ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಮಂಗಲ: ಮೂರೇ ಮತ ಚಲಾವಣೆ!

Last Updated 17 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಹಿರಿಯೂರು (ಚಿತ್ರದುರ್ಗ ಜಿಲ್ಲೆ): ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವವರೆಗೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಗ್ರಾಮಸ್ಥರು ಪಟ್ಟುಹಿಡಿದು ಮತದಾನ ಬಹಿಷ್ಕರಿಸಿದ ಘಟನೆ ತಾಲ್ಲೂಕಿನ ಐಮಂಗಲ ಗ್ರಾಮದಲ್ಲಿ ನಡೆದಿದೆ.

ಐದಾರು ವರ್ಷದಿಂದ ಕುಡಿಯುವ ನೀರಿಗೆ ವ್ಯವಸ್ಥೆ ಮಾಡುವಂತೆ ಅಧಿ­ಕಾರಿ­ಗಳು, ಜನಪ್ರತಿನಿಧಿಗಳನ್ನು ಗೋಗರೆ­ಯುತ್ತ ಬಂದರೂ ಬೇಡಿಕೆ ಈಡೇರಿಸ­ಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಮತದಾನ ಬಹಿಷ್ಕರಿಸಲು ಮುಂದಾ­ದರು. ಮತ ಬಹಿಷ್ಕಾರಕ್ಕೆ ಬೆಂಬಲ ನೀಡಿದವರಲ್ಲಿ ಬಹುತೇಕ ಮಹಿಳೆ­ಯರೇ ಇದ್ದುದು ವಿಶೇಷ.

‘ನೀರು ತರುವುದು ಎಷ್ಟು ಕಷ್ಟ ಎನ್ನು­ವುದು ಗಂಡಸರಿಗೆ ಹೇಗೆ ಅರ್ಥ­ವಾಗ­­ಬೇಕು. ನೀರಿಗಾಗಿ ಪರ­ದಾಡಿದ್ದು ಸಾಕಾ­ಗಿದೆ. ಮತ­ದಾ­ನವೂ ಬೇಡ, ನಮಗೆ ಜನಪ್ರತಿನಿಧಿ­ಗಳೂ ಬೇಡ. ಹೀಗಾಗಿ ಯಾರೂ ಮತ ಚಲಾವಣೆ ಮಾಡ­ಬಾ­ರದು’ ಎಂಬ ತೀರ್ಮಾನಕ್ಕೆ ಗ್ರಾಮಸ್ಥರು ಬಂದಿದ್ದರು.

ಮತದಾನ ಬಹಿಷ್ಕರಿಸಿದ ಸುದ್ದಿ ತಿಳಿಯುತ್ತಿದ್ದಂತೆ ಜಿ.ಪಂ. ಮುಖ್ಯ ಕಾರ್ಯ­­ನಿರ್ವಾಹಕ ಅಧಿಕಾರಿ ಮಂಜುಶ್ರೀ, ಉಪ ಕಾರ್ಯದರ್ಶಿ ರುದ್ರಪ್ಪ, ಶಾಸಕ ಡಿ. ಸುಧಾಕರ್, ಸಂಜೆಯ ವೇಳೆಗೆ ಬಿಜೆಪಿ ಅಭ್ಯರ್ಥಿ ಜನಾರ್ದನ­ಸ್ವಾಮಿ ಗ್ರಾಮಕ್ಕೆ ಆಗಮಿಸಿ ಮನವಿ ಮಾಡಿದರೂ, ಗ್ರಾಮಸ್ಥರು. ಪಟ್ಟು ಸಡಿಲಿಸಲಿಲ್ಲ. ಗ್ರಾಮದಲ್ಲಿ ವಾಣಿ ವಿಲಾಸ ಜಲಾಶಯದಿಂದ ಚಿತ್ರ­ದುರ್ಗ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಕೊಳವೆ ಮಾರ್ಗ ಹಾದುಹೋಗಿದೆ. ತಾತ್ಕಾಲಿಕವಾಗಿ ನೀರಿನ ಸಮಸ್ಯೆ ಪರಿಹಾರಕ್ಕೆ ಈ ಕೊಳವೆಯಿಂದ ನೀರು ಕೊಡಬೇಕು. ಟ್ಯಾಂಕರ್‌ಗಳಿಂದ ತರುವ ನೀರು ಎಲ್ಲರಿಗೂ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.

ಸಂಜೆ 5ಕ್ಕೆ ಜನಾರ್ದನಸ್ವಾಮಿ ಅವರ ಕೋರಿಕೆಗೆ ಆರಂಭದಲ್ಲಿ ಒಪ್ಪಿಗೆ ಸೂಚಿಸಿದಂತೆ ಕಂಡ ಗ್ರಾಮಸ್ಥರು ಜಿಲ್ಲಾಧಿ­ಕಾರಿ ಬಂದು ಭರವಸೆ
ನೀಡು­ವವ­ರೆಗೆ ಬಹಿಷ್ಕಾರ ಮುಂದುವ­ರಿಸಲಾ­ಗು­­ವುದು ಎಂದು ಪಟ್ಟು ಹಿಡಿದರು.

1127 ಮತದಾರರಿರುವ ಗ್ರಾಮ­ದಲ್ಲಿ ಬೆಳಿಗ್ಗೆ 9.30ರ ವೇಳೆ­ಯಲ್ಲಿ ಕೇವಲ ಮೂರು ಮಂದಿ ಮತ ಚಲಾ­ಯಿಸಿದ್ದರು. ನಂತರ ಗ್ರಾಮಸ್ಥರು ಒಟ್ಟು­ಗೂಡಿ ಮತದಾನ­ವಾಗದಂತೆ ಒಗ್ಗಟ್ಟು ಪ್ರದರ್ಶಿಸಿದರು.

ಕಾವಲ್‌ ಪರಭಾರೆ ಖಂಡಿಸಿ ಮತದಾನ ಬಹಿಷ್ಕಾರ
ಚಳ್ಳಕೆರೆ:
ಕುದಾಪುರ, ವರವು, ಉಳ್ಳಾರ್ತಿ ಕಾವಲ್‌ಗಳನ್ನು ಸ್ವಾಯತ್ತ ಸಂಸ್ಥೆಗಳಿಗೆ ಪರಭಾರೆ ಮಾಡಿರು­ವು­ದನ್ನು ಖಂಡಿಸಿ ದೊಡ್ಡ ಉಳ್ಳಾರ್ತಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ಪ್ರತಿ­ಭಟನೆ ನಡೆಸಿದರು.

ದೊಡ್ಡ ಉಳ್ಳಾರ್ತಿ ಕರಿಯಣ್ಣ ಮಾತನಾಡಿ, ‘ಸಾವಿರಾರು ಕುಟುಂಬ­ಗಳ ಪಶುಪಾಲನೆಗೆ ಆಧಾರ­ವಾಗಿದ್ದ ಕಾವಲ್ ಭೂಮಿಯನ್ನು ಕೇಂದ್ರ ಸರ್ಕಾರ ಸುತ್ತಮುತ್ತಲಿರುವ ಹಳ್ಳಿಗಳ ಜನರ ಗಮನಕ್ಕೆ ಬರದಂತೆ ಸ್ವಾಯತ್ತ ಸಂಸ್ಥೆ­­ಗಳಿಗೆ ಪರಭಾರೆ ಮಾಡಿದೆ. ಕಾವಲ್ ಭೂಮಿ ತಳಕು ಪಂಚಾಯ್ತಿ ವ್ಯಾಪ್ತಿಯ 80 ಹಳ್ಳಿಗಳ ಜೀವನಾ­ಧಾರ. ಇದನ್ನು ಕೇಂದ್ರ ಸರ್ಕಾರ ಲೆಕ್ಕಿಸದೆ ಭೂಮಿಯನ್ನು ಪರಭಾರೆ ಮಾಡಿ ಸಾವಿರಾರು ಜನ ಹಾಗೂ ಜಾನುವಾರುಗಳಿಗೆ ಅನ್ಯಾಯ ಮಾಡಿದೆ.

ದೊಡ್ಡ ಉಳ್ಳಾರ್ತಿ ಗ್ರಾಮ­ದಲ್ಲಿ 3186 ಮತದಾರರಿದ್ದು, ಮೂರು ಮತದಾನ ಕೇಂದ್ರಗಳನ್ನು ಒಳ­ಗೊಂ­ಡಿದೆ. ಯಾವ ಕೇಂದ್ರದಲ್ಲೂ ಮತ­­ದಾನ ನಡೆದಿಲ್ಲ. ಮೂರು ಮತ­ದಾನ ಕೇಂದ್ರಗಳಲ್ಲಿ  ಕ್ರಮವಾಗಿ 1077, 913, 1196 ಮತದಾರ­ರಿದ್ದು, ಯಾರೂ ಮತದಾನದಲ್ಲಿ ಭಾಗ­ವಹಿಸಿಲ್ಲ’ ಎಂದು ಹೇಳಿದರು. ಅಧಿಕಾರಿಗಳು ಮನವೊಲಿಸಿದರೂ ಗ್ರಾಮಸ್ಥರು ಪಟ್ಟು ಸಡಿಲಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT