ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವರು ಮೀನುಗಾರರಿಗೆ ಗಲ್ಲು

ಶ್ರೀಲಂಕಾ ವಿರುದ್ಧ ಪ್ರತಿಭಟನೆ, ಶೀಘ್ರ ಮೇಲ್ಮನವಿ
Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕೊಲಂಬೊ/ ನವದೆಹಲಿ (ಪಿಟಿಐ): ಮಾದಕ ವಸ್ತುಗಳ ಕಳ್ಳಸಾಗಣೆ ಮಾಡಿದ ಆಪಾದನೆ ಎದುರಿಸುತ್ತಿದ್ದ ೫ ಭಾರ­ತೀಯ ಮೀನುಗಾರರಿಗೆ ಶ್ರೀಲಂಕಾ ನ್ಯಾಯಾ­ಲಯವು ಗಲ್ಲು ಶಿಕ್ಷೆ ವಿಧಿಸಿದೆ.

ತೀರ್ಪನ್ನು ಪ್ರಶ್ನಿಸಿ ಉನ್ನತ ನ್ಯಾಯಾ­­ಲಯದಲ್ಲಿ ಮೇಲ್ಮನವಿ ಸಲ್ಲಿಸ­ಲಾ­ಗು­ವುದು ಎಂದು ಭಾರತ ಸರ್ಕಾರ ತಿಳಿಸಿದೆ. 2011ರಲ್ಲಿ ಉತ್ತರ ಜಾಫ್ನಾದ ಕಡ­ಲಲ್ಲಿ ಶ್ರೀಲಂಕಾ ನೌಕಾಪಡೆಯು ತಮಿಳು­­ನಾಡಿನ ಮೂಲದ ಐವರು ಮೀನು­ಗಾ­­ರರಾದ ಎಮರ್ಸನ್‌, ಪಿ. ಅಗಸ್ಟಸ್‌, ಆರ್‌. ವಿಲ್ಸನ್‌, ಕೆ. ಪ್ರಸತ್‌ ಮತ್ತು ಜೆ. ಲಾಂಗ್ಲೆಟ್‌ ಹಾಗೂ ಶ್ರೀಲಂಕಾದ ಮೂವರು ಪ್ರಜೆಗಳನ್ನು ಮಾದಕ ವಸ್ತು­ಗಳ ಕಳ್ಳಸಾ­ಗಣೆ ಆಪಾದನೆ ಮೇಲೆ ಬಂಧಿಸಿತ್ತು.

ಆರೋಪ ಸಾಬೀತಾ­ಗಿದೆ ಎಂದು ಕೊಲಂಬೊ ಹೈಕೋರ್ಟ್ ನ್ಯಾಯ­ಮೂರ್ತಿ ಪ್ರೀತಿ ಪದ್ಮನ್ ಸುರ­ಸೇನಾ ಅವರು ಗಲ್ಲು ಶಿಕ್ಷೆ ವಿಧಿಸಿದ್ದಾರೆ. ಪ್ರಕರಣ ದಾಖಲಾದಾಗಿನಿಂದ ಭಾರ­ತವು ರಾಜತಾಂತ್ರಿಕ ಮತ್ತು ಕಾನೂನು ಮಾರ್ಗದಲ್ಲಿ ಪ್ರಯತ್ನ ನಡೆಸುತ್ತಲೇ ಬಂದಿದೆ ಎಂದು ಭಾರತದ ವಿದೇಶಾಂಗ ಖಾತೆಯ ವಕ್ತಾರ ಸೈಯಿದ್ ಅಕ್ಬರುದ್ದೀನ್ ಹೇಳಿದ್ದಾರೆ.

ಈ ಮಧ್ಯೆ ತೀರ್ಪಿನ ವಿರುದ್ಧ ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿ­ಸಲು ನೆರವು ನೀಡುವಂತೆ ಕೊಲಂಬೊ­ದಲ್ಲಿರುವ ಭಾರತೀಯ ಹೈ ಕಮಿ­ಷನ್‌ಗೆ ಭಾರತ ಕೋರಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಸಯೀದ್‌ ಅಕ್ಬರುದ್ದೀನ್‌ ಹೇಳಿದ್ದಾರೆ. ಶಿಕ್ಷೆಗೆ ಒಳಗಾಗಿರುವ ತಮಿಳುನಾಡು ಮೀನುಗಾರರಿಗೆ ಸಹಾಯ ನೀಡಲು ಭಾರತ ಬದ್ಧವಾಗಿದೆ. ತೀರ್ಪು ಪ್ರಕಟ­ವಾ­ದಾಗಿನಿಂದ ಶ್ರೀಲಂಕಾದಲ್ಲಿ­ರುವ ಭಾರತ ಹೈಕಮಿಷನರ್‌ ಯಶ್‌ ಸಿನ್ಹಾ  ಅವರು ಅಲ್ಲಿನ ವಿದೇಶಾಂಗ ಸಚಿವ ಪಿರೀಸ್‌ ಅವರೊಂದಿಗೆ ಸಂಪರ್ಕದಲ್ಲಿ­ರುವಾಗಿಯೂ ಅವರು ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಹಿಂಸಾಚಾರ
ಚೆನ್ನೈವರದಿ: ಮಾದಕ ವಸ್ತು ಕಳ್ಳಸಾ­ಗಣೆ ಆಪಾದನೆಗೆ ಸಂಬಂಧಿಸಿದಂತೆ ತಮಿಳುನಾಡಿನ ಐವರು ಮೀನುಗಾರ­ರಿಗೆ ಶ್ರೀಲಂಕಾ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿರುವುದನ್ನು ಪ್ರತಿಭಟಿಸಿ ರಾಮನಾಥಪುರಂ ಜಿಲ್ಲೆಯಲ್ಲಿ ಬಸ್ಸು­ಗಳಿಗೆ ಬೆಂಕಿ ಹಚ್ಚಲಾಗಿದೆ ಹಾಗೂ ರೈಲು ಹಳಿಗಳು ಸೇರಿದಂತೆ ಸಾರ್ವಜ­ನಿಕ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಲಾಗಿದೆ. ಉದ್ರಿಕ್ತ ಮೀನುಗಾರರು ಖಾಸಗಿ ಬಸ್ಸೊಂದನ್ನು ತಡೆದು ಅದರಲ್ಲಿದ್ದ ಪ್ರಯಾಣಿ­ಕರನ್ನು ಕೆಳಗಿಳಿಸಿ ಬಸ್ಸಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಾಮೇಶ್ವರದಲ್ಲಿ ಮೀನುಗಾರರು ಸುಮಾರು 300 ಮೀಟರ್ ಉದ್ದದ ರೈಲು ಹಳಿಯನ್ನು ಕಿತ್ತು ಹಾಕಿದ್ದಾರೆ. ಇದಲ್ಲದೆ ರಾಮೇಶ್ವರಂ– ಮದುರೈ ಹೆದ್ದಾರಿಯ ಪ್ರಮುಖ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT