ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಟಿ ಕಣಜ ಮನೆಗೆ ಮರಳುವ ಗುಟ್ಟು ರಟ್ಟು...

ನಮ್ಮ ಕಣ್ಣಿಗೆ ಬಟ್ಟೆ ಕಟ್ಟಿ ನಿಗೂಢ ಸ್ಥಳಕ್ಕೆ ಕೊಂಡೊಯ್ದು ಬಿಟ್ಟರೆ, ಮನೆಗೆ ಮರಳಲು ಸಾಧ್ಯವಾಗುತ್ತದೆಯೇ?  ನಾವು, ಅಂದರೆ, ಪ್ರಚಂಡ ಬುದ್ಧಿಮತ್ತೆಯುಳ್ಳವರು ಎನಿಸಿಕೊಂಡಿರುವ ‘ಹೋಮೊ ಸೇಪಿಯನ್ಸ್’ಗಳು, ಮನೆಗೆ ಮರಳಿ ಮರಳುವ ಸಾಧ್ಯತೆಯು ನಾವು ಸಿಕ್ಕಿ ಹಾಕಿಕೊಂಡಿರುವ ಸ್ಥಳವನ್ನು ಅವಲಂಬಿಸಿರುತ್ತದೆ.

ನಾವು ಜನವಾಸ ಪ್ರದೇಶಕ್ಕೆ ಹತ್ತಿರವಿದ್ದರೆ ಮತ್ತು ನಮ್ಮ ಬುದ್ಧಿಶಕ್ತಿಯ ಪರಿಣಾಮವಾಗಿ ತಯಾರಾದ ಉತ್ಪನ್ನಗಳಾದ ಕೆಲವು ತಾಂತ್ರಿಕ ಸಾಧನಗಳನ್ನು ಹೊಂದಿದ್ದರೆ, ಸುರಕ್ಷಿತವಾಗಿ ಮರಳುವ ಸಾಧ್ಯತೆ ಹೆಚ್ಚು.

ಆದರೆ, ಭಾರತದಲ್ಲಿ ಕಂಡುಬರುವ ಸಣ್ಣ ‘ಕಾಗದ ಕಣಜ’ಗಳನ್ನು ಗಮನಿಸೋಣ.  ಇವನ್ನು ಒಂದು ನಿರ್ದಿಷ್ಟ ವ್ಯಾಪ್ತಿಯೊಳಗೆ ಸ್ಥಳಾಂತರ ಮಾಡಿದಾಗ, ಈ ಪುಟ್ಟ ಆಹಾರನ್ವೇಷಕ ಕಣಜಗಳಲ್ಲಿ ಬಹುಪಾಲು ಕಣಜಗಳು ಯಶಸ್ವಿಯಾಗಿ ಮನೆಗೆ ಮರಳುತ್ತವೆ ಎಂಬುದು ದೃಢಪಟ್ಟಿದೆ.

ಕಣಜಗಳಿಗಿರುವ ಈ ಅನನ್ಯ ಸಾಮರ್ಥ್ಯವು,  ಗೃಹಗಾಮಿ ವರ್ತನೆಯು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳನ್ನು ಅಧ್ಯಯನಕ್ಕೆ  ಪ್ರೇರೇಪಿಸಿತು. ಕೆಲವು ಪ್ರಾಣಿಗಳು ಅಪರಿಚಿತ  ಪ್ರದೇಶಗಳನ್ನು ಕ್ರಮಿಸಿಯೂ ಮನೆ ಎಂದು ಕರೆಯಲ್ಪಡುವ ಜಾಗಕ್ಕೆ  ಅಥವಾ ಗೂಡಿಗೆ ಯಶಸ್ವಿಯಾಗಿ ತಲುಪುವ ಗುಣವಿಶೇಷವನ್ನು ಗೃಹಗಾಮಿ ವರ್ತನೆ ಎನ್ನುತ್ತಾರೆ.

ಭಾರತದಲ್ಲಿ ಕಂಡುಬರುವ ‘ಕಾಗದ ಕಣಜ’ (ರೋಪಾಲಿಡಿಯ ಮಾರ್ಜಿನೇಟಾ) ಒಂದು ಸಾಮಾಜಿಕ ಪರಭಕ್ಷಕ ಕಣಜವಾಗಿದ್ದು, ತನ್ನದೇ ಆದ ಒಂದು ಸಾಮಾಜಿಕ ಸಂರಚನೆ ಹೊಂದಿದೆ. ಈ ಸಾಮಾಜಿಕ ಸಂರಚನೆಯಲ್ಲಿ ಪ್ರತಿ ವಸಾಹತಿಗೆ ಒಂದು ಸಂತಾನೋತ್ಪಾದಕ ಸ್ತ್ರೀ ಕಣಜ (ರಾಣಿ) ಮತ್ತು ಹಲವಾರು ಸಂತಾನೋತ್ಪಾದಕವಲ್ಲದ ಹೆಣ್ಣು ಕಣಜಗಳು (ಕೆಲಸಗಾರರು) ಇರುತ್ತವೆ.

ಭಾರತ ಉಪಖಂಡದಾದ್ಯಂತ ಹಂಚಿಹೋಗಿರುವ ಈ ಜಾತಿಯ ಕಣಜಗಳು  ಭಾರತೀಯ ವಿಜ್ಞಾನ ಸಂಸ್ಥೆಯ ‘ಜೀವವ್ಯವಸ್ಥೆಗಳ ಅಧ್ಯಯನ ಕೇಂದ್ರ’ದ ಪ್ರೊ. ರಾಘವೇಂದ್ರ ಗದಗ್‌ಕರ್‌  ಮತ್ತು ಅವರ ಪ್ರಯೋಗಾಲಯದ ಸದಸ್ಯರ ಗಮನ ಸೆಳೆಯಿತು.

ಈ ಕೀಟವು, ಮೂರು ದಶಕಗಳಿಗೂ ಹೆಚ್ಚು ಕಾಲ, ಕೀಟಗಳ ಸಾಮಾಜಿಕ ಬದುಕಿನ ವಿಕಸನದ ಅರ್ಥೈಸುವಿಕೆ ಕುರಿತ  ಅಧ್ಯಯನದ ವಸ್ತುವಾಗಿದೆ.  ಇಂತಹ ಕಣಜಗಳಲ್ಲಿ ರಾಣಿಯ ಆಯ್ಕೆಯ ಕಾರ್ಯವಿಧಾನವನ್ನು ಅರ್ಥಮಾಡಿಕೊಳ್ಳುವ ಬಗೆ ಮತ್ತು ಕೆಲಸಗಾರ ಕಣಜಗಳ ಪರಹಿತ ಚಿಂತನೆಯ ನಡವಳಿಕೆಯ ಬಗ್ಗೆ   ಅನೇಕ ವರ್ಷಗಳಿಂದ ಅಧ್ಯಯನಗಳು ನಡೆಯುತ್ತಿವೆ. 

ಪ್ರೊ. ಗದಗ್‌ಕರ್‌ ಮತ್ತು ಅವರ ಪಿಎಚ್‌.ಡಿ ಸಂಶೋಧನಾ ವಿದ್ಯಾರ್ಥಿ ಸೌಮಿಕ್ ಮಂಡಲ್ ಅವರು  ಈ ಕಣಜಗಳ ಗೃಹಗಾಮಿ ನಡವಳಿಕೆಯ ಬಗ್ಗೆ ಕಳೆದ ಐದು ವರ್ಷಗಳಿಂದ ಸೂಕ್ಷ್ಮವಾಗಿ ಅಧ್ಯಯನ ನಡೆಸಿದ್ದಾರೆ. ಹಾಗಾದರೆ, ಈ ಕೀಟಗಳು ಸ್ವಂತ ಮನೆಯನ್ನು  ಹುಡುಕುವ ಬಗೆ ಯಾವುದು? 

‘ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ, ಕಣಜಗಳು ತಮ್ಮ ಗೂಡನ್ನು ಕಂಡುಹಿಡಿಯಲು ಖಂಡಿತವಾಗಿಯೂ ಸಮೀಪದ ಭೂಚಿತ್ರಣದ ದೃಶ್ಯಗಳ  ಸುಳಿವುಗಳನ್ನು (ವಾಸನೆಯ ಸುಳಿವು ಸೇರಿದಂತೆ ಆ ಪರಿಸರದಲ್ಲಿರುವ  ಇತರ ಅನೇಕ ಸುಳಿವುಗಳನ್ನು ಬಳಸಿಕೊಳ್ಳುವ ಸಾಧ್ಯತೆಯೂ ಇದೆ) ಬಳಸಿಕೊಳ್ಳುತ್ತವೆ’ ಎನ್ನುತ್ತಾರೆ  ಮಂಡಲ್‌.

ಅವರು ಈ ಕುರಿತು ಅನೇಕ ಪ್ರಯೋಗಗಳನ್ನು ನಡೆಸಿದ್ದಾರೆ. ಈ ಪೈಕಿ  ಒಂದು ಪ್ರಯೋಗದಲ್ಲಿ , ಆಹಾರಾನ್ವೇಷಕ ಕಣಜಗಳು, ಅದರಲ್ಲೂ, ಒಂಟಿಯಾಗಿ ಆಹಾರವನ್ನು ತರುವ ಕಾರ್ಯದಲ್ಲಿ ಮಗ್ನರಾಗಿದ್ದ ಕಣಜಗಳನ್ನು ಸಂಗ್ರಹಿಸಲಾಯಿತು. ಅವುಗಳನ್ನು ಗೂಡುಗಳಿಂದ ಹೆಚ್ಚು ದೂರದ ಸ್ಥಳಗಳಿಗೆ, ಕಣ್ಣಿಗೆ ಬಟ್ಟೆ ಕಟ್ಟಿರುವ ರೀತಿಯಲ್ಲಿ ಸ್ಥಳಾಂತರಗೊಳಿಸಲಾಯಿತು.

ಸ್ಥಳಾಂತರ ಪ್ರಕ್ರಿಯೆಯನ್ನು ನಾಲ್ಕು ಪ್ರಧಾನ ದಿಕ್ಕುಗಳಲ್ಲಿಯೂ, ಕಾಡು, ಮೇಲ್ಛಾವಣಿಯಿರುವ ಕಟ್ಟಡಗಳು, ರಸ್ತೆಗಳು ಮತ್ತು ಕೈಗಾರಿಕಾ ಪ್ರದೇಶಗಳಂತಹ ವಿವಿಧ ಪರಿಸರಗಳಲ್ಲಿ ನಡೆಸಲಾಯಿತು. ಗರಿಷ್ಠ ನಾಲ್ಕು ಕಣಜಗಳನ್ನು ಎಲ್ಲಾ ನಾಲ್ಕು ಪ್ರಧಾನ ದಿಕ್ಕುಗಳ ಪೂರ್ವ ನಿರ್ಧಾರಿತ ಸ್ಥಳಗಳಲ್ಲಿ ಪ್ರತಿ 100 ಮೀಟರ್‌ಗಳ ಅಂತರದಲ್ಲಿ ಬಿಡುಗಡೆ ಮಾಡಲಾಯಿತು.

ಸಂಗ್ರಹಿಸಿದ ಮಾಹಿತಿಯ ವಿಶ್ಲೇಷಣೆಯಿಂದ ಅವರು ಕಂಡುಕೊಂಡ ವಿಷಯವೆಂದರೆ, 500 ಮೀಟರ್‌ಗಳ ಅಂತರದ ಒಳಗೆ ಸ್ಥಳಾಂತರಿಸಲಾದ ಕಣಜಗಳೆಲ್ಲವೂ ಬಿಡುಗಡೆಯಾದ ದಿನವೇ ತಮ್ಮ ಗೂಡಿಗೆ ಮರಳಿವೆ. 500 ಮೀಟರ್‌ಗಳಿಗೂ ಹೆಚ್ಚು ದೂರದಲ್ಲಿ  ಬಿಡುಗಡೆ ಮಾಡಿದ ಕಣಜಗಳು, ಕೆಲವು ದಿನಗಳ ನಂತರ ಮರಳಿದರೆ, ಇನ್ನೂ ಕೆಲವು ಹಿಂದಿರುಗಲೇ ಇಲ್ಲ.

ನಿರ್ದಿಷ್ಟ  ಸ್ಥಳ ಬಿಂದುವಿನಿಂದ ಹೊರಟ ಕಣಜಗಳ ಪೈಕಿ ಅದೇ ದಿನವೇ  ಮರಳಿದವುಗಳ  ಬಿಂದುಗಳು ಕನಿಷ್ಠ ಗೃಹಗಾಮಿ ದೂರವನ್ನು ತಿಳಿಸುತ್ತವೆ. ಇವುಗಳಲ್ಲಿ ಅತ್ಯಂತ ದೂರದ ಬಿಂದುಗಳನ್ನು ಪರಿಗಣಿಸಿ ಸೇರಿಸಿದರೆ  ಕನಿಷ್ಠ ಗೃಹಗಾಮಿ ವಿಸ್ತೀರ್ಣ ದೊರೆಯುತ್ತದೆ.

ಈ ಸಂಶೋಧನೆಯಿಂದ ಲಭ್ಯವಿರುವ ವಿಶ್ಲೇಷಿತ ಮಾಹಿತಿಯ ಪ್ರಕಾರ, ಕನಿಷ್ಠ ಗೃಹಗಾಮಿ ವಿಸ್ತೀರ್ಣವು ೦.73 ಚದರ ಕಿಲೋಮೀಟರ್ ಎಂದು ಕಂಡುಬಂದಿದೆ. ಅತ್ಯಂತ ದೂರದ ಸ್ಥಳಬಿಂದುವಿನಿಂದ ಕನಿಷ್ಠಪಕ್ಷ ಒಂದು ಕಣಜವಾದರೂ ಹಿಂದಿರುಗಿದೆಯೋ, ಆ ಸ್ಥಳಬಿಂದುವಿನ ಆಧಾರದ ಮೇಲೆ ಗರಿಷ್ಠ ಗೃಹಗಾಮಿ ದೂರ ಮತ್ತು ಗರಿಷ್ಠ ಗೃಹಗಾಮಿ ವಿಸ್ತೀರ್ಣವನ್ನು ಕಂಡುಹಿಡಿಯಲು ಸಾಧ್ಯ. ಈ ಸಂಶೋಧನೆಯಿಂದ ಲಭ್ಯವಿರುವ ವಿಶ್ಲೇಷಿತ ಮಾಹಿತಿಯ ಪ್ರಕಾರ, ಗರಿಷ್ಠ ಗೃಹಗಾಮಿ ವಿಸ್ತೀರ್ಣವು ಸುಮಾರು 6.22 ಚದರ ಕಿಲೋಮೀಟರ್ ಎಂದು ಕಂಡುಬಂದಿದೆ.

ಕೇವಲ 1.5 ಸೆಂ.ಮೀ.ನಷ್ಟು ಉದ್ದವಿರುವ ಪುಟ್ಟ ಕಣಜಕ್ಕೆ ಈ ವಿಸ್ತೀರ್ಣವು ಬಹಳ ದೊಡ್ಡ ಪ್ರದೇಶವೇ ಆಗಿದೆ. ಆದರೆ, ಹಿಂದಿರುಗದೇ ಕಳೆದುಹೋದ ಕಣಜಗಳ ಕಥೆ ಏನೆಂಬುದು ತಿಳಿದಿಲ್ಲ. ಅವುಗಳು ತಮ್ಮದೇ ಹೊಸ ಗೂಡು ಕಟ್ಟಬಹುದು ಅಥವಾ ಹೊಸದೊಂದು ಗೂಡನ್ನು ಹುಡುಕಬಹುದು ಎಂದು ಅಂದಾಜಿಸಲಾಗಿದೆ.

‘ನಾವು ಗಮನಿಸಿರುವ ಪ್ರಕಾರ,  ಸ್ವಂತ ಗೂಡುಗಳಲ್ಲದೇ ಇತರ ಗೂಡುಗಳನ್ನೂ ಸೇರುವ  ಕಣಜಗಳಿವೆ’ ಎನ್ನುತ್ತಾರೆ  ಮಂಡಲ್.  ‘ಬೇರೆ ಜೀವಿಗಳಿಗೆ ಹೋಲಿಸಿದರೆ, ಕಣಜಗಳು ಸರಳವಾದ ನರವ್ಯೂಹದ ಕಾರ್ಯವಿಧಾನವನ್ನು  ಹೊಂದಿವೆ.  ಇದರ ಅಧ್ಯಯನದಿಂದ,  ಪ್ರಾಣಿಗಳ ಸಂಚಾರ ಮತ್ತು ಗೃಹಗಾಮಿ ನಡವಳಿಕೆಗೆ ಇರುವ ಮೂಲಭೂತ ಅಗತ್ಯಗಳ ಬಗ್ಗೆ ನಮಗೆ  ಮಾಹಿತಿ ಸಿಗುತ್ತದೆ’ ಎನ್ನುತ್ತಾರೆ  ಅವರು.

‘ಸುಧಾರಿತ’  ಬುದ್ಧಿಮತ್ತೆಯ ಮಾನವ ಜನಾಂಗವು ಕಣಜಗಳಿಂದ ಏನು ಕಲಿಯಬಹುದು ಎಂಬ ಪ್ರಶ್ನೆಗೂ  ಮಂಡಲ್ ಅವರಲ್ಲಿ ಉತ್ತರವಿದೆ. ಅವರೇ ಹೇಳುವ ಹಾಗೆ, ಕಣಜಗಳ ಸಂಚಾರ ಮತ್ತು ಗೃಹಗಾಮಿ ನಡವಳಿಕೆಯ ಹಿಂದಿನ ಯಾಂತ್ರಿಕ ವ್ಯವಸ್ಥೆಯ ತಿಳುವಳಿಕೆಯನ್ನು, ನೇರವಾಗಿ ಸರಳ ಯಾಂತ್ರಿಕ ಕಾರ್ಯವಿಧಾನ ಹಾಗೂ   ವಿದ್ಯುನ್ಮಂಡಲಗಳನ್ನು (ಸರ್ಕ್ಯೂಟ್‌)  ಬಳಸಿ ನಿರ್ಮಿಸುವ  ಯಂತ್ರಮಾನವ (ರೊಬೋಟ್‌) ತಂತ್ರಕ್ಕೂ  ಇದನ್ನು  ಅನ್ವಯಿಸಬಹುದು.

ಈ ಅಧ್ಯಯನದಿಂದ ಅವುಗಳ ಸಾಮಾಜಿಕ ವಿಕಸನದ ಕುರಿತ ಸುಳಿವುಗಳನ್ನು ಸಿಗುವುದರ ಜೊತೆಗೇ, ಕ್ರಿಮಿಕೀಟಗಳ ನಿರ್ವಹಣೆಗೂ   ಸಹಾಯವಾಗಬಲ್ಲುದು.‘ಕಣಜಗಳು ಪರಭಕ್ಷಕಗಳಾಗಿದ್ದು ಇತರ ಕೀಟಗಳ ಲಾರ್ವಗಳನ್ನು ತಿನ್ನುತ್ತವೆ. ಸಮಸ್ಯಾತ್ಮಕ  ಕೀಟಗಳ ಲಾರ್ವವನ್ನೂ ಕಣಜಗಳು ತಿನ್ನುತ್ತವೆ.  ಹಾಗಾಗಿ ಕಣಜಗಳ ಆಹಾರಾನ್ವೇಷಣೆ ಮತ್ತು ಸಂಚಾರ ಮಾದರಿಗಳನ್ನು ಅರ್ಥ ಮಾಡಿಕೊಂಡರೆ,  ಕೀಟಗಳ ಜೈವಿಕ ನಿಯಂತ್ರಣದ ಸೂತ್ರವನ್ನೂ  ಕಂಡುಕೊಳ್ಳಬಹುದು’ ಎನ್ನುತ್ತಾರೆ ಮಂಡಲ್‌.

(ಸಂಶೋಧನಾ ಚಟುವಟಿಕೆಗಳ ಬಗ್ಗೆ ವ್ಯವಹರಿಸುವ ಸಾಮಾಜಿಕ ಉದ್ಯಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT