ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಕಿ.ಮೀ.ಗೆ 45 ನಿಮಿಷ!

Last Updated 29 ಜುಲೈ 2016, 19:42 IST
ಅಕ್ಷರ ಗಾತ್ರ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ನಗರದ ಹಲವು ರಸ್ತೆಗಳು ಜಲಾವೃತವಾಗಿ, ಶುಕ್ರವಾರ ಭಾರಿ ಸಂಚಾರದಟ್ಟಣೆ ಉಂಟಾಯಿತು.

‘ಹೊಸೂರು ರಸ್ತೆ, ಎಲೆಕ್ಟ್ರಾನಿಕ್‌ ಸಿಟಿ,    ಜಯದೇವ ಆಸ್ಪತ್ರೆ, ಮಡಿವಾಳ ಚೆಕ್‌ಪೋಸ್ಟ್‌ನಿಂದ ಸಿಲ್ಕ್‌ಬೋರ್ಡ್‌ ಜಂಕ್ಷನ್‌, ಅಲ್ಲಿಂದ ಬಿಟಿಎಂ ಬಡಾವಣೆಯವರೆಗೂ ದಟ್ಟಣೆ ಇತ್ತು. ಈ ರಸ್ತೆಯಲ್ಲಿ ವಾಹನಗಳು ಒಂದು ಕಿ.ಮೀ ದೂರ ಕ್ರಮಿಸಲು 25ರಿಂದ 45 ನಿಮಿಷದವರೆಗೂ ಕಾಲಾವಕಾಶ ಹಿಡಿಯಿತು’ ಎಂದು ಸಂಚಾರ ಪೊಲೀಸರು ತಿಳಿಸಿದರು.

‘ಮಡಿವಾಳ ಚೆಕ್‌ಪೋಸ್ಟ್‌ನಿಂದ ಸಿಲ್ಕ್‌ಬೋರ್ಡ್‌ ಜಂಕ್ಷನ್‌, ಅಲ್ಲಿಂದ ಬಿಟಿಎಂ ಬಡಾವಣೆಯವರೆಗೂ ದಟ್ಟಣೆ ಇತ್ತು. ಎಲೆಕ್ಟ್ರಾನಿಕ್‌ ಸಿಟಿ, ಕೋರಮಂಗಲ, ಹೊಸೂರು ಮಾರ್ಗವಾಗಿ ಹೋಗುತ್ತಿದ್ದ ಸವಾರರು ನಿಗದಿತ ಸ್ಥಳ ತಲುಪಲು ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ನಿರ್ಮಾಣವಾಯಿತು’.

‘ಕೆರೆ ಕೋಡಿ ಬಿದ್ದಿದ್ದರಿಂದ ಕುವೆ೦ಪುನಗರ ಹಾಗೂ ಬಿಇಎಂಎಲ್‌ ಬಡಾವಣೆಗಳಿಗೆ ನೀರು ನುಗ್ಗಿತು. ಕೆರೆಯ ಅಕ್ಕಪಕ್ಕದ ರಸ್ತೆಗಳಲ್ಲೂ ನೀರು ಹರಿದು ದಟ್ಟಣೆ ನಿರ್ಮಾಣವಾಯಿತು.  ಇದರಿಂದ ಪೂರ್ವ ವಿಭಾಗದ ಮಡಿವಾಳ, ಎಲೆಕ್ಟ್ರಾನಿಕ್‌ ಸಿಟಿ ಠಾಣೆ ವ್ಯಾಪ್ತಿಯಲ್ಲಿ ದಟ್ಟಣೆ ಹೆಚ್ಚಿತ್ತು. ಅದನ್ನು ನಿಯಂತ್ರಿಸಲು  10 ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 50ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸ ಲಾಗಿತ್ತು’ ಎಂದು  ಸಂಚಾರ ನಿರ್ವಹಣಾ ಕೇಂದ್ರದ ಅಧಿಕಾರಿಯೊಬ್ಬರು ತಿಳಿಸಿದರು. 

‘ಹಳೇ ಮದ್ರಾಸ್‌ ರಸ್ತೆಯ ಎಂ.ಎಂ. ರಸ್ತೆ, ದೊಡ್ಡನೆಕ್ಕುಂದಿ ಸೇಲಂ ಸೇತುವೆ, ಸಿಬಿಐ ಕಚೇರಿಯಿಂದ ಮೇಖ್ರಿ ವೃತ್ತ, ಬಸವೇಶ್ವರ ವೃತ್ತ, ಲಾಲ್‌ಬಾಗ್ ಪಶ್ಚಿಮ ಗೇಟ್‌, ವಿವೇಕ ನಗರದಿಂದ ಇಂಡಿಯನ್‌ ಗ್ಯಾರೇಜ್‌ ರಸ್ತೆ, ರಿಚ್ಮಂಡ್‌ ವೃತ್ತದಿಂದ ಲಾಲ್‌ಬಾಗ್‌ ಹಾಗೂ ಹಡ್ಸನ್‌ ವೃತ್ತದವರೆಗೆ ಭಾರೀ ದಟ್ಟಣೆ ಉಂಟಾಗಿತ್ತು. ಕೆಲವೆಡೆ ಆಂಬುಲೆನ್ಸ್‌ ಸಂಚಾರಕ್ಕೆ ತೊಂದರೆ ಉಂಟಾಯಿತು’.

‘ಬೆಳ್ಳಂದೂರಿನಿಂದ ಅಗರ, ಹೊರ ವರ್ತುಲ ರಸ್ತೆ, ಬಿಇಎಲ್‌ ವೃತ್ತ,   ಪುರಭವನ ವೃತ್ತದಿಂದ ಮಿನರ್ವ ವೃತ್ತ, ಲಾಲ್‌ಬಾಗ್‌ ಮುಖ್ಯ ಗೇಟಿನಿಂದ  ಸಿದ್ದಾಪುರ, ಮೆಜೆಸ್ಟಿಕ್‌ನಿಂದ ಕೆ.ಜೆ. ರಸ್ತೆ, ಪ್ಲಾಟ್‌ಫಾರಂ ರಸ್ತೆ, ಮೈಸೂರು ರಸ್ತೆ, ಕಾಟನ್‌ಪೇಟೆ, ಗೂಡ್‌ಶೆಡ್‌ ರಸ್ತೆಯಲ್ಲೂ ಸಂಚಾರ ದಟ್ಟಣೆ ಇತ್ತು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಪ್ರತಿದಿನವೂ ಸಿಲ್ಕ್‌ಬೋರ್ಡ್‌ ಜಂಕ್ಷನ್‌ ಮೂಲಕ ಕಚೇರಿಗೆ ಹೋಗುತ್ತೇನೆ. ರಸ್ತೆಯಲ್ಲಿ ನೀರು ಹರಿಯುತ್ತಿದ್ದರಿಂದ  ದಟ್ಟಣೆ ಹೆಚ್ಚಾಗಿದೆ. 20 ನಿಮಿಷದಿಂದ ನಿಂತಲೇ ನಿಂತಿದ್ದು, ನಿಧಾನವಾಗಿ ರಸ್ತೆ ದಾಟಬೇಕಾಗಿದೆ’ ಎಂದು ಬೈಕ್‌ ಸವಾರ ರಂಜೀತ್‌್ ಗುಪ್ತಾ ಅವರು  ತಿಳಿಸಿದರು.

ಕೋಡಿ ಹರಿಯದಂತೆ ತಡೆ
ಮಳೆಯಿಂದಾಗಿ ನಗರದ ಹುಳಿಮಾವು ಕೆರೆ ಸಮೀಪದಲ್ಲಿರುವ ನ್ಯಾನಪ್ಪನ ಹಳ್ಳಿ ಕೆರೆಯು ಭರ್ತಿಯಾಗಿ ಕೋಡಿ ಹರಿಯುವ ಆತಂಕ ನಿರ್ಮಾಣವಾಗಿತ್ತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಎಂಜಿನಿಯರಿಂಗ್‌ ವಿಭಾಗದ ಸಿಬ್ಬಂದಿ ಕೋಡಿಯ ಕೆಳಭಾಗದಲ್ಲಿ ಮರಳು ಚೀಲಗಳನ್ನು ಜೋಡಿಸಲು  ಕ್ರಮ ಕೈಗೊಂಡರು.  ಕೆರೆಯ ಹೆಚ್ಚುವರಿ ನೀರು ಹರಿದುಹೋಗಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಯಿತು. ಇದರಿಂದ ಅನಾಹುತವೊಂದು ತಪ್ಪಿದಂತಾಗಿದೆ.

ನ್ಯಾನಪ್ಪನ ಕೆರೆ ಅಭಿವೃದ್ಧಿಯ ಹೊಣೆಯನ್ನು ಸರ್ಕಾರ ಇತ್ತೀಚೆಗೆ ಬಿಡಿಎಗೆ ವಹಿಸಿತ್ತು.

15 ಅಡಿ ಎತ್ತರಕ್ಕೆ ಹಾರಿದ ನೊರೆ
ಎರಡು ದಿನ ನಗರದಲ್ಲಿ ಸುರಿದ ಮಳೆಯಿಂದಾಗಿ  ಬೆಳ್ಳಂದೂರು, ಯಮಲೂರು ಹಾಗೂ ವರ್ತೂರು  ಕೆರೆ ಕೋಡಿಗಳಲ್ಲಿ ಶುಕ್ರವಾರ ಪುನಃ ಭಾರೀ ಪ್ರಮಾಣದ ನೊರೆ ಕಾಣಿಸಿಕೊಂಡಿದೆ.

ಕೆರೆಯಲ್ಲಿ 15 ಅಡಿಗಳಷ್ಟು ಎತ್ತರಕ್ಕೆ ನೊರೆ ನಿಂತಿರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗಾಳಿ ಬೀಸಿದಾಗ ನೊರೆಯ ರಾಶಿ ಕೆರೆಕಟ್ಟೆ ಮೇಲೆ, ರಸ್ತೆಯಲ್ಲಿ ಸಂಚರಿಸುವವರ ಮೇಲೆ ಬೀಳುತ್ತಿದೆ. ಅದರಿಂದ ತಪ್ಪಿಸಿಕೊಳ್ಳಲು ದ್ವಿಚಕ್ರ ವಾಹನ ಸವಾರರು ಹರಸಾಹಸ ಪಡುವಂತಾಗಿದೆ. ‘ಈ ಸಮಸ್ಯೆ ಬಗೆಹರಿಸುವಂತೆ ಅನೇಕ ಬಾರಿ ಮನವಿಯನ್ನೂ ಮಾಡಲಾಗಿದೆ ಮತ್ತು ಪ್ರತಿಭಟನೆ ನಡೆಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಈ ಸಮಸ್ಯೆಗೆ ಬಿಬಿಎಂಪಿ ಶಾಶ್ವತ ಪರಿಹಾರ ನೀಡುವ ತುರ್ತು ಅಗತ್ಯವಿದೆ’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಚರಂಡಿ ಕಟ್ಟಿಕೊಂಡು ರಸ್ತೆಯಲ್ಲಿ ಹರಿದ ಮಳೆ ನೀರು ಮಾರತಹಳ್ಳಿ, ದೊಡ್ಡನೆಕ್ಕುಂದಿ, ಕುಂದಲಹಳ್ಳಿ, ರಾಮಗೊಂಡನಹಳ್ಳಿ, ಇಮ್ಮಡಿಹಳ್ಳಿಯಲ್ಲಿನ ಕೆಲವು ಮನೆಗಳಿಗೆ ನುಗ್ಗಿತು.  ಕಟ್ಟಿಕೊಂಡ ಚರಂಡಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಬಿಬಿಎಂಪಿ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಸಾಥ್‌ ನೀಡಿದರು.

ಮುಂದಿನ ಎರಡು ದಿನಗಳು ಸಹ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿಕೆಯಿಂದ ಜಾಗೃತರಾಗಿರುವ ಸಾರ್ವಜನಿಕರು, ಸ್ವತಃ   ತಾವೇ ಚರಂಡಿಗಳಲ್ಲಿ ನೀರು ಕಟ್ಟಿಕೊಳ್ಳದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT