ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಗ್ಗಟ್ಟೇ ಪ್ರಗತಿಯ ಮಂತ್ರ

ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ
Last Updated 1 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೌರ್ಜನ್ಯದ ಯಾವುದೇ ಘಟನೆ ಸಮಾಜ ಮತ್ತು ದೇಶದ ಮೇಲಿನ ಕಪ್ಪು ಕಲೆ. ಅದರಿಂದಾಗುವ ನೋವನ್ನು ಪ್ರತಿಯೊಬ್ಬರೂ ಅನುಭವಿಸಬೇಕಾಗುತ್ತದೆ  ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಸಹಿಷ್ಣುತೆ ಬಗೆಗಿನ ಚರ್ಚೆಯ ನಡುವೆ ಮಾತನಾಡಿದ ಮೋದಿ ಅವರು, ಒಗ್ಗಟ್ಟು ಮತ್ತು ಸೌಹಾರ್ದ ಮಾತ್ರ ದೇಶವನ್ನು ಮುಂದಕ್ಕೆ ಒಯ್ಯುವುದಕ್ಕೆ ಇರುವ ಏಕೈಕ ದಾರಿ ಎಂದು ಅಭಿಪ್ರಾಯಪಟ್ಟರು. 125 ಕೋಟಿ ಭಾರತೀಯರಲ್ಲಿ ಯಾರೊಬ್ಬರ ರಾಷ್ಟ್ರಭಕ್ತಿಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತುವುದಕ್ಕೆ ಅವಕಾಶ ಇಲ್ಲ. ಯಾರೂ ‘ರಾಷ್ಟ್ರಭಕ್ತಿಯ ಪ್ರಮಾಣಪತ್ರ’ವನ್ನು ಸಲ್ಲಿಸುವ ಅಗತ್ಯವೂ ಇಲ್ಲ ಎಂದು ಮೋದಿ ಹೇಳಿದರು.

‘ಭಿನ್ನಭಿಪ್ರಾಯ ವ್ಯಕ್ತಪಡಿಸುವವರು ಪಾಕಿಸ್ತಾನಕ್ಕೆ ಹೋಗಬೇಕು’ ಎಂದು ಕೆಲವರು ನೀಡಿದ್ದ ವಿವಾದಾತ್ಮಕ ಹೇಳಿಕೆ ಕಾರಣದಿಂದಾಗಿ ಪ್ರಧಾನಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ರಾಜ್ಯಸಭೆಯಲ್ಲಿ ಸಂವಿಧಾನದ ಬಗೆಗಿನ ಚರ್ಚೆಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು ‘ಏಕತೆಯ ಮಂತ್ರ’ಕ್ಕೆ ಒತ್ತು ನೀಡಿದರು. ಭಾರತದಂತಹ ವೈವಿಧ್ಯದಿಂದ ಕೂಡಿದ ದೇಶದಲ್ಲಿ ‘ವಿಭಜನೆಗೆ ಹಲವು ನೆಪಗಳು’ ಸಿಗಬಹುದು. ಆದರೆ ನಾವು ದೇಶವನ್ನು ಒಂದಾಗಿ ಇರಿಸುವುದಕ್ಕೆ ದಾರಿಗಳನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.

ಹಲವು ಮಹತ್ವದ ಮಸೂದೆಗಳು ರಾಜ್ಯಸಭೆಯಲ್ಲಿ ಬಾಕಿ ಇರುವ ಸಂದರ್ಭದಲ್ಲಿ ಪ್ರಧಾನಿ ಅವರು ಸಂಧಾನದ ಮನೋಭಾವವನ್ನು ಪ್ರದರ್ಶಿಸಿದರು.

ದೌರ್ಜನ್ಯದ ಯಾವುದೇ ಪ್ರಕರಣ ಕಪ್ಪು ಕಲೆ ಎಂದು ಹೇಳುವಾಗ ಪ್ರಧಾನಿ ಅವರು ಯಾವುದೇ ನಿರ್ದಿಷ್ಟ ಘಟನೆಯನ್ನು ಉಲ್ಲೇಖಿಸಲಿಲ್ಲ. ಆದರೆ ಇತ್ತೀಚೆಗೆ ಉತ್ತರ ಪ್ರದೇಶದ ದಾದ್ರಿಯಲ್ಲಿ ದನದ ಮಾಂಸ ಸೇವಿಸಿದ ವದಂತಿಯಿಂದಾಗಿ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಹೊಡೆದು ಕೊಂದ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ನೊಂದವರ ಧ್ವನಿ ಆಲಿಸಿ: ಅಸಹಿಷ್ಣುತೆ ಬಗೆಗಿನ ಚರ್ಚೆಯಲ್ಲಿ ಭಾಗವಹಿಸಿ ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ‘ನಾವು ಪಾಕಿಸ್ತಾನದಿಂದ ‘ತಪ್ಪು ಪಾಠ’ಗಳನ್ನು ಕಲಿಯಬಾರದು ಎಂದರು.

‘ನಾರಾಯಣಮೂರ್ತಿ, ರಘುರಾಮ್‌ ರಾಜನ್‌, ಪಿ.ಎಂ. ಭಾರ್ಗವ ಅವರಂತಹ ಜನರು ಪ್ರತಿಭಟನೆಗೆ ಇಳಿದಿದ್ದಾರೆ. ಲಕ್ಷಾಂತರ ಜನರ ಹಾಗೆಯೇ ಅವರೂ ನೊಂದಿದ್ದಾರೆ. ಅವರಿಗೆ ಗೌರವ ನೀಡಿ ಮತ್ತು ಅವರ ಮನ ನೋಯಿಸಿರುವ ವಿಷಯಗಳು ಯಾವುವು ಎಂಬುದನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿ’ ಎಂದು ರಾಹುಲ್‌ ಹೇಳಿದರು.

ಮುಸ್ಲಿಮರಿಗಿಂತ ಗೋವು ಸುರಕ್ಷಿತ
ಭಾರತದಲ್ಲಿ ಮುಸ್ಲಿಮರಿಗಿಂತ ಗೋವು ಸುರಕ್ಷಿತ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಹೇಳಿದ್ದಾರೆ. ಅಸಹಿಷ್ಣುತೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ತರೂರ್‌, ಭಾರತದಲ್ಲಿ ‘ಹೇಟ್‌ ಇನ್‌ ಇಂಡಿಯಾ’ ಇರಬೇಕಾದರೆ, ‘ಮೇಕ್ ಇನ್‌ ಇಂಡಿಯಾ’ಗೆ ಉತ್ತೇಜನ ನೀಡಲು ಸಾಧ್ಯವಿಲ್ಲ.

ದೇಶದೊಳಗೆ ಅಸಹಿಷ್ಣುತೆ, ಕೋಮುದ್ವೇಷ ಇರುವಾಗ ಜಗತ್ತಿನ ಮುಂದೆ ನಾವು ಬಹುತ್ವ ಹಾಗೂ ಸಹಿಷ್ಣುತೆಯುಳ್ಳ ದೇಶ ಎಂದು ತೋರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT