ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಗ್ಗರಣೆ ಬದುಕು!

Last Updated 15 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

‘ಲೈಫು ಇಷ್ಟೇನೆ’ ಎನ್ನುತ್ತಾ ಬಣ್ಣದ ಬದುಕಿಗೆ ಕಾಲಿಟ್ಟ ಸಂಯುಕ್ತಾ ಹೊರನಾಡು ‘ಬರ್ಫಿ’ಯ ಸಿಹಿಯನ್ನೂ ಕೊಟ್ಟರು, ‘ಒಗ್ಗರಣೆ’ ಘಮಲನ್ನೂ ಹರಡಿದರು. ಅಮ್ಮ ಸುಧಾ ಬೆಳವಾಡಿ ಅವರ ನೆರಳಿನಿಂದಾಚೆ ಗುರ್ತಿಸಿಕೊಳ್ಳುವ ತವಕ ಅವರದು.

* ಒಗ್ಗರಣೆ ಸಿನಿಮಾ ಹೇಗಿತ್ತು? ನಿಜ ಜೀವನದಲ್ಲೂ ಒಗ್ಗರಣೆ ಹಾಕಿದ್ದೀರಾ?
ಒಗ್ಗರಣೆ ಸಿನಿಮಾ ಕೊಟ್ಟ ಅನುಭವಗಳು ತುಂಬಾ ಚೆನ್ನಾಗಿತ್ತು. ಚಿತ್ರೀಕರಣ ಸಮಯದಲ್ಲಿ ಒಗ್ಗರಣೆ ಹಾಕೋಕೆ ಹೋಗಿ ಕೈ ಸುಟ್ಟುಕೊಂಡಿದ್ದೂ ಇದೆ. ಇತ್ತೀಚೆಗೆ ಅಡುಗೆ ಮಾಡೋದನ್ನೂ ಕಲಿತಿದ್ದೇನೆ. ಆದರೆ ಬೇರೆಯವರ ಮಾತಿಗೆ ಒಗ್ಗರಣೆ ಹಾಕೋದು ಕಲೀಲಿಲ್ಲ.

* ಮುಂಚೆ ಬೆಳವಾಡಿ ಅಂತ ಹೆಸರಿಟ್ಟುಕೊಂಡಿದ್ದಿರಿ. ಈಗ ಹೊರನಾಡು ಅಂತ ಬದಲಾಯಿಸಿಕೊಂಡಿರಿ. ಯಾಕೆ ಅಲ್ಲಿಂದಿಲ್ಲಿಗೆ ಶಿಫ್ಟ್ ಆಗಿದ್ದು?
ಹಾಗೇನೂ ಇಲ್ಲ. ಮೊದಲಿಂದಲೂ ನಾನು ಹೊರನಾಡು ಅಂತಲೇ ಇಟ್ಟುಕೊಂಡಿದ್ದು. ಆದರೆ ಜನರಿಗೆ ಬೆಳವಾಡಿ ಮೇಲೆ ಹೆಚ್ಚು ಪ್ರೀತಿ ಅನ್ನಿಸುತ್ತೆ. ಅದಕ್ಕೇ ಆ ಹೆಸರಿನಿಂದಲೇ ಕರೆದರು.

* ಈ ಹೀರೋಯಿನ್‌ಗೆ ಎಷ್ಟು ಜನ ಪ್ರೊಪೋಸ್ ಮಾಡಿದ್ದಾರೆ? ಮೊದಲ ಪ್ರೊಪೋಸ್ ಹೇಗಿತ್ತು?
ತುಂಬಾ ಜನ ಮಾಡಿದ್ದಾರೆ. ಪ್ರೊಪೋಸ್ ಮಾಡಿದರೆ ಜೋಕ್ ಅಂತ ಜೋರಾಗಿ ನಕ್ಕು ಸುಮ್ಮನಾಗಿಬಿಡುತ್ತಿದ್ದೆ. ಮೊದಲ ಪ್ರೊಪೋಸ್ ತುಂಬಾ ಮಜಾ ಇತ್ತು. ನನಗೆ ಹೇಳದೆ, ತಮ್ಮನ ಕೈಲಿ ಪತ್ರ ಕೊಟ್ಟು ಕಳಿಸಿದ್ದರು. ಈ ವಿಷಯವನ್ನು ನಮ್ಮಪ್ಪನಿಗೆ ಹೇಳಿದ್ದೆ. ಆಮೇಲೆ ಆ ಹುಡುಗ ಕಾಣಲೇ ಇಲ್ಲ.

* ಇನ್ನೂ ಮುದ್ದಾಗೇ ಮಾತಾಡ್ತೀರಾ? ಅಮ್ಮನಿಗೆ ನೀವಿನ್ನೂ ಕೂಸಾ?
ಮೊದಲಿನಿಂದಲೂ ಅಪ್ಪ ಅಮ್ಮ ನನ್ನನ್ನ ತುಂಬಾ ಮುದ್ದು ಮಾಡಿ ಬೆಳೆಸಿದ್ದಾರೆ. ಶೂಟಿಂಗ್‌ಗೆ ಎಂದು ಬೇರೆ ಊರಿಗೆ ಹೋದಾಗೆಲ್ಲಾ ಅಮ್ಮ ಅಪ್ಪನಿಗೆ ಫೋನ್ ಮಾಡ್ತಾನೇ ಇರ್ತೇನೆ. ನಾನಿನ್ನೂ ಮುದ್ದು ಕೂಸು ಅವರಿಗೆ.

* ಮೊದಲನೇ ಸಿನಿಮಾದಲ್ಲಿ ಲೈಫು ಇಷ್ಟೇನೇ ಅಂದುಬಿಟ್ರಲ್ಲ. ಅದೇನು ಜೀವನದ ಮೇಲೆ ಹತಾಶೆನಾ ಹೇಗೆ?
ನಿಜ ಹೇಳಬೇಕೆಂದರೆ ಆಗ ನನಗೆ ನಟಿಯಾಗುವ ಆಸೆ ಇರಲಿಲ್ಲ. ಆರ್ಕಿಟೆಕ್ಟ್ ಅಥವಾ ಪ್ರಾಣಿಗಳಿಗೆ ಸಂಬಂಧಿಸಿದ ಕೆಲಸದಲ್ಲಿ ತೊಡಗಿಕೊಳ್ಳುವ ಮನಸ್ಸಿತ್ತು. ಆಗಿನ್ನೂ 19 ವರ್ಷ. ಕಾಲೇಜಿನಲ್ಲಿ ಓದುತ್ತಿದ್ದೆ. ಸಿನಿಮಾ ಆಫರ್ ಬಂತು. ಅಮ್ಮ, ಲೈಫು ಇಷ್ಟೇನೆ ಅಂದ್ರು. ಹಾಗಾಗಿ ಏನೋ ಅಂದುಕೊಂಡು ಇನ್ನೆಲ್ಲೋ ಬಂದಿದ್ದಾಯಿತು, ಲೈಫು ಇಷ್ಟೇನೇ...

* ಗಾಸಿಪ್ ಗುಂಗು ನಿಮ್ಮನ್ನು ಸುತ್ತುಕೊಂಡಿಲ್ಲವಲ್ಲ?
ಎಲ್ಲವನ್ನೂ ನೇರವಾಗಿ ಹೇಳಿಬಿಡೋರಿಗೆ ಗಾಸಿಪ್ ಗುಂಗು ಹತ್ತೋದಿಲ್ಲ. ಕೆಲವೊಬ್ಬರು ತಪ್ಪು ಮಾಡಿ ಒಪ್ಪಿಕೊಳ್ಳೋದಿಲ್ಲ. ಅದಕ್ಕೂ ಗಾಸಿಪ್ ಹುಟ್ಟಿಕೊಳ್ಳಬಹುದು. ನಾನು ಏನೇ ಮಾಡಬೇಕೆಂದರೂ ಧೈರ್ಯವಾಗಿ ಮಾಡುತ್ತೇನೆ. ಹಾಗೇ ಮಾತಾಡುತ್ತೇನೆ. ಆದ್ದರಿಂದ ಗಾಸಿಪ್‌ಗೆ ಜಾಗ ಇಲ್ಲ.

* ಅಜ್ಜಿ ಭಾರ್ಗವಿ ನಾರಾಯಣ್ ಧಾರಾವಾಹಿಗಳಲ್ಲಿ ಮಿಂಚಿದರು. ನಿಮಗೆ ಅಜ್ಜಿ ಕಥೆಗಳನ್ನು ಹೇಳಿದ್ದಾರಾ?
ಹೌದು. ಅಜ್ಜಿ ಹೇಳುವ ಕಥೆಗಳನ್ನು ಕೇಳಿ ಬೆಳೆದವಳು ನಾನು. ನಾ ಚಿಕ್ಕವಳಾಗಿದ್ದಾಗ ಅಮ್ಮ ಕೆಲಸಕ್ಕೆ ಹೋಗುತ್ತಿದ್ದರು. ಆಗೆಲ್ಲಾ ಅಜ್ಜಿ ಕಥೆ, ಹಾಡು ಹೇಳುತ್ತಿದ್ದರು. ಕೈ ತುತ್ತು ಹಾಕಿ ಮಹಾಭಾರತ, ಕೃಷ್ಣನ ಕಥೆಗಳನ್ನು ಹೇಳುತ್ತಿದ್ದರು. ಕೃಷ್ಣನ ಕಥೆಗಳನ್ನು ಕಣ್ಣರಳಿಸಿಕೊಂಡು ಕೇಳುತ್ತಿದ್ದೆ. ಎಲ್ಲ ಮೊಮ್ಮಕ್ಕಳನ್ನು ಸೇರಿಸಿಕೊಂಡು ಕೈ ತುತ್ತು ನೀಡುತ್ತಿದ್ದರು. ಅಜ್ಜಿ ಎಂದರೆ ಕಥೆ ಕಣಜ.

* ಮೊದಲು ‘ಉಂಡಾಡಿ ಗುಂಡ’ ನಾಟಕದಲ್ಲಿ ಅಭಿನಯಿಸಿದ್ದಿರಿ. ಈಗ ಸಿನಿಮಾಗಳಲ್ಲಿದ್ದೀರಿ. ಹೇಗಿದೆ ಎರಡರ ನಡುವಣ ವ್ಯತ್ಯಾಸ?
ವ್ಯತ್ಯಾಸ ಅಂತೇನೂ ಇಲ್ಲ. ಅಭಿನಯ ಅನ್ನೋದು ನನ್ನ ರಕ್ತದಲ್ಲೇ ಬಂದಿದೆ. ನನಗೂ ಅಷ್ಟೆ, ನಟಿಸುತ್ತೀಯಾ? ಎಂದು ಮನೆಯಲ್ಲಿ ಯಾರೂ ಪ್ರಶ್ನಿಸಲಿಲ್ಲ. ಬದಲಾಗಿ ನಟಿಸಲಿಲ್ಲ ಅಂದರೆ ಅದು ತಪ್ಪು ಎನ್ನುವಂಥ ವಾತಾವರಣ ಮನೆಯಲ್ಲಿತ್ತು. ತಾತನಿಂದ (ಮೇಕಪ್ ನಾಣಿ) ಮೊದಲ ಬಾರಿ ಮೇಕಪ್ ಹಚ್ಚಿಸಿಕೊಂಡಿದ್ದು. ನಾಟಕ, ಸಿನಿಮಾ ಎಲ್ಲಾ ಒಂದೇ. ಯಾವುದೂ ವ್ಯತ್ಯಾಸ ಅನ್ನಿಸಲೇ ಇಲ್ಲ. ಇನ್ನು ಮನೆಯಲ್ಲಿ ಓದಿಗಿಂತ ಬೇರೆ ಚಟುವಟಿಕೆಗಳಲ್ಲಿ ಇದ್ದರೇನೇ ಸರಿ ಎನ್ನುತ್ತಿದ್ದರು. ಗಿಟಾರ್, ಹಿಂದೂಸ್ತಾನಿ ಸಂಗೀತ, ಪೇಂಟಿಂಗ್ ಹೀಗೆ ಸಿಕ್ಕ ಕ್ಲಾಸ್‌ಗಳಿಗೆಲ್ಲಾ ಹೋಗುತ್ತಿದ್ದೆ.

* ಪಟ ಪಟ ಮಾತಾಡ್ತೀರಾ. ಏನಿದರ ಗುಟ್ಟು? ಕನ್ನಡವನ್ನೂ ಇಂಗ್ಲೀಷ್‌ನಂತೆ ಮಾತಾಡುತ್ತೀರಂತೆ?
ನನಗೆ ಮಾತು ಅಂದರೆ ತುಂಬಾ ಇಷ್ಟ. ನಮ್ಮಜ್ಜಿ, ನಾನು, ಅಮ್ಮ, ಅಪ್ಪ ಎಲ್ಲರೂ ಮಾತಾಡುವವರೇ. ಯಾವುದಾದರೂ ವಿಷಯ ಸಿಕ್ಕರೆ ಗಂಟೆಗಟ್ಟಲೆ ಮಾತಾಡಬಲ್ಲೆವು. ಕೂತು ಹರಟೆ ಹೊಡೆಯಬಲ್ಲೆವು. ನಮ್ಮನೇಲಿ ಎಲ್ಲರಿಗೂ ಮಾತೆಂದರೆ ಮೆಚ್ಚು.

* ಸದ್ಯಕ್ಕೆ ಸಂಯುಕ್ತಾ ಎಲ್ಲಿದ್ದಾರೆ?
ಇಲ್ಲೇ ಪಕ್ಕದ ನಾಡಿನಲ್ಲಿ! ತೆಲುಗು ಸಿನಿಮಾವೊಂದು ಅರ್ಧ ಮುಗಿದಿದೆ. ಅದನ್ನು ಪೂರ್ಣಗೊಳಿಸಿ ಆಮೇಲೆ ಮುಂದಿನ ದಾರಿ...

* ಎಂಥ ಪಾತ್ರವನ್ನು ಬಯಸುತ್ತೀರ?
ನಟನೆ ಎಂದ ಮೇಲೆ ಇಂಥದ್ದೇ ಬೇಕೆಂದು ಕೇಳುವಂತಿಲ್ಲ. ಎಂಥ ಪಾತ್ರ ಕೊಟ್ಟರೂ ಆ ಪಾತ್ರವನ್ನು ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಬಲಗೊಳಿಸಿಕೊಳ್ಳಬೇಕು.

* ಶಾಲೆಯಲ್ಲಿದ್ದಾಗಲೇ ತರಗತಿಗಳಿಗೆ ಬಂಕ್‌ ಮಾಡುತ್ತಿದ್ದಿರಂತೆ?
ಹ್ಹ ಹ್ಹ. ಆಗ ನಾನಿನ್ನೂ ಒಂಬತ್ತನೇ ಕ್ಲಾಸಿನಲ್ಲಿದ್ದೆ. ನಮ್ಮಪ್ಪನಿಗೆ ನನಗೆ ಸಂಗೀತ ಕಲಿಸುವಾಸೆ. ಆಗ ಶನಿವಾರ ಸಂಗೀತ ತರಗತಿ ಇರುತ್ತಿತ್ತು. ನನ್ನಪ್ಪ, ಹೇಗೆ ಸ್ಕೂಲಿಗೆ ಹೋಗಿ ಹಾಜರಿ ಹಾಕಿ, ಕಾಂಪೌಂಡ್ ಹಾರಿ ಬರಬೇಕು ಎಂಬುದನ್ನು ಹೇಳಿಕೊಟ್ಟಿದ್ದರು. ಹೀಗೆ ಒಂದು ಸಾರಿ ಕಾಂಪೌಂಡ್ ಹಾರಬೇಕಾದರೆ ಸೆಕ್ಯುರಿಟಿ ನೋಡಿಬಿಟ್ಟರು. ನಮ್ಮಮ್ಮನಿಗೆ ಅವರು ಫೋನ್ ಮಾಡಿ ನಿಮ್ಮ ಹುಡುಗಿ ಯಾರೋ ಹುಡುಗನ ಜೊತೆ ಓಡಿ ಹೋದಳು ಎಂದು ಹೇಳಿಬಿಟ್ಟಿದ್ದಾರೆ. ಮನೆಯಲ್ಲಿ ಅಮ್ಮನ ಕಣ್ಣೀರ ಧಾರೆ. ಆಗ ಅಪ್ಪ ಹೇಳಿದರು, ಆ ಹುಡುಗ ಬೇರ್‍ಯಾರೂ ಅಲ್ಲ, ನಾನೇ ಎಂದು. ಈ ಘಟನೆ ನೆನೆಸಿಕೊಂಡಾಗಲೆಲ್ಲಾ ನಗು ಉಕ್ಕಿಬರುತ್ತೆ.

* ಮರೆಯಲಾಗದ ನೆನಪು?
ನಾನು, ನನ್ನ ಕಸಿನ್‌ಗಳು ಒಂದೇ ಶಾಲೆಗೆ ಹೋಗುತ್ತಿದ್ದೆವು. ಇದ್ದಕ್ಕಿದ್ದಂತೆ ಹೆಡ್‌ಮಾಸ್ಟರ್ ನಾಲ್ವರನ್ನೂ ಕರೆಸಿದರು. ನೋಡಿದರೆ ಟೆಂಪೊ ಟ್ರಾವೆಲರ್‌ನಲ್ಲಿ ಅಮ್ಮ, ಅಪ್ಪ, ಅಜ್ಜಿ ಎಲ್ಲರೂ ಬಂದುಬಿಟ್ಟಿದ್ದಾರೆ. ನಮಗೆ ಅರೆಕ್ಷಣ ಗಾಬರಿಯಾಗೋಯ್ತು. ಯಾರಿಗೋ ಏನೋ ಆಗಿದೆ ಎಂದು ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದೆವು. ಅಳುವುದೊಂದೇ ಬಾಕಿ. ಆದರೆ ಹೆಡ್‌ಮಾಸ್ಟರ್‌ ಜೊತೆ ಎಲ್ಲರೂ ನಗು ನಗುತ್ತಾ ಮಾತಾಡುತ್ತಿದ್ದಾರೆ. ಮನೆಯವರೆಲ್ಲಾ ಹಾಗೆ ದಂಡು ಕಟ್ಟಿಕೊಂಡು ಬಂದದ್ದು ಎಲ್ಲಿಗೆ ಗೊತ್ತಾ? ನಮ್ಮನ್ನು ಸರ್ಕಸ್‌ಗೆ ಕರೆದುಕೊಂಡು ಹೋಗಲು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT