸ ವರ್ಚಸ್ಸು ಬೆಳೆಸಿಕೊಳ್ಳುವ ಸವಾಲೂ ಅವರ ಮುಂದೆ ಇದೆ. ಏಕೆಂದರೆ, ಶ್ರೀನಿವಾಸನ್ ಆಪ್ತವಲಯದಲ್ಲಿರುವ ದೋನಿ ಏಕದಿನ ಕ್ರಿಕೆಟ್ ನಾಯಕರಾಗಿ ಹೆಚ್ಚು ದಿನ ಮುಂದುವರಿಯುವುದಿಲ್ಲ ಎಂಬ ಮಾತುಗಳು ಬಿಸಿಸಿಐ ಅಂಗಳದಲ್ಲಿ ಕೇಳಿಬರುತ್ತಿವೆ.

ತಮ್ಮ ವೃತ್ತಿಜೀವನದ ಸಂಧ್ಯಾಕಾಲದಲ್ಲಿರುವ 35ರ ಹರೆಯದ ಮಹಿಗೆ ಹಳೆಯ ಪೋಷಾಕು ಕಳಚಿ, ಹೊಸ ಛಾಪು ಮೂಡಿಸುವ ಅವಕಾಶವನ್ನು ಪುಣೆ ತಂಡ ನೀಡಿದೆ. ಭಾರತವು ಆತಿಥ್ಯ ವಹಿಸಲಿರುವ ವಿಶ್ವ ಟಿ–20 ಟೂರ್ನಿ ಮತ್ತು ಐಪಿಎಲ್ ಟೂರ್ನಿಗಳು ಅವರ ಸಂಪೂರ್ಣ ಸಾಮರ್ಥ್ಯ ಪ್ರದರ್ಶನದ ರಂಗಗಳಾಗುವುದಂತೂ ಖಚಿತ.

ಐಪಿಎಲ್ ಅಂಗಳದ ಪ್ರಮುಖ ಹಗರಣಗಳು
2015: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ತಂಡಗಳ ಅಮಾನತು
2014: ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಬಂಧನ
2013: ಸ್ಪಾಟ್ ಫಿಕ್ಸಿಂಗ್ ಮತ್ತು ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಲೋಧಾ ಸಮಿತಿ ನೇಮಕ
2012: ಸ್ಪಾಟ್ ಫಿಕ್ಸಿಂಗ್ ಹಗರಣದ ಕುರಿತು ಇಂಡಿಯಾ ಟಿವಿ ಕುಟುಕು ಕಾರ್ಯಾಚರಣೆ
2012; ಕೋಲ್ಕತ್ತ ನೈಟ್ ರೈಡರ್ಸ್ ಮಾಲೀಕ, ಸಿನಿತಾರೆ ಶಾರೂಕ್ ಖಾನ್ ಅವರಿಗೆ ವಾಂಖೆಡೆ ಕ್ರೀಡಾಂಗಣ ಪ್ರವೇಶಕ್ಕೆ ಐದು ವರ್ಷ ನಿಷೇಧ
2012: ಆರ್‌ಸಿಬಿ ತಂಡದ ಲೂಕ್ ಪೊಮರಬ್ಯಾಕ್ ಅವರ ವಿರುದ್ಧ ಮಹಿಳೆಯೊಬ್ಬರು  ಲೈಂಗಿಕ ದೌರ್ಜನ್ಯದ ದೂರು  ದಾಖಲಿಸಿದ್ದರು.
2011; ರಾಜಸ್ತಾನ ರಾಯಲ್ಸ್ ತಂಡದಲ್ಲಿದ್ದ ಶೇನ್ ವಾರ್ನ್ ಅವರು ಪಂದ್ಯದ ಅಧಿಕಾರಿಗಳನ್ನು ನಿಂದಿಸಿದ್ದಕ್ಕಾಗಿ ದಂಡ ತೆತ್ತಿದ್ದರು.
2011: ಗುತ್ತಿಗೆ ನಿಯಮ ಉಲ್ಲಂಘನೆ ಮತ್ತು ಬ್ಯಾಂಕ್ ಗ್ಯಾರಂಟಿ ವಂಚನೆ ಪ್ರಕರಣ, ಕೊಚ್ಚಿ ಟಸ್ಕರ್ಸ್ ತಂಡ ಅಮಾನತು
2010: ರಾಜಸ್ತಾನ್ ರಾಯಲ್ಸ್‌ನಲ್ಲಿದ್ದ ರವೀಂದ್ರ ಜಡೇಜಾ ಮೇಲೆ ಒಂದು ವರ್ಷದ ಅಮಾನತು ಶಿಕ್ಷೆ. ನಿಯಮ ಉಲ್ಲಂಘನೆ ಆರೋಪ
2010; ಐಪಿಎಲ್ ಸಿಇಒ ಹುದ್ದೆಯಿಂದ ಲಲಿತ್ ಮೋದಿ  ಉಚ್ಚಾಟನೆ
2008: ಕಿಂಗ್ಸ್ ಇಲೆವನ್ ತಂಡದ ಹರ ಭಜನ್ ಸಿಂಗ್ ಅವರು ಮುಂಬೈ ಇಂಡಿ ಯನ್ಸ್ ತಂಡದಲ್ಲಿದ್ದ ಎಸ್. ಶ್ರೀಶಾಂತ್ ಅವರಿಗೆ ಕಪಾಳಮೋಕ್ಷ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT