ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಊರಿನ ಇಬ್ಬರು ಶಾಸಕರು!

Last Updated 8 ಮೇ 2013, 19:59 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ಒಂದೂರು ಇಬ್ಬರು ಶಾಸಕರನ್ನು ಪಡೆದರೆ, ಇನ್ನೊಂದು ಊರು 9ನೇ ಬಾರಿಗೆ ಶಾಸಕರನ್ನು ಪಡೆದಿದೆ.
ಮದ್ದೂರು ತಾಲ್ಲೂಕಿನ ದೊಡ್ಡಅರಸಿನಕೆರೆಯವರಾದ ಡಿ.ಸಿ. ತಮ್ಮಣ್ಣ ಮದ್ದೂರು ಕ್ಷೇತ್ರದಿಂದ ಆಯ್ಕೆಯಾದರೆ, ಅದೇ ಗ್ರಾಮದವರಾದ ಚಿತ್ರನಟ, ಕೆಪಿಸಿಸಿ ಉಪಾಧ್ಯಕ್ಷ ಅಂಬರೀಷ್ ಅವರು ಮಂಡ್ಯ ವಿಧಾನಸಭೆ ಕ್ಷೇತ್ರದಿಂದ ಗೆಲುವು ಸಾಧಿಸಿದರು. ತಮ್ಮೂರಿನ ಇಬ್ಬರು ಶಾಸಕರಾಗಿರುವುದು ಆ ಊರಿನ ಜನರಿಗೆ ಹೆಮ್ಮೆ ತಂದಿದೆ.

ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಶಾಸಕರಾಗುವ ಅರಕೆರೆ ಗ್ರಾಮದ ಅಧಿಪತ್ಯ ಈ ಬಾರಿಯೂ ಮುಂದುವರಿದಿದೆ. ಇಲ್ಲಿಯವರೆಗೆ 12 ಮಂದಿ ಶಾಸಕರಾಗಿದ್ದು, ಅದರಲ್ಲಿ 9 ಶಾಸಕರು ಇದೇ ಗ್ರಾಮದವರಾಗಿದ್ದಾರೆ ಎಂಬುದು ವಿಶೇಷ. ಈ ಕ್ಷೇತ್ರದ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದಿರುವ ರವೀಂದ್ರ ಶ್ರೀಕಂಠಯ್ಯ ಅವರೂ ಇದೇ ಗ್ರಾಮದವರಾಗಿದ್ದಾರೆ.

ಗೆದ್ದವರ ಕಣ್ಣಲ್ಲೂ ನೀರು
ಮಳವಳ್ಳಿ ಕ್ಷೇತ್ರದ ಫಲಿತಾಂಶವು ಬೆಂಬಲಿಗರಲ್ಲಿ ತೀವ್ರ ಗೊಂದಲಕ್ಕೆ ಎಡೆಮಾಡಿಕೊಟ್ಟಿತು. ಗೆದ್ದ ಅಭ್ಯರ್ಥಿ ಪಿ.ಎಂ. ನರೇಂದ್ರಸ್ವಾಮಿ ಹಾಗೂ ಸೋತ ಅಭ್ಯರ್ಥಿ ಡಾ.ಕೆ. ಅನ್ನದಾನಿ ಇಬ್ಬರೂ ಕಣ್ಣೀರಿಟ್ಟರು.

ದೃಶ್ಯ ಮಾಧ್ಯಮಗಳಲ್ಲಿ ಮೊದಲಿಗೆ ಜೆಡಿಎಸ್ ಅನ್ನದಾನಿ ಅವರಿಗೆ ಗೆಲುವು ಲಭಿಸಿದೆ ಎಂದು ಘೋಷಿಸಲಾಯಿತು. ಇದರಿಂದ ಮತಗಟ್ಟೆ ಹೊರಗಡೆ ಹಾಗೂ ಮಳವಳ್ಳಿಯಲ್ಲಿ ಅವರ ಬೆಂಬಲಿಗರು ಪಟಾಕಿ ಸಿಡಿಸಿದರು. ಒಂಬತ್ತನೇ ಸುತ್ತಿನವರೆಗೂ 5,287 ಮತಗಳವರೆಗೆ ಮುನ್ನಡೆ ಪಡೆದಿದ್ದ ಅನ್ನದಾನಿ ಅವರಿಗೆ ನಂತರದ ಸುತ್ತುಗಳಲ್ಲಿ ಹಿನ್ನಡೆಯಾಯಿತು.

ಕೊನೆಗೆ ನರೇಂದ್ರಸ್ವಾಮಿ ಅವರು 538 ಮತಗಳಿಂದ ಗೆಲುವು ಸಾಧಿಸಿದರು. ಅಂಚೆ ಮತಗಳಿಗಿಂತ ಕಡಿಮೆ ಮತದಿಂದ ಗೆಲುವು ಪಡೆದರೆ ಮತ್ತೊಮ್ಮೆ ಅಂಚೆ ಮತಗಳನ್ನು ಎಣಿಸಬೇಕಿದೆ. ಆ ಪ್ರಕಾರ ಮತ್ತೊಮ್ಮೆ ಎಣಿಕೆ ಮಾಡಲಾಯಿತು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಅಜಯ್ ನಾಗಭೂಷಣ್ `ಪ್ರಜಾವಾಣಿ'ಗೆ ತಿಳಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಅಂಬರೀಷ್ ಅವರು ಭರ್ಜರಿ ಗೆಲುವು ಸಾಧಿಸಿದ್ದು, 42,937 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ಆ ಮೂಲಕ ಕ್ಷೇತ್ರದಲ್ಲಿ ಅವರ ವಿರುದ್ಧ ಸೆಡ್ಡು ಹೊಡೆದಿದ್ದ ಕಾಂಗ್ರೆಸ್ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ. ಆದರೆ, ಹಟ ಹಿಡಿದು ಟಿಕೆಟ್ ಕೊಡಿಸಿದ್ದ ಶ್ರೀರಂಗಪಟ್ಟಣದ ಲಿಂಗರಾಜು ಅವರನ್ನಾಗಲೀ, ತಮ್ಮ ಬೆಂಬಲಿಗ ಎಲ್.ಡಿ. ರವಿ ಅವರನ್ನು ಗೆಲ್ಲಿಸಲಾಗಲಿಲ್ಲ. ಜೊತೆಗೆ, ಜಿಲ್ಲೆಯ ಏಳು ಸ್ಥಾನಗಳಲ್ಲಿ ಕಾಂಗ್ರೆಸ್ ಅಂಬರೀಷ್ ಅವರೂ ಸೇರಿದಂತೆ ಕೇವಲ ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ.

ಹೋರಾಟಗಾರನ ಗೆಲುವು
ರೈತಪರ ಹೋರಾಟ ಮಾಡಿಕೊಂಡು ಬಂದಿರುವ ಸರ್ವೋದಯ ಕರ್ನಾಟಕ ಪಕ್ಷದ ಕೆ.ಎಸ್. ಪುಟ್ಟಣ್ಣಯ್ಯ ಅವರ ಗೆಲುವು ರೈತರ ಮುಖದಲ್ಲಿ ನಗು ಮೂಡಿಸಿದೆ. ಎರಡನೇ ಬಾರಿಗೆ ವಿಧಾನಸಭೆ ಮೆಟ್ಟಿಲನ್ನು ಪುಟ್ಟಣ್ಣಯ್ಯ  ಏರಲಿದ್ದು, ಕಾವೇರಿ ಹಾಗೂ ಕಬ್ಬಿನ ಬೆಲೆ ಸೇರಿದಂತೆ ಮಾಡಿದ ವಿವಿಧ ಹೋರಾಟಕ್ಕೆ ಮತದಾರ ಮನ್ನಣೆ ನೀಡಿದ್ದಾನೆ.

ಉಪಚುನಾವಣೆ: ನಾಗಮಂಗಲ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ, ಸಂಸದ ಎನ್. ಚಲುವರಾಯಸ್ವಾಮಿ ಅವರು ಗೆಲುವು ಸಾಧಿಸಿದ್ದಾರೆ. ಅವರು ಶಾಸಕರಾಗಿರುವುದರಿಂದ ಮುಂದಿನ ದಿನಗಳಲ್ಲಿ ಮಂಡ್ಯ ಲೋಕಸಭೆಗೆ ಉಪಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT