ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೆಡೆ ಟೆಕ್ಕಿಗಳ ಮಿಂಚು; ಇನ್ನೊಂದೆಡೆ ತ್ಯಾಜ್ಯದ ಮಂಕು

Last Updated 17 ಏಪ್ರಿಲ್ 2014, 20:11 IST
ಅಕ್ಷರ ಗಾತ್ರ

ಬೆಂಗಳೂರು: ಅಧಿಕ ಸಂಖ್ಯೆಯಲ್ಲಿ ತಮ್ಮ ಪರ­ಮಾ­ಧಿ­ಕಾರ ಚಲಾಯಿಸಿದ ಯುವ ಮತದಾರರು; ಮಹದೇವಪುರ ಮತ­ಗಟ್ಟೆಗಳಲ್ಲಿ ಹೆಚ್ಚಾಗಿ ಕಂಡು ಬಂದ ಉತ್ತರ ಭಾರತ ಮೂಲದ ಟೆಕ್ಕಿಗಳು; ಕಸದ ಸಮಸ್ಯೆ ಎದುರಿಸುತ್ತಿರುವ ಮಂಡೂರಿನಲ್ಲಿ ಮತ­ದಾನಕ್ಕೆ ಕಾಣದ ಉತ್ಸಾಹ; ಬಿಕೋ ಎನ್ನುತ್ತಿದ್ದ ಗಾಂಧಿ­ನಗರದ ಮತಕೇಂದ್ರಗಳು; ಮಿಂಚಿ ಮರೆಯಾಗುತ್ತಿದ್ದ ವಿವಿಧ ಪಕ್ಷಗಳ ನಾಯಕರು....
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಚುನಾ­ವಣೆಯಲ್ಲಿ ಗುರುವಾರ ಎದ್ದುಕಂಡ ವಿಶೇಷ­ಗಳಿವು.

ಈ ಕ್ಷೇತ್ರದಲ್ಲಿ 19.30 ಲಕ್ಷ ಮತದಾ­ರ­ರಿದ್ದು, 8.70 ಲಕ್ಷ ಯುವಕರೇ ಇದ್ದಾರೆ. ಅದರಲ್ಲೂ ಟೆಕ್ಕಿಗಳ ಸಂಖ್ಯೆಯೇ ಹೆಚ್ಚು. ಬೆಳಗಿನ ಹೊತ್ತು ಮತಗಟ್ಟೆಗಳ ಮುಂದೆ ಸರದಿ ನಿಂತವ­ರಲ್ಲಿ ಅವರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣ ಸಿಗುತ್ತಿದ್ದರು.

ಕ್ಷೇತ್ರದಲ್ಲಿ ಹೊಸದಾಗಿ ಹೆಸರು ನೋಂದಣಿ ಮಾಡಿಕೊಂಡಿದ್ದ ಯುವ ಮತದಾರರಲ್ಲಿ (80 ಸಾವಿರ) ಬಹುತೇ­ಕರು ಮೊದಲ ಮತದಾನದ ಖುಷಿ ಅನು­ಭವಿ­ಸಿದರು. ಬೆಳಗಿನ 11 ಗಂಟೆ ವೇಳೆಗೆ ಮಹ­ದೇವ­ಪುರ ಮತ್ತು ಸಿ.ವಿ. ರಾಮನ್‌­ನಗರ ವಿಧಾನ­ಸಭಾ ಕ್ಷೇತ್ರಗಳ ವ್ಯಾಪ್ತಿ­ಯಲ್ಲಿ ಶೇ 25ರಷ್ಟು ಮತದಾನ­ವಾ­ಗಿತ್ತು. ಹೂಡಿ ಸರ್ಕಾರಿ ಪಿಯು ಕಾಲೇಜಿ­ನಲ್ಲಿ ತೆರೆಯಲಾಗಿದ್ದ ನಾಲ್ಕು ಮತಗಟ್ಟೆ­ಗಳಲ್ಲಿ ಮಧ್ಯಾಹ್ನದ ಬಿಸಿಲಿನಲ್ಲೂ ಉದ್ದನೆ ಸಾಲುಗಳು ಕಂಡುಬಂದವು.

ಮನೆಯಿಂದ ನೀರಿನ ಬಾಟಲಿ ತಂದಿದ್ದ ಟೆಕ್ಕಿಗಳು ಬಿಸಿ­ಲಿ­­ನಲ್ಲಿ ಸುರಿಯುತ್ತಿದ್ದ ಬೆವರು ಒರೆಸಿಕೊಳ್ಳುತ್ತಲೇ ತಮ್ಮ ­ಸರದಿಗಾಗಿ ತಾಳ್ಮೆಯಿಂದ ಕಾಯುತ್ತ ನಿಂತಿದ್ದರು. ಪಕ್ಕದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲೂ ಮತ­ದಾ­ನಕ್ಕೆ ಜನ ಉತ್ಸಾಹ­ದಿಂದ ನೆರೆದಿದ್ದರು. ‘ಸೂಕ್ಷ್ಮ ಮತ­­ಗಟ್ಟೆ’­ ಎಂಬ ಹಣೆಪಟ್ಟಿ ಕಟ್ಟಿ­ಕೊಂಡಿದ್ದ ಅಲ್ಲಿನ ಮೂರೂ ಕೇಂದ್ರಗಳಿಗೆ ಭದ್ರತಾ ಪಡೆ ಯೋಧರ ಪಹರೆ ಇತ್ತು.

ಅಯ್ಯಪ್ಪನಗರ ಮತಗಟ್ಟೆಯಲ್ಲಿ ಎಂ.ನಾಗ­ರ­ತ್ನಮ್ಮ ಮತ್ತಿತ­ರರು ‘ಮತ­ದಾ­ರರ ಯಾದಿಯಲ್ಲಿ ನಮ್ಮ ಹೆಸರೇ ಇಲ್ಲ’ ಎನ್ನುವ ಆಕ್ರೋಶ ವ್ಯಕ್ತಪಡಿಸುತ್ತಾ ನಿಂತಿದ್ದರು. ಮತದಾರರ ಗುರುತಿನ ಚೀಟಿ ಕೈಯಲ್ಲಿ ಹಿಡಿದಿದ್ದ ಅವರು, ‘ಕಳೆದ ವಿಧಾನಸಭಾ ಕ್ಷೇತ್ರದ ಚುನಾ­ವಣೆ­ಯಲ್ಲಿ ಮತದಾನ ಮಾಡಿದ್ದೇವೆ. ಈಗೇಕೆ ಇಲ್ಲ’ ಎಂದು ಕೇಳುತ್ತಿದ್ದರು.

‘ಬೇರೆ ಮತಗಟ್ಟೆಗಳಿಗೆ ನಿಮ್ಮ ಹೆಸರು ವರ್ಗಾವಣೆ ಆಗಿರಬಹುದು. ನಮಗೆ ಕೊಟ್ಟ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ. ಮತ­ದಾನಕ್ಕೆ ಇಲ್ಲಿ ಅವಕಾಶ ಇಲ್ಲ’ ಎಂದು ಮತಗಟ್ಟೆ ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದರು.

ಪಕ್ಕದ ಮತಗಟ್ಟೆಯಲ್ಲಿ ಸದ್ದು ಮಾಡಿದ ಮೊಬೈಲ್‌ ಕಸಿದುಕೊಂಡಿದ್ದಕ್ಕೆ ಹಿರಿಯ ನಾಗರಿ­ಕ­ರೊಬ್ಬರು ಚುನಾ­ವಣಾ ಸಿಬ್ಬಂದಿ ಮೇಲೆ ಹರಿಹಾಯು­ತ್ತಿದ್ದರು. ಅವರ ಗಲಾಟೆ­ಯಿಂದ ‘ಏನೋ ಅನಾ­ಹುತ ಸಂಭವಿಸಿತು’ ಎಂಬ ಧಾವಂತ­­ದಲ್ಲಿ ಜನ ಗುಂಪು ಸೇರಿದರು. ಪೊಲೀಸರು ವಿಷಯ ತಿಳಿಸಿ ಎಲ್ಲರನ್ನೂ ವಾಪಸು ಕಳುಹಿಸಿದರು.

ತ್ಯಾಜ್ಯದ ರಾಶಿಯಿಂದ ಬರುತ್ತಿದ್ದ ವಾಸನೆ­­ಯಲ್ಲೇ ಮೂಗು ಮುಚ್ಚಿ­ಕೊಂಡು ಮಂಡೂ­ರಿಗೆ ತೆರಳಿದರೆ ಅಲ್ಲಿನ ಕೇಂದ್ರಗಳಲ್ಲಿ ಮತದಾ­ರ­ರಿಲ್ಲದೆ ಸಿಬ್ಬಂದಿ ಹರಟೆ ಹೊಡೆಯುತ್ತಾ ಕುಳಿತಿದ್ದರು. ‘ಕಸಕ್ಕೆ ಮುಕ್ತಿ ನೀಡುವಂತಹ ಪ್ರತಿನಿಧಿ­ಗಳೇ ಇಲ್ಲ’ ಎಂದು ಬಸ್‌ ತಂಗುದಾಣ­ದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಎನ್‌.ಸಿದ್ದ­ರಾಜು ಹೇಳುತ್ತಿದ್ದರು. ಇಲ್ಲಿನ ಮತಗಟ್ಟೆ­ಗಳಲ್ಲಿ ವೆಬ್‌ಕಾಸ್ಟಿಂಗ್‌ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಶಿವಾಜಿನಗರ ಕ್ಷೇತ್ರದಲ್ಲಿ ಬೆಳಿಗ್ಗೆ ಬಿರು­ಸಿನ ಮತದಾನ ನಡೆದರೆ, ಮಧ್ಯಾಹ್ನ ಜನ ಮತ ಕೇಂದ್ರಗಳತ್ತ ತಲೆ ಹಾಕಲಿಲ್ಲ. ಹಲ­ಸೂರಿನ ಮತ­ಗಟ್ಟೆಗಳಂತೂ ಪಕ್ಕದ­ಲ್ಲಿ­­ರುವ ಕೆರೆ ನೀರಿನಂತೆ ತಣ್ಣಗಿ­ದ್ದವು. ಸುದ್ದ­ಗುಂಟೆ ಪಾಳ್ಯದಲ್ಲಿ ಮನೆಗಳನ್ನೇ ಬಾಡಿಗೆ ಪಡೆದು ನಡೆಸಲಾಗುತ್ತಿರುವ ಶಾಲೆ­ಗಳಲ್ಲಿ ಎರಡು ಮತಗಟ್ಟೆಗಳನ್ನು ತೆರೆ­ಯ­ಲಾಗಿತ್ತು. ಮತ­ದಾ­ರ­ರಿಗೆ ಸರದಿ­ಯಲ್ಲಿ ನಿಲ್ಲಲು ಹೆಚ್ಚಿನ ಸ್ಥಳಾವ­ಕಾಶ ಇರಲಿಲ್ಲ. ಬಿಸಿಲಿನಲ್ಲೇ ಕಾಯುವ ಅನಿವಾರ್ಯ ಸ್ಥಿತಿ ಉಂಟಾಗಿತ್ತು.

ಮಹದೇವಪುರ ಹಾಗೂ ಸಿ.ವಿ.ರಾಮ­ನ್‌­­ನಗ­ರದ ಕೆಲವು ಮತಗಟ್ಟೆಗಳ ಹತ್ತಿರ ವಿವಿಧ ಪಕ್ಷಗಳ ಕಾರ್ಯಕರ್ತರು ಲ್ಯಾಪ್‌­ಟಾಪ್‌ ಇಟ್ಟುಕೊಂಡು ಮತ­­ದಾರರ ಮಾಹಿತಿ ನೋಡಿ ಕೊಡುತ್ತಿ­ದ್ದರು. ಸದ್ದಗುಂಟೆ ಪಾಳ್ಯ ಹಾಗೂ ಸುತ್ತಲಿನ ಪ್ರದೇಶಗಳ ಮತಗಟ್ಟೆಗಳಲ್ಲಿ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಜತೆಗೆ ಎಎಪಿ ಟೆಂಟ್‌ಗಳೂ ಗೋಚರಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT